ಎಲ್. ಗುಂಡಪ್ಪ

Home/Birthday/ಎಲ್. ಗುಂಡಪ್ಪ
Loading Events
This event has passed.

೦೮.೦೧.೧೯೦೩ ೧೭.೧೧.೧೯೮೬ ಪಾಂಡಿತ್ಯಕ್ಕೋಸ್ಕರ ಸರಳತೆಯನ್ನು ಬಿಡದ, ಸರಳತೆಯನ್ನು ಪಾಂಡಿತ್ಯದಲ್ಲಿ ಸಮನ್ವಯಗೊಳಿಸಿ ಕೃತಿ ರಚಿಸುತ್ತಿದ್ದ ಗುಂಡಪ್ಪನವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಮತಘಟ್ಟ ಗ್ರಾಮದಲ್ಲಿ ೧೯೦೩ ರ ಜನವರಿ ೮ ರಂದು. ತಂದೆ ಲಿಂಗಣ್ಣಯ್ಯ, ತಾಯಿ ಚನ್ನಮ್ಮ. ಪ್ರಾರಂಭಿಕ ಶಿಕ್ಷಣ ಹಳ್ಳಿಯ ಕೂಲಿ ಮಠದಲ್ಲಿ. ಮಿಡ್ಲಸ್ಕೂಲಿಗೆ ಸೇರಿದ್ದು ಚಿಕ್ಕಮಗಳೂರಿನಲ್ಲಿ. ನಂತರ ಸಂಸ್ಕೃತಾಭ್ಯಾಸ. ಶೃಂಗೇರಿ ಶ್ರೀಗಳಿಂದ ದೊರೆತ ೫ ರೂಪಾಯಿ ವಾರ್ಷಿಕ ವಿದ್ಯಾರ್ಥಿ ವೇತನದಿಂದ ಕಾಲೇಜಿನಲ್ಲಿ ಐದು ವರ್ಷಗಳ ಓದು. ಸ್ವತಂತ್ರ ಪ್ರವೃತ್ತಿಯ ಬದುಕು. ಮನೆಯವರಿಗೂ ಭಾರವಾಗದೆ ಪೂರ್ಣಗೊಳಿಸಿದ ವಿದ್ಯಾಭ್ಯಾಸ. ಸೌಮ್ಯಸ್ವಭಾವ, ಶಾಂತಚಿತ್ತ ಮನಸ್ಸು. ಆಳವಾದ ಪಾಂಡಿತ್ಯ, ಸುಮರು ೫೦ ಕೃತಿಗಳು ಪ್ರಕಟಿತ. ಹೆಚ್ಚು ಕೃತಿಗಳು ಪ್ರಾಚೀನ ಸಾಹಿತ್ಯಕ್ಕೆ ಸಂಬಂಧ ಪಟ್ಟವು. ಸ್ವತಂತ್ರ ಪ್ರಕಾಶನ, ಕೇಂದ್ರ ಸಾಹಿತ್ಯ ಅಕಾಡಮಿ, ನ್ಯಾಷನಲ್‌ ಬುಕ್‌ ಟ್ರಸ್ಟ್‌, ಮೈಸೂರು ವಿಶ್ವವಿದ್ಯಾಲಯಗಳು ಹೊರತಂದ ಕೃತಿಗಳು. ಎಂ.ಎ. ಓದುತ್ತಿದ್ದ ದಿನಗಳಲ್ಲಿ ತಮಿಳು ಭಾಷೆಯನ್ನು ಕಲಿತು ಭಾಷಾಂತರದ ಕಡೆ ವಾಲಿದರು. ಸೊಹ್ರಾಬ್‌ ರುಸ್ತುಂ ಎಂಬ ನೀಳ್ಗವನವನ್ನು ಎಂ.ಎ. ತರಗತಿಯಲ್ಲಿದ್ದಾಗ ಬಿ.ಎಂ.ಶ್ರೀ. ಯವರ ಪ್ರೇರಣೇಯಿಂದ ಅನುವಾದಿಸಿ ಮೈಸೂರು ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸ್ವರ್ಣಪದಕವನ್ನು ಬಹುಮಾನವಾಗಿ ಪಡೆದರು. ಅನುವಾದದ ಕಡೆ ಗಮನ ಹರಿಸಿ ತಿರಕ್ಕುರಳ (ಒಂದು ಭಾಗ) ಪೆರಿಯಪುರಾರಣ, ಭಾರತಿಯವರ ಕವಿತೆಗಳು, ತಿರುವಾಚಕಂ, ಶಿಲಪ್ಪದಿಕಾರಂ ಮುಂತಾದ ಇಪ್ಪತ್ತೈದಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಭಾಷಾಂತರಿಸಿದರು. ಸಂಸ್ಕೃತದಿಂದ ಭಾಸನ ಏಕಾಂಕ ನಾಟಕಗಳು, ಚಾರುದತ್ತ ಪ್ರತಿಜ್ಞಾಯೌಗಂಧರಾಯಣ, ಸ್ವಪ್ನವಾಸವದತ್ತ, ಪಂಚತಂತ್ರ ಇವುಗಳನ್ನು ಭಾಷಾಂತರಿಸಿ ಸ್ವತಂತ್ರ ಪ್ರಕಾಶನವಾದ ‘ಜ್ಯೋತಿ ಗ್ರಂಥಮಾಲೆ’ಯಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯದ ಪ್ರಾಚೀನ ಕಥೆಗಳನ್ನು ಆರಿಸಿ ‘ಕನ್ನಡ ಸಾಹಿತ್ಯ ಚಿತ್ರಗಳು’ಎಂಬ ಹೆಸರಿನಿಂದ ಮತ್ತು ನಾಡಪದಗಳು, ಭಾರತ ಕಥಾ ಮಂಜರಿ,ಕನ್ನಡ ವ್ಯಾಕರಣ ಪಾಠಗಳು, ಥಾಮಸ್‌ ಆಳ್ವಾ ಎಡಿಸನ್‌, ಫ್ಲಾರೆನ್ಸ್ ನೈಟಿಂಗೇಲ್‌, ಮುಕುಂದಮಾಲ ಮುಂತಾದ ಕೃತಿಗಳನ್ನು ಪ್ರಕಟಿಸಿದರು. ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದ ‘ಟಾಲ್‌ಸ್ಟಾಯ್‌ ಕಥೆಗಳು’ ಜನಪ್ರಿಯತೆಯನ್ನು ತಂದುಕೊಟ್ಟ ಕೃತಿ. ಇಂದಿಗೂ ಅದಕ್ಕಿರುವ ಜನಪ್ರಿಯತೆಯಿಂದಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ೨೦೦೨ ರಲ್ಲಿ ಮೂರನೆಯ ಮುದ್ರಣವಾಗಿ ಹೊರತಂದಿದೆ. ಹೀಗೆ ಅವರು ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕಾ ವ್ಯವಸಾಯ, ಭಾಷಾಂತರ, ಇಂಗ್ಲಿಷ್‌ಕನ್ನಡ ನಿಘಂಟು ಸಂಪಾದಕ (೧೯೩೩-೪೨), ೧೯೪೨ ರಿಂದ ೧೯೫೮ ರವರೆವಿಗೂ ಅಧ್ಯಾಪಕರಾಗಿ ನಿವೃತ್ತಿ. ಗುಂಡಪ್ಪನವರ ಸೇವಾಕ್ಷೇತ್ರವು ವೈವಿಧ್ಯಮಯ, ವಿಸ್ತಾರವಾದದ್ದು, ಇಂದಿಗೂ ಪ್ರಸ್ತುತವಾದದ್ದು. ಅವರು ಬರೆದ ಮುನ್ನುಡಿಗಳು, ಲೇಖನಗಳು ಸಾಹಿತ್ಯದ ಅಧ್ಯಯನಕ್ಕೆ ವಿದ್ವತ್ಪೂರ್ಣ ಕೊಡುಗೆ. ಸಂಸ್ಕೃತ, ತಮಿಳು, ಇಂಗ್ಲಿಷ್‌ ಭಾಷೆಗಳಿಂದ ಅನುವಾದಿಸಿದ ಬರೆಹಗಳು ಸರಳತೆ, ಸ್ಪಷ್ಟತೆಯಿಂದ ಕೂಡಿವೆ. ಆಳವಾದ ಪಾಂಡಿತ್ಯ, ಸರಳತೆಗೆ ಹೆಸರಾದ ಗುಂಡಪ್ಪನವರಿಗೆ ಮೈಸೂರು ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸ್ವರ್ಣಪದಕ (೧೯೩೦), ದೇವರಾಜ ಬಹದ್ದೂರ್ ಬಹುಮಾನ (೧೯೩೯), ಭಾಷಾಂತರದ ಮೂಲಕ ತಮಿಳು-ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೋಯಿಲ್‌ನಲ್ಲಿ ಬಂಗಾರದ ಪದಕ (೧೯೫೮), ಗಾಂಧಿ ಶತಮಾನೋತ್ಸವ ಸುವರ್ಣಪದಕ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೭೫) ಮುಂತಾದ ಪ್ರಶಸ್ತಿ ಗೌರವಗಳು. ತಮ್ಮ ಹದಿನೈದನೆಯ ವಯಸ್ಸಿನಲ್ಲೆ ರಚಿಸಿದ ‘ಅಪ್ಪನ ಜೇಬಿನ ದುಡ್ಡುಗಳೆಲ್ಲ ಚಟಪಟಗುಟ್ಟುತ ಸಿಡಿಯುವುವು’ ಎಂಬ ‘ಚಟಾಕಿ’ ಪದ್ಯವನ್ನು ೫-೬ ದಶಕಗಳ ಹಿಂದೆ ಪ್ರೈಮರಿ ಶಾಲೆಯಲ್ಲಿ ಓದದೇ ಇದ್ದ ಹುಡುಗರೇ ಇರಲಿಲ್ಲ. ಪ್ರತಿಭೆ, ಸಮರ್ಥಭಾಷಾಂತರ, ವಿದ್ವತ್‌ನಿಂದ ಕೂಡಿದ್ದ ಗುಂಡಪ್ಪನವರು ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೮೬ರ ನವಂಬರ್ ೧೭ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top