೨೩-೫-೧೯೦೬ ೨೮-೧೦-೧೯೯೭ ವಿದ್ವತ್ ಪ್ರಪಂಚದಲ್ಲಿ ಪ್ರಖ್ಯಾತರಾಗಿದ್ದ ಅನಂತ ರಂಗಾಚಾರ್ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ತಂದೆ ಉಪಾಧ್ಯ ನರಸಿಂಹಾಚಾರ್, ತಾಯಿ ವೆಂಕಟ ಲಕ್ಷ್ಮಮ್ಮ. ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ. ಮೈಸೂರು ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸ. ಅಧ್ಯಾಪಕರಾಗಿದ್ದ ಎಂ.ಎಚ್. ಕೃಷ್ಣರವರು ಗುರುಗಳು, ಕನ್ನಡಾಭಿಮಾನವನ್ನು ಉಂಟು ಮಾಡಿದವರು. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕನ್ನಡ ಎಂ.ಎ. ತರಗತಿ ಪ್ರಾರಂಭಿಸಿದಾಗ ಮೊದಲ ಗುಂಪಿನ ವಿದ್ಯಾರ್ಥಿ. ಪ್ರೊ. ವೆಂಕಣ್ಣಯ್ಯ, ಪ್ರೊ. ಎ.ಆರ್.ಕೃ.ಗಳಿಂದ ಕನ್ನಡ ಬೋಧನೆ. ಎಂ.ಎ., ಬಿ.ಟಿ. ಪದವಿ ನಂತರ ಉದ್ಯೋಗಕ್ಕಾಗಿ ಸೇರಿದ್ದು ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ. ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ ವರ್ಗಾಯಿಸಲ್ಪಟ್ಟಾಗ ಆಚಾರ್ಯರ ಸಾಹಿತ್ಯ ರಚನೆಯ ಕಾಲ. ಹಲವಾರು ಗ್ರಂಥಗಳ ಪರಿಶೋಧನೆ. ಕುಮಾರವ್ಯಾಸ ಭಾರತದ ಯುದ್ಧ ಪಂಚಕವನ್ನು ಸಂಶೋಸಿ ಪ್ರಕಟಿಸಿದ ಕೀರ್ತಿ. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಣೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆ. ದೇಶದ ಒಳಗೂ ಹೊರಗೂ ಸಂಚಾರ. ಹಲವಾರು ಗ್ರಂಥಗಳ ಸಂಗ್ರಹ, ಪ್ರಕಟಣೆಯಿಂದ ಕನ್ನಡ ಲೋಕಕ್ಕೆ ಅರ್ಪಣೆ. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆ. ಮಲ್ಲಕವಿಯ ‘ಕಾವ್ಯಸಾರ’ವನ್ನು ಅಷ್ಟಾದಶ ವರ್ಣನೆಗಳ, ವಿಷಯಾಧಾರಿತವಾಗಿ ಸಂಕಲಿಸಿದ ಗ್ರಂಥ. ಸೂಕ್ತಿ ಸುಧಾರ್ಣವದ ೨೦೦೦ ಪದ್ಯಗಳಿಗೆ, ಕಾವ್ಯಸಾರದ ೩೫೦೦ ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ಗುರುತಿಸಿ ಆಕರ ಗ್ರಂಥವನ್ನಾಗಿ ಮಾಡಿದರು. ಹಳಗನ್ನಡ ಮುದ್ರಿತ, ಅಮುದ್ರಿತ ಕೃತಿಗಳನ್ನು ಸಂಪಾದಿಸಿ ಅಕಾರಾದಿಯಲ್ಲಿ ವ್ಯವಸ್ಥೆಗೊಳಿಸಿದರು. ಇವರ ಮತ್ತೊಂದು ಪ್ರಮುಖ ಗ್ರಂಥವೆಂದರೆ “ಕನ್ನಡ ಚಂಪೂ ಕಾವ್ಯಗಳ ಪದ್ಯಾನುಕ್ರಮಣಿಕೆ.” ಸುಮಾರು ೩೦ಕ್ಕೂ ಹೆಚ್ಚು ಕೃತಿ ಸಂಪಾದನೆ. ಕನ್ನಡ ರತ್ನತ್ರಯ ಕವಿ ಕುಲಾಗ್ರಣಿ ಪಂಪ ; ಕವಿ ರನ್ನ ; ನೇಮಿಚಂದ್ರ ; ಪೊನ್ನ-ಇವು ವಿಮರ್ಶಾ ಗ್ರಂಥಗಳು. ಪಂಪಭಾರತ ಸಂಪಾದಿತ ಕೃತಿ. ದುರ್ಗಸಿಂಹನ ಪಂಚತಂತ್ರ ಕೃತಿಗೆ ಸಾಹಿತ್ಯ ಅಕಾಡಮಿಯ ಬಹುಮಾನ ; ಕಾವ್ಯಸಾರ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ. ಇವರು ರಚಿಸಿದ ಸಾಹಿತ್ಯ ಚರಿತ್ರೆ ‘ಸಾಹಿತ್ಯ ಭಾರತೀ’ ಮಹಾಪ್ರಬಂಧಕ್ಕೆ ಡಿ.ಲಿಟ್ ಪದವಿ ದೊರೆತಿದೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಉಷಾ. ಪಿ.ರೈ – ೧೯೪೫ ಕುಸುಮ ಬೈಕಂಪಾಡಿ – ೧೯೬೮
