ಎಚ್.ಜಿ. ರಾಧಾದೇವಿ

Home/Birthday/ಎಚ್.ಜಿ. ರಾಧಾದೇವಿ
Loading Events
This event has passed.

೩೦.೦೧.೧೯೫೨ ೦೯.೧೧.೨೦೦೬ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತ, ರಮ್ಯ ಪಾತ್ರಗಳನ್ನು ಸೃಷ್ಟಿಸುತ್ತ, ಮಧ್ಯಮ ವರ್ಗದ ಓದುಗರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುವಂತಹ ಮಾಂತ್ರಿಕ ಪಾತ್ರಗಳನ್ನು ಸೃಷ್ಟಿಸಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ರಾಧಾಮಣಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಸಂಪ್ರದಾಯಸ್ಥ ಕುಟುಂಬದ ಗೋಪಿನಾಥಾಚಾರ್‌ರವರು ಪ್ರಾಥಮಿಕ ಶಾಲಾ ಶಿಕ್ಷಕರು. ತಾಯಿ ಸರಸ್ವತಮ್ಮ. ತಂದೆ ಗೋಪಿನಾಥಾಚಾರ್ಯರಿಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಲೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಗೌರಿಬಿದನೂರು ಮುಂತಾದ ಕಡೆಗಳಲ್ಲಿ ಪ್ರಾರಂಭಿಕ ಶಿಕ್ಷಣ. ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಐವರು ಹುಡುಗಿಯರಲ್ಲಿ ರಾಧಾಮಣಿಯವರೂ ಒಬ್ಬರು. ಹೈಸ್ಕೂಲು ಓದುತ್ತಿದ್ದಾಗಿನಿಂದಲೂ ಕಾದಂಬರಿ ಓದುವ ಹುಚ್ಚು. ತರಗತಿಯ ನೋಟ್‌ಪುಸ್ತಕಗಳೊಳಗೆ ಅ.ನ.ಕೃ,, ತ್ರಿವೇಣಿ ಮುಂತಾದವರ ಕಾದಂಬರಿಗಳನ್ನಿಟ್ಟು ಕೊಂಡು ಓದಿದರೂ ವಿದ್ಯೆಯಲ್ಲಿ ಮುಂಚೂಣಿಯಲ್ಲಿದ್ದ ಹುಡುಗಿ. ರಜೆಯ ದಿನಗಳಲ್ಲಿ ಕುಮಾರ ವ್ಯಾಸನ ಭಾರತಕಥಾಮಂಜರಿಯು ಅಚ್ಚುಮೆಚ್ಚಿನದು. ಹಲವಾರು ಪ್ರಸಂಗಗಳು ಕಂಠಸ್ಥವಾಗಿದ್ದವು. ಇವೇ ಮುಂದೆ ಕಾದಂಬರಿ ಪ್ರಪಂಚಕ್ಕೆ ಕೊಂಡೊಯ್ಯುವ ಮೂಲ ಸ್ರೋತವಾಗಿ ಕಾದಂಬರಿಗಳ ರಚನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿತು. ಎಸ್.ಎಸ್.ಎಲ್.ಸಿ.ಯ ನಂತರ ಮುಂದಿನ ಓದಿಗೆ ತಡೆಯುಂಟಾಗಿ ಬಿಡುವಿನ ವೇಳೆಯಲ್ಲಿ ಪ್ರಾರಂಭಿಸಿದ ಮನೆ ಪಾಠ. ಇದರಿಂದ ದೊರೆತ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ಹದಿನೆಂಟರ ವಯಸ್ಸಿಗೆ ಕೋಲಾರದ ಮೆಥೊಡಿಸ್ಟ್ ಮಿಷಿನ್ ಶಾಲೆಯಲ್ಲಿ ಉದ್ಯೋಗ ದೊರಕಿಸಿಕೊಂಡ ಜಾಣ್ಮೆಯ ಹುಡುಗಿ. ಬಾಲ್ಯದಿಂದಲೂ ರೂಢಿಸಿಕೊಂಡಿದ್ದ ವಿಸ್ತ್ರತ ಓದು ಬರವಣಿಗೆಯನ್ನು ಪ್ರಾರಂಭಿಸಲು ಉತ್ತೇಜನ ನೀಡಿತು. ‘ರಾಧಾದೇವಿ’ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪತ್ರಿಕೆಗಳಿಗೆ ಬರೆಯತೊಡಗಿದರು. ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ‘ಆಫೀಸ್ ಹೊತ್ತಿಗೆ ಅನಂತನ ಅವಾಂತರಗಳು’ ಎಂಬ ಹಾಸ್ಯ ಲೇಖನದಲ್ಲಿ ಪತಿಯ ಆಫೀಸ್ ತರಾತುರಿ, ಮಕ್ಕಳ ಕೋಟಲೆ, ಗೃಹಿಣಿಯ ಗಡಿಬಿಡಿಗಳನ್ನು ಚಿತ್ರಿಸಿದ್ದು ಓದುಗರಿಂದ ದೊರೆತ ಅಪಾರ ಮೆಚ್ಚುಗೆ. ಮೊದಲ ಪ್ರಕಟಿತ ಕಾದಂಬರಿ ‘ಸುವರ್ಣ ಸೇತುವೆ’. ಇದಕ್ಕೆ ಮುನ್ನ ಒಂಬತ್ತು ಕಾದಂಬರಿಗಳನ್ನು ಬರೆದಿದ್ದರೂ ಅದಾವುದ್ಕೂ ಪ್ರಕಟಣೆಯ ಯೋಗ ದೊರೆಯದಿದ್ದರೂ, ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಸುವರ್ಣ ಸೇತುವೆ’ಯು ಪ್ರಕಟವಾಗಿತ್ತಿದ್ದಂತೆ ಗಳಿಸಿದ ಜನಪ್ರಿಯತೆಯಿಂದ, ಹಿಂದೆ ಬರೆದ ಇತರ ಕಾದಂಬರಿಗಳಿಗೂ ಪ್ರಕಟವಾಗುವ ಯೋಗ ಕೂಡಿ ಬಂದಿತು. ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ಬೆಂಗಳೂರಿನ ಗೀತಾ ಏಜೆನ್ಸಿಸ್ ಪ್ರಕಾಶಕರು. ನಂತರ ಇದೇ ಪ್ರಕಾಶಕರಿಂದ ಎಂಬತ್ತೆಂಟು ಕಾದಂಬರಿಗಳನ್ನು ಪ್ರಕಟಿಸಿದ್ದಲ್ಲದೆ ಮೊದಲ ಹನ್ನೆರಡು ಕಾದಂಬರಿಗಳು ಮೂರಕ್ಕೂ ಹೆಚ್ಚು ಮುದ್ರಣ ಕಂಡವು. ಹೀಗೆ ನಿರಂತರ ಬೇಡಿಕೆಯ ಕಾದಂಬರಿಕಾರ್ತಿ ಎನಿಸಕೊಂಡ ರಾಧಾದೇವಿಯವರ ಕಾದಂಬರಿಗಳನ್ನು ಕೀರ್ತಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ವಸಂತ ಪ್ರಕಾಶನ, ಹೇಮಂತ ಸಾಹಿತ್ಯ, ಪ್ರಿಯದರ್ಶಿನಿ ಪ್ರಕಾಶನ, ಹಂಸಧ್ವನಿ ಪ್ರಕಾಶನ ಮತ್ತು ದಿವ್ಯಚಂದ್ರ ಪ್ರಕಾಶನದವರು ಪ್ರಕಟಿಸಿದ್ದು ಸುಮಾರು ನೂರ ಎಪ್ಪತ್ತು ಕಾದಂಬರಿಗಳ ಲೇಖಕಿ ಎನಿಸಿದ್ದಾರೆ. ಇವರ ಜಿವನದಲ್ಲಿ ನಡೆದ ಮತ್ತೊಂದು ಸ್ವಾರಸ್ಯಕರ ಘಟನೆ ಎಂದರೆ ಮೊದಲ ಕಾದಂಬರಿ ‘ಸುವರ್ಣ ಸೇತುವೆ’ ಧಾರಾವಾಹಿಯಾಗಿ ಪ್ರಕಟಗೊಂಡ ನಂತರ, ಮೊದಲ ಕಂತು ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಅಭಿಮಾನಿ ಓದುಗರೊಬ್ಬರು ಬಾಳ ಸಂಗಾತಿಯಾಗಿಯೂ ದೊರೆತರು. ಅಭಿಮಾನಿ ಬರೆದ ಪತ್ರಕ್ಕೆ ಸಂತಸದ ಉತ್ತರ – ಮರುಉತ್ತರ – ಹೀಗೆ ನಡೆದ ಪತ್ರವ್ಯವಹಾರದಿಂದ ಸ್ನೇಹ – ಪ್ರೇಮಕ್ಕೆ ತಿರುಗಿ ಒಂದು ರೀತಿಯ ಕಾದಂಬರಿಯ ಕಥೆಯಂತೆಯೇ ಮದುವೆಯಲ್ಲಿ ಪೂರ್ಣಗೊಂಡಿತು. ಮದುವೆಯ ನಂತರ ಉದ್ಯೋಗವನ್ನು ತೊರೆದು ಪತಿಯ ಗೃಹ ಗಂಗಾವತಿಗೆ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಲೇಖನ ವ್ಯವಸಾಯದಲ್ಲೇ ತೊಡಗಿಸಿಕೊಂಡು ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಇವರ ಕಾದಂಬರಿಗಳನ್ನು ಹಲವಾರು ವಾರ, ಮಾಸ ಪತ್ರಿಕೆಗಳು ಕಾಯ್ದಿರಿಸಿ ಪ್ರಕಟಿಸತೊಡಗಿದವು. ಮಲ್ಲಿಗೆ, ಹಂಸರಾಗ, ಮಂಜುವಾಣಿ,, ತರಂಗ, ಕರ್ಮವೀರ ಪತ್ರಿಕೆಗಳು ಪ್ರಕಟಿಸಿದವು. ಎಂಟು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದು ಅದರಲ್ಲಿ ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಧಡೋದರಿ ಕಾದಂಬರಿಗಳನ್ನು ಮಂಜುವಾಣಿ ಪತ್ರಿಕೆಯವರು ಪ್ರಕಟಿಸಿದ್ದಲ್ಲದೆ, ರಾಧೆಗೊಲಿದ ಕೃಷ್ಣ ಮತ್ತು ಸತ್ಯಭಾಮಾವೃತ ಶ್ರೀಕೃಷ್ಣ ಕಾದಂಬರಿಯನ್ನು ಪ್ರಕಟಿಸಿದರು. ‘ಶ್ರೀನಿವಾಸ ಕಲ್ಯಾಣ’ ಕಾದಂಬರಿಯನ್ನು ತರಂಗ ವಾರ ಪತ್ರಿಕೆಯವರು ಪ್ರಕಟಿಸಿದ್ದಾರೆ. ಈ ಕಾದಂಬರಿಗಳ ಜೊತೆಗೆ ‘ಮನಸ್ಸಿನ ಕಣ್ಣು’ ಎಂಬ ಪತ್ತೇದಾರಿ ಕಾದಂಬರಿ ಮತ್ತು ‘ಬೆಳಕು’ ಎಂಬ ಧಾರ‍್ಮಿಕ ಕೃತಿಯನ್ನೂ ಸಹ ರಚಿಸಿದ್ದಾರೆ. ‘ಸುವರ್ಣ ಸೇತುವೆ’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿ (೧೯೮೦) ವಿಷ್ಣುವರ್ಧನ್, ಆರತಿಯವರ ಅಭಿನಯದಲ್ಲಿ ತೆರೆಕಂಡು ಜನಮನ್ನಣೆಗಳಿಸಿತು. ಮತ್ತೊಂದು ಕಾದಂಬರಿ ‘ಅನುರಾಗ ಅರಳಿತು’ ಇದೇ ಹೆಸರಿನಿಂದ ಚಲನಚಿತ್ರವಾಗಿ ವರನಟ ಡಾ.ರಾಜ್‌ಕುಮಾರ್ ಮತ್ತು ಮಾಧವಿ, ಗೀತಾರವರು ಅಭಿನಯಿಸಿದ್ದು ಅಪಾರ ಜನಪ್ರಿಯತೆಗಳಿಸಿದ ಚಲನಚಿತ್ರವೆನಿಸಿತು. ಐವತ್ತನೆಯ ಕಾದಂಬರಿ ‘ಅಂಬರ ಚುಂಬಿತೆ’ ತರಂಗ ವಾರ ಪತ್ರಿಕೆಯಲ್ಲೂ, ನೂರನೆಯ ಕಾದಂಬರಿ ‘ಬಂಗಾರದ ಕಿಡಿ’ ಹಾಗೂ ನೂರ ಐವತ್ತನೆಯ ಕಾದಂಬರಿ ‘ಹಂಸ ಉಗುಳಿದ ಹಾರ’ ಇವು ಕರ್ಮವೀರ ವಾರ ಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಪ್ರಕಟಗೊಂಡವು. ಹಿಂದಿ ಭಾಷೆಗೂ ಇವರ ಎರಡು ಕಾದಂಬರಿಗಳಾದ ‘ಬೆಳಕು’ ಮತ್ತು ‘ಸುಖದ ಕನಸು’ ಕಾದಂಬರಿಯು ‘ಸುಂದರ ಸಪ್ನೇ’ ಎಂಬ ಹೆಸರಿನಿಂದ ಪ್ರಕಟಗೊಂಡಿವೆ. ಮೊದಲ ಕಾದಂಬರಿ ಪ್ರಕಟವಾಗುವುದಕ್ಕೆ ಮುಂಚೆಯೇ ಸುಮಾರು ೧೨ ರೇಡಿಯೋ ನಾಟಕಗಳನ್ನು ಬರೆದಿದ್ದು ಎಲ್ಲವೂ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಕಟಗೊಂಡಿವೆ, ‘ಭ್ರಮರ ಬಂಧನ’ ಕಾದಂಬರಿಗೆ ಅ.ನ.ಕೃ. ಸ್ಮಾರಕ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, ‘ಮಿಂಚಿನಿಂದಿಳಿದ ಮೋಹನಾಂಗಿ’ ಜಾನಪದ ಕಥಾಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ; ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ಅನುರಾಗ ಅರಳಿತು ಚಿತ್ರ ಕಥೆಗಾಗಿ ಚಿತ್ರ ರಸಿಕರ ಸಂಘದಿಂದ ಅತ್ಯುತ್ತಮ ಕಥಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ರಾಧಾದೇವಿಯವರು ಕಾದಂಬರಿ ಲೋಕದಿಂದ ದೂರವಾದದ್ದು ೨೦೦೬ರ ನವೆಂಬರ್ ೯ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top