ಎಸ್.ಜಿ. ನರಸಿಂಹಾಚಾರ್

Home/Birthday/ಎಸ್.ಜಿ. ನರಸಿಂಹಾಚಾರ್
Loading Events

೧೧-೯-೧೮೬೨ ೨೨-೧೨-೧೯೦೭ ಸಂಸ್ಕೃತ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಹಳಗನ್ನಡ ವಿದ್ವಾಂಸರಾದ ನರಸಿಂಹಾಚಾರ‍್ಯರು ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ತಂದೆ ನರಸಿಂಹಸ್ವಾಮಿ ದೇವಾಲಯದಲ್ಲಿ ಕೈಂಕರ್ಯದಲ್ಲಿದ್ದ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು, ತಾಯಿ ಸೀತಮ್ಮನವರು. ಪ್ರಾರಂಭಿಕ ಶಿಕ್ಷಣ ಶ್ರೀರಂಗಪಟ್ಟಣ. ಕಾಲೇಜು ಶಿಕ್ಷಣ ಮೈಸೂರಿನಲ್ಲಿ. ಬಿ.ಎ. ಪದವಿಯ ನಂತರ ಮೈಸೂರು ಸರಕಾರದ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರು, ಗ್ರಂಥಪಾಲಕರಾಗಿ, ಸರಕಾರದ ಕನ್ನಡ ಭಾಷಾಂತರಕಾರರಾಗಿ ವಿವಿದೆಡೆಯಲ್ಲಿ ವಿವಿಧ ಸೇವೆ. ಕನ್ನಡ ಭಾಷಾಭಿವೃದ್ಧಿ ಸಮಿತಿ, ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿಗಳಲ್ಲೂ ಸಕ್ರಿಯವಾಗಿ ಭಾಗಿ. ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರ, ಸ್ವತಂತ್ರ ಕೃತಿಗಳ ರಚನೆ. ಇವರ ಸಾಹಿತ್ಯ ಕೃಷಿಯ ಮುಖಗಳು. ೧೮೯೨ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ. ಪತ್ರಿಕೆ ನಿಂತುಹೋದಾಗ ೧೮೯೯ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭ. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ. ಕರ್ನಾಟಕ ಕಾವ್ಯಮಂಜರಿಯಲ್ಲಿ ಸಹ ಸಂಪಾದಕರಾಗಿ, ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ. ಪ್ರಾಚ್ಯಕೋಶಾಗಾರದ ಮೂಲಕ ಹೊರತಂದ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳು. ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು. ಬಾಲ ಸಾಹಿತ್ಯಕ್ಕೂ ಎಸ್.ಜಿ.ಎನ್.ರ ಕೊಡುಗೆ ಅಪಾರ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ೪ನೇ ಮತ್ತು ೬ನೇ ತರಗತಿಯ ಪಠ್ಯಗಳು, ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳು, ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, ಇಟ್ಟರೆ ಸಗಣಿಯಾದೆ ಜನಪ್ರಿಯ ಪದ್ಯಗಳು. ಸ್ವತಂತ್ರ ರಚನೆ ಮತ್ತು ರಘುವಂಶದ ಅನುವಾದಗಳಾದ-ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್‌ಸ್ಮಿತ್‌ನ ‘ದಿ ಹರ‍್ಮಿಟ್’ ೯ ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು. ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಪ್ರಥಮಾಧ್ಯಕ್ಷರಾಗಿದ್ದ ನರಸಿಂಹಾಚಾರ್ಯರು ೪೫ರ ಹರೆಯದಲ್ಲೇ ಅಕಾಲ ಮೃತ್ಯುವಿಗೀಡಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ತೋನ್ಸೆ ಮಂಗೇಶರಾಯರು – ೧೮೭೭-೨೩.೧೦.೧೯೪೦ ಗೌರೀಶ ಕಾಯ್ಕಿಣಿ – ೧೯೧೩-೧೪.೧೧.೨೦೦೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top