ಎಸ್.ಎನ್. ಶಿವಸ್ವಾಮಿ

Home/Birthday/ಎಸ್.ಎನ್. ಶಿವಸ್ವಾಮಿ
Loading Events
This event has passed.

೦೯..೧೯೨೦ ೧೩..೨೦೦೭ ಹಾಸ್ಯಸಾಹಿತ್ಯಕ್ಕೊಂದು ಘನತೆ, ಗೌರವ ತಂದುಕೊಟ್ಟ ಸೇಲಂ ನಂಜುಂಡಯ್ಯ ಶಿವಸ್ವಾಮಿಯವರು ನಾಲ್ಕು ದಶಕಗಳ ಕಾಲ ಸತತವಾಗಿ ಹೊಸತನ್ನೂ ಅನ್ವೇಷಿಸುತ್ತಲೇ ಕಡೆಯವರೆವಿಗೂ ಪತ್ರಿಕೆಗಳಿಂದ ಬೇಡಿಕೆಯಲ್ಲಿದ್ದು ಹಾಸ್ಯಬರಹಗಾರರಾಗಿ ವಿಜೃಂಭಿಸಿದವರು. ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ಸೇಲಂ ನಂಜುಂಡಯ್ಯನವರು ವಕೀಲಿ ವೃತ್ತಿಯಲ್ಲಿದ್ದವರು, ತಾಯಿ ಶಾರದಮ್ಮ. ಓದಿದ್ದೆಲ್ಲ ಬೆಂಗಳೂರಿನಲ್ಲಿ. ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವಿ ಪಡೆದದ್ದು ೧೯೪೨ರಲ್ಲಿ. ಬಿ.ಎಸ್ಸಿ. ಆದ ನಂತರ ಉದ್ಯೋಗ ದೊರೆಯದೆ ಬರವಣಿಗೆ ಮತ್ತು ಸಣ್ಣ ಪುಟ್ಟ ಕೆಲಸ ಕೆಲಕಾಲ. ಬರೋಡದ ಕಾಲೇಜೊಂದರಲ್ಲಿ ಝಾಆಲಜಿ ಪಾಠ ಹೇಳುವ ಅವಕಾಶ. ಆದರೆ ಅಲ್ಲಿನ ರಾಜಕೀಯದಿಂದ ಬೇಸತ್ತು ಸೇರಿದ್ದು ಆಲ್‌ ಇಂಡಿಯಾ ರೇಡಿಯೋ. ‘ಫೆಡರಲ್‌ ರಿಪಬ್ಲಿಕ್‌ ಸರ್ವೀಸ್‌ ಕಮೀಷನ್‌’ (ಆಗ ಇದ್ದುದು) ನಿಂದ ಆಯ್ಕೆಯಾಗಿ ೧೯೪೪ರ ಜನವರಿ ೧ರಿಂದ ಪ್ರೊಗ್ಯ್ರಾಂ ಅಸಿಸ್ಟೆಂಟ್‌ ಆಗಿ ಸೇರಿದ್ದು ಮದರಾಸಿನ ಆಲ್‌ ಇಂಡಿಯಾ ರೇಡಿಯೊ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸುವ ಕೆಲಸವನ್ನು ಪ್ರಾರಂಭಿಸಿದರು. ಬೀಚಿಯವರ ಸ್ನೇಹ ದೊರೆತ ಮೇಲೆ ಅನೇಕ ಪ್ರಹಸನಗಳನ್ನು ಬರೆಸಿ ಪ್ರಸಾರ ಮಾಡತೊಡಗಿದರು. ನಂತರ ಬಂದುದು ಮೈಸೂರು ಆಕಾಶವಾಣಿಗೆ. ಅ.ನ.ಕೃ, ತ.ರಾ.ಸು. ನಿರಂಜನ, ಚದುರಂಗ ಮುಂತಾದವರ ಸ್ನೇಹ. ಆಗ ರೇಡಿಯೋದಲ್ಲಿ ಯಾವುದೇ ಕಾರ್ಯಕ್ರಮ ಪ್ರಸಾರಮಾಡುವಲ್ಲಿ ಪ್ರತ್ಯೇಕ ಸ್ವರೂಪ, ಕಟ್ಟಳೆಗಳಿಲ್ಲದೆ ಕಾರ್ಯಕ್ರಮದ ಮುಖ್ಯ ಭಾಗಕ್ಕೆ ಬರುವ ವೇಳೆಗೆ ವೇಳೆಮೀರಿ ಕಾರ್ಯಕ್ರಮದ ಅಂತ್ಯಕ್ಕೆ ಬಂದು ಬಿಡುತ್ತಿತ್ತು. ಇದಕ್ಕೆ ಸರಿಯಾದ ರೂಪರೇಷಯನ್ನು ಅಳವಡಿಸಿ ಕಾರ್ಯಕ್ರಮವನ್ನೂ ನಿರ್ವಹಿಸತೊಡಗಿದರು. ರೇಡಿಯೋ ನಾಟಕಗಳೂ ಅಷ್ಟೆ. ಆಗೆಲ್ಲ ಎ.ಎನ್‌. ಮೂರ್ತಿರಾಯರ ಆಷಾಢಭೂತಿ, ಕೈಲಾಸಂ ರವರ ಕೆಲ ನಾಟಕಗಳಿಗೆ ಸೀಮಿತವಾಗಿತ್ತು. ರೇಡಿಯೋ ನಾಟಕಗಳಿಗೆ ಶಬ್ದವೇ ಸರ್ವಸ್ವ. ದೃಶ್ಯಭಾಗವಿಲ್ಲದಿದ್ದುದರಿಂದ ಶಬ್ದಕ್ಕೇ ಪ್ರಾಮುಖ್ಯತೆ. ಶಬ್ದದ ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ರೇಡಿಯೋ ನಾಟಕಗಳಿಗೊಂದು ಸ್ಪಷ್ಟ ರೂಪ ಕೊಟ್ಟರು. ಇದಕ್ಕೆಂದೇ ಇವರು ಬರೆದ ನಾಟಕ ‘ಹೃದಯಾಂತರಾಳ’ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತ್ತೊಂದು ನಾಟಕ “ಎಲ್ಲಿ ನನ್ನ ಕುದುರೆ ಹೋಯಿತು…..” ಇದರಲ್ಲಿ ಕುದುರೆಗಳ ದಾಂಧಲೆಗಳನ್ನೂ ಮಾತಿಲ್ಲದೆ ಶಬ್ದಗಳಲ್ಲೇ ನಿರೂಪಿಸಿದ ನಾಟಕ. ಆಗೆಲ್ಲ ನಾಟಕಗಳೆಂದರೆ ಅರ್ಧ ಘಂಟೆಗೆ ಸೀಮಿತವಾಗಿದ್ದ ಕಾಲದಲ್ಲಿ ಎಂಟುವರೆ ನಿಮಿಷದ TNT ಎಂಬ ನಾಟಕ ಬರೆದು ದಾಖಲೆ ನಿರ್ಮಿಸಿದರು. ಹೀಗೆ ಹೊಸತನ್ನೂ ಹುಡುಕುತ್ತಾ, ಹಲವಾರು ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಾ, ಹೈದರಾಬಾದು, ಗೌಹತಿ, ಜಲಂಧರ್, ಕೊಹಿಮಾ, ನವದೆಹಲಿ, ಮುಂಬಯಿ ಮುಂತಾದ ಕಡೆ ದುಡಿದು ಬಡ್ತಿ ಪಡೆದು ಡೈರೆಕ್ಟರ್ ಹುದ್ದೆಯವರೆಗೂ ತಲುಪಿದರು. ಮುಂಬೈ ಆಕಾಶವಾಣಿಯ ವಾಣಿಜ್ಯ ವಿಭಾಗಕ್ಕೆ ಸೇರ್ಪಡೆಯಾದರು. ಜಾಹೀರಾತಿನ ಕಲ್ಪನೆಯೇ ಇರದಿದ್ದ ಕಾಲದಲ್ಲಿ, ಸರಕುಗಳನ್ನು ಉತ್ಪಾದಿಸುವ ಕಂಪನಿಗಳನ್ನೂ ಸಂಪರ್ಕಿಸಿ, ಜಾಹೀರಾತು ನಿರ್ಮಿಸಿ, ಹಣಕಾಸು ವ್ಯವಹಾರದ ಜವಾಬ್ದಾರಿ ಹೊತ್ತು ರೇಡಿಯೋದಲ್ಲಿ ಅಳವಡಿಸಿದವರಲ್ಲಿ ಮೊದಲಿಗರು. ಈ ಸವಾಲನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದನ್ನು ಮನಗಂಡು ದೂರದರ್ಶನ ಕೇಂದ್ರಕ್ಕೆ ಆಹ್ವಾನಿಸಿದಾಗ ಅಲ್ಲೂ ಲಾಭದಾಯಕವಾಗಿ ನಡೆಸಬಹುದೆಂಬುದನ್ನೂ ನಿರೂಪಿಸಿದರು. ಆದರೆ ಕೆಲವರ ಕೈವಾಡದಿಂದ ಕಿರಿಕಿರಿ ಎನಿಸಿ ರಾಜೀನಾಮೆ ಕೊಟ್ಟು ಹೊರಬಂದರು. ಮೊದಲಿನಿಂದಲೂ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಪತ್ರಿಕೆಗಳನ್ನೂ ಓದುತ್ತಾ, ನಗೆಗಣ್ಣಿನಿಂದ ನೋಡುತ್ತ ಬಂದಿದ್ದರಿಂಧ ಹಾಸ್ಯಲೇಖನಗಳನ್ನೂ ಯಶಸ್ವಿಯಾಗಿ ಸೃಷ್ಟಿಸತೊಡಗಿದರು. ವಿಕಟವಿನೋದಿನಿ, ನಗುವನಂದ ಮುಂತಾದ ಪತ್ರಿಕೆಗಳಿಗೆ ಖಾಯಂ ಬರಹಗಾರರಾದರು, ‘ಕಥೆಗಾರ’ ಎಂಬ ಪತ್ರಿಕೆಗೆ ‘ತುಂತುರು’ ಎಂಬ ಅಂಕಣವನ್ನು ಪ್ರಾರಂಬಿಸಿ ಪಿ.ಜಿ. ವುಡ್‌ಹೌಸ್‌ರ ಜೀವ್ಸ್‌ನನ್ನು ಜೀವಣ್ಣ ನನಗಾಗಿ ಬರೆದ ಅಂಕಣ ಬಹು ಪ್ರಸಿದ್ಧಿ ಪಡೆಯಿತು. ಇವರ ಮೊದಲ ಹಾಸ್ಯ ಲೇಖನಗಳ ಸಂಕಲನ ‘ಲಕ್ಕವಳ್ಳಿಯಲ್ಲಿ ಲಾಲಿ ಪಾಪ್ಸ್‌’ಗೆ (೧೯೪೯) ಎಂ. ಶಿವರಾಂ (ರಾಶಿ) ರವರೇ ಮುನ್ನುಡಿ ಬರೆದಿದ್ದಲ್ಲದೆ ತಮ್ಮ ಕೊರವಂಜಿ ಪತ್ರಿಕೆಗೂ ಬರೆಯಲು ಆಹ್ವಾನಿಸಿದರು. ಪುಂಗನೂರು  ಪಾಪಯ್ಯ ಎಂಬ ವ್ಯಕ್ತಿಯನ್ನು ಸೃಷ್ಟಿಸಿ ‘ಪಾತಾಳದಲ್ಲಿ ಪಾಪಯ್ಯ’ ಎಂಬ ಅಂಕಣವನ್ನು ಕೊರವಂಜಿಗಾಗಿ ಬರೆದರು. ಇದರ ಜೊತೆಗೆ ಇಂಗ್ಲಿಷ್‌ನಲ್ಲಿ ಟೈಂಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗಾಗಿ ‘NAMSKARA SAAR’, ಫೀನಿಕ್ಸ್‌ (ಟಿವಿ ವಿಮರ್ಶೆ) ಮತ್ತು ಬೆಂಗಳೂರು ಸನ್‌ಗಾಗಿ ಡೈಲಿ ಕ್ವಿಜ್‌, ಟ್ಯೂನ್‌ ಫುಲ್‌ ಎನ್‌ಕೌಂಟರ್ಸ್ ಮುಂತಾದ ಅಂಕಣಗಳ ನಿರ್ವಹಣೆ. ಇವರು ಬರೆದ ಹಾಸ್ಯಲೇಖನಗಳು ಲಕ್ಕವಳ್ಳಿಯಲ್ಲಿ ಲಾಲಿಪಾಪ್ಸ್‌ (೧೯೪೯), ಏನೇ ಬರಲಿ ಕಮ್ಮಿ ಇರಲಿ (೧೯೭೨), ಷಾಕ್‌, ಷಾಕ್‌, ಷಾಕ್‌ (೧೯೮೫), ಮನೆಯೊಳಗೊಬ್ಬ ಮಿಲ್ಟ್ರಿಮಾಮ (೧೯೯೩), ಬೂಸಾದಹನ (೧೯೯೮), ಜಾತ್ರೆಯಲ್ಲಿ ಜಾಗರಣೆ (೨೦೦೧), ಹಾಸ್ಯಾವತಾರ ಮತ್ತು ಕಡೆಯ ಸಂಕಲನ ಸಿನ್ಸಿನಾಟಿಯಲ್ಲಿ ಕರಿಬೇವಿನ ಸೊಪ್ಪು (೩೦೦೩). ಮುಂತಾದ ಸಂಕಲನಗಳಲ್ಲಿ ಸೇರಿವೆ. ಇದರ ಜೊತೆಗೆ ಸುಧಾವಾರ ಪತ್ರಿಕೆಯ ಕಾಲಂನಲ್ಲಿ ಇವರು ಬರೆದ ನಗೆಹನಿಗಳು, ಮತ್ತಷ್ಟೂ ಸೇರಿ ‘ನಗೆಮಿಂಚು’, ‘ನಗೆಗೊಂಚಲು’, ‘ನಗೆಮುಗಿಲು’ ಸಂಕಲನಗಳಲ್ಲಿ ಸೇರಿವೆ. ರೇಡಿಯೋಗಾಗಿ ಬರೆದ ನಾಟಕಗಳು-ಹೃದಯಾಂತರಾಳ (ಐದು ನಾಟಕಗಳು), ಶಬ್ದಬ್ರಹ್ಮನ ಶಿರ ಹೋಯಿತ್ತು ಮತ್ತು TNT (ಎಂಟುವರೆ ನಿಮಿಷದ ನಾಟಕ). ಇದಲ್ಲದೆ ‘ಗ್ರ್ಯಾಂಡ್‌ ಸ್ಲಾಮ್‌’ ರಾಷ್ಟ್ರೀಯ ಜಾಲದಲ್ಲಿ ಎಲ್ಲಿ ಭಾಷೆಗಳಲ್ಲೂ ಬಿತ್ತರಗೊಂಡ ವಿಡಂಬನೆಯ ನಾಟಕ, ‘ಮಹಾಸಾಮ್ರಾಜ್ಯ’ (ಐತಿಹಾಸಿಕ) ತೆಲುಗಿನಲ್ಲಿ ಪ್ರಸಾರವಾದ ಜನಪ್ರಿಯ ನಾಟಕ. ‘ಬಿಂದು’ ವೈಜ್ಞಾನಿಕ ಥ್ರಿಲ್ಲರ್ ನಾಟಕ. ನಿಯಾನ್‌ ಲೈಟ್‌ (ನಗೆ ನಾಟಕ). ಹೀಗೆ ಹೊಸತರ ಹುಡುಕಾಟದಲ್ಲೇ ಸದಾ ತೊಡಗಿದ್ದ,  ದೇಶ ವಿದೇಶಗಳಲ್ಲಿ ಬಾನುಲಿ ಕುರಿತು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಗೌರವ ಪಡೆದ, ಹಾಸ್ಯಕ್ಕೆ ಮೀಸಲಾದ ‘ಪರಮಾನಂದ ಪ್ರಶಸ್ತಿ’ ಪುರಸ್ಕೃತ, ಹಾಸ್ಯ ಸಾಹಿತ್ಯದ ಹಿರಿಯಜ್ಜರೆನಿಸಿದ್ದ ಶಿವಸ್ವಾಮಿಯವರು ಹಾಸ್ಯಲೋಕದಿಂದ ಮರೆಯಾದದ್ದು ೨೦೦೭ ರ ಆಗಸ್ಟ್‌ ೧೩ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top