ಎಚ್.ಎಸ್. ಪಾರ್ವತಿ

Home/Birthday/ಎಚ್.ಎಸ್. ಪಾರ್ವತಿ
Loading Events
This event has passed.

..೧೯೩೪ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೇಕೆ ಸಮಾನಸ್ಥಾನಮಾನಗಳಿರಬಾರದು, ಹೆಣ್ಣಿಗೂ ಅವಕಾಶದೊರೆತರೆ ಗಂಡಸಿನೊಡನೆ ಸ್ಪರ್ಧಿಸಬಲ್ಲಳು ಎಂಬುದನ್ನು ಚಿಕ್ಕಂದಿನಿಂದಲೇ ರೂಢಿಸಿಕೊಂಡು, ಪ್ರತಿಭಟನಾ ಸ್ವಭಾವವನ್ನು ಬೆಳೆಸಿಕೊಂಡಿದ್ದ ಪಾರ್ವತಿಯವರು ಹುಟ್ಟಿದ್ದು ೧೯೩೪ರ ಫೆಬ್ರವರಿ ೩ರಂದು ಬೆಂಗಳೂರಿನಲ್ಲಿ. ತಂದೆ ಎಚ್‌. ಶ್ರೀನಿವಾಸರಾವ್‌, ತಾಯಿ ಮಹಾಲಕ್ಷ್ಮಮ್ಮ. ಹೈಸ್ಕೂಲುವರೆಗೆ ಓದಿದ್ದು ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ. ಆದರೆ ಆರ್ಥಿಕ ಪರಿಸ್ಥಿತಿಯಿಂದ ಕಾಲೇಜಿಗೆ ಸೇರಲಾಗದೆ, ಆಪ್ತರಾದ ಎನ್‌.ಡಿ. ಕೃಷ್ಣಮೂರ್ತಿಯವರ ಸಹಾಯದಿಂದ ಬಾಹ್ಯ ವಿದ್ಯಾರ್ಥಿನಿಯಾಗಿ ಕಾಶಿ ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಮತ್ತು ಎಂ.ಎ. ಪದವಿಗಳು. ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಹಿಂದಿ ಕಲಿಕೆಯೂ ಪ್ರಮುಖವಾಗಿದ್ದ ಸಂದರ್ಭದಲ್ಲಿ ‘ಪ್ರವೀಣ್‌’ ಹಾಗೂ ‘ಪ್ರಚಾರಕ ಪರೀಕ್ಷೆಗಳಲ್ಲಿ ಡಿಗ್ರಿ ಪಡೆದುಕೊಂಡದ್ದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ‘ಜಾಣ’ ಪರೀಕ್ಷೆಯಲ್ಲಿಯೂ ಮೊದಲ ದರ್ಜೆಯಲ್ಲಿ ತೇರ್ಗಡೆಯಾದರು. ಹೈಸ್ಕೂಲಿನಲ್ಲಿದ್ದಾಗಲೇ ‘ಲಾಲ್‌ಬಾಗ್‌’ ಬಗ್ಗೆ ಬರೆದ ಪ್ರಬಂಧವನ್ನು ಓದಿದ ಅಧ್ಯಾಪಕಿಯು ಮೆಚ್ಚಿ ಬೆನ್ನು ತಟ್ಟಿದಾಗ ಬರೆಯಬಲ್ಲನೆಂಬ ವಿಶ್ವಾಸ ಮನಸ್ಸಿನಲ್ಲಿ ಮೂಡಿ, ಸಿಕ್ಕಿದ ಸಾಹಿತ್ಯ ಕೃತಿಗಳನ್ನೆಲ್ಲಾ ಓದತೊಡಗಿದರು, ಮನೆಗೆ ಬರುತ್ತಿದ್ದ ಜನಪ್ರಗತಿ ಪತ್ರಿಕೆಯಲ್ಲಿ ನಿರಂಜನರ ಸಾಧನ-ಸಂಚಯ ಕಾಲಂ ಓದತೊಡಗಿದ್ದರು. ಒಮ್ಮೆ ಹಿಂದಿ ಪುಸ್ತಕದಲ್ಲಿದ್ದ ಕಥೆಯೊಂದನ್ನು ಕನ್ನಡಿ ಕರಿಸಿದ್ದು, ನಿರಂಜನರ ಕಣ್ಣಿಗೆ  ಬಿದ್ದಾಗ ಹಿಂದಿ ಕಾದಂಭರಿಕಾರರಾದ ಕೃಷ್ಣಚೆಂದರ ‘ಪರಾಜಯ’ ಎನ್ನುವ ಕಾದಂಬರಿಯೊಂದನ್ನು ತಂದುಕೊಟ್ಟು ಕನ್ನಡಕ್ಕೆ ಅನುವಾದಿಸಲು ಹೇಳಿದಾಗ,  ಅಳುಕಿನಿಂದಲೇ ಈ ಕೆಲಸ ಮಾಡಿದರು. ಆದರೆ ಅನುವಾದ ಚೆನ್ನಾಗಿದೆಯೆಂದು ಚಿತ್ರಗುಪ್ತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಇವರಿಗೆ ಮುಗಿಲು ಮುಟ್ಟಿದಷ್ಟೇ ಸಂತಸ. ಸಾಹಿತ್ಯದ ಮೊದಲ ಬರವಣಿಗೆಯೇ ಕಾದಂಬರಿಯಾಗಿ ಹೆಸರು ತಂದು ಕೊಟ್ಟದ್ದರಿಂದ ಲೇಖನ, ಕಥೆಗಳನ್ನೂ ಪತ್ರಿಕೆಗಳಿಗೆ ಬರೆಯತೊಡಗಿದರು. ಹೆಣ್ಣು ಪ್ರಗತಿಪರಳಾಗಬೇಕಾದರೆ ಉದ್ಯೋಗ ಅನಿವಾರ್ಯವೆಂದು ವಾದಿಸಿಬರೆದ ಲೇಖನ ಅಂದಿನ ಪ್ರಗತಿಪರ ವಿಚಾರವೆನ್ನಿಸಿಕೊಂಡು ಪರ, ವಿರೋಧ ಪೂರಕಲೇಖನಗಳು ಪ್ರಕಟಗೊಂಡು ಪಾರ್ವತಿಯವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಬುದ್ಧನ ೨೫೦೦ ನೇ ವರ್ಷದ ಜಯಂತ್ಯುತ್ಸವದ ಸಂದರ್ಭಕ್ಕಾಗಿ ಆಕಾಶವಾಣಿಗಾಗಿ ಹಿಂದಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದೇ ಆಕಾಶವಾಣಿಯಲ್ಲಿ ಉದ್ಯೋಗ ದೊರೆಯಲು ಸಹಕಾರಿಯಾಯಿತು. ೧೯೫೮ರಲ್ಲಿ ಆಕಾಶವಾಣಿ ಸೇರಿ ಕಲಾವಿದೆ, ಭಾಷಾಂತರಗಾರ್ತಿ, ಕಾರ್ಯಕ್ರಮ ನಿರ್ವಾಹಕಿ ಮುಂತಾದ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ೧೯೯೦ರಲ್ಲಿ ನಿವೃತ್ತಿ ಪಡೆದರು. ನೂರಕ್ಕೂ ಹೆಚ್ಚು ಶಬ್ದ ಚಿತ್ರಗಳನ್ನು, ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ಹಿಂದಿಗೆ ಅನುವಾದಿಸಿ ಪ್ರಸಾರ ಮಾಡಿದ್ದಲ್ಲದೆ ಕನ್ನಡದ ಪ್ರಮುಖ ಬರಹಾಗರರ ಕಥೆಗಳನ್ನು ನಾಟಕಕ್ಕೆ ಅಳವಡಿಸಿ ಹತ್ತು ವರ್ಷಗಳಷ್ಟು ದೀರ್ಘಕಾಲ ೧೦೦ ಕ್ಕೂ ಹೆಚ್ಚು ಕಥೆಗಳನ್ನು ಪ್ರಸಾರ ಮಾಡಿದರು. ಕನ್ನಡ ಸಾಹಿತ್ಯ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು ಗುಜರಾತಿ ಭಾಷೆಯ ವಿಶ್ವಕೋಶಕ್ಕಾಗಿ ಮಾಡಿದ್ದಲ್ಲದೆ ೨೫ ಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕ ಕನ್ನಡ ಸಾಹಿತಿಗಳನ್ನು ಹಿಂದಿ ಭಾಷೆಯವರಿಗೂ ಪರಿಚಯಿಸಿದ ಕೀರ್ತಿಯೂ ಪಾರ್ವತಿಯವರದ್ದು. ಬಿಡುವಿಲ್ಲದ ಆಕಾಶವಾಣಿಯ ಕಾರ್ಯಕ್ರಮದ ನಡುವೆಯೂ ಸಾಹಿತ್ಯದಲ್ಲೂ ಸಾಧಿಸಿದ್ದು ಅಪಾರ. ಪರಾಜಯ, ದುರ್ಗೇಶ ನಂದಿನಿ, ತ್ಯಾಗಪತ್ರ ಮತ್ತು ಉದಯದೆಡೆಗೆ, ಬಿಳಿರಕ್ತ ಮೊದಲಾದ ಅನುವಾದಿತ ಕಾದಂಬರಿಗಳು;  ನೇಸರನೆಗಳು, ಜೀವನ ಜಾಲ, ಜಬಾಲ, ಹಾವುಏಣಿಯಾಟ, ಒಂದು ಸಂವತ್ಸರ ಚಕ್ರ, ಯುಗಪುರುಷ, ಕಲೆಗೆ ಜಾತಿಯ ಹಂಗಿಲ್ಲ, ಮೊದಲಾದ ಸ್ವತಂತ್ರ ಕಾದಂಬರಿಗಳು; ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿಮೋಡ, ಸುಳಿ ಮೊದಲಾದ ಕಥಾ ಸಂಕಲನಗಳು; ಆರ್ ಕಲ್ಯಾಣಮ್ಮ, ತಿರುಮಲೆ ರಾಜಮ್ಮ, ಆರ್. ನಾಗರತ್ನಮ್ಮ, ಭಕ್ತೆ ಮೀರಾ ಮುಂತಾದ ಜೀವನ ಚರಿತ್ರೆಗಳು; ಹತ್ತಿರದವರು, ನವೋದಯಕಾಲದಲ್ಲಿ ಪ್ರಕೃತಿ, ಚಿಂತನ ಮಂಥನ, ವಿಚಾರಲಹರಿ ಮುಂತಾದ ಹರಟೆ, ಪ್ರಬಂಧ ಸಂಕಲನಗಳು; ಮಕ್ಕಳಿಗಾಗಿ ಬರೆದ ಹಲವಾರು ಕೃತಿಗಳು; ರೇಡಿಯೋ ನಾಟಕಗಳು ರೂಪಕಗಳು ಸೇರಿ ಒಟ್ಟು ೫೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಸಾಹಿತ್ಯ ಕ್ಷೇತ್ರದ ಅನುಪಮ ಸೇವೆಗಾಗಿ ಸಂದ ಪ್ರಶಸ್ತಿಗಳು ಹಲವಾರು. ಮಲ್ಲಿಕಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ (೨ ಬಾರಿ) ಸಾಹಿತ್ಯ ಸೌಹಾರ್ದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ನಾಟಕ ಅಕಾಡಮಿ ಫೆಲೊಶಿಪ್‌, ಅನುಪಮಾ ಪ್ರಶಸ್ತಿ, ಲಿಪಿಪ್ರಾಜ್ಞೆ ಪ್ರಶಸ್ತಿ, ಮೂಡಬಿದಿರೆಯ ಶಿವರಾಮಕಾರಂತ ಪ್ರಶಸ್ತಿ, ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಹಲವಾರು ಸಾಹಿತ್ಯ ಸಮ್ಮೇಳನ, ಸಂಘ-ಸಂಸ್ಥೆಗಳಿಂದ ದೊರೆತ ಪ್ರಶಸ್ತಿ ಗೌರವಗಳು. ೨೦೧೧ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ಸೃಜನಶೀಲ ಲೇಖಕಿ’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top