ಎಸ್. ಜಗನ್ನಾಥರಾವ್ ಬಹುಳೆ

Home/Birthday/ಎಸ್. ಜಗನ್ನಾಥರಾವ್ ಬಹುಳೆ
Loading Events
This event has passed.

೧೮.೦೧.೧೯೬೫ ಲೇಖನ, ಕತೆ, ಕವನ, ಸೃಜನಶೀಲ ಬರಹಗಳಿಂದ ಮತ್ತು ರಾಜ್‌ಕುಮಾರ್ ರವರ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಕಾರರಾಗಿ, ಸಾಂದರ್ಭಿಕವಾಗಿ ಅನೇಕ ಕೃತಿಗಳನ್ನು ರಚಿಸಿರುವ ಜಗನ್ನಾಥರಾವ್ ಬಹುಳೆ ಯವರು ಹುಟ್ಟಿದ್ದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ. ತಂದೆ ಎಲ್. ಶ್ರೀನಿವಾಸರಾವ್ ಬಹುಳೆ, ತಾಯಿ ಅಂಬುಜಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಪ್ರೌಢಶಾಲೆಯವರೆಗೆ ಆನೇಕಲ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಪೌರಾಡಳಿತ ನಿರ್ದೇಶನಾಲಯದಲ್ಲಿ ಸಹಾಯಕರಾಗಿ, ಇದೀಗ ವ್ಯವಸ್ಥಾಪಕರಾಗಿ ಕಾರ‍್ಯನಿರ್ವಹಣೆ. ವಿದ್ಯಾರ್ಥಿದೆಸೆಯಿಂದಲೇ ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದು ಅ.ನ.ಕೃ., ಶಿವರಾಮ ಕಾರಂತರು, ನಿರಂಜನ, ಬಸವರಾಜ ಕಟ್ಟಿಮನಿ, ಚದುರಂಗ ಇವರ ಸಾಹಿತ್ಯವನ್ನು ಓದಿದ ಪ್ರಭಾವದಿಂದ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡು ಬರೆದ ಹಲವಾರು ಲೇಖನಗಳು. ಕಾವ್ಯದಲ್ಲೂ ಆಸಕ್ತಿ ಹೊಂದಿ ಬರೆದ ಹಲವಾರು ಕವನಗಳು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದು ಪ್ರಕಟವಾದ ಮೊದಲ ಕವನ ಸಂಕಲನ ‘ಮುತ್ತಿನ ಹನಿಗಳು’ (೨೦೦೧). ಈ ಸಂಕಲನದಿಂದಲೇ ಆಯ್ದು ‘ಮುತ್ತಿನ ಹನಿಗಳ ಬೆಡಗು’ ಎಂಬ ಭಾವಗೀತೆಯನ್ನು ರಾಗ ಸಂಯೋಜಿಸಿ ಬೆಂಗಳೂರು ದೂರದರ್ಶನದಿಂದ ಪ್ರಸಾರವಾಗಿದೆ. ನಂತರ ಪ್ರಕಟಗೊಂಡ ಕೃತಿ ‘ಹನಿ ಹನಿ ಹನಿ’ ಹನಿಗವನಗಳ ಸಂಕಲನ. ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೂ ರಾಜ್ ರವರ ಚಲನಚಿತ್ರಗಳೆಂದರೆ ಅದೆಂತಾದ್ದೋ ಸೆಳೆತ. ಬಿಡುಗಡೆಯಾದ ಕೂಡಲೇ ನೋಡುವ ತವಕ. ರಾಜ್‌ಕುಮಾರ್ ರವರ ವ್ಯಕ್ತಿತ್ವಕ್ಕೆ ಮರುಳಾದ ಮನಸ್ಸು. ರಾಜ್ ಎಂದರೆ ಸಾಕು ಇವರ ಮನಸ್ಸು ಅರಳತೊಡಗುತ್ತಿತ್ತು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಕನ್ನಡಕ್ಕಾಗಿ ರಾಜ್‌ರವರು ಪ್ರವೇಶಿಸಿದಾಗ, ರಾಜ್ ರವರ ಬಗ್ಗೆ ಆಳವಾಗಿ ಅರಿಯಬೇಕೆಂದು ಮಾಹಿತಿಗಳನ್ನು ಕಲೆ ಹಾಕತೊಡಗಿದರು. ರಾಜ್ ರವರ ಬಗ್ಗೆ ವಿಷಯ ಸಂಗ್ರಹಣೆ ಮಾಡುತ್ತಾ ಹೋದಂತೆಲ್ಲ ರಾಜ್ ರವರ ಬಗ್ಗೆ ಕೃತಿ ರಚಿಸಬೇಕೆಂಬ ಹಂಬಲದಿಂದ ರಾಜ್‌ಕುಮಾರ್ ರವರ ಜೀವನ ಚರಿತ್ರೆ, ಸಾಮಾಜಿಕವಾಗಿ ರಾಜ್ ಪ್ರಭಾವಗಳು, ರಾಜ್‌ಕುಮಾರ್ ರವರ ಅಪರೂಪದ ಭಾಷಣಗಳು, ರಾಜ್ ನುಡಿಮುತ್ತುಗಳು, ರಾಜ್ ರವರ ಶ್ರೇಷ್ಠ ಪ್ರಬಂಧಗಳು, ರಾಜ್‌ಕುಮಾರ್ ಚಲನಚಿತ್ರದ ವೈಶಿಷ್ಟ್ಯಗಳು, ರಾಜ್ ರವರು ಹಾಡಿದ ಅಮರ ಗೀತೆಗಳು, ರಾಜ್ ಚಿತ್ರ ನಿರ್ದೇಶಿಸಿದ ನಿರ್ದೇಶಕರು, ಸಾಹಿತಿಗಳ ಸಂದರ್ಶನಗಳು, ಕನ್ನಡ ನಾಡು – ನುಡಿ – ಭಾಷೆ, ಸಂಸ್ಕೃತಿಯಬೆಳವಣಿಗೆಯ ಬಗ್ಗೆ ರಾಜ್‌ಕುಮಾರ್ ರವರ ಪಾತ್ರ – ಹೀಗೆ ರಾಜ್ ಜೀವನದ ವಿವಿಧ ಆಯಾಮಗಳ ಬಗ್ಗೆ ವರನಟ, ಡಾ. ರಾಜ್‌ಕುಮಾರ್ ದಂತ ಕತೆ, ರಾಜಾಯಣ, ರಾಜಾಂತರಂಗ, ಸಹಸ್ರಮುಖಿ ಸಾಧಕ, ಕುಮಾರ ತ್ರಯರು, ಅಮರ ಚೇತನ, ಮುತ್ತು ರಾಜನ ಮುತ್ತಿನ ಮಾತುಗಳು, ಅಣ್ಣಾವರ ಅಮರ ಗೀತೆಗಳು, ರಾಜ್ ನೀತಿ ಮುಂತಾದ ೧೦ ಕೃತಿಗಳನ್ನು ರಚಿಸಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ರಾಜ್ ಆಧ್ಯಯನ ಪೀಠದಲ್ಲಿ ಸಂಶೋಧಕರಿಗೆ ಆಕರ ಗ್ರಂಥಗಳೆನಿಸಿ ಬಹುಳೆಯವರಿಗೆ ಗೌರವ ತಂದಿವೆ. ಬಹುಳೆಯವರಿಗೆ ರಾಜ್‌ಕುಮಾರ್ ಬಗ್ಗೆ  ಕೃತಿ ರಚಿಸುವುದೆಂದರೆ ಮಹತ್ತರವಾದ ಹುಮ್ಮಸ್ಸು. ಇವರ ಪಾಲಿಗೆ ರಾಜ್ ಬಗ್ಗೆ ಬರೆದಷ್ಟೂ ಮುಗಿಯದ ಸಂಪನ್ಮೂಲ ವ್ಯಕ್ತಿ. ಇವುಗಳಲ್ಲಿ ‘ವರನಟ’ ಒಂದು ಬೃಹತ್ ಗ್ರಂಥವಾಗಿ ಕನ್ನಡದ ನಟರ ಬಗ್ಗೆ ಬರೆದ ಕೃತಿಗಳಲ್ಲೆಲ್ಲಾ ಮೇರು ಕೃತಿ ಎನಿಸಿರುವುದರ ಜೊತೆಗೆ ೧೪ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಹೀಗೆ ಒಬ್ಬ ಚಲನಚಿತ್ರ ನಟರ ಬಗ್ಗೆ ಅಧ್ಯಯನ ಶೀಲರಾಗಿ ವಿವಿಧ ಆಯಾಮಗಳನ್ನು ಕುರಿತು ಇಷ್ಟು ಸಂಖ್ಯೆಯ ಕೃತಿ ರಚಿಸಿರುವುದು ಇದೊಂದು ದಾಖಲೆಯೂ ಹೌದು. ಬಹಶ: ಭಾರತೀಯ ಭಾಷೆಗಳಲ್ಲೇ ಒಬ್ಬ ನಟರ ಬಗ್ಗೆ ಇಷ್ಟೊಂದು ಕೃತಿಗಳು ಒಬ್ಬ ಲೇಖಕರಿಂದಲೇ ರಚಿತವಾದಂತಿಲ್ಲ. ಜೊತೆಗೆ ಒಬ್ಬ ಚಲನಚಿತ್ರ ನಟರ ಬಗ್ಗೆ ವಿವಿಧ ಲೇಖಕರಿಂದ ೬೦ಕ್ಕೂ ಹೆಚ್ಚು ಕೃತಿ ರಚಿತವಾಗಿರುವುದೂ ದಾಖಲೆಯೆ. ರಾಜ್ ಮೇಲಿನ ಅಭಿಮಾನದಿಂದ ಕೃತಿ ರಚಿಸಿದ್ದಷ್ಟೇ ಅಲ್ಲದೆ ಹಲವಾರು ವೇದಿಕೆಗಳಲ್ಲಿ ‘ರಾಜ್ ಚಿತ್ರಗಳಲ್ಲಿ ಸರಕಾರಿಯ ಸೇವೆಯ ಪ್ರಜ್ಞೆ’ ಎಂಬ ವಿಷಯವಾಗಿ ಸಾಕಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ.  ಇದರ ಹೊರತಾಗಿ, ಕವಿ ಗೋಷ್ಠಿ, ಚಿಂತನ ಕಾರ‍್ಯಕ್ರಮಗಳು, ವಿಚಾರ ಗೋಷ್ಠಿಗಳಲ್ಲೂ ಪಾಲ್ಗೊಂಡಿದ್ದಾರೆ. ಬಹುಳೆಯವರು ಅಂತಾರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಪೇಸ್ ರೇಡಿಯೋವು ನಡೆಸಿದ ಸಂದರ್ಶನದಲ್ಲಿ ರಾಜ್ ಕೃತಿಗಳ ರಚನೆಯ ಹಿಂದಿನ ಅನುಭವಗಳನ್ನು ಶೋತೃಗಳೊಡನೆ ಹಂಚಿಕೊಂಡಿರುವುದು ವಿಶೇಷವೆ. ರಾಜ್ ರವರನ್ನು ಕುರಿತು ಬರೆದಂತೆ ಖ್ಯಾತ ನಿರ್ದೇಶಕ, ಚಿತ್ರ ಸಾಹಿತ್ಯ,  ಗೀತ ಪ್ರಿಯರ ಆತ್ಮ ಕಥನ, ಸಾಹಸ ಸಿಂಹ ವಿಷ್ನುವರ್ಧನ್ ರವರ ‘ಸಾಹಸ ಸಿಂಹಾಯಣ’, ನರಸಿಂಹರಾಜುರವರ ಆತ್ಮಕಥನ ‘ಕನ್ನಡದ ರಣಧೀರರು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಬೆಂಗಳೂರು ಆಕಾಶವಾಣಿಯ ಕಲಾವಿದರಾಗಿ ಸುಮಾರು ೫೦ಕ್ಕೂ ಹೆಚ್ಚು ಕಾರ‍್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ ರಾಷ್ಟ್ರೀಯ ನಾಟಕಗಳು, ದೂರದರ್ಶನದ ಕಿರು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಿರಂತರವಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದರ ಜೊತೆಗೆ ಅಂಕಣ ಬರಹಗಳನ್ನೂ ನಿರ್ವಹಿಸಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ‘ಅಂದಿನ ನೆನೆಪು’ ಎಂಬ ಅಂಕಣವು ಬಹು ಜನಪ್ರಿಯವಾಗಿತ್ತು. ತೆಲುಗೂ ಭಾಷೆಯಿಂದಲೂ ಹಲವಾರು ಕೃತಿಗಳನ್ನು ಅನುವಾದಿಸಿದ್ದು ಹಿಂದೂ ಧರ್ಮದ ನಿತ್ಯಾಚರಣೆಗಳನ್ನು ಕುರಿತ ‘ತಾಳೆಗರಿ ರಹಸ್ಯಗಳು’ ಅನುವಾದ ಕೃತಿಯು ಬಹು ಜನಪ್ರಿಯ ಕೃತಿ ಎನಿಸಿದೆ. ಇದಲ್ಲದೆ ಶ್ರೀ ಲಕ್ಷ್ಮೀ ಕಟಾಕ್ಷ, ನಾವರಿಯದ ಗಾಂಧೀಜಿ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಮತ್ತೊಂದು ಬಹು ಮುಖ್ಯ ಕೃತಿಯೆಂದರೆ ‘ಮಾರುತ ಸಖ’. ಈ ಕೃತಿಯಲ್ಲಿ ಭಾರತೀಯ ವಿಮಾನ ಶಾಸ್ತ್ರ ಹಾಗೂ ಅಜ್ಞಾತ ಸಾಧಕ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ರೋಚಕ ಬದುಕಿನ ಚಿತ್ರಣವನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. ರೈಟ್ ಸಹೋದರರಿಗಿಂತಲೂ ಮೊದಲೆ ವಿಮಾನ ಆವಿಷ್ಕಾರವನ್ನು ಕೈಕೊಂಡಿದ್ದರೂ ಹೊರ ಪ್ರಪಂಚಕ್ಕೆ ತಿಳಿಯದೆ ಆವಿಷ್ಕಾರದ ಮೊದಲ ಗೌರವ ರೈಟ್ ಸಹೋದರರಿಗೆ ಸಂದಿದೆ. ಈ ಕೃತಿಯನ್ನು ರಚಿಸುವಲ್ಲಿಯೂ ಹಲವಾರು ವಿಜ್ಞಾನಿಗಳು, ಭಾಷಾತಜ್ಷರು, ಅಧ್ಯಾತ್ಮಕ ಜಗತ್ತಿನ ಪ್ರಮುಖ ವ್ಯಕ್ತಿಗಳಿಂದ ವಿಷಯ ಸಂಗ್ರಹಿಸಿ ದಶಕಗಳ ಕಾಲ ಶ್ರಮವಹಿಸಿ ರಚಿಸಿದ ಕೃತಿ ‘ಮಾರುತ ಸಖ’. ಇದಲ್ಲದೆ ಬಹುಳೆಯವರ ಇತರ ಕೃತಿಗಳೆಂದರೆ ಭಾಳಲಹರಿ, ಗಜಶಿಲಾಪುರ, ಕುಮಾರ ತ್ರಯರು, ಅಮರ ಚೇತನ, ಕನ್ನಡದ ಬೆಳಕಲ್ಲಿ ಛತ್ರಪತಿ ಶಿವಾಜಿ, ಸೂರ್ಯೋಪಾಸಕ ಸದ್ಗುರು, ಬೆಂಗಳೂರಿನ ಸಿನಿಮಾ ಮೆಯಿಲ್, ಮುಂತಾದ ೨೦ಕ್ಕು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು ಶ್ರೀ, ಗೊರೂರು ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ,, ಡಾ. ರಾಜ್‌ಕುಮಾರ್ ದತ್ತಿ ನಿಧಿ ಪುರಸ್ಕಾರ, ಹೂಗಾರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಲಭಿಸಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top