ಎ. ಪಂಕಜ

Home/Birthday/ಎ. ಪಂಕಜ
Loading Events
This event has passed.

೨೦..೧೯೩೨ ಸಮಾಜಸೇವಕಿ, ಲೇಖಕಿ, ಉತ್ತಮ ಗೃಹಿಣಿ ಎನಿಸಿದ ಪಂಕಜರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ೧೯೩೨ ರ ಏಪ್ರಿಲ್‌ ೨೦ ರಂದು. ತಂದೆ ಶ್ರೀನಿವಾಸಾಚಾರ್, ತಾಯಿ ವಕುಳಮ್ಮ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಇವರ ಮೇಲೂ ಬೀರಿದ ಪ್ರಭಾವ. ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದವರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ. ಇವರು ಹುಟ್ಟಿದ ಸಂದರ್ಭದಲ್ಲಿ ದೇಶದ ತುಂಬೆಲ್ಲ ದೇಶ ಪ್ರೇಮ, ಸ್ವಾತಂತ್ಯ್ರ, ತ್ಯಾಗ, ದೇಶಭಕ್ತಿ ಇವುಗಳಿಂದ ತುಂಬಿ ಹೋಗಿದ್ದ ಕಾಲ. ಇದರಿಂದ ಪ್ರೇರಿತರಾಗಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಹಲವಾರು ಪದ್ಯಗಳನ್ನು ಬರೆದರು. ೧೯೪೮ ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಮನನೊಂದು ಹತ್ತು ದಿನವೂ ಹತ್ತು ಪದ್ಯಗಳನ್ನು ಬರೆದರಂತೆ. ಈ ಸಂದರ್ಭದಲ್ಲಿ ಬರೆದ ಮೊದಲ ಕವನ ‘ಜ್ಯೋತಿ ನಂದಿತು’. ಹಿಂದಿ ಪರೀಕ್ಷೆಯಲ್ಲಿ ವಿದ್ವಾನ್‌ ಪದವಿ ಪಡೆದನಂತರ ಹಿಂದಿ ಭಾಷೆಯಲ್ಲೇ ಬರೆಯಲು ತೊಡಗಿದರು. ಹಲವಾರು ಹಿಂದಿ ನಾಟಕಗಳು ಆಕಾಶವಾಣಿಯಿಂದ ಪ್ರಸಾರಗೊಂಡವು. ಇಂಗ್ಲಿಷ್‌, ಹಿಂದಿ, ತೆಲುಗು ಭಾಷೆಯಿಂದ ಹಲವಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧಕವೃತ್ತಿ. ಬೆಂಗಳೂರು ಎಜುಕೇಷನ್‌ ಸೊಸೈಟಿ, ಸೋಫಿಯಾ ಹೈಸ್ಕೂಲುಗಳಲ್ಲಿ ಕೆಲಕಾಲ ಉಪಾಧ್ಯಾಯಿನಿಯಾಗಿ. ನಂತರ ಲ್ಯಾಂಡ್‌ ಮಾರ್ಟ್‌ಗೇಜ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿಯೂ ದುಡಿದರು. ಕಾದಂಬರಿಕಾರರಾದ ನಿರಂಜನ ಮತ್ತು ನಾಟಕಕಾರರಾದ ಪರ್ವತವಾಣಿಯವರು ಇವರ ಬರವಣಿಗೆಗೆ ಬಹಳ ಪ್ರೋತ್ಸಾಹಿಸಿದರು. ಇವರ ಮೊದಲ ಕಾದಂಬರಿ ‘ನಾದಭಂಗ’. ನಂತರ ಸಾಮಾಜಿಕ, ಪೌರಾಣಿಕ, ಪತ್ತೇದಾರಿಯೂ ಸೇರಿದಂತೆ ಹಲವಾರು ಕಾದಂಬರಿಗಳನ್ನು ಬರೆದರು. ಸಾಮಾಜಿಕ ಕಾದಂಬರಿಗಳಲ್ಲಿ ವಿಜಯಗೀತ, ಸೊಗಸುಗಾತಿ, ಬಂಗಾರದ ಬಲೆ, ಕಾಗದದ ದೋಣಿ,  ಸುಖಸ್ವಪ್ನ ಮುಂತಾದವುಗಳು. ಇವುಗಳಲ್ಲಿ ‘ಬಲಿಪಶು’ ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ, ‘ಮಧು’ಕಾದಂಬರಿಯು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ, ‘ನಾಗರ ನೆರಳು’ ಕಾದಂಬರಿಯು ಸಹಕಾರ ಪತ್ರಿಕೆಯಲ್ಲೂ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇದಲ್ಲದೆ ಜಾಲೀಮುಳ್ಳು, ನೀಲಿಡೈರಿ, ನೀನಾ ಮುಂತಾದ ಪತ್ತೇದಾರಿ ಕಾದಂಬರಿಗಳು, ಊರ್ಮಿಳೆ-ನಾಟಕ ಮುಂತಾದ ೫೦ ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಇವರು ಇತರ ಕೃತಿಗಳೆಂದರೆ ಮಹಾಭಾರತ (ಸಂಕ್ಷಿಪ್ತ ವ್ಯಾಸಭಾರತ), ಪುರುಷೋತ್ತಮ (ಸಂಕ್ಷಿಪ್ತ ರಾಮಾಯಣ), ಫಲ್ಗುಣಸಖ (ಶ್ರೀಕೃಷ್ಣಚರಿತೆ) ಮುಂತಾದ ಪೌರಾಣಿಕ ಕೃತಿಗಳನ್ನೂ ರಚಿಸಿದ್ದಾರೆ. ಸನಾತನಧರ್ಮ, ಸಂಪ್ರದಾಯಗಳಲ್ಲಿ ನಂಬಿಕೆ, ದೇವರಲ್ಲಿ ಭಕ್ತಿ, ಆಚರಣೆಗಳಿರುವುದರಿಂದಲೇ ‘ನಂದಾದೀಪ’, ಭಗವದ್ಗೀತೆಯಿಂದ’ ಗೀತೆಯ ಅಣಿಮುತ್ತುಗಳು’ ಮುಂತಾದವುಗಳನ್ನೂ ಮಕ್ಕಳಿಗಾಗಿಯೇ ಬರೆದಿದ್ದರೆ, ಕೊಲ್ಲೂರು ಮೂಕಾಂಬಿಕೆಯ ಪೌರಾಣಿಕ ಕಥೆ ‘ದೇವಿ ಮೂಕಾಂಬಿಕ’, ಆಳ್ವಾರರ ಚರಿತ್ರೆಯನ್ನು ನಿರೂಪಿಸಿರುವ ‘ಭಕ್ತಿ ಸಾಮ್ರಾಜ್ಯ’ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ರಾಜಾಜಿಯವರ ಇಂಗ್ಲಿಷ್‌ ಪುಸ್ತಕದಿಂದ ‘ಮುಗ್ಧರಿಗಾಗಿ ಕಥೆಗಳು’, ತೆಲುಗಿನಿಂದ ‘ಕಾಲಜ್ಞಾನ’ ಮುಂತಾದವುಗಳನ್ನು ಅನುವಾದಿಸಿದ್ದಾರೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಮಹಿಳೆಯರ ಸಬಲೀಕರಣಕ್ಕಾಗಿ ದುಡಿದ ಕ್ಷೇತ್ರವೆಂದರೆ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗಾಗಿಯೇ ಸ್ಥಾಪಿಸಿದ ಬ್ಯಾಂಕ್‌. ಆರ್ಥಿಕವಾಗಿ ಹಿಂದುಳಿದಿರುವ, ದುರ್ಬಲ ವರ್ಗದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಉನ್ನತಿಗಾಗಿ ಬ್ಯಾಂಕೊಂದರ ಅವಶ್ಯಕತೆಯನ್ನೂ ಮನಗಂಡು, ಸ್ಥಾಪಿಸಿದ್ದು ‘ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್‌’. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲೊಂದಾದ ಮಲ್ಲೇಶ್ವರಂನಲ್ಲಿ ೧೯೭೯ ರ ಮೇ ೧೩ ರಂದು ಮಹಿಳಾ ಬ್ಯಾಂಕ್‌ನ್ನು ಪ್ರಾರಂಭಿಸಿದರು. ಶೇ. ೮೦ ರಷ್ಟು ಷೇರುದಾರರು ಮಹಿಳೆಯರೇ ಆಗಿದ್ದು ಇದರ ಹಿಂದೆ ಪುರುಷರ ಸಹಕಾರವೂ ಇದೆ. ಹೊಲಿಗೆ ಯಂತ್ರ, ಕುಕ್ಕರ್, ಮಕ್ಕಳ ಫೀ, ಮನೆ ರಿಪೇರಿ, ಊದುಬತ್ತಿ ಗೃಹ ಕೈಗಾರಿಕೆ ಮುಂತಾದವುಗಳಿಗೆ ಸಾಲ ಪಡೆದು ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ. ಇದೀಗ ಬ್ಯಾಂಕ್‌ ಒಂಬತ್ತು ಶಾಖೆಗಳನ್ನೂ ಹೊಂದಿದ್ದು, ೧೫೦೦೦ ಸದಸ್ಯರನ್ನು ಹೊಂದಿದ್ದು ೧೮೦ ಕೋಟಿಗೂ ಮಿಕ್ಕೂ ಹಣದ ವ್ಯವಹಾರ ನಡೆಸುತ್ತಿದೆ. ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಕುವೆಂಪು ಅಧ್ಯಯನ ಕೇಂದ್ರ, ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆ, ವೈಯಾಲಿ ಕಾವಲ್‌ ಹೌಸ್‌ ಬಿಲ್ಡಿಂಗ್‌ ಸೊಸೈಟಿ, ಆದರ್ಶ ಭಾರತೀಯ ಸಾಂಸ್ಕೃತಿಕ ಸಂಸ್ಥೆ ಮುಂತಾದವುಗಳ ಸದಸ್ಯರಾಗಿ, ನಿರ್ದೇಶಕರಾಗಿ, ಟ್ರಸ್ಟಿಗಳಾಗಿ ದುಡಿದಿದ್ದಾರೆ. ಸಾಹಿತ್ಯ ಹಾಗೂ ಸಹಕಾರ ಕ್ಷೇತ್ರಗಳಲ್ಲಿನ ಇವರ ಸೇವೆಯನ್ನು ಪರಿಗಣಿಸಿದ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಅನೇಕ ಶಾಲಾ ಕಾಲೇಜುಗಳು, ಲಯನ್ಸ್‌ ಕ್ಲಬ್‌, ಆದರ್ಶ ಭಾರತೀಯ ಸಾಂಸ್ಕೃತಿಕ ಸಂಸತ್‌, ರಾಜ್ಯ ಕೋ ಆಪರೇಟಿವ್‌ ಸಂಸ್ಥೆಗಳು ಸಹಕಾರಿ ಸೇವೆಗಾಗಿ ಗೌರವಿಸಿದ್ದರೆ ಸಾಹಿತ್ಯ ಸೇವೆಗಾಗಿ ಬಿ. ಸರೋಜ ದೇವಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಭಾರತ ಸರಕಾರದ ಭಾಷಾ ಪ್ರಶಸ್ತಿಗಳಲ್ಲದೆ ಬೆಂಗಳೂರು ನಗರ ಜಿಲ್ಲಾ ಮತ್ತು ಪಾವಗಡ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವ, ಪುರಸ್ಕಾರಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top