ಎನ್. ಬಸವಾರಾಧ್ಯ

Home/Birthday/ಎನ್. ಬಸವಾರಾಧ್ಯ
Loading Events
This event has passed.

೨೦..೧೯೨೬ ಹಳಗನ್ನಡ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಮತ್ತು ಟಿ.ಎಸ್‌. ವೆಂಕಣ್ಣಯ್ಯ, ತೀ.ನಂ. ಶ್ರೀಕಂಠಯ್ಯ, ಡಿ.ಎಲ್‌, ನರಸಿಂಹಾಚಾರ್ ಮೊದಲಾದ ವಿದ್ವತ್‌ ಪರಂಪರೆಯನ್ನೂ ಮುಂದುವರೆಸಿಕೊಂಡು ಬಂದಿರುವ ಎನ್‌. ಬಸವಾರಾಧ್ಯರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನ ಹಳ್ಳಿಯಲ್ಲಿ ತಾ. ೨೦.೨.೧೯೨೬ರಲ್ಲಿ. ತಂದೆ ನಂಜುಂಡಾರಾಧ್ಯ, ತಾಯಿ ಗಿರಿಜಮ್ಮ. ಪ್ರಾರಂಭಿಕ ಶಿಕ್ಷಣ ಗೌರಿಬಿದನೂರಿನಲ್ಲಿ. ಪ್ರಾಢಶಾಲೆಗೆ ಸೇರಿದ್ದು ಫೋರ್ಟ್ ಹೈಸ್ಕೂಲು ಬೆಂಗಳೂರು. ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿದ ನಂತರ ಮಹಾರಾಜ ಕಾಲೇಜಿನಲ್ಲಿ ಓದಿ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಸ್ನಾತಕೋತ್ತರ ಪದವಿ ಪಡೆದನಂತರ ಮೈಸೂರು ವಿ.ವಿ.ದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸ್ನಾತಕ ವಿಶೇಷ ತಜ್ಞರಾಗಿ ವೃತ್ತಿಜೀವನವನ್ನಾರಂಭಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಯೋಜನೆಯ ಮುಖ್ಯ ಸಂಪಾದಕರಿಗೆ ಸಹಾಯಕರಾಗಿ ಬಂದು ನಿಘಂಟಿನ ಉಪಸಂಪಾದಕರಾಗಿ, ಸಂಪಾದಕರಾಗಿ (೧೯೫೫-೭೧) ದುಡಿದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಪಾದನಾ ವಿಭಾಗದ ಉಪನಿರ್ದೇಶಕರ ಜವಾಬ್ದಾರಿ ವಹಿಸಿಕೊಂಡರು (೧೯೭೧-೮೬). ಪುನಃ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಪ್ರಧಾನ ಸಂಪಾದಕರ ಹೊಣೆ ಹೊತ್ತರು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾದುದು ೧೯೯೮-೨೦೦೧ರ ಅವಧಿಯಲ್ಲಿ. ಸುಮಾರು  ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದುದಲ್ಲದೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಸಂಶೋಧಕರಾಗಿ, ನಿಘಂಟು ತಜ್ಞರಾಗಿ ಕನ್ನಡದಲ್ಲಿ ಮಾಡಿರುವ ಕೆಲಸ ಸ್ತುತ್ಯರ್ಹವಾದುದು, ತೊರವೆ ರಾಮಾಯಣ ಸಂಗ್ರಹ (ಇತರರೊಡನೆ) ತ್ರಿಪುರ ದಹನ  ಸಾಂಗತ್ಯ, ಚಂದ್ರಹಾಸನ ಕಥೆ, ಭೈರವೇಶ್ವರ ಕಾವ್ಯದ ಕಥಾ ಸೂತ್ರ ರತ್ನಾಕರ, ಹರಿಶ್ಚಂದ್ರ ಕಾವ್ಯಂ (ಇತರರೊಡನೆ) ಚೇರಮಕಾವ್ಯಂ, ಸರ್ವಜ್ಞ ವಚನ ಸಂಗ್ರಹ, ತೊರವೆ ರಾಮಾಯಣ, ಉದ್ಭಟದೇವ ಚರಿತೆ ಮುಂತಾದ ೨೭ ಕೃತಿಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ವಡ್ಡಾರಾಧನೆ, ಸಚಿತ್ರ ಶಾಲಾ ನಿಘಂಟು (ಭಾಷಾಂತರ) ರಾಘವಾಂಕ, ಜೋತಿಷಿಯ ಮಗ ಮತ್ತು ಕೊಡದಣ್ಣ ಬಿಡದಣ್ಣ (ಮಕ್ಕಳ ಪುಸ್ತಕ), ಅಪ್ಪಯ್ಯ ಮತ್ತು ಬಾಯಿಶೂರ, ಕೈಶೂರ (ಮಕ್ಕಳ ಪುಸ್ತಕ) ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಮೈಸೂರು ವಿ.ವಿ.ದ ಇಂಟರ್ ಮೀಡಿಯೆಟ್‌ ಪರೀಕ್ಷೆ, ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ಪಂಡಿತ ಪರೀಕ್ಷೆ, ಪಿಎಚ್‌.ಡಿ.ಮಹಾಪ್ರಬಂಧ ಪ್ರಕಟಣೆಯ ವಿಶೇಷ ತಜ್ಞರಾಗಿ (ಕಾಮರಾಜ್‌ ವಿಶ್ವವಿದ್ಯಾಲಯ, ಮದುರೈ) ಮತ್ತು ಮೈಸೂರು ವಿ.ವಿ. ಮುಂತಾದವುಗಳಲ್ಲಿ ಶೈಕ್ಷಣಿಕವಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಮ್ಮೇಳನಗಳು, ಗೋಷ್ಠಿಗಳಲ್ಲೂ ಪಾಲ್ಗೊಂಡಿದ್ದಾರೆ. ಅವುಗಳಲ್ಲಿ ಮೈಸೂರು ವಿ.ವಿ., ಬೆಂಗಳೂರು ವಿ.ವಿ., ಕರ್ನಾಟಕ ವಿ.ವಿ. ಮುಂತಾದವುಗಳು ಪ್ರಮುಖವಾದವುಗಳು. ಕನ್ನಡ ಸಾಹಿತ್ಯ ಪರಿಷತ್ತು, ಬಿ.ಎಂ.ಶ್ರೀ. ಪ್ರತಿಷ್ಠಾನ, ಬಿ. ಶಿವಮೂರ್ತಿಶಾಸ್ತ್ರಿ ಪ್ರತಿಷ್ಠಾನ ಮುಂತಾದವುಗಳ ಅಧ್ಯಕ್ಷರಾಗಿ, ಬಂಗಾರು ಪೇಟೆ ತಾಲ್ಲೂಕು ಸಾಹಿತ್ಯಸಮ್ಮೇಳನ, ಸಂಕೇಶ್ವರದಲ್ಲಿ ನಡೆದ ಅಖಿಲ ಭಾರತ ಹಸ್ತಪ್ರತಿ ಶಾಸ್ತ್ರ ಸಾಹಿತ್ಯ ಸಮ್ಮೇಳನ, ಬಿಜಾಪುರದಲ್ಲಿ ನಡೆದ ಪಂಚಾಚಾರ ಯುಗಮಾನೋತ್ಸವ ಮುಂತಾದವುಗಳ ಸಮ್ಮೇಳಾನಧ್ಯಕ್ಷರಾಗಿಯೂ ಗೌರವ ಪಡೆದಿದ್ದಾರೆ. ‘ತೊರೆವೆ ರಾಮಾಯಣ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಧರ್ಮನಾಥ ಪುರಾಣಂ’ ಕೃತಿಗೆ ಮೈಸೂರು ವಿ.ವಿ.ದ ತೀ.ನಂ.ಶ್ರೀ. ಸ್ಮಾರಕ ಪ್ರಶಸ್ತಿ, ‘ಹರಿಶ್ಚಂದ್ರ ಕಾವ್ಯಂ’, ‘ಚೇರಮ ಕಾವ್ಯಂ’, ‘ಉದ್ಭಟದೇವ ಚರಿತೆ’ ಕೃತಿಗಳಿಗೆ ದೇವರಾಜ ಬಹದ್ದೂರ್ ಬಹುಮಾನಗಳು, ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಠಸಾಹಿತಿ ಪ್ರಶಸ್ತಿ, ಸಂಶೋಧಕ ಶಿವರತ್ನ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ. ಇವರ ೮೦ನೇ ವರ್ಷದಲ್ಲಿ (೨೦೦೫) ಅರ್ಪಿಸಿದ ಗೌರವ ಗ್ರಂಥಗಳು ‘ಆರಾಧ್ಯ ಸಂಪದ’ ಹಾಗೂ ‘ಆರಾಧ್ಯ ಸಿರಿ’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top