ಎನ್. ಪ್ರಹ್ಲಾದರಾವ್

Home/Birthday/ಎನ್. ಪ್ರಹ್ಲಾದರಾವ್
Loading Events
This event has passed.

೧೦.೦೬.೧೯೨೦ ೧೮.೦೩.೧೯೮೦ ಗದ್ಯದ ಗತಿಯನ್ನು ಹರಟೆಯ ಲಾಘವಕ್ಕಿಳಿಸಿದೆ, ಪ್ರೌಢಪ್ರಬಂಧದ ಎತ್ತರಕ್ಕೂ ಏರಿಸದೆ, ಸಮತಲದಲ್ಲಿ ತಮ್ಮ ವರಸೆ, ವೈಖರಿಗಳನ್ನು ತೋರಿಸುತ್ತ, ಸಹಜ ಸಂಭಾಷಣೆಯ ಮೂಲಕ ಪ್ರಬಂಧ ನಿರೂಪಣೆಗೊಂಡು ಮೋಹಕತೆ ಬರುವಂತೆ ಪ್ರಬಂಧಗಳನ್ನು ರಚಿಸುತ್ತಿದ್ದ ಪ್ರಹ್ಲಾದರಾವ್‌ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಂಡಗದ್ದೆ ಎಂಬಲ್ಲಿ ೧೯೨೦ರ ಜೂನ್ ೧೦ರಂದು. ತಂದೆ ಹನುಮಂತರಾವ್, ತಾಯಿ ತುಳಜಾಬಾಯಿ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಶಿವಮೊಗ್ಗ. ಪ್ರೌಢಶಿಕ್ಷಣ ಮೈಸೂರಿನಲ್ಲಿ. ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜುಗಳಿಂದ ಪಡೆದ ಬಿ.ಎ. (೧೯೪೩), ಹಾಗೂ ಎಂ.ಎ. (೧೯೪೪) ಪದವಿಗಳು. ಎಲ್ಲದರಲ್ಲೂ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ. ಸ್ನಾತಕೋತ್ತರ ತರಗತಿಯ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ತರಬೇತಿ ಪಡೆದವರಲ್ಲಿ ಅತ್ಯಂತ ಮೇಧಾವಿಗಳೆನಿಸಿದ್ದವರು. ಎಂ.ಎ. ಪದವಿ ಪಡೆದನಂತರ ಉದ್ಯೋಗಕ್ಕಾಗಿ ಸೇರಿದ್ದು ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ (೧೯೪೫-೪೮) ಕೆಲ ಕಾಲ. ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರವೇಶಿಸಿ ನಂತರ ರೀಡರ್ ಆಗಿ ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಮುಂತಾದೆಡೆಗಳಲ್ಲಿದ್ದು, ಅಧ್ಯಾಪಕ ವೃತ್ತಿಯ ಜೊತೆಗೆ ಮೈಸೂರು ವಿ.ವಿ.ದ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ ಕನ್ನಡ ‘ವಿಶ್ವಕೋಶ’ದ ಸಂಯೋಜಕ ಸಂಪಾದಕರಾಗಿ ಇರುವವರೆವಿಗೂ ದುಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಬರವಣಿಗೆಯನ್ನು ಪ್ರಾರಂಭಿಸಿದ್ದು ಪ್ರಹ್ಲಾದರಾವ್‌ರವರ ಗುರುಗಳು ಜಿ.ಪಿ. ರಾಜರತ್ನಂರವರು. ಒಮ್ಮೆ ಕಾಲೇಜು ಕ್ಯಾಂಟೀನಿನಲ್ಲಿ ಕುಳಿತಿದ್ದವರನ್ನು ಇವರೇ ರಾಜರತ್ನಂ ಎಂದು ಸ್ನೇಹಿತನೊಬ್ಬ ತೋರಿಸಿದಾಗ, ಪ್ರಹ್ಲಾದರಾವ್‌ರವರ ಮನಸ್ಸಿನಲ್ಲಿ ಕೀಟಲೆಯ ಬುದ್ಧಿ ಜಾಗೃತವಾಗಿ ಅವರ ಮುಂದಿನ ಕುರ್ಚಿಯಲ್ಲೇ ಹೋಗಿ ಕುಳಿತರು. ಏನೋ ಓದುತ್ತಾ ಕುಳಿತಿದ್ದ ರಾಜರತ್ನಂ ಇವರನ್ನು ಗಮನಿಸಲಿಲ್ಲ. ರಾಜರತ್ನಂರವರು ಸಪ್ಲೈಯರ್ ಬಂದಾಗ ‘ಇಡ್ಲಿ, ವಡೆ, ತುಪ್ಪ ಹಾಕಿ ತಾ’ ಎಂದರು. ಎದುರಿಗೆ ಕುಳಿತಿದ್ದ ಪ್ರಸ್ಲಾದರಾವ್‌ರವರು ‘ನನಗೂ ಅಷ್ಟೆ’ ಎಂದರು. ರಾಜರತ್ನಂ ಕತ್ತೆತ್ತಿ ನೋಡಿದರು. ತಿಂದು ಮುಗಿಸಿ ಬೆಣ್ಣೆಮಸಾಲೆ ಎಂದರು ರಾಜರತ್ನಂ. ಪ್ರಹ್ಲಾದರಾವ್ ‘ನನಗೂ’ ಎಂದರು. ಕಾಫಿ ಎಂದರು ರಾಜರತ್ನಂ. ಇವರು ‘ನನಗೂ’ ಎಂದು ಹೇಳಿ ಕುಡಿದು ಮುಗಿಸಿ ತರಗತಿಗೆ ತೆರಳಿದರು. ರಾಜರತ್ನಂ ತರಗತಿಯನ್ನು ಪ್ರವೇಶಿಸಿ ನೋಡಿದರೆ, ಕ್ಯಾಂಟೀನಿನಲ್ಲಿ ಪೈಪೋಟಿಯಲ್ಲಿ ತಿಂಡಿ ತಿಂದ ಹುಡುಗ ಮೊದಲ ಬೆಂಚಿನಲ್ಲಿ ಕುಳಿತಿದ್ದ. ಈಗ ಇವರ ಬುದ್ಧಿ ಜಾಗೃತವಾಯಿತು. ನಿಮ್ಮ ಬಾಲ್ಯದ ಘಟನೆಯನ್ನಾಧರಿಸಿ ಪ್ರಬಂಧ ಬರೆಯಿರಿ ಎಂದು ತರಗತಿಯನ್ನುದ್ದೇಶಿಸಿ ಹೇಳಿದರು. ಪ್ರಹ್ಲಾದರಾವ್ ಬರೆದರು. ತಿಂಡಿ ತಿನ್ನಲು ಪೈಪೋಟಿಯನ್ನು ಮಾಡಿದೆಯಲ್ಲ ಎಂದು ಮನಸ್ಸಿನಲ್ಲೆ ಅಂದುಕೊಂಡು ರಾಜರತ್ನಂ ‘ಇನ್ನೊಂದು’ ಬರೆಯಿರಿ ಎಂದರು. ಅದನ್ನು ಬರೆದರು. ಮತ್ತೊಂದು ಪ್ರಬಂಧ ಬರೆಯಿರಿ ಎಂದಾಗ, ಪ್ರಹ್ಲಾದರಾವ್ ಅದನ್ನೂ ಬರೆದುಕೊಟ್ಟರು. ರಾಜರತ್ನಂ ಎಲ್ಲವನ್ನು ಒಟ್ಟೂಗೂಡಿಸಿ ಓದಿ ನಸುನಕ್ಕು ಕಾಲೇಜು ಮ್ಯಾಗಜಿನ್‌ನಲ್ಲಿ ಪ್ರಕಟಿಸಿದಾಗ ಪ್ರಹ್ಲಾದರಾವ್‌ಗೆ ಆದ ಆಶ್ಚರ್ಯ, ಆನಂದ ಹೇಳತೀರದಾಗಿತ್ತು. ಇವರು ಬರೆದ ಪ್ರಬಂಧಗಳು ಹಲವಾರು ಕವನಗಳು ಜೀವನ, ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೀಗೆ ಪ್ರಕಟಗೊಂಡ ಪ್ರಬಂಧಗಳು ರಥ-ರಥಿಕ, ಮಧುವ್ರತ (೧೯೬೩, ೧೯೬೮), ಮುತ್ತಿನ ಹಾರ (೧೯೬೮, ೧೯೭೦) ಮುಂತಾದ ಸಂಕಲನಗಳಲ್ಲಿ ಸೇರಿವೆ. ಲೇಖನ ಕಲೆಯ ಬಗ್ಗೆಯೇ ಬರೆದ ಕೃತಿ ‘ಲೇಖನ ಕಲೆ’. ಮಧುವ್ರತ ಪ್ರಬಂಧ ಸಂಕಲನವು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ., ಬಿ.ಎಸ್ಸಿ., ತರಗತಿಗಳಿಗೆ ಪಠ್ಯಪುಸ್ತಕವಾಗಿಯೂ ಆಯ್ಕೆಯಾಗಿದಲ್ಲದೆ ತುಮಕೂರಿನ ಸರಕಾರಿ ಕಾಲೇಜಿನಲ್ಲಿ ಹಿಂದಿ ವಿಭಾಗದ ಅಧ್ಯಾಪಕರಾಗಿದ್ದ ಭಾಳಚಂದ್ರ ಜಯಶೆಟ್ಟಿಯವರು ಸಂಕಲನದ ಪ್ರಬಂಧಗಳನ್ನು ಹಿಂದಿಗೂ ಅನುವಾದಿಸಿದ್ದು ನಿಯತಕಾಲಿಗಳಲ್ಲೂ ಪ್ರಕಟವಾಗಿದೆ. ಮುತ್ತಿನ ಹಾರ ಪ್ರಬಂಧ ಸಂಕಲನವು ಮೈಸೂರು ವಿಶ್ವವಿದ್ಯಾಲಯದ ೧೯೭೦-೭೧ನೆಯ ಸಾಲಿನ ಪ್ರಿ-ಯೂನಿವರ್ಸಿಟಿ ತರಗತಿಗಳಿಗೆ ಪಠ್ಯಪುಸ್ತಕವಾಗಿಯೂ ಆಯ್ಕೆಯಾಗಿತ್ತು. ಶಿಶುಸಾಹಿತ್ಯಕ್ಕೂ ಸಾಕಷ್ಟು ಕೊಡುಗೆ ನೀಡಿರುವ ಪ್ರಹ್ಲಾದರಾಯರು ಬರೆದಿರುವ ಕೃತಿಗಳು ಮಿಂಚುಳ್ಳಿ (೧೯೬೨), ಕ್ರಿಸ್ಟೋಫರ್ ಕೊಲಂಬಸ್ (೧೯೬೫) ಮತ್ತು ಪಿನೋಕಿಯೋ (ಅನುವಾದ). ಶಿಶುಸಾಹಿತ್ಯದ ಪಿನೋಕಿಯೋ ಕೃತಿಯು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದೆ. ಇದರ ಕರ್ತೃ ಫ್ಲಾರೆನ್ಸಿನ ಕಾರ್ಲೊಲಾರೆನ್ಜಿನಿ. (ಕಾರ್ಲೊ ಕಲಾಡಿ ಈತನ ಕಾವ್ಯನಾಮ) ಪಿನೋಕಿಯೋನ ಸಾಹಸಗಳು, ತುಂಟತನ, ಜಾಣ್ಮೆ ಇವುಗಳು ಮಕ್ಕಳಿಗೆ ಅತ್ಯಂತ ರೋಚಕವಾಗಿದ್ದು ಪ್ರಿಯವಾದ ಕಥಾನಕವಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ತಂದು ಚಿಣ್ಣರ ಮನಸ್ಸನ್ನು ಮುದಗೊಳಿಸಿದ್ದಾರೆ. ಕೊಲಂಬಸ್‌ನ ಮೊದಲ ಯಾನದ ಮಹಾ ಸಾಹಸವನ್ನು ತಿಳಿಸುವ ಕೃತಿ ‘ಮಹಾಯಾನ’. ೧೯೮ ವಚನಗಳ ಸಂಗ್ರಹ ಅಮಲಿನ ವಚನಗಳು, ವಚನ ಸಾಹಿತ್ಯಕ್ಕೆ ಇವರದೇ ಆದ ವಿಶಿಷ್ಟ ಕೊಡುಗೆಯ ಕೃತಿ. ಇದಲ್ಲದೆ ರಾಜಬೆಸ್ತ, ಮೈಸೂರ್ ಪಾಕ್, ಸಾಕುತಾಯಿ ಪರಪುಟ್ಟ, ಸ್ಮೃತಿಕನ್ಯೆ (ಕವನ ಸಂಕಲನ), ಅವತಾರ ಕಥಾ ಸಂಕಲನ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸ್ಮೃತಿ ಕನ್ಯೆ ಕವನ ಸಂಕಲನದಲ್ಲಿ ಹಾಸ್ಯ, ವಿಡಂಬನೆ ಎಲ್ಲವೂ ಸೇರಿದೆ. ಪರೀಕ್ಷೆಯ ಹಾಲಿನಲ್ಲಿ ಓದಿದ ವಿಷಯ ನೆನಪಿಗೆ ಬಾರದೆ, ವಿದ್ಯಾರ್ಥಿ ಪಡುವ ಪಾಡು – ‘ಬತ್ತಿದ ಉದರದ ಕೆರೆಯ ಅಂಗಳಕೆ / ನೀರನು ಸುರಿದಾಯ್ತು. ಪೂರ ಬಂದು ಕೆರೆ ತುಂಬಿ ತುಳುಕಿದರು / ನೆನಪೇರಿ ಬಾರದಾಯ್ತು. ಉತ್ತರ ತೇಲಿ ಬಾರದಾಯ್ತು…. / ಎಲೈ ಪರೀಕ್ಷಕ ಪ್ರಭುವೆ / ನಮ್ಮನ್ನಾಳುವ ವಿಭುವೆ / ಹಾಕು ನಂಬರನು, ಮೇಲ್‌ನಾಕು ನಂಬರನು’. (ಇದು ಸ್ಮೃತಿ ಕನ್ಯೆ ಕವನ ಸಂಕಲನದ ಆಯ್ದಭಾಗ). ಹೀಗೆ ಹಾಸ್ಯ, ವಚನ, ಪ್ರಬಂಧ ಎಲ್ಲವುಗಳಲ್ಲೂ ವಿಡಂಬನೆಯನ್ನು ಪ್ರಮುಖವಾಗಿರಿಸಿಕೊಂಡು ಕೃತಿ ರಚಿಸಿದ್ದಾರೆ. ಇದಲ್ಲದೆ ಪ್ರೊ. ಕೆ. ವೆಂಕಟರಾಮಪ್ಪನವರೊಂದಿಗೆ ಕುಮಾರವ್ಯಾಸ ಭಾರತದ ವಿರಾಟಪರ್ವ ಮತ್ತು ಸಭಾಪರ್ವಗಳ ಗದ್ಯಾನುವಾದವನ್ನು ‘ಮತ್ಸ್ಯನಗರಿ’, ‘ರಾಜಸೂಯ’ ಎಂದು ಎರಡು ಪುಸ್ತಕಗಳಲ್ಲಿ ಪ್ರಕಟಸಿದ್ದಾರೆ. ಐ.ಬಿ. ಎಚ್. ಪ್ರಕಾಶನಕ್ಕಾಗಿ ‘ಇದು ನಮ್ಮ ಭಾರತ’ ಮಾಲಿಕೆಗಾಗಿ ೫ ಸಂಪುಟಗಳನ್ನು ಅನುವಾದಿಸಿಕೊಟ್ಟಿದ್ದಾರೆ. ಹೀಗೆ ಇವರು ರಚಿಸಿದ ಕೃತಿಗಳ ಸಂಖ್ಯೆ ಒಟ್ಟು ೧೫ ಆದರೂ ಕನ್ನಡ ಸಾಹಿತ್ಯಕ್ಕೆ ಸಂದ ಘನ ಕೃತಿಗಳೆ. ಮಿಂಚುಳ್ಳಿ ಮಕ್ಕಳ ಪದ್ಯಗಳ ಸಂಕಲನಕ್ಕೆ ೧೯೬೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ ಬಂದಿದ್ದರೆ, ಎಂ. ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (೧೯೭೯) ಶಿಶು ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ ಗೌರವ. ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದರಾದರೂ ಬಹುಬೇಗ ಚೇತರಿಸಿಕೊಂಡು ನೋಡಲು ಬಂದವರನ್ನು ನಗಿಸುತ್ತಿದ್ದವರಿಗೆ ಮತ್ತೆ ತೀವ್ರ ಹೃದಯಾಘಾತವಾಗಿ ಸಾಹಿತ್ಯಲೋಕದಿಂದ ದೂರವಾದದ್ದು ೧೯೮೦ರ ಮಾರ್ಚ್ ೧೮ರಂದು. ಹಳೆಯ ನಗೆಹನಿಗಳನ್ನೇ ಎಷ್ಟು ಬಾರಿ ಹೇಳಿದರೂ ಹೊಸತಿರುವು ಕೊಟ್ಟು ಕಥೆ-ಉಪಕಥೆ ಜೋಡಿಸಿ ಹೇಳುವುದೇ ಸಹಜ ಸ್ವಭಾವವಾಗಿದ್ದು ನಗಿಸುವುದೇ ಅವರ ಜೀವನ ಧರ್ಮವಾಗಿತ್ತು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top