
ಎನ್.ಡಿ. ಬಗರಿ
December 22
೨೨-೧೨-೧೯೨೬ ೧೧-೨-೧೯೯೯ ಗ್ರಂಥಾಲಯದ ಚಲಿಸುವ ವಿಶ್ವಕೋಶ, ಸಮರ್ಥ ಆಡಳಿತಗಾರ, ಕರ್ನಾಟಕ ಗ್ರಂಥಾಲಯ ಆಂದೋಲನದ ಹರಿಕಾರರೆನಿಸಿದ್ದ ಎನ್.ಡಿ. ಬಗರಿಯವರು ಹುಟ್ಟಿದ್ದು ರೊಟ್ಟಿಗವಾಡ ಗ್ರಾಮದಲ್ಲಿ. ತಂದೆ ದ್ಯಾಮಪ್ಪ, ತಾಯಿ ಎಲ್ಲಮ್ಮ. ಪ್ರಾರಂಭಿಕ ಶಿಕ್ಷಣ ಬ್ಯಾಹಟ್ಟಿ, ರೊಟ್ಟಿಗವಾಡ ಮತ್ತು ಕುಂದಗೋಳದಲ್ಲಿ. ಧಾರವಾಡದಲ್ಲಿ ಸೆಕೆಂಡರಿ ಶಿಕ್ಷಣ. ಮೆಟ್ರಿಕ್ ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿದ್ದು ಪೂನ ಮಿಲಿಟರಿ ಸರಬರಾಜು ಇಲಾಖೆಯಲ್ಲಿ. ಕಾರಣಾಂತರದಿಂದ ಉದ್ಯೋಗ ತೊರೆದು ಊರಿಗೆ ಬಂದು, ಧಾರವಾಡದ ಜಿಲ್ಲಾ ಸ್ಕೂಲ್ ಬೋರ್ಡಿನಲ್ಲಿ ಕೆಲಕಾಲ ಉದ್ಯೋಗ. ೧೯೪೯ರಲ್ಲಿ ಬೆಳಗಾವಿಯಲ್ಲಿ ವಿದ್ಯಾ ಇಲಾಖೆಯಲ್ಲಿ ದೊರೆತ ಕೆಲಸ. ಬೆಳಗಾವಿಯ ಬಿ.ಟಿ. ಕಾಲೇಜಿನಲ್ಲಿ ಲೈಬ್ರರಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಾ, ಬೆಳಗಾವಿ ಲಿಂಗರಾಜ ಕಾಲೇಜಿನಿಂದ ಪಡೆದ ಪದವಿ. ರೂಢಿಸಿಕೊಂಡದ್ದು ಹಲವಾರು ಹವ್ಯಾಸಗಳು. ಈಜು, ಬ್ಯಾಡ್ಮಿಂಟನ್, ಓಡುವುದು, ನಾಟಕಾಭಿನಯ ಮುಂತಾದವು. ಕರ್ನಾಟಕ ಸರಕಾರದಿಂದ ೧೯೫೭-೫೮ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಗ್ರಂಥಾಲಯ ಶಿಕ್ಷಣ ತರಬೇತಿಗಾಗಿ ಆಯ್ಕೆ. ೧೯೫೮ರಲ್ಲಿ ಬೆಂಗಳೂರಿನ ಸ್ಟೇಟ್ ಎಜುಕೇಷನ್ ರಿಸರ್ಚ್ ಬ್ಯೂರೋದಲ್ಲಿ ಗ್ರಂಥ ಪಾಲಕರಾಗಿ ನೇಮಕ. ನಂತರ ಗ್ರಂಥಾಲಯ ಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೊಮ, ದೆಹಲಿ ವಿಶ್ವವಿದ್ಯಾಲಯದಿಂದ. ೧೯೬೧ರಲ್ಲಿ ರಾಜ್ಯದ ಮೊಟ್ಟಮೊದಲ ಸ್ಟೇಟ್ ಎಜುಕೇಷನ್ ಲೈಬ್ರರಿಯನ್ ಆಗಿ ನೇಮಕ. ೧೯೬೫ರಲ್ಲಿ ಕ್ಯೂರೇಟರ್ ಆಫ್ ಲೈಬ್ರರೀಸ್, ಗ್ರಂಥಾಲಯ ತರಬೇತಿ ಕೇಂದ್ರದ ರಿಜಿಸ್ಟ್ರಾರ್, ಕಬ್ಬನ್‌ಪಾರ್ಕಿನ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯದ ಪ್ರಥಮ ಗ್ರಂಥಾಲಯದ ಅಕಾರಿ ಹುದ್ದೆ. ಮೈಸೂರು ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್ ಸದಸ್ಯರಾಗಿ, ಫ್ಯಾಕಲ್ಟಿ ಆರ್ರ‍್ಟ್‌ಸ್‌ನ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ ಸಲ್ಲಿಸಿದ ಕಾರ‍್ಯಗಳು. ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಸಿದಂತೆ-ಗ್ರಂಥಾಲಯ ವಿಜ್ಞಾನ, ಗ್ರಂಥಾಲಯ ಕೈಪಿಡಿ, ಪ್ರೌಢಶಾಲಾ ಗ್ರಂಥಾಲಯ, ಗ್ರಂಥಾಲಯ ನಡೆದು ಬಂದ ದಾರಿ, ಗ್ರಂಥಾಲಯ ಸಮೀಕ್ಷೆ, ಗ್ರಂಥಾಲಯ ವಿಚಾರ, ಗ್ರಾಮಾಂತರ ಗ್ರಂಥಾಲಯ ಕೃತಿ ಪ್ರಕಟಿತ. ಪ್ರವಾಸ ಕಥನ-ವಿದೇಶಿ ಪ್ರವಾಸದ ಅನುಭವ. ನಾಟಕ-ಕೆಳದಿ ಚೆನ್ನಮ್ಮ, ಹರಿಹರ ಕೃತಿಗಳು. ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥಗಳು-ಜ್ಞಾನಪ್ರಭಾ, ಕಳಕಳಿ, ಗ್ರಂಥ ಸರಸ್ವತಿ.