Loading Events

« All Events

  • This event has passed.

ಎ.ಎಸ್. ಮೂರ್ತಿ

August 16, 2023

೧೬-೮-೧೯೨೯ ‘ಆಕಾಶವಾಣಿ ಈರಣ್ಣ’ನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿರುವ ಎ.ಎಸ್. ಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಕ್ಯಾಲಿಕೊ ಮಿಲ್ಸ್‌ನಲ್ಲಿ ಕೆಲಕಾಲ ಉದ್ಯೋಗ. ಆದರೆ ಕಲೆ, ಸಾಹಿತ್ಯ, ನಾಟಕ ತಂದೆಯಿಂದ ಬಂದ ಬಳುವಳಿಯಾಗಿ ಆಯ್ದುಕೊಂಡ ಕ್ಷೇತ್ರ ನಾಟಕರಂಗ. ನಂತರ ಸೇರಿದ್ದು ಆಕಾಶವಾಣಿ. ಆಕಾಶವಾಣಿಯಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ನಡೆಸಿದ ಹಲವಾರು ಕಾರ‍್ಯಕ್ರಮಗಳು. ವೆಂಕಣ್ಣನ ಸಾಹಸಗಳು, ಮನೆಮಾತು ಹೆಸರು ತಂದುಕೊಟ್ಟ ಕಾರ‍್ಯಕ್ರಮಗಳು. ಇವರ ‘ಒಂದು ಮಾತು’ವಿನ ಈರಣ್ಣನಾಗಿ ಪಡೆದ ಜನಪ್ರಿಯತೆ. ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತಿದ್ದು, ಜನಪದ ಕಾಳಜಿಯ ಈ ಕಾರ‍್ಯಕ್ರಮಕ್ಕೆ ನಾಡಿನಾದ್ಯಂತ ಸಂದ ಪ್ರತಿಸ್ಪಂದನ. ಚಿತ್ರನಾಟಕ ತಂಡ ಕಟ್ಟಿ ಹಲವಾರು ನಾಟಕಗಳ ಪ್ರಯೋಗ. ತಿ.ತಾ.ಶರ್ಮ, ವೈಎನ್ಕೆ, ಶ್ರೀರಂಗ, ಲಂಕೇಶ್, ದಾರರಥಿ ದೀಕ್ಷಿತ್ ಮುಂತಾದವರೆಲ್ಲರ ನಾಟಕಗಳಿಗೂ ಕೊಟ್ಟ ರಂಗರೂಪ. ೧೯೬೪ರಲ್ಲಿ ಪ್ರಾರಂಭಿಸಿದ ಅಭಿನಯತರಂಗದಿಂದ ಸಾಹಿತ್ಯ, ಸಂಸ್ಕೃತಿ ಅಧ್ಯಯನ, ರಂಗಶಾಲೆ ಪ್ರಾರಂಭ. ಈ ಸಂಸ್ಥೆಯಿಂದ ನಾಟಕರಂಗ, ಟಿ.ವಿ.ಗೆ ಹಲವಾರು ಕಲಾವಿದರ ಕೊಡುಗೆ. ನಂತರ ಪ್ರಾರಂಭಿಸಿದ್ದು ಬಿಂಬ ಸಂಸ್ಥೆ. ಹನುಮಂತನಗರ ಮತ್ತು ವಿಜಯನಗರದಲ್ಲಿ ಮಕ್ಕಳಿಗಾಗಿ ರೂಪಿಸಿದ ರಂಗಭೂಮಿ. ಅಭಿನಯ ತರಂಗದಿಂದ ಭಾನುವಾರದ ರಂಗಶಾಲೆಯ ಪ್ರಾಂಶುಪಾಲರಾಗಿ ಅಶೋಕಬಾದರದಿನ್ನಿ, ಬಿ. ಚಂದ್ರಶೇಖರ್, ಎಚ್.ಜಿ. ಸೋಮಶೇಖರ್‌ರಾವ್, ಗೌರಿದತ್ತು ಮುಂತಾದವರ ಸೇವೆ. ನಾಟಕಗಳನ್ನು ಜನರೆಡೆಗೆ ಕೊಂಡೊಯ್ಯಲು ಕಟ್ಟಿದ ಬೀದಿನಾಟಕ ‘ಗೆಳೆಯರ ಗುಂಪು’ ರಾಜಾಜಿನಗರದ ರಾಮಮಂದಿರದ ಬಳಿ ಪ್ರದರ್ಶಿಸಿದ ಮೊದಲ ನಾಟಕ ‘ಕಟ್ಟು’. ನಂತರ ಹಲವಾರು ನಾಟಕಗಳ ಪ್ರದರ್ಶನ. ಪಪೆಟ್‌ಲ್ಯಾಂಡ್, ಲೇಖಕಿಯರ ಸಂಘ ಸ್ಥಾಪನೆ. ರಚಿಸಿದ ನಾಟಕಗಳು-ಅಧ್ಯಕ್ಷತೆ, ಕುಡ್ಕ, ಹುಚ್ಚ, ನಿರೀಕ್ಷೆ, ಶುದ್ಧಶುಂಠಿ, ಲೇಡೀಸ್ ಓನ್ಲಿ, ಡನ್‌ಲಪ್‌ಗರ್ಲ್, ಚೈನಾದೋಸ್ತಿ, ಜನ್ಮಾಂತ್ರೀಯ ಮುಂತಾದ ೮೦ ನಾಟಕಗಳು. ಮಕ್ಕಳ ನಾಟಕಗಳು-ಮಲೆಯ ಮಕ್ಕಳು, ಸೋಲದ ಸೋಲಿಗರು, ಜಂಬೂಸವಾರಿ ಮುಂತಾದ ೧೭ ನಾಟಕಗಳು. ಬೊಂಬೆನಾಟಕ-ಸಂಗೀತ ಸಂಸ್ಕಾರ, ಟ್ವಿಂಕಲ್ ಟ್ವಿಂಕಲ್ ಮೊದಲಾದುವು. ಬೀದಿನಾಟಕಗಳು-ಕಟ್ಟು, ನಿಜವ ಹೇಳಬಲ್ಲಿರಾ, ಬಸ್‌ಸ್ಟಾಪ್, ಕುರ್ಚಿ ಮೊದಲಾದ ೨೭ ನಾಟಕಗಳಲ್ಲದೆ ಕವಿತೆಗಳಿಗೆ ರಂಗರೂಪ, ರೇಡಿಯೋ ನಾಟಕಗಳು, ಚಲನಚಿತ್ರಗಳಿಗೆ ಬರೆದ ಸಂಭಾಷಣೆ, ನಟನೆ. ಟಿ.ವಿ. ಧಾರಾವಾಹಿಯಲ್ಲೂ ನಟನೆ. ಸಂದ ಪ್ರಶಸ್ತಿಗಳು-ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಮೈ.ಸು.ಶೇಷಗಿರಿರಾವ್ – ೧೯೩೧ ವೆಂಕಟಪ್ಪ. ಬಿ – ೧೯೪೧

Details

Date:
August 16, 2023
Event Category: