Loading Events

« All Events

  • This event has passed.

ಎಚ್. ಎಂ. ಶಂಕರನಾರಾಯಣರಾವ್

November 21

೨೧.೧೧.೧೯೧೩ ೧೭.೦೯.೧೯೯೭ ಸಾಹಿತಿಗಳಾಗಿದ್ದು ಮಾತ್ರವಲ್ಲದೆ ಸಾಹಿತಿಗಳಿಗೆ ದೊರೆಯಬೇಕಾದ ಯುಕ್ತ ಗೌರವವನ್ನು ಸಾಹಿತಿಗಳಿಗೆ ದೊರಕಿಸಿಕೊಟ್ಟು, ಒಂದು ಪ್ರಕಾಶನ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾಗಿ ನಡೆಸಿದ ಶಂಕರನಾರಾಯಣರಾವ್‌ರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹರಿಹರದಲ್ಲಿ (ಈಗ ದಾವಣಗೆರೆ ಜಿಲ್ಲೆಗೆ ಸೇರಿದೆ). ಹಾಸ್ಯ ಸಾಹಿತಿ ನಾಡಿಗೇರ್ ಕೃಷ್ಣರಾಯರಿಗೂ ಜನ್ಮಕೊಟ್ಟ ಸ್ಥಳ. ಶಂಕರನಾರಾಯಣರಾಯರ ತಂದೆ ಮಲ್ಲಾರ ಭಟ್ಟ, ತಾಯಿ ಭೀಮಕ್ಕ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ. ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಪ್ರೌಢಶಾಲೆಯವರೆಗೆ. ನಂತರ ಬಿ.ಎ. ಆನರ್ಸ್ ಹಾಗೂ ಎಂ.ಎ ಪದವಿಗಳು ಮೈಸೂರು ವಿಶ್ವವಿದ್ಯಾಲಯದಿಂದ. ಎಂ.ಎ ಪರೀಕ್ಷೆಯ Viva-Voce (ಮೌಖಿಕ ಪರೀಕ್ಷೆ) ನಂತರ ವಿದ್ಯಾರ್ಥಿಗಳಾಗಿದ್ದ ಜಿ. ವೆಂಕಟಸುಬ್ಬಯ್ಯ, ಎಚ್.ಎಂ. ಶಂಕರನಾರಾಯಣರಾವ್, ಎಸ್.ವಿ. ಪರಮೇಶ್ವರಭಟ್ಟರುಗಳು ತಮ್ಮ ಗುರುಗಳಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿ, ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಡಿ.ಎಲ್.ನರಸಿಂಹಾಚಾರ್ಯ ಮುಂತಾದವರುಗಳನ್ನು ಫೋಟೋಗಾಗಿ ಪ್ರಾರ್ಥಿಸಿದರು. ಗುರುಗಳು ಬಂದು ಕುಳಿತಾಗ ವಿದ್ಯಾರ್ಥಿಗಳು ಹಿಂದೆ ಕುಳಿತರಂತೆ. ಆಗ ಬಿ.ಎಂ.ಶ್ರೀ ಯವರು ಮೂವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಂಭಾಗಕ್ಕೆ ಬರುವಂತೆ ತಿಳಿಸಿ “ಕನ್ನಡವನ್ನು ಕಟ್ಟಿ, ಉಳಿಸಿ, ಬೆಳಸಬೇಕಾದವರು ನೀವು, ಕನ್ನಡವನ್ನು ನಿಮ್ಮ ಕೈಲಿಟ್ಟಿದ್ದೇವೆ” ಎಂದು ಕರೆದು ಮುಂದೆ ಕೂರಿಸಿಕೊಂಡರಂತೆ. ಬಿ.ಎಂ.ಶ್ರೀ ಯವರ ಮಾತನ್ನು ಹುಸಿಗೊಳಿಸದೆ ಕನ್ನಡ ಕಟ್ಟುವ ಕೆಲಸವನ್ನು ಯಶಸ್ವಿಯಾಗಿಯೇ ನಿರ್ವಹಿಸಿದರು. ಎಂ.ಎ. ಪದವಿ ನಂತರ ಮೈಸೂರಿನ ಬನಮಯ್ಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲ ವರ್ಷ. ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಆಧ್ಯಾಪಕರಾಗಿ ಸೇರಿದ ಶಂಕರನಾರಾಯಣರಾಯರು ಕವಿ ರಾಘವಾಂಕನ ಕುರಿತು ವಿಮರ್ಶಾತ್ಮಕ ಪ್ರಬಂಧವೊಂದನ್ನು ಬರೆದಿದ್ದರು. ಆದರೆ ಅಂದಿನ ಸಂದರ್ಭದಲ್ಲಿ ಕಥೆ, ಕಾದಂಬರಿಗಳನ್ನು ಬಿಟ್ಟು ಉಳಿದ ಪ್ರಕಾರದ ಪ್ರಕಟಣೆಗೆ ಪ್ರಕಾಶಕರು ದೊರೆಯುವುದು ದುಸ್ತರವಾಗಿತ್ತು. ಕಡೆಗೆ ಶಂಕರನಾರಾಯಣರಾಯರೇ ‘ಕನ್ನಡ ಕವಿ ಕಾವ್ಯ ಮಾಲೆ’ ಎಂಬ ಹೆಸರಿನಿಂದ ‘ಕವಿ ರಾಘವಾಂಕನ ಪ್ರಬಂಧವನ್ನು ತಾವೇ ಪ್ರಕಟಿಸಿಬಿಟ್ಟರು. ನಂತರ ಪ್ರಕಟವಾದ ಪುಸ್ತಕ ‘ಚಂದ್ರಗುಪ್ತ ವಿಜಯ’. ಹೀಗೆ ಪ್ರಾರಂಭಿಸಿದ ‘ಕವಿ ಕಾವ್ಯ ಮಾಲೆ’ ಪ್ರಕಾಶನದ ಕಾರ‍್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಗುರುಗಳ, ಸ್ನೇಹಿತರ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ಎ.ಆರ್.ಕೃ., ತೀ.ನಂ.ಶ್ರೀ., ಡಿ.ಎಲ್.ಎನ್, ಎಸ್.ವಿ.ಪಿ., ಗೊರೂರು, ದೇಜಗೌ, ಹಾಮಾನಾ, ಜಿ.ಎಸ್.ಎಸ್., ಕಣವಿ, ಎಸ್.ವಿ.ರಂಗಣ್ಣ, ತ.ರಾ.ಸು. ತ್ರಿವೇಣಿ, ಅಶ್ವತ್ಥ, ವೀರಭದ್ರ ಹೀಗೆ ಹಳೆ – ಹೊಸತಲಮಾರಿನ ಅನೇಕ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದರು. ಶಂಕರನಾರಾಯಣರಾಯರಿಗೆ ಪ್ರಕಾಶನ ಸಂಸ್ಥೆ ಲಾಭದಾಯಕ ವೃತ್ತಿ ಎಂದೇನು ಎಣಿಸದೆ ಪ್ರಾಚೀನ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳತ್ತ ಗಮನಹರಿಸಿದರು. ಪ್ರಾಚೀನ ಕಾವ್ಯಗಳಿಗೆ ವಿವರಣೆ ಬರೆಸಿ ಪ್ರಕಟಿಸುವುದು, ಸಂಸ್ಕೃತ ಕಾವ್ಯಗಳನ್ನು ಪೀಠಿಕೆ, ಅರ್ಥ, ತಾತ್ಪರ‍್ಯ, ಟಿಪ್ಪಣಿಗಳೊಡನೆ ಪ್ರಕಟಿಸುವುದು – ಹೀಗೆ ಈ ರೀತಿಯ ಧ್ಯೇಯದಿಂದ ಕಟ್ಟಿ ಬೆಳಸಿದ ಸಂಸ್ಥೆಗೆ ಒಮ್ಮೆ ತೀ.ನಂ.ಶ್ರೀ ಯವರು ಧಾರವಾಡದಿಂದ ಪತ್ರ ಬರೆಯುತ್ತ  ‘ಶಾರದಾ ಮಂದಿರ’ ಎಂದು ವಿಳಾಸ ಬರೆದ ಕಾಗದ ಇವರಿಗೆ ತಲುಪಿದಾಗ ಶಂಕರನಾರಾಯಣರಾಯರಿಗೆ ಈ ಹೆಸರೇ ಬಲು ಮೆಚ್ಚಿಗೆಯಾಗಿ ‘ಶಾರದಾ ಮಂದಿರ’ ಎಂಬ ಹೆಸರನ್ನೇ ಪ್ರಕಾಶನದ ಹೆಸರಾಗಿ ಮಾಡಿಕೊಂಡು ಮಾರಾಟದ ಅನುಕೂಲಕ್ಕಾಗಿ ‘ಲಕ್ಷ್ಮೀ ಬುಕ್ ಡಿಪೋ’ ಎಂಬುದರ ಮೂಲಕ ಪ್ರಕಟಿಸಿದ ಗ್ರಂಥಗಳನ್ನು ವಿತರಿಸತೊಡಗಿದರು. ೧೯೪೪ರಲ್ಲಿ ಪ್ರಾರಂಭವಾದ ಶಾರದಾ ಮಂದಿರವು ತನ್ನ ಬೆಳ್ಳಿ ಹಬ್ಬವನ್ನು ೧೯೬೯ರಲ್ಲಿ ಆಚರಿಸಿಕೊಂಡಾಗ ಉತ್ಸವದ ನೆನಪಿಗೆಂದು ಇಪ್ಪತ್ತೈದು ಪುಸ್ತಕಗಳನ್ನು ಪ್ರಕಟಿಸಿದರು. ಅಂದಿನ ದಿನಮಾನದಲ್ಲಿ ಒಟ್ಟಿಗೆ ಇಷ್ಟು ಪುಸ್ತಕಗಳ ಪ್ರಕಟಣೆ ದೊಡ್ಡ ಸಾಧನೆಯೇ! ಜೊತೆಗೆ ‘ಬೆಳ್ಳಿ ಶಾರದೆ’ ಎಂಬ ಸ್ಮರಣ ಸಂಚಿಕೆಯನ್ನು ಹೊರತಂದರು. ಶಂಕರನಾರಾಯಣರಾಯರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ಹಿತೈಷಿಗಳು, ಸ್ನೇಹಿತರು ಸೇರಿ ಅರ್ಪಿಸಿದ ಗೌರವ ಗ್ರಂಥ ‘ಸ್ನೇಹಾಂಜಲಿ’ (೧೯೭೩). ಶಾರದಾವಿಲಾಸ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಸಿ ೧೯೭೪ರಲ್ಲಿ ನಿವೃತ್ತರಾದರು. ತಾವು ಬರೆದ ಕೃತಿಗಳೆಂದರೆ ಕವಿ ರಾಘವಾಂಕ, ಚಂದ್ರಗುಪ್ತ ವಿಜಯ, ಕೆಂಪು ನಾರಾಯಣ, ಮುದ್ರೆಯುಂಗುರ, ಮೃಚ್ಛಕಟಿಕ ಪ್ರಕರಣ, ಕರ್ನಾಟಕ ಶಾಕುಂತಲ ನಾಟಕ, ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ, ಹರಿಹರ ದೇವಾಲಯ, ಯಶೋಧರ ಚರಿತೆ, ಮಧ್ಯಮ ವ್ಯಾಯಾಮ ಯೋಗ ಮುಂತಾದ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹೀಗೆ ಪ್ರಾರಂಭವಾದ ಶಾರದಾ ಮಂದಿರದ ಪ್ರಕಟಣೆಯಿಂದ ಸುಮಾರು ೪೦೦ಕ್ಕೂ ಹೆಚ್ಚು ಗ್ರಂಥಗಳು ಪ್ರಕಟಗೊಂಡಿದ್ದು, ಹಲವಾರು ಗ್ರಂಥಗಳು ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿಗಳನ್ನು ಗಳಿಸಿದ್ದು ೧೯೯೫ರ ವರೆವಿಗೂ ನಿರಂತರವಾಗಿ ಪ್ರಕಟಣಾಕಾರ‍್ಯವನ್ನು ನಡೆಸಿಕೊಂಡು ಬಂದ ಶಂಕರನಾರಾಯಣರಾಯರನ್ನು ಯಾವ ಸಂಸ್ಥೆ, ಅಕಾಡಮಿಗಳು ಗುರುತಿಸದೆ ಹೊದದ್ದು ವಿಷಾದನೀಯ ಸಂಗತಿ. ಶಂಕರನಾರಾಯಣರಾಯರು ಸಾಹಿತ್ಯ ಲೋಕದಿಂದ ದೂರವಾದದ್ದು ೧೯೯೭ರ ಸೆಪ್ಟಂಬರ್ ೧೭ರಂದು, ಇದೀಗ ಅವರ ಮಗ ಪ್ರೊ. ಎಚ್.ಎಸ್. ಹರಿಶಂಕರರು ಪ್ರಕಟಣಾಕಾರ‍್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರೊ. ಎಚ್.ಎಂ. ಶಂಕರನಾರಾಯಣರಾಯರ ಸ್ಮರಣೆಗಾಗಿ ೨೦೦೯ರಲ್ಲಿ ಪ್ರಕಟಗೊಂಡ ಕೃತಿ ‘ಶಂಕರ ಸ್ಮೃತಿ’

Details

Date:
November 21
Event Category: