೨೦.೦೫.೧೯೨೪ ವೀಣಾವಾದನದಲ್ಲಿ ಮಾಂತ್ರಿಕರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಹುಟ್ಟಿದ್ದು ಹಾಸನ ಜಿಲ್ಲೆಯ ದೊಡ್ಡಮಗ್ಗೆ ಎಂಬಲ್ಲಿ. ತಂದೆ ಜನಾರ್ದನ ಅಯ್ಯಂಗಾರ್, ಕೃಷಿಕರು. ತಾಯಿ ಜಾನಕಮ್ಮ. ಲೋಯರ್ ಸೆಕೆಂಡರಿ ಪರೀಕ್ಷೆಯ ನಂತರ ವಿದ್ಯಾಭ್ಯಾಸಕ್ಕೆ ಬಂದದ್ದು ಮೈಸೂರಿಗೆ. ತಂದೆಯ ಗುರುಗಳಾದ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನ ಕಲಿಕೆ. ವೀಣಾವಾದನದ ಎಲ್ಲ ತಂತ್ರಗಳನ್ನು ಶಿಷ್ಯನಿಗೆ ಎರೆದ ಧಾರೆ. ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆರ್.ಎನ್. ದೊರೆಸ್ವಾಮಿಯವರು ಇವರ ಸಹಪಾಠಿಗಳು. ತಾವು ಗುರುಗಳಿಂದ ಕಲಿತದ್ದಷ್ಟೇ ಅಲ್ಲದೆ ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳಿಗೂ ಕಲಿಸಿದ ವೀಣಾವಾದನದ ಪಾಠ. ೧೯೪೪ ರಲ್ಲಿಯೇ ಆಕಾಶವಾಣಿ ಚೆನ್ನೈ, ಬೆಂಗಳೂರು, ಮೈಸೂರು, ದೆಹಲಿಯಿಂದ ಇವರ ವೀಣಾವಾದನದ ಕಚೇರಿ ಪ್ರಸಾರ. ಆಕಾಶವಾಣಿಯ ’ಎ ಟಾಪ್ಗ್ರೇಡ್’ ಕಲಾವಿದರಾಗಿ ನೇಮಕ. ಆಕಾಶವಾಣಿಯ ರಾಷ್ಟ್ರೀಯ ವಾಹಿನಿಯಲ್ಲಿ ಹಲವಾರು ಬಾರಿ ಕಾರ್ಯಕ್ರಮ ಪ್ರಸಾರ. ಟಿ.ವಿ. ವಾಹಿನಿಯಲ್ಲೂ ಕಾರ್ಯಕ್ರಮ ಪ್ರಸಾರ. ಸುಪ್ರಸಿದ್ಧ ಸಂಗೀತ ಸಭೆಗಳಾದ ಮಲ್ಲೇಶ್ವರಂ ಸಂಗೀತ ಸಭಾ, ಶ್ರೀಕೃಷ್ಣ ಸಂಗೀತ ಸಭಾ, ರಾಜಾಜಿನಗರದ ಸಂಗೀತ ಸಭಾ, ಕೃಷ್ಣಪ್ಪನವರ ಗಾನ ಮಂದಿರ, ಸರಸ್ವತಿ ಗಾನ ಸಭಾ, ಗಾನ ಭಾರತಿ ಮುಂತಾದೆಡೆಗಳಲ್ಲಿ, ರಾಮೋತ್ಸವ, ಗಣೇಶೋತ್ಸವ ಸಂದರ್ಭಗಳಲ್ಲೂ ನಡೆಸಿಕೊಟ್ಟ ಕಚೇರಿಗಳು. ರಷ್ಯದ ಹಿರಿಯ ನಾಯಕರಾದ ಕ್ರುಶ್ಚೇವ್ ಮತ್ತು ಬುಲ್ಗಾನಿಯನ್ ಭಾರತ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಲಾಲ್ಬಾಗಿನ ಗಾಜಿನ ಮನೆಯಲ್ಲಿ ಕಚೇರಿ ನಡೆಸಿ ಪಡೆದ ಪ್ರಶಂಸೆ. ಚೌಡಯ್ಯನವರು ಸ್ಥಾಪಿಸಿದ್ದ ಮೈಸೂರಿನ ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್, ಕೃಷ್ಣಮೂರ್ತಿ ಪುರಂನ ಭಗಿನಿ ಸೇವಾ ಸಮಾಜ, ಟಿ. ನರಸೀಪುರದಲ್ಲಿರುವ ಚೌಡಯ್ಯಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ, ವಿಶ್ವವಿದ್ಯಾಲಯದ ವಿವಿಧ ಪರೀಕ್ಷೆಗಳ ಪರೀಕ್ಷಕರಾಗಿ, ಆಕಾಶವಾಣಿಯ ಆಡಿಷನ್ ಬೋರ್ಡಿನ ಸದಸ್ಯರಾಗಿ, ಕರ್ನಾಟಕ ಪ್ರೌಢಶಿಕ್ಷಣ ಮಂಡಲಿ ಸೀನಿಯರ್ ಪರೀಕ್ಷೆಯ ಪಠ್ಯಪುಸ್ತಕ ಸಮಿತಿ ಸಲಹೆಗಾರರಾಗಿ ಸಲ್ಲಿಸಿದ ಸೇವೆ. ಸಂದ ಪ್ರಶಸ್ತಿ ಗೌರವಗಳು – ಗಾನಕಲಾ ಪರಿಷತ್ತಿನಿಂದ ಗಾನ ಕಲಾಭೂಷಣ, ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ಕಲಾಜ್ಯೋತಿ ಪ್ರಶಸ್ತಿ, ಸಂಗೀತ ಕಲಾ ಭೂಷಣ ಪ್ರಶಸ್ತಿ, ವೀಣಾ ಮಾಧುರ್ಯಸಿರಿ, ಆದರ್ಶ ಸಂಸ್ಥೆಯ ಗಾನಲಯ ಸಾಮ್ರಾಟ. ಕಲಾ ಕೌಸ್ತುಭ ಪ್ರಶಸ್ತಿ, ರಾಜ್ಯ ಸರ್ಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು ಕೇಶವ ಗುರಂ – ೧೯೩೧ ಶಿವಲಿಂಗಪ್ಪ ಎಸ್.ಬಿ. – ೧೯೪೪ ಉಪ್ಪಿನ್ ಎಸ್.ಬಿ. – ೧೯೪೬ ನಾಗಚಂದ್ರ – ೧೯೫೨ ರಘು.ಟಿ. – ೧೯೫೯.

