ಎಂ. ಜಿ. ವೆಂಕಟೇಶಯ್ಯ

Home/Birthday/ಎಂ. ಜಿ. ವೆಂಕಟೇಶಯ್ಯ
Loading Events
This event has passed.

೧೯.೦೧.೧೯೦೦ ೦೪.೧೨.೧೯೮೪ ಕಾದಂಬರಿ, ಸಣ್ಣಕತೆ, ಭಾಷಾಶಾಸ್ತ್ರ, ಸಂಶೋಧನೆ, ಗ್ರಂಥಸಂಪಾದನೆ, ಮುಂತಾದವುಗಳಲ್ಲದೆ ಪ್ರಬಂಧ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ‘ಪುಲ್ಲಯ್ಯನ ಪ್ರಬಂಧಗಳು’ ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿದ ಎಂ. ಜಿ.ವೆಂಕಟೇಶಯ್ಯನವರು ಹುಟ್ಟಿದ್ದು ೧೯೦೦ರ ಜನವರಿ ೧೯ ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿಗೆ ಸೇರಿದ ಬೋಯಿಲ ಹಳ್ಳಿಯಲ್ಲಿ. ತಂದೆ ಮಾಲೂರು ಗುಂಡಪ್ಪ, ತಾಯಿ ಪಾರ್ವತಮ್ಮ. ತಂದೆ ಮದರಾಸು ವಿಶ್ವವಿದ್ಯಾಲಯದ ಪದವೀಧರರಾಗಿ ಸೆಕ್ರೆಟರಿಯೇಟಿನಲ್ಲಿ ಕನ್ನಡ ಭಾಷಾಂತರಕಾರರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತರು. ಸಾಹಿತ್ಯದಲ್ಲಿ ಹಾಗೂ ಆಯುರ್ವೇದದಲ್ಲಿ ಆಸಕ್ತರಾಗಿದ್ದು ‘ಸೂರ‍್ಯ ಭೇಧನ ವ್ಯಾಯಾಮ’ ಎಂಬ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದರು. ವೆಂಕಟೇಶಯ್ಯ ಅವರ ಓದು ಬೆಂಗಳೂರಿನ ಚಾಮರಾಜಪೇಟೆಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾಗಿ ಲಂಡನ್ ಮಿಷನ್ ಹ್ಯೆಸ್ಕೂಲಿನಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ತೇರ್ಗಡೆಯಾಗಿ ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನ ಹಾಗೂ ಗಣಿತ  ಶಾಸ್ತ್ರದಲ್ಲಿ ಪದವಿ ಪಡೆದರಲ್ಲದೆ ಮೈಸೂರು ವಿಶ್ವವಿದ್ಯಾಲಯದ ಬಿ. ಟಿ., ಕಲ್ಕತ್ತ ವಿಶ್ವವಿದ್ಯಾಲಯದಿಂದ ಎಂ. ಎ. (ಸಾಹಿತ್ಯ) ಹಾಗೂ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ಅಧ್ಯಾಕರಾಗಿ. ನಂತರ ಬಳ್ಳಾರಿ ಮುನಿಸಿಪಲ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ಸೇರಿ ಅದೇ ಶಾಲೆಯ ಮುಖ್ಯೋಪಾಧ್ಯಾಯರಾಗಿ (೧೯೫೬) ಕಾರ‍್ಯ ನಿರ್ವಹಿಸಿ ನಿವೃತ್ತರಾದರು (೧೯೬೧). ನಿವೃತ್ತಿಯ ನಂತರ ಪುನ: ಬೆಂಗಳೂರಿನ ನಿವಾಸಿಯಾಗಿ ಮಹಿಳಾ ಸಮಾಜದ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿಯೂ ಕೆಲಕಾಲ ಕಾರ‍್ಯ ನಿರ್ವಹಿಸಿದರು. ವೆಂಕಟೇಶಯ್ಯನವರ ಪೂರ್ವಿಕರು ಆಂಧ್ರದ ಮೂಲದವರಾಗಿದ್ದುದರಿಂದ ಇವರ ಮಾತೃ ಭಾಷೆ ತೆಲಗು. ತೆಲಗು ಸಾಹಿತ್ಯದಲ್ಲಿ ಆಸಕ್ತಿಯಿದ್ದರೂ ಕ‌ನ್ನಡದಲ್ಲಿ ಸಾಹಿತ್ಯ ರಚಿಸಿದ್ದೇ ಹೆಚ್ಚು. ತೆಲುಗು, ಕನ್ನಡ ಭಾಷೆಯಲ್ಲದೆ ಇಂಗ್ಲಿಷ್ ಸಂಸ್ಕೃತ ಭಾಷೆಗಳಲ್ಲೂ ಪರಿಣತರಾಗಿದ್ದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ಕನ್ನಡಕ್ಕಾಗಿ ದುಡಿದರು. ಇವರ ಹವ್ಯಾಸಗಳು ಹಲವಾರು. ಸಂಗೀತದಲ್ಲಿ ಅಭಿರುಚಿಯಿದ್ದು ಅನಂತಶಾಸ್ತ್ರಿ ಎಂಬುವರಲ್ಲಿ ಸಂಗೀತಾಭ್ಯಾಸ ಮಾಡಿದ್ದರು.ಸಂಗೀತ ಪ್ರಧಾನ ನಾಟಕಗಳನ್ನು ನೋಡುತ್ತಿದ್ದರಲ್ಲದೆ, ‘ವಿರಾಟಪರ್ವ’ ನಾಟಕದಲ್ಲಿ ಭೀಮನ ಪಾತ್ರವನ್ನು ವಹಿಸಿದ್ದು ತುಳಸೀತೋಟ (ಈಗಿನ ಚಿಕ್ಕ ಲಾಲ್ ಬಾಗ್) ಪ್ರದೇಶದಲ್ಲಿದ್ದ ಥೀಯೇಟರಿನಲ್ಲಿ ಹಲವಾರು ಪ್ರದರ್ಶನ ಕಂಡ ನಾಟಕ. ಗಮಕ ಕಲೆಯಲ್ಲಿಯೂ ಹೆಚ್ಚಿನ ಒಲವಿದ್ದು ರನ್ನನ ಗದಾಯುಧ್ಧದ ಪ್ರಸಂಗವನ್ನು ಕೇಳುಗರ ಮನಮುಟ್ಟುವಂತೆ ವಾಚನ, ವ್ಯಾಖ್ಯಾನಗಳನ್ನು ಮಾಡುತ್ತಿದ್ದರು. ಹವ್ಯಾಸಗಳಿಗೆ ಮಿತಿ ಎಂಬುದೇ ಇಲ್ಲದೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನು ಅಭ್ಯಸಿಸಿ, ಹೋಮಿಯೋಪತಿ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದರು. ಮತ್ತೊಂದು ಆಸಕ್ತ ವಿಷಯವೆಂದರೆ ಜ್ಯೋತಿಶಾಸ್ತ್ರ. ಇದಕ್ಕಾಗಿ ಹಲವಾರು ಇಂಗ್ಲಿಷ್ ಗ್ರಂಥಗಳನ್ನು ವಿದೇಶದಿಂದ ತರಿಸಿಕೊಂಡು ಅಭ್ಯಾಸಮಾಡಿ ಕೇಳಿದವರಿಗೆ ಜ್ಯೋತಿಶಾಸ್ತ್ರವನ್ನು ಹೇಳುತ್ತಿದ್ದರು. ಸಂಖ್ಯಾಶಾಸ್ತ್ರ ಇವರ ತೀರ ಆಸಕ್ತ ವಿಷಯ. ಪದವಿ ತರಗತಿಯಲ್ಲಿ ಗಣಿತಶಾಸ್ತ್ರವನ್ನು ಅಭ್ಯಾಸ ಮಾಡಿದ್ದರು. ಭಾಷಾಶಾಸ್ತ್ರದಲ್ಲಿ ಪಿಎಚ್. ಡಿ. ಮಹಾ ಪ್ರಬಂಧವನ್ನು ರಚಿಸಿ ಪೂನ ವಿಶ್ವವಿದ್ಯಾಲಯಕ್ಕೆ ಸಲ್ಲಸಿದ್ದು, ಮತ್ತಾರೊ ಇವರ ಪ್ರಬಂಧವನ್ನು ಲಪಟಾಯಿಸಿ ಪಿಎಚ್. ಡಿ. ಪಡೆದುಕೊಂಡಿದ್ದು, ಇವರಿಗೆ ಪಿಎಚ್. ಡಿ. ಪದವಿ ದೊರೆಯಲಿಲ್ಲ. ಗ್ರಂಥಸಂಪಾದನೆ, ಭಾಷಾಶಾಸ್ತ್ರ, ಸಂಶೋಧನೆ ಇವುಗಳಲ್ಲಿ ತೊಡಗಿಸಿಕೊಂಡಿದ್ದ ವೆಂಕಟೇಶಯ್ಯನವರಿಗೆ ಸೃಜನಶೀಲ ಸಾಹಿತ್ಯದಲ್ಲಿ ಒಲವಿದ್ದು ಹಲವಾರು ಕತೆ, ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದು ಇವು ಕೊರವಂಜಿ, ಸಂಯುಕ್ತ ಕರ್ನಾಟಕ, ಸುಬೋಧ, ವಿಕಟ ವಿನೋದಿನಿ, ಪ್ರಬುದ್ಧ ಕರ್ನಾಟಕ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರು ಬರೆದ ಹಲವಾರು ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಪುಲ್ಲಯ್ಯನ ಪ್ರಬಂಧಗಳು’ (೧೯೩೧) ಎಂದು ಎರಡು ಭಾಗಗಳಲ್ಲಿ ಪ್ರಕಟಿಸಿದ್ದು ಪ್ರಬಂಧ ಪ್ರಕಾರದಲ್ಲಿ ಪ್ರಕಟವಾದ ಮೊಟ್ಟಮೊದಲ ಪ್ರಬಂಧ ಸಂಕಲನವೆಂಬ ಖ್ಯಾತಿಯನ್ನು ಪಡೆದಿದೆ. ಇದಕ್ಕಿಂತ ಹಿಂದೆ ೧೮೯೮ ರಲ್ಲಿ ಬಿ. ವೆಂಕಟಾಚಾರ್ಯರು ಬಂಕಿಮ ಚಂದ್ರರ  ‘ಲೋಕರಹಸ್ಯ’ ಎಂಬ ಪ್ರಬಂಧ ಸಂಕಲನವನ್ನು ಅನುವಾದಿಸಿದ್ದು, ಸ್ವತಂತ್ರ ಪ್ರಬಂಧ ‘ದಾಡಿಯ ಹೇಳಿಕೆ’ ಯನ್ನು ಪ್ರಕಟಿಸಿದ್ದರೂ ಎಂ. ಜಿ. ವೆಂಕಟೇಶಯ್ಯನವರು ಪ್ರಕಟಿಸಿದ ‘ಪುಲ್ಲಯ್ಯನ ಪ್ರಬಂಧಗಳು’ ಪ್ರಥಮ ಪ್ರಬಂಧ ಸಂಕಲನವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದರಲ್ಲಿ ಪ್ರಕಟವಾಗಿರುವ ಜೈಲ್ದರ್ಶನ, ಶೈಲಿ, ಮೀಸೆ, ಮುಖಸ್ತುತಿ ಎಂಬ ನಾಲ್ಕು ಪ್ರಬಂಧಗಳು ಎರಡನೆಯ ಭಾಗದಲ್ಲಿದೆ. ಇದೇ ವರ್ಷ (೧೯೩೧) ಪ್ರಕಟವಾದ ಮತ್ತೆರಡು ಪ್ರಬಂಧ ಸಂಕಲಗಳೆಂದರೆ ಧಾರವಾಡದ ಗುಂಪಿನ ಗೆಳೆಯರು ಪ್ರಕಟಿಸಿದ ‘ಹರಟೆಗಳು’ ಮತ್ತು ಪು. ತಿ. ನರಸಿಂಹಾಚಾರ‍್ಯರ ‘ರಾಮಾಚಾರಿಯ ನೆನಪುಗಳು’. ‘ಪುಲ್ಲಯ್ಯನ ಪ್ರಬಂಧಗಳು’ ಪ್ರಥಮ ಸಂಕಲವೆಂದು ಎಂ. ವಿ. ಸೀತಾರಾಮಯ್ಯನವರು ದಾಖಲಿಸಿದ್ದಾರೆ. ಕಾದಂಬರಿ ಕ್ಷೇತ್ರವನ್ನು ಪ್ರವೇಶಿಸಿ ಬರೆದ ಸ್ವತಂತ್ರ ಸಾಮಾಜಿಕ ಕಾದಂಬರಿ ‘ಮಾಧವಲೀಲೆ’ ಇದು ಪ್ರತಿಭಾಗ್ರಂಥ ಮಾಲೆಯಿಂದ ಪ್ರಕಟವಾಗಿದ್ದು, ಸ್ವಾತಂತ್ಯ್ರ ಪೂರ್ವದ ಕಥೆಯನ್ನು ನವಿರಾದ ಹಾಸ್ಯ ಪ್ರಸಂಗಗಳ ಮೂಲಕ, ಚುರುಕು ಸಂಭಾಷಣಾ ಶೈಲಿಯಲ್ಲಿ ನಿರೂಪಿಸಿದ್ದಾರೆ. ೧೯೭೧ ರಲ್ಲಿ ಪ್ರಕಟಿಸಿದ ಸಂಶೋಧನ ಗ್ರಂಥ  ‘ಶಬ್ದಾವರ್ತ ನಿರುಕ್ತ’ ಜಾರ್ಜ್‌ ಕ್ಲಿಂಗ್ ಸ್ಲೆಯವರ ಸೈಕೊ ಬಯಾಲಜ ಆಫ್  ಲಾಂಗ್ವೇಜಸ್, ಫಿಲಿಪ್ ಬೋಸ್ ವುಡ್ ರವರ ಥಾಟ್ಸ್ ಅಂಡ್ ಲಾಂಗ್ವೇಜ್ ಮತ್ತು ಆರ್. ಎ. ಫಿಶರ್ ರವರ ಸ್ಟ್ಯಾಟಿಸ್ಟಿಕಲ್ ಮೆಥೆಡ್ ಫಾರ್ ರಿಸರ್ಚ್ ವರ್ಕ್ಸ ಮುಂತಾದವುಗಳ ಮಾದರಿಗಳನ್ನುನುಸರಿಸಿ ಭಾಷಾಶಾಸ್ತ್ರ, ಸಂಖ್ಯಾಶಾಸ್ತ್ರ ಆಸಕ್ತರಿಗಾಗಿ ರಚಿಸಿದ ಗ್ರಂಥಗಳು. ಪುರಾಣಕ್ಕೆ ಸಂಬಂಧಿಸಿದ ೧೨ ಕತೆಗಳ ಸಂಕಲನ ‘ಪುರಾಣದ ಕೆಲವು ಕಥೆಗಳು’, ನಾಟಕ ರಂಗದ ಆಗುಹೋಗುಗಳು, ನಟರ ಆತಂಕಗಳು, ವಿಮರ್ಶಕನ ಹೊಣೆಗಾರಿಕೆ, ಪ್ರೇಕ್ಷಕ ಪ್ರತಿಕ್ರಿಯೆಗಳು ಮುಂತಾದವುಗಳ ವರ್ಣನೆಯಿಂದ ಕೂಡಿರುವ ಕೃತಿ ‘ಜಾರಿದ ಗಂಟು’ ಮುಂತಾದವುಗಳಲ್ಲದೆ ಹರಿಶ್ಚಂದ್ರ ಕಾವ್ಯ, ರನ್ನನ ಗದಾಯುದ್ಧ ಮುಂತಾದವುಗಳನ್ನು ಸಂಪಾದಿಸಿ (ಇತರರೊಡನೆ) ಪ್ರಕಟಿಸಿದ್ದಾರೆ. ಇವರ ಇತರ ಕೃತಿಗಳೆಂದರೆ ಕಾಸಿನ ಸರ (ಸಣ್ಣ ಕಥೆಗಳು-೧೯೩೧), ಮಾನವ ಶಾಸ್ತ್ರದ ಮಾತು (೧೯೩೧),  ಪಚ್ಚೆಯುಂಗುರ (ಕಥೆಗಳು-೧೯೪೧), ಮನ್ನೂ ಮದುವೆ (ಕಥೆಗಳು-೧೯೫೧), ಕನ್ನಡ ಧ್ವನಿಮಾ (ಭಾಷಾಶಾಸ್ತ್ರ), ಕನ್ನಡ ಸಾಹಿತ್ಯ ಪ್ರಪಂಚ (ಸಂಕ್ಷಿಪ್ತ ಸಾಹಿತ್ಯ ಚರಿತ್ರೆ), ಅಮಾವಸು (ಚಂದ್ರ ವಂಶದ ರಾಜ ಪುರೂರವ-ಊರ್ವಶಿಯರಿಗೆ ಜನಿಸಿದವನು-ನಾಟಕ) ಮುಂತಾದವುಗಳಲ್ಲದೆ ಆಧುನಿಕ ಕವನಾಂಶ ಗಣಚಿಂತನ, ಚಿತ್ರದುರ್ಗದ ಪಾಳೇಗಾರರು, ನೆನಪಿನ ಕುಸುಮಗಳು (ಆತ್ಮ ಕಥೆ), ರನ್ನನ ಗದಾಯುದ್ಧ ವ್ಯಾಖ್ಯಾನ, ಗಮಕ ವ್ಯಾಖ್ಯಾನ ಇತ್ಯಾದಿ ಕೃತಿಗಳು ಪ್ರಕಟಗೊಂಡಿವೆ. ‘ಪುಲ್ಲಯ್ಯನ ಪ್ರಬಂಧಗಳು’ ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿ ಪ್ರಬಂಧ ಪ್ರಕಾರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಎಂ. ಜಿ. ವೆಂಕಟೇಶಯ್ಯನವರು ಪ್ರಬಂಧ ಸಾಹಿತ್ಯದಿಂದ ದೂರವಾದದ್ದು ೧೯೮೪ ರ ಡಿಸೆಂಬರ್ ೪ ರಂದು, ಅನಂತಪುರದಲ್ಲಿದ್ದ ತಮ್ಮ ಮಗನ ಮನೆಯಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top