ಎಚ್.ಕೆ. ನಾರಾಯಣ

Home/Birthday/ಎಚ್.ಕೆ. ನಾರಾಯಣ
Loading Events
This event has passed.

೧೪.೦೫.೧೯೩೪ ಸುಗಮ ಸಂಗೀತಕ್ಕೊಂದು ಶ್ರೀಮಂತಿಕೆ ತಂದುಕೊಟ್ಟ ಎಚ್.ಕೆ.ನಾರಾಯಣರವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ತಂದೆ ಸಂಗೀತಗಾರರಾದ ಕೇಶವಯ್ಯ, ತಾಯಿ ಸಣ್ಣಮ್ಮ. ತಂದೆಯ ಸಂಗೀತದಿಂದ ಪ್ರಭಾವಿತರಾಗಿ ಆರನೆಯ ವಯಸ್ಸಿನಲ್ಲೇ ಪಿಟೀಲು ಕಲಿಯಲು ಪ್ರಾರಂಭ. ರಿಪೇರಿಗೆ ಹೋದ ಪಿಟೀಲು ವಾಪಸ್ಸು ಬಾರದೆ ಕಲಿತಿದ್ದು ಗಾಯನ. ಆರ್‌.ಕೆ. ಶ್ರೀಕಂಠನ್‌ರವರಲ್ಲಿ ಸಂಗೀತ ಶಿಕ್ಷಣ. ಸ್ವರ ಪ್ರಸ್ತಾರ ಬರೆದು ಕೊಡುವುದರ ಮೂಲಕ ೧೯೫೩ ರಿಂದಲೇ ಆಕಾಶವಾಣಿಯ ನಂಟು. ಆಕಾಶವಾಣಿ ಬೆಂಗಳೂರಿಗೆ ವರ್ಗವಾದ ನಂತರ, ಬೆಂಗಳೂರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ. ಜ್ಯೂನಿಯರ್‌ ಮ್ಯೂಸಿಕ್ ಕಂಪೋಸರ್‌, ಸೀನಿಯರ್‌ ಕಂಪೋಸರ್‌, ಮ್ಯೂಸಿಕ್ ಪ್ರೊಡ್ಯೂಸರ್‌, ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ’ಎ’ ಶ್ರೇಣಿಯ ಕಲಾವಿದರು. ಹಲವಾರು ಸಂಗೀತ ರೂಪಕಗಳಿಗೆ ರಾಗ ಸಂಯೋಜನೆ, ಜಯದೇವನ ಶೃಂಗಾರನಾಯಕ, ಕುವೆಂಪುರವರ ಚಿತ್ರಾಂಗದ, ರವೀಂದ್ರನಾಥ ಠಾಕೂರರ ಗೀತ ಭಾರತ ಮುಂತಾದುವುಗಳಿಗೆ ನೀಡಿದ ಅಮೋಘ ಸಂಗೀತ. ರಾಷ್ಟ್ರೀಯ ವಾಹಿನಿಯಲ್ಲೂ ಕಾರ್ಯಕ್ರಮ ಪ್ರಸಾರ. ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ. ವಿದೇಶಗಳಲ್ಲಿ ೨೫ಕ್ಕೂ ಹೆಚ್ಚು ನೃತ್ಯ ರೂಪಕಗಳಿಗೆ ನೀಡಿದ ಸಂಗೀತ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯಕ್ಕೆ ಗಾಯನವನ್ನು ನೀಡಿ ನಡೆಸಿ ಕೊಟ್ಟ ಕಾರ್ಯಕ್ರಮಗಳು. ಅಮೆರಿಕಾ (ಮೂರು ಬಾರಿ) ಇಂಗ್ಲೆಂಡ್, ಸಿಂಗಪೂರ್‌, ಹಾಂಕ್‌ಕಾಂಗ್‌, ಸಿಲೋನ್, ರಷ್ಯಾ (ಎರಡು ಬಾರಿ), ಮನಿಲಾ ಮುಂತಾದೆಡೆ ಸಂಗೀತ ಕಾರ‍್ಯಕ್ರಮಗಳು. ರಮಣ ಮಹರ್ಷಿಗಳ ಗೀತಗಾಯನಕ್ಕೆ ರಾಜಕುಮಾರ್‌ ಭಾರತಿಯವರೊಡನೆ ೧೫೦ ಕ್ಯಾಸೆಟ್ಟುಗಳಿಗೆ ಹಾಡುಗಾರಿಕೆ. ನಿಲಾಂಜನ, ಛಾಯಾ, ಗೆಳತಿ, ಸಂಗೀತ, ಅಗ್ನಿಹಂಸ ಇವರು ತಂದ ಸುಗಮ ಸಂಗೀತದ ಧ್ವನಿಸುರುಳಿಗಳು. ಕ್ಯಾಲಿಕಟ್‌ನಲ್ಲಿ ಆಕಾಶವಾಣಿಯ ಆಹ್ವಾನಿತ ಶೋತೃಗಳ ಸಮ್ಮುಖದಲ್ಲಿ ಮೂರು ಮಲಯಾಳಂ ಹಾಡುಗಳಿಗೆ ರಾಗ ಸಂಯೋಜನೆ. ಆಂಧ್ರ ಪ್ರದೇಶದ ಮಂಗಮಪಲ್ಲಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ. ಶ್ರೀವಿದ್ಯಾ ಭೂಷಣರ ಸುಮಾರು ೭೫ ಧ್ವನಿಸುರುಳಿಗಳಿಗೆ ನೀಡಿದ ಸಂಗೀತ ನಿರ್ದೇಶನ. ಶಾಸ್ತ್ರೀಯ ಸಂಗೀತ, ವಚನಗಳು, ದಾಸರ ಪದಗಳ ನೂರಾರು ಧ್ವನಿಸುರುಳಿಗಳ ಬಿಡುಗಡೆ. ಸಂದ ಪ್ರಶಸ್ತಿ ಗೌರವಗಳು, ೧೯೮೪-೮೫ ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ ಪ್ರಶಸ್ತಿ, ೧೯೮೮ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ಚೌಡಯ್ಯ ಪ್ರಶಸ್ತಿ, ೨೦೦೦ ದಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ. ನಿವೃತ್ತಿಯ ನಂತರವೂ ತರಳಬಾಳು ಕೇಂದ್ರ, ಭಾರತೀಯ ವಿದ್ಯಾಭವನ ಮುಂತಾದೆಡೆ ಯುವ ಪೀಳಿಗೆಗೆ ನೀಡುತ್ತಿರುವ ಮಾರ್ಗದರ್ಶನ. ಈ ವರ್ಷ ಹಾಸನದಲ್ಲಿ ನಡೆದ ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮುಖ್ಯವಾದುವು. ಇದೇ ದಿನ ಹುಟ್ಟಿದ ಕಲಾವಿದರು ಮಾಧವ ರಾವ್. ಕೆ.ಬಿ.- ೧೯೨೪ ಎಂ.ಕೆ.ಜಯಶ್ರೀ – ೧೯೫೫ ರತ್ನಸುಪ್ರಿಯ ರಾಮಮೋಹನ್ – ೧೯೬೩.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top