ಎಸ್. ಶ್ರೀಕಂಠಶಾಸ್ತ್ರಿ

Home/Birthday/ಎಸ್. ಶ್ರೀಕಂಠಶಾಸ್ತ್ರಿ
Loading Events

೫-೧೧-೧೯೦೪ ೭-೫-೧೯೭೪ ಇತಿಹಾಸ ಸಂಶೋಧಕ, ಸಾಹಿತ್ಯಾಸಕ್ತ ಶ್ರೀಕಂಠಶಾಸ್ತ್ರಿಗಳು ಹುಟ್ಟಿದ್ದು ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪ ಎಂಬಲ್ಲಿ. ತಂದೆ ರಾಮಸ್ವಾಮಿ ಶಾಸ್ತ್ರಿಗಳು, ತಾಯಿ ಶೇಷಮ್ಮ. ತಂದೆ ಸರಕಾರಿ ಕೆಲಸ, ಹಲವಾರು ಕಡೆ ವರ್ಗಾವಣೆ. ಪ್ರಾರಂಭಿಕ ಶಿಕ್ಷಣ ನಂಜನಗೂಡು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರುಗಳಲ್ಲಿ. ಕೋಲಾರದಲ್ಲಿ ಎಸ್.ಎಸ್.ಎಲ್.ಸಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೌಢವ್ಯಾಸಂಗ. ಎನ್.ಎಸ್. ಸುಬ್ಬರಾವ್, ಎಂ.ಎಚ್. ಕೃಷ್ಣ, ಜೆ.ಸಿ. ರಾಲೋ ಮುಂತಾದವರ ಗುರುವರ್ಗ. ಎಂ.ಎ. ಪದವಿ ಗಳಿಸುವಾಗಲೇ ಬರೆದ ವಿದ್ವತ್ ಪೂರ್ಣ ಲೇಖನಗಳು. ಲಂಡನ್ನಿನ ಜೆ.ಆರ್.ಎ.ಎಸ್. ಪತ್ರಿಕೆ, ಇಂಡಿಯನ್ ಆಂಟಿಕ್ವರಿ, ಮಾಡರ‍್ನ್ ರಿವ್ಯೂ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ೧೯೨೭-೨೮ರಲ್ಲಿ ವಿದ್ಯಾರ್ಥಿ ವೇತನ ಪಡೆದು ರಚಿಸಿದ ಹಸ್ತಪ್ರತಿ SOURCES OF KARNATAKA HISTORY. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ ಆಗಿ ಸೇರಿ (೧೯೩೦), ೧೯೩೫ರಲ್ಲಿ ಇತಿಹಾಸದ ಅಧ್ಯಾಪಕರೆನ್ನಿಸಿಕೊಂಡರು. ಬಿ.ಎ. (ಆನರ್ಸ್) ವಿದ್ಯಾರ್ಥಿಗಳಿಗೆ ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿಯ ಬೋಧನೆ. ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಐವತ್ತಾರನೆಯ ವಯಸ್ಸಿನಲ್ಲಿ ನಿವೃತ್ತಿ. ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಪಾಲಿ, ಅರ್ಧಮಾಗ ಭಾಷೆಗಳಲ್ಲದೆ ವಿದೇಶಿ ಭಾಷೆಗಳಾದ ಜೀನಿ, ಜಪಾನ್, ಫ್ರೆಂಚ್ ಮುಂತಾದ ಭಾಷೆಗಳಲ್ಲೂ ಗಳಿಸಿದ ಪಾಂಡಿತ್ಯ. ಕನ್ನಡದಲ್ಲಿ ಹಲವಾರು ಗ್ರಂಥಗಳ ರಚನೆ. ಭಾರತೀಯ ಸಂಸ್ಕೃತಿ, ರೋಮನ್ ಚಕ್ರಾಪತ್ಯದ ಚರಿತ್ರೆ, ಪ್ರಪಂಚ ಚರಿತ್ರೆಯ ರೂಪರೇಷೆಗಳು, ಪುರಾತತ್ವ ಶೋಧನೆ, ಹೊಯ್ಸಳ ವಾಸ್ತುಶಿಲ್ಪ, ಇವು ಕನ್ನಡದಲ್ಲಿ ಬರೆದಿರುವ ಗಣ್ಯಗ್ರಂಥಗಳು. ಅರ್ಲಿ ಗಂಗಾಸ್ ಆಫ್ ತಲಕಾಡ್, ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ ಮುಂತಾದ ಇಂಗ್ಲಿಷ್ ಗ್ರಂಥಗಳು. ಕರ್ನಾಟಕದ ಚರಿತ್ರೆಯನ್ನು ಹನ್ನೆರಡು ಸಂಪುಟಗಳಲ್ಲಿ ಪ್ರಕಟಿಸುವ ಹಂಬಲ ಪಟ್ಟಿದ್ದರು. ಮೈಸೂರಿನಲ್ಲಿ ೧೯೩೫ರಲ್ಲಿ ನಡೆದ ಪ್ರಾಚ್ಯ ಸಮ್ಮೇಳನದಲ್ಲಿ ಶಂಕರ ಭಗವತ್ಪಾದರ ಕಾಲ ನಿರ್ಣಯದ ಬಗ್ಗೆ ಪ್ರಬಂಧ ಮಂಡನೆ, ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾಗೋಷ್ಠಿಯ ಅಧ್ಯಕ್ಷತೆ, ೧೯೭೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ. ಮೈಸೂರಿನಲ್ಲಿ ‘ಶ್ರೀಕಂಠಿಕಾ’ ಎಂಬ ಅಭಿನಂದನ ಗ್ರಂಥ ಸಮರ್ಪಣೆ. ೧೯೭೫ರಲ್ಲಿ ಮೈಸೂರು ವಿ.ವಿ.ದಿಂದ ‘ಸಂಶೋಧನಾ ಲೇಖನಗಳು’ ಪ್ರಕಟಿತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ. ಸೂರ‍್ಯನಾರಾಯಣ ಅಡಿಗ – ೧೯೧೪ ರಾಮಚಂದ್ರಭಟ್ಟ ಹಾಸಣಗಿ – ೧೯೨೦ ವೀ. ಚಿಕ್ಕವೀರಯ್ಯ – ೧೯೩೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top