ಎಚ್.ಆರ್. ಇಂದಿರಾ

Home/Birthday/ಎಚ್.ಆರ್. ಇಂದಿರಾ
Loading Events

೩೦.೧೧.೧೯೪೦ ೧೬.೧೦.೧೯೬೯ ಕಥೆ, ಹರಟೆ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದು ಇಂದಿರಾ ರವರು ಹುಟ್ಟಿದ್ದು ಅಜ್ಜಂಪುರದಲ್ಲಿ. ತಂದೆ ಎಚ್.ಎಸ್. ರಾಮಸ್ವಾಮಿಯವರು ಹಳ್ಳಿಯ ಶ್ಯಾನುಭೋಗರು, ತಾಯಿ ಗೌರಮ್ಮ. ಎಸ್.ಎಸ್.ಎಲ್.ಸಿ. ಓದಿದ ನಂತರ ಸೇರಿದ್ದು ಇಂಡಿಯನ್ ಕಾಫಿಬೋರ್ಡ್‌ನಲ್ಲಿ ಉದ್ಯೋಗಿಯಾಗಿ. ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯವನ್ನು ಓದುವ, ಬರೆಯುವ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದು, ಮಹಿಳೆಯರೆಂದರೆ ಕಥೆ, ಕಾದಂಬರಿಗಳನ್ನು ಮಾತ್ರ ಬರೆಯಬಲ್ಲರೆಂಬ ಮಿಧ್ಯಾಪವಾದಿ ಇದ್ದಕಾಲದಲ್ಲಿ ನಾಟಕ ರಚನೆಯಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿ ವಿಶಿಷ್ಟ ಬರಹಗಾರ್ತಿ ಎನಿಸಿದ್ದರು. ಇವರು ಬರೆದ ನಾಟಕಗಳು ಆಕಾಶವಾಣಿಯಿಂದ ಪ್ರಸಾರಗೊಂಡದಷ್ಟೇ ಅಲ್ಲದೆ, ಗೌರಿದತ್ತು ಮತ್ತು ಎ.ಎಸ್.ಮೂರ್ತಿಯವರ ನಿರ್ದೇಶನದಲ್ಲಿ ರಂಗದ ಮೇಲೂ ಪ್ರದರ್ಶನ ಗೊಂಡು ಯಶಸ್ವಿ ನಾಟಕಗಳೆನಿಸಿದ್ದುವು. ಕೆಲವೇ ಲೇಖಕಿಯರ ಹೆಸರು ಮಾತ್ರ ಸಾಹಿತ್ಯ ಲೋಕದಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ, ಇತರ ಬರಹಗಾರ್ತಿಯರಿಗೂ ಸಮಾನವಾದ ಅವಕಾಶ ಸಿಗಬೇಕು ಎನ್ನುವ ಹಂಬಲದಿಂದ ಲೇಖಕಿಯರನ್ನೆಲ್ಲಾ ಸಂಘಟಿಸುವ ಕಾರ್ಯವನ್ನು ಕೈಗೊಂಡು ೧೯೬೭ ರಲ್ಲಿ ಲೇಖಕಿಯರ ಸಂಘವನ್ನು ಪ್ರಾರಂಭಿಸಿದರು. ಲೇಖಕಿಯರನ್ನು ಸಂಘಟಿಸಿ ಈ ಮೂಲಕ ಮಹಿಳಾ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ ಮೊಟ್ಟಮೊದಲ ಮಹಿಳೆ ಇಂದಿರಾರವುರ. ಲೇಖಕಿಯರು ಆಗಾಗ್ಗೆ ಒಟ್ಟುಗೂಡುತ್ತಿದ್ದುದು ಬಸವನಗುಡಿಯಲ್ಲಿದ್ ಅ.ನ.ಸುಬ್ಬರಾಯರ ಕಲಾಮಂದಿರದಲ್ಲಿ. ಇವರು ಪ್ರಾರಂಭಿಸಿದ ಸಂಸ್ಥೆಗೂ ಎಚ್.ವಿ.ನಾರಾಯಣ್ ಮತ್ತು ಎ.ಎಸ್.ಮೂರ್ತಿಯವರು ಬೆಂಬಲ ನೀಡಿದರು. ಸಂಸ್ಥೆ ಪ್ರಾರಂಭವಾದ್ದರಿಂದ ಅದಕ್ಕೊಂದು ಅಧಿಕೃತ ರೂಪ ಬಂದಿದ್ದರಿಂದ ಹಲವಾರು ಲೇಖಕಿಯರು ಪರಿಚಯ, ವಿಚಾರ ವಿನಿಮಯ, ವಾಗ್ವಾದ, ಚರ್ಚೆ ಮುಂತಾದವುಗಳಿಗೆ ವೇದಿಕೆಯಾಯಿತು. ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದ ಇಂದಿರಾರವರಿಗೆ ಡಿ.ವಿ.ಜಿ. ಯವರ ಕವನಗಳಿಗೆ, ಮಂಕುತಿಂಮನ ಕಗ್ಗದ ಪದ್ಯಗಳಿಗೆ ರಾಗ ಹಾಕಿ ಹಾಡುವುದೆಂದರೆ ಅದೆಂತಾದ್ದೋ ಆಸಕ್ತಿ. ಹೀಗೆ ಹಲವು ಹತ್ತು ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಿದ್ದ ಇಂದಿರಾ ರವರು ರಚಿಸಿದ ಕೃತಿಗಳ ಹದಿನೆಂಟು. ಬಯಕೆಯ ಬಳ್ಳಿ, ಚೌಕಾಬಾರ, ಮರಳಿ ಹಳ್ಳಿಗೆ, ಲಕ್ಷ್ಮೀಕಟಾಕ್ಷ, ಕಲಾರತ್ನ, ಸುಮಿತ್ರಾ, ದಾದಿ ಮತ್ತು ಅಮಿತ ಕಿರಣ ಮುಂತಾದ ಕಾದಂಬರಿಗಳು. ಅಮಿತ ಕಿರಣ ಕಾದಂಬರಿಯು ೧೯೭೧ ರಲ್ಲಿ, ಇಂದಿರಾರವರ ಮರಣದ ನಂತರ ಪ್ರಕಟಗೊಂಡ ಕಾದಂಬರಿ. ಗುಡ್‌ಲಕ್, ನಗಬೇಡಿ, ಬಿದ್ದನಲ್ಲ ಬೇಸ್ತು, ಸಿನಿಮಾಸ್ಟರ್, ಧರೆಗಿಳಿದು ಬಾ ದೇವಿ ಮುಂತಾದ ನಾಟಕಗಳು. ಸಪ್ತಸ್ವರ, ಸಪ್ತ ಸರೋಜ ಮುಂತಾದ ಅನುವಾದ ಕೃತಿಗಳು, ಇವುಗಳ ಜೊತೆಗೆ ಇವರು ಮಾಡಿದ ಮತ್ತೊಂದು ಮಹತ್ತರ ಸಾಧನೆಯೆಂದರೆ ೭೭ ಜನ ಹಿರಿಕಿರಿಯ ಲೇಖಕಿಯರ ಕಥೆಗಳನ್ನು ಸಂಪಾದಿಸಿ, ಅವರ ವೈಯಕ್ತಿಕ ಪರಿಚಯವನ್ನು ಫೋಟೋ ಸಹಿತ ಹೊರತಂದ ಬೃಹತ್ ಕಲಾ ಸಂಕಲನ ‘ಕಥಾ ಪಲ್ಲವ’. ಅಂದಿನ ದಿನಗಳಲ್ಲಿ ಇಂತಹದೊಂದು ಕೃತಿಯನ್ನು ಹೊರತಂದದ್ದೇ ಸಾಹಸಮಯ ಕಾರ್ಯವೆನಿಸಿದ್ದರಿಂದ ಜೊತೆಗೆ ಇಂದಿರಾ ರವರಲ್ಲಿದ್ದ ಸಂಘಟನಾ ಚಾತುರ್ಯದಿಂದ ಮಹಿಳೆಯರ ಬರಹಕ್ಕೊಂದು ವಿಶೇಷ ಮಾನ್ಯತೆಯನ್ನು ತಂದುಕೊಟ್ಟಿತು. ಉದ್ಯೋಗ, ಸಂಘಟನೆ, ಸಾಹಿತ್ಯ ರಚನೆ, ವಿಚಾರ ವಿನಿಮಯ, ಚರ್ಚೆ, ಕಿರಿಯ ಲೇಖಕಿಯರ ಬರಹಗಳನ್ನು ಓದಿ ನೀಡುತ್ತಿದ್ದ ಪ್ರೋತ್ಸಾಹ ಹೀಗೆ ಹಲವು ಹತ್ತು ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡಿದ್ದು, ಅತಿ ಕಿರಿಯ ವಯಸ್ಸಿನಲ್ಲಿಯೇ ೧೮ ಕೃತಿ ರಚಿಸಿದ್ದು, ಇತರರು ಆಗುವುದಿಲ್ಲವೆಂಬುದನ್ನು ಸಾಧಿಸಿ ತೋರಿಸಿ ಇತರರನ್ನು ಚಕಿತರನ್ನಾಗಿಸುತ್ತಿದ್ದ ಇಂದಿರಾರವರು ಬಹುಬೇಗ (೧೬.೧೦.೧೯೬೯) ಅಂದರೆ ತಮ್ಮ ೨೯ನೇ ವಯಸ್ಸಿನಲ್ಲಿಯೇ ಅವಿವಾಹಿತರಾಗಿ ಬದುಕಿಗೆ ವಿದಾಯ ಹೇಳಿ ಸಾಹಿತಿ ಬಳಗವನ್ನು ಅಷ್ಟೈ ಆಶ್ಚರ್ಯ ಚಕಿತರನ್ನಾಗಿಸಿದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top