ಎಸ್.ಕೆ. ಹರಿಹರೇಶ್ವರ

Home/Birthday/ಎಸ್.ಕೆ. ಹರಿಹರೇಶ್ವರ
Loading Events
This event has passed.

೧೧-೩-೧೯೩೭ ೨೨-೭-೨೦೧೦ ಅಮೆರಿಕದಲ್ಲಿ ಕನ್ನಡದ ಕಂಪು ಮೂಡಿಸಿದ ಶಿಕಾರಿಪುರ ಹರಿಹರೇಶ್ವರರು ಹುಟ್ಟಿದ್ದು ಶಿವಮೊಗ್ಗ. ಶಿಕಾರಿಪುರ ಇವರ ವಂಶಕ್ಕೆ ಅಂಟಿ ಬಂದ ಹೆಸರು. ತಂದೆ ಕೃಷ್ಣಸ್ವಾಮಿರಾವ್, ತಾಯಿ ಅನ್ನಪೂರ್ಣಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಶಿವಮೊಗ್ಗೆಯಲ್ಲಿ. ಎಂಜನಿಯರಿಂಗ್‌ಗೆ ಸೇರಿದ್ದು ದಾವಣಗೆರೆಯ ಬಿಡಿಟಿ ಎಂಜನಿಯರಿಂಗ್ ಕಾಲೇಜು. ನಂತರ ಸುರತ್ಕಲ್‌ನ  ಕರ್ನಾಟಕ ರೀಜನಲ್ ಎಂಜನಿಯರಿಂಗ್ ಕಾಲೇಜಿನಲ್ಲಿ  ಎಂ.ಟೆಕ್. ಮುಗಿಸಿ ಅಮೆರಿಕದ ಓಕ್ಲ ಹೋಮ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ. ಅಮೆರಿಕದಿಂದ ಹಿಂದಿರುಗಿದ ನಂತರ ಅಧ್ಯಾಪಕ ವೃತ್ತಿ ಆರಂಭ. ಎಂ.ಎಸ್. ರಾಮಯ್ಯ ಕಾಲೇಜು-ಬೆಂಗಳೂರು, ರಾಷ್ಟ್ರೀಯ ವಿದ್ಯಾಲಯ ಇಂಜನಿಯರಿಂಗ್ ಕಾಲೇಜು-ಬೆಂಗಳೂರು ಮುಂತಾದೆಡೆ ಕೆಲಕಾಲ ಸೇವೆ. ಓಕ್ಲಹೋಮದಲ್ಲಿ ಎಂ.ಎಸ್. ಪದವಿಗಾಗಿ ಓದುತ್ತಿರುವಾಗಲೇ ಓಕ್ಲ ಹೋಮ ಸ್ಟೇಟ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾ ರಾಜ್ಯದ ಕಮ್ಯುನಿಟಿ ಕಾಲೇಜು ಮತ್ತು ಕ್ಯಾಲಿಫೋರ್ನಿಯಾ ಪೆಸಿಫಿಕ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರ ಹುದ್ದೆ. ಅಮೆರಿಕದ ಜೀವನ ಕ್ರಮವೇ ಹಾಗೆ ಅಧ್ಯಾಪನ, ಅಧ್ಯಯನ ಎರಡೂ ಜೊತೆ ಜೊತೆ. ಭಾರತದಲ್ಲಿರುವಾಗ ತಮಿಳುನಾಡಿನ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ನಿನಲ್ಲಿ ಸಿವಿಲ್ ಎಂಜನಿಯರಾಗಿ ಹಲವಾರು ರಸ್ತೆ, ಸೇತುವೆ, ವಿನ್ಯಾಸ-ನಿರ್ಮಾಣದ ಕೆಲಸದಲ್ಲಿ  ಭಾಗಿ. ಏನೋ ಸಾಧಿಸಬೇಕೆಂದು ಮನಸ್ಸಿನಲ್ಲಿ ಮೂಡಿದ ಛಲ, ಸಾಹಿತಿ ಪತ್ನಿ ನಾಗಲಕ್ಷ್ಮಿಯರೊಡನೆ ಹಾರಿದ್ದು ವಿದೇಶಕ್ಕೆ. ಟೆಹರಾನ್, ಇರಾನ್‌ನಲ್ಲಿ ಸ್ಟ್ರಕ್ಚರಲ್ ಎಂಜನಿಯರಾಗಿ ಕನ್ಸಲ್ಟೆಂಟ್ ಎಂಜನಿಯರಾಗಿ, ಅಮೆರಿಕಾದ ಪೆನ್ಸಿಲ್ವೇನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳ ಅಣುಶಕ್ತಿ ಸ್ಥಾವರಗಳಲ್ಲಿ ಸ್ಟ್ರಕ್ಚುರಲ್ ಎಂಜನಿಯರಾಗಿ, ಕ್ಯಾಲಿಫೋರ್ನಿಯಾ, ಡೆಲ್‌ವೇರ್ ರಾಜ್ಯಗಳಲ್ಲಿ ಪ್ರೊಫೆಷನಲ್ ಎಂಜನಿಯರಾಗಿ, ಓಕ್ಲಹೋಮ, ಓಹಿಯೋ, ಮಿಸ್ಸೌರಿ ಮುಂತಾದ ಅಮೆರಿಕದ ಹಲವಾರು ರಾಜ್ಯಗಳಲ್ಲಿ  ವಿವಿಧ ಮಟ್ಟದ ಸೇವೆ, ಗಳಿಸಿದ ಅನುಭವ ಅಪಾರ. ವಿದೇಶದಲ್ಲಿದ್ದರೂ ಕನ್ನಡ ಕೂಗಿಗೆ ಸೋತಮನ. ಸ್ನೇಹಿತರನ್ನು ಒಗ್ಗೂಡಿಸಲು ಹೊರತಂದ ಪತ್ರಿಕೆ ‘ಅಮೆರಿಕನ್ನಡ’ ದ್ವೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕ, ಪ್ರಕಾಶಕ. ಟೆಕ್ಸಾಸ್, ಹೂಸ್ಟನ್ ವಿಶ್ವಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ ಸಂಪಾದಕತ್ವ. ಚಿತ್ರಭಾನು, ತ್ರಿವೇಣಿ ವಾಹಿನಿ, ಪೆನ್ಸಿಲ್‌ವೇನಿಯಾ ರಾಜ್ಯದ ಮಾಸಿಕ ವಾರ್ತಾಪತ್ರ ; ತ್ರಿವೇಣಿ-ಪ್ರಥಮ ಉತ್ತರ ಅಮೆರಿಕ ಸ್ಮರಣ ಸಂಚಿಕೆ, ತುರಾಯಿ ಮಿಸ್ಸೌರಿ ಕನ್ನಡ ಸಂಘದ ಸ್ಮರಣ ಸಂಚಿಕೆ ; ಸ್ಪಂದನ-ಡೆಟ್ರಾಯಿಟ್ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ; ಸಂಗಮ-ಲಾಸ್ ಏಂಜಲೀಸ್ ಕನ್ನಡ ಸಂಘದ ಸ್ಮರಣ ಸಂಚಿಕೆ ಮುಂತಾದುವುಗಳ ಸಂಪಾದಕತ್ವದ ಹೊಣೆ. ವಿದೇಶದಲ್ಲಿದ್ದರೂ ಕನ್ನಡ ನಾಡಿನ ಪ್ರಖ್ಯಾತ ಪತ್ರಿಕೆ ಪ್ರಜಾವಾಣಿ, ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಗಳಿಗೆ ಬರೆದ ಲೇಖನಗಳು. ಮಾತಿನ ಮಂಟಪ (ಪ್ರಬಂಧ ಸಂಕಲನ) ರಾಂಟಿಜನ್ (ವೈಜ್ಞಾನಿಕ ಸಾಹಿತ್ಯ) ಪ್ರಕಟಿತ. ಕನ್ನಡ ಉಳಿಸಿ ಬೆಳಸುವ ಬಗೆ, ಮಾತಿನ ಚಪ್ಪರ ಇದೀಗ ಬಿಡುಗಡೆಗೊಂಡಿದೆ. ವಿದೇಶದಿಂದ ಹಿಂದಿರುಗಿ ಸದ್ಯ ಮೈಸೂರಿನಲ್ಲಿ ವಾಸ್ತವ್ಯ.   ಇದೇ ದಿನ ಹುಟ್ಟಿದ ಸಾಹಿತಿಗಳು : ಮೇಘಮಿತ್ರ – ೧೯೩೬ ಚಂದ್ರಶೇಖರ ಚೊಕ್ಕಾಡಿ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top