ಎ.ಕೆ. ರಾಮಾನುಜನ್

Home/Birthday/ಎ.ಕೆ. ರಾಮಾನುಜನ್
Loading Events
This event has passed.

೧೬.೩.೧೯೨೯ ೧೩.೭.೧೯೯೩ ಪ್ರಸಿದ್ಧ ಭಾಷಾ ವಿಜ್ಞಾನಿ, ಜಾನಪದ ತಜ್ಞ, ಕವಿ, ಕಥೆಗಾರರಾದ ಶ್ರೀ ರಾಮಾನುಜನ್‌ರವರು ಹುಟ್ಟಿದ್ದು ಮೈಸೂರಿನಲ್ಲಿ . ಇವರ ಪೂರ್ಣ ಹೆಸರು ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್, ತಾಯಿ ಶೇಷಮ್ಮ. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯವರೆವಿಗೂ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ೧೯೫೯ರಲ್ಲಿ ಸ್ಮಿತ್‌ಮಂಟ್ ವಿದ್ಯಾರ್ಥಿ ವ್ಯಾಸಂಗ ವೇತನ, ಫುಲ್ ಬ್ರೈಟ್ ಪ್ರವಾಸ ವೇತನದಿಂದ ಅಮೆರಿಕದ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಉನ್ನತ ಶಿಕ್ಷಣ. ಇವರ ಪ್ರಥಮ ಕೃತಿ ‘ಗಾದೆಗಳು’ (೧೯೫೫) ಬಹು ಮೆಚ್ಚುಗೆ ಪಡೆದ ಕೃತಿ. ಗಾದೆಯ ರೂಪ ರಚನೆ, ಗಾದೆಗಳ ವಿಶ್ಲೇಷಣೆ ನಡೆಯದ ಸಮಯದಲ್ಲಿ ಪ್ರಕಟಗೊಂಡು ಅತಿ ಮಹತ್ವ ಪಡೆದ ಕೃತಿ. ಗಾದೆಗಳ ಕುರಿತಾದ ಅಧ್ಯಯನಕ್ಕೆ ಉತ್ತಮ ಕೈಪಿಡಿ. ದ್ರಾವಿಡ ಸಂಸ್ಕೃತಿಯನ್ನು ಪಾಶ್ಚಾತ್ಯರಿಗೆ ಪರಿಚಯಿಸಿದವರಲ್ಲಿ ಮೊದಲಿಗರು. ಹನ್ನೆರಡನೆಯ ಶತಮಾನದ ಪ್ರಮುಖ ವಚನ ಕಾರಣರಾದ ದೇವರ ದಾಸೀಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರ ಆಯ್ದ ವಚನಗಳ ಭಾಷಾಂತರ-ದಿ ಸ್ಪೀಕಿಂಗ್ ಆಫ್ ಶಿವ. ತಮಿಳಿನ ಜನಪದ ಪ್ರಣಯ ಗೀತೆಗಳ ಅನುವಾದ-ಪೊಯಮ್ಸ್ ಆಫ್ ಲವ್ ಅಂಡ್ ವಾರ್ ಕೃತಿ.  ಭಾರತದ ಜನಪದ ಕಥೆಗಳ ಭಾಷಾಂತರ-ಫೋಕ್ ಟೇಲ್ಸ್ ಫ್ರಮ್ ಇಂಡಿಯಾ. ಸಾಂಗ್ ಆಫ್ ಅರ್ಥ್ ಅಂಡ್ ಅದರ್ ಪೊಯಮ್ಸ್-ಎಂ.ಜಿ. ಕೃಷ್ಣಮೂರ್ತಿಯವರೊಡನೆ ಗೋಪಾಲಕೃಷ್ಣ ಅಡಿಗರ ಕವನಗಳ ಭಾಷಾಂತರ-ಇವು ಪ್ರಮುಖವಾದುವುಗಳು. ಹೊಕ್ಕಳಲ್ಲಿ ಹೂವಿಲ್ಲ ಮತ್ತು ಇತರ ಪದ್ಯಗಳು, ಕುಂಟೋಬಿಲ್ಲೆ, ಇವರ ಪ್ರಮುಖ ಕವನ ಸಂಕಲನಗಳು. ಮತ್ತೊಬ್ಬನ ಆತ್ಮಚರಿತ್ರೆ-ಸ್ವತಂತ್ರ ಕಾದಂಬರಿ. ಸಂದ ಪ್ರಶಸ್ತಿಗಳು-ಅಮೆರಿಕದ ಮೆಕಾರ್ಥರ್ ಫೌಂಡೇಶನ್ನಿನಿಂದ ಜೀನಿಯಸ್ ಅವಾರ್ಡ್, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದವು. ರಾಮಾನುಜರ ನೆನಪಿನ ಸಂಪುಟ ೧೯೯೩ರಲ್ಲಿ ಪ್ರಕಟಗೊಂಡಿದೆ. ೧೯೯೩ರ ಜುಲೈ ೧೩ರಂದು ಅಮೆರಿಕದಲ್ಲಿ ನಿಧನರಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಸುಶೀಲಾ ಕೊಪ್ಪರ್ -೧೯೨೪ ಕುಮುದ – ೧೯೩೫ ವಿಶ್ವನಾಥ ಕಾರ್ನಾಡ್ – ೧೯೪೦ ಎಸ್.ಜಿ. ಸ್ವಾಮಿ – ೧೯೬೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top