ಎಚ್.ಆರ್. ಲೀಲಾವತಿ

Home/Birthday/ಎಚ್.ಆರ್. ಲೀಲಾವತಿ
Loading Events
This event has passed.

೦೮.೦೨.೧೯೩೪ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪುಮೂಡಿಸಿರುವ ಲೀಲಾವತಿಯವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್. ರಾಮಣ್ಣ, ತಾಯಿ ಜಯಲಕ್ಷ್ಮಮ್ಮ. ತಂದೆ ತಾಯಿಗಳಿಬ್ಬರೂ ಭಾವಗೀತೆ ಹಾಗೂ ಸಂಗೀತದಲ್ಲಿ ಪರಿಶ್ರಮ ಉಳ್ಳವರು. ಅಜ್ಜಂದಿರೂ ಸಂಗೀತ ಪ್ರಿಯರೆ. ಸಂಗೀತದ ಮನೆತನ. ಬಾಲ್ಯದಿಂದಲೂ ಹಾಡುಗಳನ್ನು ಗುನುಗುವ ಚಟ. ಎನ್. ಚನ್ನಕೇಶವಯ್ಯನವರಿಂದ ಕರ್ನಾಟಕ ಸಂಗೀತ, ಎ.ವಿ. ಕೃಷ್ಣಮಾಚಾರ್ಯರಿಂದ ಲಘು ಸಂಗೀತ ಶಿಕ್ಷಣ. ಕೋಲ್ಕತ್ತಾದ ರಾಬಿನ್‌ರೇ ರವರಿಂದ ರವೀಂದ್ರ ಸಂಗೀತ ಕಲಿಕೆ. ಸಾಮಾನ್ಯ ವಿದ್ಯಾಭ್ಯಾಸದಲ್ಲಿ ಪಡೆದದ್ದು ಬಿ.ಎ. ಪದವಿ. ೧೯೭೬ರಲ್ಲಿ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ಉದ್ಯೋಗ ಪ್ರಾರಂಭ. ‘ಎ’ ಗ್ರೇಡ್ ಕಲಾವಿದೆಯಾಗಿ ದೇವರನಾಮ, ವಚನಗಳು, ಜಾನಪದ ಹೀಗೆ ನಾನಾ ಪ್ರಕಾರಗಳಲ್ಲಿ ಹಾಡುವ ಮೂಲಕ ಶೋತೃಗಳಿಗೆ ಕೊಟ್ಟ ಸಂತಸ. ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಹೀಗೆ ಎಲ್ಲಾ ಬಾನುಲಿ ಕೇಂದ್ರಗಳಿಂದಲೂ ಇವರ ಹಾಡುಗಾರಿಕೆ ಪ್ರಸಾರ. ದೊರೆತ ಪ್ರಶಂಸೆಯ ಸುರಮಳೆ. ಕನ್ನಡದಲ್ಲಷ್ಟೇ ಅಲ್ಲದೆ ಹಿಂದಿ, ಬಂಗಾಲಿ, ಅಸ್ಸಾಮಿ, ಗುಜರಾತಿ, ಮರಾಠಿ, ತೆಲುಗು, ಮಲಯಾಳಂ ಹೀಗೆ ಹಲವಾರು ಭಾರತೀಯ ಭಾಷೆಗಳಿಗೆ ನೀಡಿದ ಸ್ವರಸಂಯೋಜನೆ. ಕನ್ನಡ ಹಾಡುಗಳು ಮಾಸ್ಕೊ ರೇಡಿಯೋ ಕೇಂದ್ರದಿಂದಲೂ ಪ್ರಸಾರ. ಚಲನ ಚಿತ್ರಗಳಲ್ಲಿ ಹಾಡಿದ ಹಿರಿಮೆ. ಪ್ರಭುಲಿಂಗಲೀಲೆ, ಪಾಪ-ಪುಣ್ಯ, ಮತ್ತು ಪ್ರಶಸ್ತಿ ವಿಜೇತ ‘ಸಾವಿತ್ರಿ’ ಚಿತ್ರದಲ್ಲೂ ಹಾಡಿದ ಕೀರ್ತಿ. ಸಂಗೀತವಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ರಚಿಸಿದ ಕೃತಿಗಳು. ನಾಟಕ-ಮಧುಚಂದ್ರ, ಕವನ ಸಂಕಲನ-ಅವಡುಗಚ್ಚಿದ ಬೇನೆ, ಕಥಾಸಂಕಲನ-ಎಂಟು ಕಥೆಗಳು. ವಚನ-ಚಿತ್ತಾರ ವಚನ ಕವನಗಳು, ಲಹರಿ-ಭಾವಗೀತೆಗಳ ಸಂಕಲನ. ಚೌಪದಿ-ಸಾವಿರ ಸಂಚಯ. ‘ಸುಗಮ ಸಂಗೀತ : ಒಂದು ಸಿಂಹಾವಲೋಕನ’ ಮಹತ್ವದ ಕೃತಿ. ಭಾಗವಹಿಸಿದ ಸಮ್ಮೇಳನಗಳು-ಗೌರವಗಳು, ಮದರಾಸಿನ ಸಂಗೀತ ಸಮ್ಮೇಳನ. ಅಮೆರಿಕದ ಟ್ರೆನ್‌ಟನ್ ಪ್ರಥಮ ವಿದೇಶಿ ಕನ್ನಡ ಸಮಾವೇಶ. ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ಶಿವರಾಮು ಕೆ. – ೧೯೫೨ ಸೈಯದ್ ಆಸಫ್ ಅಲಿ – ೧೯೭೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top