೧೯.೦೧.೧೯೩೫ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಪರಿಣತಿ ಪಡೆದಿರುವ ವಿಶ್ವೇಶ್ವರರಾಜು ರವರು ಹುಟ್ಟಿದ್ದು ಮೈಸೂರು. ತಂದೆ ಸುಬ್ರಹ್ಮಣ್ಯರಾಜು, ತಾಯಿ ಶಾರದಮ್ಮ. ಸಾಮಾನ್ಯ ವಿದ್ಯಾಭ್ಯಾಸ ಮೈಸೂರಿನಲ್ಲಿ. ಕಲೆಯ ಬಗ್ಗೆ ಆಸ್ಥೆಯಿಂದ ಸೇರಿದ್ದು ಚಾಮರಾಜೇಂದ್ರ ಕಲಾಶಾಲೆ. ಐದು ವರ್ಷಗಳ ಸತತ ಅಭ್ಯಾಸ. ತೈಲವರ್ಣ ಮತ್ತು ಫ್ರೀ ಹ್ಯಾಂಡ್ ಕಲೆಯಲ್ಲಿ ಪಡೆದ ಪರಿಣತಿ. ನಂತರ ಉದ್ಯೋಗಕ್ಕೆ ಸೇರಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ವಿಶೇಷ ಕಲಾಕಾರರಾಗಿ. ಕೇಂದ್ರೀಯ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ಚಿತ್ರಕಲೆ ಮತ್ತು ಛಾಯಾಚಿತ್ರಕಾರರಾಗಿ, ಹೈದರಾಬಾದಿನ ತರಬೇತಿ ಕೇಂದ್ರದಲ್ಲಿ, ಬೆಂಗಳೂರಿನ ಐಪಿಐಆರ್ಟಿಐ ನಲ್ಲಿ ಕೆಲಕಾಲ ಉದ್ಯೋಗ. ಇವರ ಚಿತ್ರಗಳು, ಹಲವಾರು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ, ಚೆನ್ನೈನ ಜಾನಪದ ಕಲಾ ಮಹೋತ್ಸವ ಮುಂತಾದೆಡೆಗಳಲ್ಲಿ ಪ್ರದರ್ಶನ. ಪಾಲ್ಗೊಂಡ ಕಲಾ ಶಿಬಿರಗಳು, ಚಿತ್ರಕಲಾ ಪರಿಷತ್ನ ಕಲಾಮಹೋತ್ಸವ ದೆಹಲಿಯ ಸಾಂಪ್ರದಾಯಿಕ ಕಲಾ ಮಹೋತ್ಸವ ಶಿಬಿರ, ಚಿತ್ರಕಲಾ ಪರಿಷತ್ ನಡೆಸಿದ ಕಾರ್ಯಗಾರಗಳು, ವಿಶ್ವ ಕನ್ನಡ ಸಮ್ಮೇಳನದ ಕಲಾ ಶಿಬಿರ, ಲಲಿತ ಕಲಾ ಅಕಾಡಮಿಯಿಂದ ಕಲಾವಿದ ವೆಂಕಟಪ್ಪನವರ ಶತಮಾನೋತ್ಸವ ಶಿಬಿರ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಶಿಬಿರ. ಗುಲಬರ್ಗಾದ ಶರಣ ಬಸವೇಶ್ವರ ಶತಮಾನೋತ್ಸವ ಕಲಾ ಶಿಬಿರ ಮುಂತಾದುವುಗಳಲ್ಲಿ ಪ್ರಮುಖ ಪಾತ್ರ. ಸಂದ ಪ್ರಶಸ್ತಿ ಗೌರವಗಳು ಹಲವಾರು, ಮೈಸೂರಿನ ದಸರಾ ಕಲಾ ಮಹೋತ್ಸವ, ಮುಂಬಯಿ ಸರಕಾರದಿಂದ ಅರ್ಹತಾ ಪ್ರಶಸ್ತಿ, ಸಾಂಪ್ರದಾಯಿಕ ಕಲೆಗಾಗಿ ಮೈಸೂರು ಸರಕಾರದಿಂದ ಸನ್ಮಾನ. ಇವರ ಕಲಾಕೃತಿಗಳಾದ ‘ಗೀತೋಪದೇಶ’ವು ಕರ್ನಾಟಕ ಸರಕಾರದ ವಸ್ತುಸಂಗ್ರಹಾಲಯ, ಉಮಾಮಹೇಶ್ವರ ಕೃತಿಯು ಐ.ಕೆ. ಗುಜ್ರಾಲ್ ದೆಹಲಿ ಇವರ ಸಂಗ್ರಹಾಲಯ ಮುಂತಾದೆಡೆಗಳಲ್ಲಿ ಸ್ಥಾನ ಪಡೆದಿವೆ.
* * *