೧೦.೦೨.೧೯೨೫ ರಂಗಭೂಮಿ ನಾಯಕನಟರಷ್ಟೆ, ಖಳನಾಯಕರಿಗೂ ಪ್ರಾಮುಖ್ಯತೆ ತಂದುಕೊಟ್ಟ ಎಚ್.ಟಿ. ಅರಸ್ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಬಡ ನೇಕಾರರ ಕುಟುಂಬದಲ್ಲಿ. ನಿಜ ನಾಮಧೇಯ ಎಚ್. ತಿಪ್ಪರಾಜ ಅರಸ್. ತಂದೆ ಯಮನಯ್ಯ, ತಾಯಿ ನಾಗಮ್ಮ. ಓದಿದ್ದು ಏಳನೆಯ ತರಗತಿ ವರೆಗೆ. ರೂಪ, ಶಾರೀರ, ಶರೀರ ಕಂಡ ಇತರರ ಪ್ರಚೋದನೆಯಿಂದ ಕಂದಗಲ್ಲ ಹನುಮಂತರಾಯರ ಅಕ್ಷಯಾಂಬರ ನಾಟಕದಲ್ಲಿ ದ್ರೌಪದಿ ಪಾತ್ರದ ಮೂಲಕ ರಂಗಭೂಮಿ ಪ್ರವೇಶ. ಮುಂದೆ ಒಂದಾದರೊಂದಂತೆ ನಾಟಕಗಳಲ್ಲಿ ದೊರೆತ ಪಾತ್ರಗಳು. ಚಿತ್ರಾಂಗದ ನಾಟಕದ ಅರ್ಜುನನ ಪಾತ್ರಕ್ಕೆ ಹೇಳಿಮಾಡಿಸಿದ ದೇಹದಾರ್ಢ್ಯವೆಂಬ ಹೆಗ್ಗಳಿಕೆ. ಬಡತನದ ಭೂತ, ಬೆಳ್ಳಿಚುಕ್ಕೆ, ಮಾತಂಗಕನ್ಯೆ, ಕುರುಕ್ಷೇತ್ರ ಹೆಸರು ತಂದುಕೊಟ್ಟ ನಾಟಕಗಳು. ಕಂದಗಲ್ಲ ಹನುಮಂತರಾಯರು ಅರಸ್ಗಾಗಿಯೇ ಚಂದ್ರಹಾಸ ನಾಟಕ ಬರೆದು ನಿರ್ದೇಶಿಸಿದರು. ಇದರಲ್ಲಿ ಬರುವ ದುಷ್ಟಬುದ್ಧಿ ಪಾತ್ರದಿಂದ ಅರಸ್ಗೆ ದೊರೆತ ಮತ್ತಷ್ಟು ಕೀರ್ತಿ ಗೌರವಗಳು. ರಾಜಾವಿಕ್ರಮ ಅಂದಿನ ದಿನಗಳಲ್ಲಿ ನಾಟಕ ಪ್ರದರ್ಶನದಲ್ಲಿ ಸ್ಥಾಪಿಸಿದ ಮೈಲಿಗಲ್ಲು. ಈ ನಾಟಕವನ್ನು ವೀಕ್ಷಿಸಿದ ಪಂತುಲುರವರು ತಮ್ಮ ಕಿತ್ತೂರು ಚೆನ್ನಮ್ಮದಲ್ಲಿ ಟಿಪ್ಪುವಿನ ಪಾತ್ರಕ್ಕೆ ಮತ್ತು ಮಂಗಳಸೂತ್ರ ಚಲನಚಿತ್ರದ ನಾಯಕ ನಟನನ್ನಾಗಿ ಮಾಡಿದ ಆಯ್ಕೆ. ಪಾತಾಳ ಮೋಹಿನಿ ಅರಸ್ಗೆ ಮತ್ತಷ್ಟು ಖ್ಯಾತಿತಂದ ಚಲನಚಿತ್ರ, ರಾಜಾವಿಕ್ರಮ ನಾಟಕವನ್ನು ಕಂಪನಿ ಮಾಲೀಕ ಎಂ.ಸಿ. ಮಹಾದೇವಸ್ವಾಮಿಯವರು ದೊಡ್ಡಣ್ಣ ಹಾಲ್ನಲ್ಲಿ ಪ್ರದರ್ಶನ ಏರ್ಪಡಿಸಿ ನೆಹರು ರವರಿಗೆ ನೀಡಿದ ಆಹ್ವಾನ. ಆ ನಾಟಕದಲ್ಲಿ ದುರ್ಜಯನ ಪಾತ್ರವನ್ನು ವೀಕ್ಷಿಸಿದ ನೆಹರುರವರು ಅರಸ್ರ ನಟನೆಯನ್ನು ಬಹುವಾಗಿ ಮೆಚ್ಚಿ ನೀಡಿದ ಪಾರಿತೋಷಕ ಮತ್ತು ಸನ್ಮಾನ. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ, ಗೋಕಾಕ್ ಕಂಪನಿ, ಶಾರದಾ ನಾಟಕ ಮಂಡಲಿ, ಹಲಗೇರಿ ಜಟ್ಟಪ್ಪನವರ ಕಂಪನಿ, ತಾವೇ ಸ್ಥಾಪಿಸಿದ ನಾಟಕ ಕಂಪನಿಯಲ್ಲಿ ದುಡಿದು ಪ್ರಖ್ಯಾತರೆನಿಸಿದರು. ಶಿವಾಜಿಗಣೇಶನ್ ಕೂಡಾ ಇವರ ನಟನೆಗೆ ಮಾರುಹೋಗಿ ಚಿತ್ರರಂಗಕ್ಕೆ ಆಹ್ವಾನಿಸಿದರು. ಚಿನ್ನದ ಗೊಂಬೆ, ಶ್ರೀಕೃಷ್ಣದೇವರಾಯ, ಮಾರ್ಗದರ್ಶಿ, ಮೇಯರ್ ಮುತ್ತಣ್ಣ, ಮಯೂರ ಮೊದಲ್ಗೊಂಡು ೫೫ ಚಲನಚಿತ್ರಗಳಲ್ಲಿ ಅಭಿನಯ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಂದ ಗೌರವ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು : ನಂಜುಂಡಸ್ವಾಮಿ ತೊಟ್ಟವಾಡಿ – ೧೯೫೦ ಮಂಜುನಾಥ್ ಬಿ.ಟಿ. – ೧೯೬೩
* * *