೧೫.೦೪.೧೯೨೨ ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ಮುಖಿಯಾಗಿ ಹೃದಯದಾಳದಿಂದ ಹಾಡುವ ಗಾಯಕರಾದ ಪ್ರಭಾಕರ ರವರು ಹುಟ್ಟಿದ್ದು ಭಟ್ಕಳದಲ್ಲಿ. ತಂದೆ ಎಂ. ರಂಗರಾವ್, ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣಿತರು. ತಾಯಿ ಶಿಕ್ಷಕಿಯಾಗಿದ್ದ ಕಾವೇರಿ ಬಾಯಿ. ಕೀರ್ತನಕಾರ, ಸಂಗೀತಗಾರರ ಮನೆತನ. ಅಣ್ಣ ತಮ್ಮಂದಿರೆಲ್ಲರೂ ಒಂದಲ್ಲ ಒಂದು ರೀತಿ ಸಂಗೀತ ವಾದ್ಯದಲ್ಲಿ ಪರಿಣತರೆ. ಸಹೋದರಿಯರಾದ ಪಂಢರಿಬಾಯಿ, ಮೈನಾವತಿಯವರು ಚಿತ್ರಲೋಕದ ತಾರೆಯರು. ಸಂಚಾರಿ ನಾಟಕ ಮಂಡಳಿಯೊಂದು ಊರಿಗೆ ಬಂದಾಗ ಅದರೊಡನೆ ಸೇರಿ ರಂಗಗೀತೆಗಳು, ದೇವರ ನಾಮಗಳು, ಕೀರ್ತನೆಗಳನ್ನು ಹಾಡುತ್ತಾ ಊರೂರು ಸುತ್ತಿದರು. ಸುತ್ತಾಟ ಬೇಸರವೆನಿಸಿ ಒಂದು ರೀತಿ ವ್ಯವಸ್ಥಿತವಾಗಿ ಸಂಗೀತ ಶಿಕ್ಷಣ ಕಲಿತದ್ದು ಬಿ.ಎಸ್. ರಾಮಯ್ಯನವರ ಬಳಿ. ನಂತರ ಎಲ್.ಎಸ್. ನಾರಾಯಣ ಸ್ವಾಮಿ ಭಾಗವತರ ಬಳಿ ಪ್ರೌಢ ಶಿಕ್ಷಣ. ಇವರ ಭಾವಪೂರ್ಣ ಹಾಡುಗಾರಿಕೆ, ಸಿರಿಕಂಠಕ್ಕೆ ಮಾರು ಹೋಗದವರೇ ಇಲ್ಲ. ಆಕಾಶವಾಣಿ ಕಲಾವಿದರಾಗಿ ಕೀರ್ತನೆಗಳು, ದೇವರ ನಾಮಗಳನ್ನು ಹಾಡಿ ನಡೆಸಿಕೊಟ್ಟ ಕಾರ್ಯಕ್ರಮಗಳು. ರಾಜ್ಯದಲ್ಲೇ ಅಲ್ಲದೆ ಮುಂಬಯಿ, ಚೆನ್ನೈ, ಆಂಧ್ರ ಪ್ರದೇಶ, ಕೇರಳ ಮುಂತಾದೆಡೆ ಸಂಚರಿಸಿ ನೀಡಿದ ಹಲವಾರು ಕಾರ್ಯಕ್ರಮಗಳು. ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ಪಾರ್ಥಸಾರಥಿ, ಎ.ವಿ. ಕೃಷ್ಣಮಾಚಾರ್, ಎಚ್.ಆರ್.ಲೀಲಾವತಿ ಮುಂತಾದವರ ಸಂಗೀತ ನಿರ್ದೇಶನದಲ್ಲೂ ಹಾಡುಗಾರಿಕೆ. ಕುವೆಂಪುರವರ ಪದ್ಯಗಳಿಗೆ ಸ್ವತಃ ರಾಗ ಸಂಯೋಜಿನೆ ಮಾಡಿ ಹಾಡಿದರು. ಎಚ್.ಆರ್.ಲೀಲಾವತಿ, ಎನ್ಕೆಯವರ ಕವನಗಳನ್ನಾಧರಿಸಿ ’ನವತಾರಾಮಂಡಲ’ ಎಂಬ ಸಂಗೀತ ರೂಪಕ, ಮಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡು ’ವರ್ಷ ವೈಭವ’ ಇವರಿಗೆ ಪ್ರಸಿದ್ಧ ತಂದುಕೊಟ್ಟ ಕಾರ್ಯಕ್ರಮಗಳು. ಹಲವಾರು ಶಿಷ್ಯರಿಗೆ ಸಂಗೀತ ವಿದ್ಯೆಯ ಧಾರೆ. ಬಿ.ಕೆ.ಸುಮಿತ್ರ, ಆರ್. ರಮಾದೇವಿ, ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ ಇವರೆಲ್ಲರೂ ಪ್ರಭಾಕರ್ ರವರ ಶಿಷ್ಯವರ್ಗದವರೆ. ಶಿವಮೊಗ್ಗೆಯಲ್ಲಿ ನಡೆದ ಕರ್ನಾಟಕ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ಸನ್ಮಾನ. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ ಎನಿಸಿದ ಸಂತ ಶಿಶುನಾಳ ಪ್ರಶಸ್ತಿ ಮುಂತಾದ ಹಲವಾರು ಗೌರವ ಸನ್ಮಾನಗಳು. ಇದೇದಿನಹುಟ್ಟಿದಕಲಾವಿದರು: ಜೆ.ಹುಸೇನ್ ಸಾಬ್- ೧೯೪೬ ಮ. ನರಸಿಂಹಮೂರ್ತಿ – ೧೯೫೫ ಸದಾಶಿವಪಾಟೀಲ – ೧೯೬೨ ಬಿ.ಜಿ. ವಿನುತ – ೧೯೭೫ ಡಾ. ಜಿ. ಥಾಮಸ್ – ೧೯೦೭
* * *