
- This event has passed.
ಎಂ.ಪಿ. ಮನೋಹರಚಂದ್ರನ್
September 1
೧-೯-೧೯೩೮ ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಮನೋಹರ ಚಂದ್ರನ್‌ರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು. ತಂದೆ ಪುಟ್ಟಪ್ಪ, ತಾಯಿ ಸಾವಿತ್ರಮ್ಮ. ಪ್ರಾರಂಭಿಕ ಶಿಕ್ಷಣ ದಾವಣಗೆರೆ. ನಂತರ ಡಿ.ಆರ್.ಎಂ. ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್, ಡಿ.ಆರ್.ಆರ್. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮ (ಸಿವಿಲ್) ಪದವಿ. AMIE ಮಾಡಲು ಬೆಂಗಳೂರಿಗೆ ಬಂದು ಸರ್ವೆ ಮಾಡಿದ್ದು ಹಳೆಯ ಪುಸ್ತಕದಂಗಡಿಗಳು. ಬೋರ್ ಎನಿಸಿ PWD ಆಫೀಸಿಗೆ ಭೇಟಿಕೊಟ್ಟು ಎರಡೇ ದಿನದಲ್ಲಿ ಪಡೆದ ಕೆಲಸದ ಆರ್ಡರ್. ಸಬ್ ಓವರ್‌ಸಿಯರ್ ಆಗಿ ಬೆಳಗಾಂಗೆ ಪ್ರಯಾಣ. ಉಳಿದುಕೊಂಡಿದ್ದ ಇವರ ರೂಂಮೇಟ್‌ನಿಂದ “ನೀನು ಮೇಸ್ಟರ ಕೆಲಸಕ್ಕೆ ಲಾಯಕ್ಕು” ಎಂಬ ಉವಾಚ. ಪಾಲಿಟೆಕ್ನಿಕ್ ಪ್ರಿನ್ಸಿಪಾಲರ ಭೇಟಿ. ಗಳಿಸಿದ್ದು ಕೆಲಸದ ಆರ್ಡರ್. ಬಿ.ಎಂ.ಎಸ್. ಎಂಜನಿಯರಿಂಗ್ ಸಂಜೆ ಕಾಲೇಜಿನಿಂದ ಪಡೆದ ಉನ್ನತ ಶ್ರೇಣಿಯಲ್ಲಿ ಬಿ.ಇ. ಪದವಿ. ಪಾಲಿಟೆಕ್ನಿಕ್ ಉಪನ್ಯಾಸಕರಾಗಿ ಬೆಳಗಾಂ, ದಾವಣಗೆರೆ, ಕೆ.ಆರ್. ಪೇಟೆ, ಬೆಂಗಳೂರು ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ಇಂಗ್ಲಿಷ್ ಲೇಖಕರು ಮತ್ತು ರಾಶಿ, ಬೀಚಿ, ಗೊರೂರು, ನಾಡಿಗೇರ್, ನಾ. ಕಸ್ತೂರಿ ಮುಂತಾದವರ ಪುಸ್ತಕಗಳ ಅಧ್ಯಯನ. ಎಂಜನಿಯರ್ ವೃತ್ತಿಯ ಒಳ ಹೊರಗುಗಳಿಗೆ ವಿನೋದ ಲೇಪನೀಡಿ ಬರೆದ ಹಾಸ್ಯ ಲೇಖನಗಳು ನಾಡಿನ ಪ್ರಮುಖ ಪತ್ರಿಕೆ, ವಿಶೇಷಾಂಕಗಳಲ್ಲಿ ಪ್ರಕಟಿತ. ಹಾಸ್ಯ ಸಂಕಲನಗಳು-ಗಣಪತಿ ಮೋರಿಯ, ಹೆಂಡ್ತಿ ಬೇಕು-ಬೇಡ, ಸ್ವರ್ಗಕ್ಕೆ ಛೂಬಾಣ, ಅವಾರ್ಡ್ ಬೇಕೇಬೇಕು, ಮೀಸೆ ವೀರಪ್ಪ ಮತ್ತು ನಾನು, ಹುಚ್ಚು ಮುಂಡೆ ಮದುವೇಲಿ…, ಜಗನ್ನಾಥನ ಹೆಂಡತಿ ಮತ್ತು ಮಾಧುರಿ ದೀಕ್ಷಿತ್, ಕಲ್ಲೇಶಿಯ ಕಥೆಗಳು, ಮನೋಹರ ಹಾಸ್ಯ. ಹಾಸ್ಯ ಕಾದಂಬರಿ-ಆಪರೇಷನ್ ಸಂಜೀವಿ, ಪೂಪ ಕಾಡಿನಲ್ಲಿ ಪಾಪು, ಮೀಸೆ ಜಿಗುರಿದಾಗ. ಕಾದಂಬರಿಗಳು-ಆಸೋಟ, ವಿಗ್ರಹಗಳು. ಜೋಕ್ಸ್-ಜೋಕುಗಳ ಸರ, ಜೋಕೆ ಜೋಕು, ಬದುಕು ಜೋಕು ಮತ್ತು ಹಾಸ್ಯ, ಜೋಕುಜೋಕಾಲಿ. ಹಾಸ್ಯಕವನ-ಮೊನಚು ಕವನಗಳು ಮುಂತಾದ ೨೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಅವಾರ್ಡ್ ಬೇಕೇಬೇಕು ಎಂಬ ಹಾಸ್ಯ ಸಂಕಲನ ತಂದಿದ್ದರೂ ಅವಾರ್ಡ್‌ಗಳಿಗಾಗಿ ಹಪಹಪಿಸದೆ ಸದಾ ದೂರ ಉಳಿದವರು. ಇದೇ ದಿನ ಹುಟ್ಟಿದ ಸಾಹಿತಿಗಳು : ತ್ರಿವೇಣಿ – ೧೯೨೮-೨೯.೭.೬೩ ಎಸ್.ಎಂ. ವೃಷಭೇಂದ್ರಸ್ವಾಮಿ – ೧೯೨೮ ಉಮಾರಾವ್ – ೧೯೪೮ ಗಂಗಾಪಾದೇಕಲ್ – ೧೯೪೮ ಪ್ರೀತಿ ಶುಭಚಂದ್ರ – ೧೯೫೭ ಹಂಸ. ಆರ್. – ೧೯೬೨ ಶುಭದ ಅಮ್ಮಿನಭಾವಿ – ೧೯೫೧