Loading Events

« All Events

  • This event has passed.

ಎನ್.ಪಿ. ಶಂಕರನಾರಾಯಣರಾವ್‌

August 3, 2023

೦೩..೧೯೨೮ ೨೮.೧೧.೨೦೦೬ ತಲಸ್ಪರ್ಶಿ ವಿಶ್ಲೇಷಣೆ, ವ್ಯಾಪಕ ಅಧ್ಯಯನ, ವಸ್ತು ನಿಷ್ಠ ವಿಮರ್ಶಾ ದೃಷ್ಟಿಯನ್ನು ಹೊಂದಿದ್ದ  ಶಂಕರನಾರಾಯಣರಾಯರು ಹುಟ್ಟಿದ್ದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ನಿಟ್ಟೂರಿನಲ್ಲಿ ೧೯೨೮ರ ಆಗಸ್ಟ್‌ ೩ರಂದು. ತಂದೆ ಪಟ್ಟಾಭಿರಾಮಯ್ಯನವರು, ತಾಯಿ ಅಚ್ಚಮ್ಮನವರಿಗೆ ಹುಟ್ಟಿದ ಮೂವರು ಮಕ್ಕಳಲ್ಲಿ ಮೂರನೆಯವರಾಗಿ, ಮೊದಲ ಗಂಡುಮಗುವಾಗಿ ಜನನ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಶ್ರೀರಾಂಪುರದ ಪ್ರಾಥಮಿಕ ಶಾಲೆ. ಮಾಧ್ಯಮಿಕ ಶಾಲೆ ಕಾನಕಾನಹಳ್ಳಿಯಲ್ಲಿ (ಕನಕಪುರ), ಆನೇಕಲ್‌, ಬಸವನಹಳ್ಳಿ (ಚಿಕ್ಕಮಗಳೂರು ಜಿಲ್ಲಾ ಕಡೂರು ತಾಲ್ಲೂಕು) ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲು. ಭಾಷೆಯ ವ್ಯತ್ಯಾಸವೇ ತಿಳಿಯದಿದ್ದ ವಯಸ್ಸಿನಲ್ಲಿಯೇ ನೋಡಿದ ಹಲವಾರು ಚಲನ ಚಿತ್ರಗಳು. ಭಕ್ತಧ್ರುವ, ಭಕ್ತ ಪ್ರಹ್ಲಾದ, ಬಬ್ರುವಾಹನ, ಸತ್ಯವಾನ ಸಾವಿತ್ರಿ ಮುಂತಾದ ಪೌರಾಣಿಕ ಸಿನಿಮಾಗಳ ಕಾಲದಲ್ಲಿ. ಓದು ಬರೆಹ ಕಲಿತನಂತರ ಓದಿದ ಮೊದಲ ಪುಸ್ತಕವೆಂದರೆ ಮಾಸ್ತಿಯವರ ‘ಕೆಲವು ಸಣ್ಣಕಥೆಗಳು’. ಅದರಲ್ಲಿ ಬರುವ ರಂಗಪ್ಪನ ದೀಪಾವಳಿ’ ಕಥೆಯು ಇವರ ಮನಸ್ಸನ್ನೂ ಸೆಳೆದಕತೆ. ಕಥೆಯ ವೆಂಕಟರಾಯನ ಪಿಶಾಚಿ ಬಹಳ ವರ್ಷ ಕಾಡಿ ಹೆದರಿಸಿತ್ತು. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿದ್ದ ತಂದೆಗೆ ಭಡ್ತಿ ದೊರೆತು ಕೆಲಕಾಲ ಕಾನಕಾನ ಹಳ್ಳಿಯಲ್ಲಿ ವಾಸ್ತವ್ಯ, ಆ ಸಂದರ್ಭದಲ್ಲಿ ನೋಡಿದ ನಾಟಕಗಳು ಭೀಷ್ಮ ಪ್ರತಿಜ್ಞೆ, ಕರ್ಣನ ಪಾತ್ರಧಾರಿ ಕೊಟ್ಟುರಪ್ಪನವರ ದಾನ ಶೂರಕರ್ಣ ಮುಂತಾದವು. ಹೈಸ್ಕೂಲಿನಲ್ಲಿದ್ದಾಗಲೇ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಅನುಭವಿಸಿದ ಜೈಲುವಾಸ. ಕಮ್ಯುನಿಸ್ಟ್‌ ಪಕ್ಷದ ಸಂಘಟಕರೊಬ್ಬರ ಸ್ನೇಹದಿಂದ ಪಕ್ಷದ ಕಾರ್ಯಕರ್ತರಾಗಿ ಸೇರಿ ಸ್ಥಾಪಿಸಿದ್ದು ‘ಮೈಸೂರು ಸ್ಟೂಡೆಂಟ್ಸ್‌ ಆರ್ಗನೈಸೇಷನ್‌’ ಸಂಘ ದೊಡನಾದ ಒಡನಾಟದಿಂದ ಹಲವಾರು ಪ್ರಖ್ಯಾತರ ಪರಿಚಯ. ಜ್ಯೂ. ಇಂಟರ್ ನಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಕುಳಕಲುಂದ ಶಿವರಾಯ (ನಿರಂಜನ) ದಿಂದ ಬಂದ ಆಹ್ವಾನ. ಮೈಸೂರಿನಲ್ಲಿ ಇಂಟರ್ ಮೀಡಿಯೇಟ್‌ ಓದುತ್ತಿದ್ದಾಗ ಮೈಸೂರು ಪುರಸಭಾ ಕಾರ್ಮಿಕ ಸಂಘದ ಸ್ಥಾಪನೆ. ಪುರಸಭೆಯ ನೌಕರರ ತುಟ್ಟಿಭತ್ಯೆ, ರೇಷನ್‌ಗಾಗಿ ಕೊಡುತ್ತಿದ್ದ ಕೆಳದರ್ಜೆಯ ಅಕ್ಕಿ, ಜೋಳ ಮುಂತಾದ ಆಹಾರ ಧಾನ್ಯಗಳನ್ನು  ತಿರಸ್ಕರಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರ ಬೃಹತ್‌ ಮೆರವಣಿಗೆ. ಬಹುಶಃ ಮೈಸೂರು ಕಂಡ ಕಾರ್ಮಿಕರ ಬೃಹತ್‌ ಮೆರವಣಿಗೆ ಇದಾಗಿತ್ತು. ದಾವಣಗೆರೆ ಗಿರಣಿ ಕಾರ್ಮಿಕರ ಸಂಘ, ಹರಿಹರದ ಕಿರ್ಲೋಸ್ಕರ್ ಕಾರ್ಮಿಕ ಸಂಘ ಮುಂತಾದವುಗಳೊಡನೆ ಒಡನಾಟ. ತರಗತಿಗೆ ಹಾಜರಾಗಲು ಸಮಯ ದೊರೆಯದೆ ಸೀನಿಯರ್ ಇಂಟರ್ ಮೀಡಿಯೆಟ್‌ನಲ್ಲಿ ಅನುತ್ತೀರ್ಣ. ಕೆಲಸಕ್ಕೆ ಸೇರಿದ ಎಷ್ಟೋ ವರುಷಗಳ ನಂತರ ಮಧ್ಯಪ್ರದೇಶದ ‘ಬೋರ್ಡ್ ಆಫ್‌ ಸೆಕೆಂಡರಿ ಎಜುಕೇಷನ್‌’ ಮುಖಾಂತರ ಇಂಟರ್ ಮೀಡಿಯೆಟ್‌ ಮುಗಿಸಿ ಕರ್ನಟಕ ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಚಿಕ್ಕಮಗಳೂರಿನ ಪಬ್ಲಿಕ್‌ ಕನ್ವೆಯನ್ಸ್‌ ಎಂಬ ಸಾರಿಗೆ ಸಂಸ್ಥೆಯಲ್ಲಿ ಉಗ್ರಾಣದ ಗುಮಾಸ್ತರಾಗಿ. ನಂತರ ಸೇರಿದ್ದು ಮದರಾಸಿನ ಅಂಚೆ ಮತ್ತು ತಂತಿ ಇಲಾಖೆಯಲ್ಲಿ. ಇಲ್ಲಿ ಉದ್ಯೋಗ ಪ್ರಾರಂಭಿಸಿದ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣತೆ. ಮದರಾಸಿನಲ್ಲಿದ್ದಾಗ, ಕರ್ನಾಟಕ ಸಂಘವು ಪ್ರದರ್ಶಿಸುತ್ತಿದ್ದ ಹಲವಾರು ನಾಟಕಗಳಲ್ಲಿ ನಟರಾಗಿ ವಹಿಸಿದ ಪಾತ್ರ. ಈ ಸಂದರ್ಭದಲ್ಲಿ ಆಕಾಶವಾಣಿಗಾಗಿ ಬರೆದ ಹಲವಾರು ರೂಪಕಗಳು, ಸಣ್ಣ ಕತೆಗಳ ಬರವಣಿಗೆ, ಬರೆದ ಮೊದಲ ಪತ್ತೇದಾರಿ ಕಾದಂಬರಿ ‘ಜೀವ ಸೆಳೆದ ಹುಡುಗಿ’. ಮದರಾಸಿನಲ್ಲಿದ್ದಾಗ ಆರ್. ನಾಗೇಂದ್ರರಾಯರ ಪರಿಚಯದಿಂದ ಹಲವಾರು ಚಲನ ಚಿತ್ರಗಳಲ್ಲೂ ವಹಿಸಿದ ಪಾತ್ರ. ಜಾತಕ ಫಲ (೧೯೫೩), ಜಲದುರ್ಗ (೧೯೫೪) ಭಕ್ತಮಾರ್ಕಂಡೇಯ ಮತ್ತು ಭಕ್ತವಿಜಯ (೧೯೫೬), ಸ್ಕೂಲ್‌ಮಾಸ್ಟರ್ (೧೯೫೭), ರಾಣಿಹೊನ್ನಮ್ಮ, ವಿಜಯನಗರವೀರ ಪುತ್ರ ಮತ್ತು ಕಂಠೀರವ (೧೯೬೦) ಮುಂತಾದ ಚಲನಚಿತ್ರಗಳಲ್ಲಿ ಅಭಿನಯ. ಚಲನಚಿತ್ರ ರಂಗದಿಂದ ದೂರವಾದರೂ ಪ್ರಜಾವಾಣಿ ಪತ್ರಿಕೆಗೆ ಚಿತ್ರರಂಗದ ವಿಚಾರವಾಗಿ ಬರೆದ ‘ವಾರ್ತಾಪತ್ರ’ ಮತ್ತು ಸುಬೋಧ, ಕತೆಗಾರ ಪತ್ರಿಕೆಗಳಿಗೆ ಬರೆದ ಹಲವಾರು ಕತೆಗಳು. ಕೆಲಕಾಲ ಮದರಾಸಿನಿಂದ ಪ್ರಕಟವಾಗುತ್ತಿದ್ದ ‘ಬಾಲಮಿತ್ರ’ ಮಾಸಪತ್ರಿಕೆಗೂ ತೆಲುಗಿನ ಕತೆಗಳ ಅನುವಾದ. ಮದರಾಸಿನಿಂದ ಬೆಂಗಳೂರಿಗೆ ವರ್ಗವಾದ ನಂತರ, ವಿದ್ಯಾರ್ಥಿಯಾಗಿದ್ದಾಗಲೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರ ಅನುಭವದಿಂದ ಅಂಚೆ ಮತ್ತು ತಂತಿ ಇಲಾಖೆಯ ಸಂಘಗಳ , ಒಕ್ಕೂಟಗಳ ಒಡನಾಟ, ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಕಡೆಗೆ ನಾಮ ಮಾತ್ರದ ಪದಾಧಿಕಾರಿಯ ಜವಾಬ್ದಾರಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಎಂ.ಎ. (ಮಾನವಶಾಸ್ತ್ರ) ಪದವಿ ಪಡೆದ ನಂತರ ಭಾರತ್‌ ಎಜುಕೇಷನ್‌ ಸೊಸೈಟಿ (ಎಚ್‌.ಆರ್. ದಾಸೇಗೌಡ ಮತ್ತು ಸ್ನೇಹಿತರು ಸ್ಥಾಪಿಸಿದ್ದ) ಶೈಕ್ಷಣಿಕ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಕಾಲ. ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದು ರಾಷ್ಟ್ರೋತ್ಥಾನ ಪರಿಷತ್‌ ಏರ್ಪಡಿಸುತ್ತಿದ್ದ ಇಂಗ್ಲಿಷ್‌ ಭಾಷಣಗಳನ್ನೂ ಕನ್ನಡಕ್ಕೆ ತರ್ಜುಮೆಮಾಡಿ ಕನ್ನಡ ಪ್ರಭ ಪತ್ರಿಕೆಗೆ ಬರೆದ ಲೇಖನಗಳು. ಈ ಸಂದರ್ಭದಲ್ಲಿ ‘ಗಡಿಯಾಚೆಯ ಗುಡಿಗಳು’ ಮತ್ತು ‘ಅವತಿ ನಾಡ ಪ್ರಭುಗಳು’ (೧೯೭೧) ಬರೆದ ಪುಸ್ತಕಗಳ ಪ್ರಕಟಣೆ. ೧೯೭೨ ರಲ್ಲಿ ‘ಭಾರತದ ಪ್ರಚಲಿತ ಸಾಮಾಜಿಕ ಸಮಸ್ಯೆಗಳು’ ಎಂಬ ಪುಸ್ತಕವನ್ನೂ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯದ ಬಿ.ಎ. ತರಗತಿಗಳ ಸಮಾಜ ಪಠ್ಯಕ್ರಮಕ್ಕೆ ಅನುಸಾರವಾಗಿ ರಚಿಸಿದ ಕೃತಿ. ಅಂಚೆ ಇಲಾಖೆಯ ಪತ್ರಿಕೆಯ ‘ಭಾರತೀಯ ಅಂಚೆ ಬಂಧು’ ಪತ್ರಿಕೆಯ ರೂವಾರಿಯಾಗಿ ಪತ್ರಿಕೆಯನ್ನು ಪ್ರಾರಂಭಿಸಿ ತೋರಿಸಿದ ಸಹಕಾರ. ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕತ್ವ. ಬನಶಂಕರಿಯ ದೇವಗಿರಿಯ ಶ್ರೀನಿವಾಸನ ದೇವಸ್ಥಾನಕ್ಕಾಗಿ ‘ಕೌಸ್ತುಭ’ ಸ್ಮರಣ ಸಂಚಿಕೆ, ‘ಸ್ತೋತ್ರ ಕೌಸ್ತುಭ’ ಎಂಬ ಶೀರ್ಷಿಕೆಯಲ್ಲಿ ಹಲವಾರು ಸ್ತೋತ್ರಗಳ ಸಂಗ್ರಹ ಕೃತಿ. ೧೯೮೧ ರಲ್ಲಿ ಕನ್ನಡಪ್ರಭ ಪತ್ರಿಕೆಗೆ ‘ವಿಚಾರ ವೇದಿಕೆ’ ಎಂಬ ಅಂಕಣದಲ್ಲಿ ಪ್ರಾಚೀನ್‌ ಅಮೆರಿಕನ್‌ ನಾಗರಿಕತೆ, ಭೂಮಿಯ ವೈಶಿಷ್ಟ್ಯಗಳು, ಆಗ್ನೇಯ ಏಷ್ಯಾದಲ್ಲಿ ವ್ಯಾಪಿಸಿರುವ ಭಾರತೀಯ ಸಾಂಸ್ಕೃತಿಕ ಪ್ರಭಾವಗಳು ಮುಂತಾದ ವಿಷಯಗಳನ್ನೊಳಗೊಂಡಂತೆ ಬರೆದ ಹಲವಾರು ಲೇಖನಗಳು. ದೆಹಲಿಯ ವಿಶ್ವವಿದ್ಯಾಲಯದ “ಸಮಾಜ ವಿಜ್ಞಾನ ವಿಭಾಗದ ಸಾಮಾಜಿಕ ವೈದ್ಯ ಮತ್ತು ಸಮುದಾಯ ಸ್ವಾಸ್ಥ್ಯ ಕೇಂದ್ರ” ಕ್ಕಾಗಿ ಕ್ಷೇತ್ರ ಕಾರ್ಯ ಕೈಗೊಂಡು ಬರೆದ ಕೃತಿ’ ಪರಿವರ್ತನೆಯ ಸುಳಿಯಲ್ಲಿ ಕಿರು ಸಮುದಾಯಗಳು’. ಮಾನವಶಾಸ್ತ್ರದ ಎಂ.ಎ. ಪದವಿಯ ನಂತರ ಕ್ಷೇತ್ರಾಧ್ಯಯನ ಅನುಭವವಿದ್ದುದರಿಂದ ಇನ್‌ವಿಸ್ಟಿಗೇಟರ್ ಆಗಿ ನೇಮಕಗೊಂಡು ಎರಡು ವರ್ಷಗಳ ಕಾಲ ಜನಗಣತಿ ಇಲಾಖೆಗೆ ವರ್ಗಾವಣೆಗೊಂಡು ಅಧ್ಯಯನ ನಡೆಸಿ ಬರೆದ ವರದಿಯು ‘ದಿ ಯರವಾಸ್‌ ಆಫ್‌ ಕೊಡಗು’ ಎಂಬ ಜನಗಣತಿ ವರದಿಯಲ್ಲದೆ ‘ಪಣಿಯರ ಸಮಾಜ ಮತ್ತು ಜಾನಪದ ಇತಿಹಾಸ’, ‘ಪಂಜಿರಿಯವರ ಸಮಾಜ ಮತ್ತು ಜಾನಪದ ಇತಿಹಾಸ ಕೃತಿಗಳ’ ರಚನೆ. ೧೯೮೭ ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ೪೦ ವರ್ಷಗಳ ನೆನಪಿಗಾಗಿ ರಾಷ್ಟ್ರೋತ್ಥಾನ ಪರಿಷತ್ತಿಗಾಗಿ ಬರೆದ ಕೃತಿ ‘ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ’. ಇದೇ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನಕ್ಕಾಗಿ ಬರೆದ ಮತ್ತೊಂದು ಕೃತಿ ಎಂದರೆ ‘ಸ್ವಾತಂತ್ರ್ಯ ಹೋರಾಟದ ಸಾವಿರ ತೊರೆಗಳು’. ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆಸಿದ ಚಳವಳಿಯನ್ನೂ ವಿವಿಧ ತೊರಗಳಾಗಿ ವಿಂಗಡಿಸಿ ಸಮಗ್ರ ಇತಿಹಾಸವನ್ನೂ ಕಟ್ಟಿಕೊಡುವ ಕೃತಿ ಎಂದು ಹಲವಾರು ವಿದ್ವಾಂಸರಿಂದ ಮೆಚ್ಚುಗೆ ಪಡೆದ ಕೃತಿ ಇದಾಗಿದೆ. ಇಷ್ಟೆಲ್ಲ ಸಾಹಿತ್ಯ ಕೃತಿ ರಚಿಸಿದ ಶಂಕರನಾರಾಯಣರಾಯರಿಗೆ ಕಾಡಿದ್ದು ಸಕ್ಕರೆ ಖಾಯಿಲೆ. ಇದರ ದೆಸೆಯಿಂದ ಕಾಲಿನ ಬೆರಳುಗಳಿಗೆ ಹುಣ್ಣು ತಗುಲಿ ಒಂದು ಕಾಲನ್ನೇ ಕಳೆದುಕೊಳ್ಳಬೇಕಾಗಿ ಬಂದ ಪರಿಸ್ಥಿತಿ. ಆದರೂ ಧೃತಿಗೆಡದೆ ಪರಿಸ್ಥಿತಿಯೊಡನೆ ರಾಜಿ ಮಾಡಿಕೊಂಡು ಕೃತಕಕಾಲು ಧರಿಸಿ ಸಾಧಿಸಿದ್ದು ಅಪಾರ. ಕಾಲಿಲ್ಲದವನೆಂದು ಎಂದೂ ಕೀಳರಿಮೆಗೆ ಒಳಗಾಗದೆ ಮೊದಲಿನಂತೆಯೇ ಅತಿ ಹೆಚ್ಚಿನ ಅತ್ಯುತ್ಸಾಹದಿಂದ ರಚಿಸಿದ ಸಾಹಿತ್ಯ ಕೃತಿಗಳು ಹಲವಾರು. ನವಕರ್ನಾಟಕ ಪ್ರಕಾಶನಕ್ಕಾಗಿ ‘ಏನ್‌ಷೆಂಟ್‌ ಇಂಡಿಯಾ’ ವನ್ನೂ ‘ಪ್ರಾಚೀನ ಭಾರತ’, ದೇವನೂರರ ಪರಿಚಯದ ಕೃತಿ, ಕರ್ಮವೀರ ಪತ್ರಿಕೆಗಾಗಿ ಕನ್‌ಫೆಷನ್‌ ಆಫ್ ಎ ಥಗ್ ಅನುವಾದ ‘ಠಕ್ಕನೊಬ್ಬನ ಆತ್ಮಚರಿತ್ರೆ’, ಭಾರತೀಯ ವಿದ್ಯಾ ಭವನಕ್ಕಾಗಿ ‘ಕಲೆಕ್ಟೆಡ್‌ ವರ್ಕ್ಸ್ ಆಫ್‌ ಮಹಾತ್ಮಾಗಾಂಧಿ’ಯ ‘ಮಹಾತ್ಮಗಾಂಧಿ ಕೃತಿ ಸಂಚಯ’ಕ್ಕಾಗಿ ಕೆಲ ಸಂಪುಟಗಳಿಗೆ ಕೆಲ ಅಧ್ಯಾಯಗಳು ಮತ್ತು ಎಂಟನೆಯ ಸಂಪೂರ್ಣ ಸಂಪುಟದ ಅನುವಾದ, ನ್ಯಾಷನಲ್‌ ಬುಕ್‌ ಟ್ರಸ್ಟ್‌ಗಾಗಿ ಸಲೀಂ ಅಲಿಯವರ ಆತ್ಮಕಥೆ ‘ಫಾಲ್‌ ಆಫ್‌ ಎ ಸ್ವ್ಯಾರೊ’ವನ್ನೂ ‘ನೆಲ ಕಚ್ಚಿದ ಗುಬ್ಬಚ್ಚಿ’ ಎಂದು, ತಮಿಳು ಕಾದಂಬರಿ ‘ಅಮ್ಮಾವಂದಾಳ್‌ನ್ನೂ ‘ಅಪ್ಪುವಿನ ತಾಯಿ’ ಎಂದು ಸುಧಾವಾರ ಪತ್ರಿಕೆಯ ಧಾರಾವಾಹಿಗಾಗಿ, ಹೀಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಬರೆದ ಕೃತಿಗಳು. ಅಷ್ಫಾಕ್‌ ಉಲ್ಲ, ರಾಮ್‌ ಪ್ರಸಾದ್‌ ಬಿಸ್ಮಿಲ್ಲಾ, ಬಟುಕೇಶ್ವರದತ್ತ ಮುಂತಾದ ವ್ಯಕ್ತಿ ಪರಿಚಯ ಕೃತಿಗಳು, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕೃತಿಗಳು, ಬಾನುಲಿಗಾಗಿ ಬರೆದ ನಾಟಕಗಳು, ಸ್ವಾತಂತ್ರ್ಯದ ಅಗ್ನಿದಿವ್ಯ, ಹಿಂದೂ ಧರ್ಮಸಾರ, ಮಾರ್ಕ್ಸ್ ಮತ್ತು ವಿವೇಕಾನಂದ, ಸಂಸ್ಕೃತಿಯ ರೂಪಿಕೆಗಳು ಮುಂತಾದವು ಸೇರಿ ಒಟ್ಟು ೬೦ ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿದ್ವಾಂಸರು, ಸಂಶೋಧಕರು, ಅಧ್ಯಾಪಕರು, ಪರ್ತಕರ್ತರು ಹೀಗೆ ವಿವಿಧ ಸ್ತರದ ಮೇಧಾವಿಗಳು ವಿಚಾರ ವಿನಿಮಯ ಮಾಡಿಕೊಳ್ಳಲು ಸದಾ ಹಾಜರಿರುತ್ತಿದ್ದ ಶಂಕರನಾರಾಯಣರಾಯರಿಗೆ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದು ಎಲ್ಲ ವರ್ಗದವರ ಪ್ರೀತಿಗಳಿಸಿದ್ದವರು, ಸಾಹಿತ್ಯ ಪ್ರಿಯರಿಂದ ದೂರವಾದದ್ದು ೨೦೦೬ ರ ನವಂಬರ್ ೨೮ರಂದು. ಒಂದು ಕಾಲು ಕಳೆದುಕೊಂಡ ನಂತರವೂ ಜೀವನವನ್ನೂ ಅತಿಯಾಗಿ ಪ್ರೀತಿಸುತ್ತಿದ್ದು ಸದಾ ಕಾರ್ಯಶೀಲರಾಗಿದ್ದು ತಮ್ಮ ಆತ್ಮಕಥೆಯನ್ನೂ ದಾಖಲಿಸಿದ ಕೃತಿ “ಒಂದೇ ಕಾಲು ಮೂರುಕೋಲು” ೨೦೦೫ ರಲ್ಲಿ ಪ್ರಕಟವಾಗಿದೆ.

Details

Date:
August 3, 2023
Event Category: