೨-೨-೧೮೬೯ ೪-೪-೧೯೨೬ ವೃತ್ತಿ ರಂಗಭೂಮಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೆರುಗು, ರಂಗಪ್ರದರ್ಶನದ ವೈಭವ, ಪಾತ್ರಗಳಿಗೆ ವೇಷಭೂಷಣಗಳ ಸಹಜತೆಯನ್ನು ತಂದುಕೊಟ್ಟ ವರದಾಚಾರ್ಯರು ಹುಟ್ಟಿದ್ದು ಬೆಂಗಳೂರು. ತಂದೆ ಅನುಮನಪಲ್ಲಿ ರಂಗಸ್ವಾಮಿ ಅಯ್ಯಂಗಾರ್ಯರು. ಎಳೆವೆಯಿಂದಲೇ ಸಂಗೀತ ಹಾಗೂ ಅಭಿನಯ ಕಲೆಯಲ್ಲಿ ವಿಶೇಷ ಆಸಕ್ತಿ. ಸೆಂಟ್ರಲ್ ಕಾಲೇಜಿನಿಂದ ಎಫ್.ಎ. ಪಾಸಾದ ನಂತರ ತಮ್ಮ ದೇಹದಾರ್ಢ್ಯ ಹಾಗೂ ಸುಮಧುರ ಕಂಠದಿಂದ ಕಲಾವಿಲಾಸಿಗಳ ಗಮನ ಸೆಳೆದರು. ೧೮೯೨ರಲ್ಲಿ ಗೌರಿನರಸಿಂಹಯ್ಯನವರ ‘ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಸಭಾ ಮಂಡಲಿ’ಯನ್ನು ಸೇರಿ ವಹಿಸಿದ ನಾಯಕನ ಪಾತ್ರ. ಮಂಡಲಿ ನಿಂತುಹೋದ್ದರಿಂದ ಬೆಂಗಳೂರಿಗೆ ಬಂದು ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಹಿಡಿದ ನೌಕರಿ. ರಂಗದ ಗೀಳುಹತ್ತಿ ರಾಜೀನಾಮೆ ನೀಡಿ ಸೇರಿದ್ದು ಬೆಂಗಳೂರಿನ ‘ಯೂನಿಯನ್ ಕ್ಲಬ್’. ಪ್ಲೇಗ್ನಿಂದ ಹೆಂಡತಿ, ಮಗ ತೀರಿಕೊಂಡು ಪುನಃ ಮೈಸೂರಿಗೆ. ‘ರತ್ನಾವಳಿ ನಾಟಕ ಸಭಾ’ದ ಮೇಲ್ವಿಚಾರಣೆ. ೧೯೦೨ರಲ್ಲಿ ಸ್ವಂತಕ್ಕೆ ತೆಗೆದುಕೊಂಡು, ‘ರತ್ನಾವಳೀ ಥಿಯೆಟ್ರಿಕಲ್ ಕಂಪನಿ’ ಎಂಬ ಹೆಸರಿನಿಂದ ಪುನರಾರಂಭ. ಇಪತ್ತು ವರ್ಷ ಕಾಲ ಕಂಪನಿ ನಡೆಸಿದ ನಂತರ ಪಡೆದ ‘ವೃತ್ತಿ ರಂಗಭೂಮಿ ಸಾಮ್ರಾಟ’ ಪದವಿ. ನಾಯಕ ನಟನಾಗಷ್ಟೇ ಅಲ್ಲದೆ ಗಾಯಕರಾಗಿಯೂ ಪಡೆದ ಪ್ರಸಿದ್ಧಿ. ಶಾಕುಂತಲ, ರತ್ನಾವಳಿ, ಮನ್ಮಥ ವಿಜಯ, ಹರಿಶ್ಚಂದ್ರ, ಮಂದಾರವಲ್ಲೀ ಪರಿಣಯ, ಮಾಲವಿಕಾಗ್ನಿ ಮಿತ್ರ, ರಾಮವರ್ಮ-ಲೀಲಾವತಿ, ಸದಾರಮೆ, ಭಕ್ತ ಪ್ರಹ್ಲಾದ ನಾಟಕಗಳು ಮತ್ತು ತಾವೇ ಬರೆದ ಇಂದಿರಾನಂದ ವಿಮಲಾವಿಜಯ ನಾಟಕಗಳಲ್ಲಿ ನಿರ್ವಹಿಸಿದ ನಾಯಕನ ಪಾತ್ರಗಳು. ಇವರು ನಿರ್ವಹಿಸಿದ. ದುಷ್ಯಂತ, ಹಿರಣ್ಯಕಶಿಪು, ವಸಂತ, ರಾಮವರ್ಮ ಮುಂತಾದ ಪಾತ್ರಗಳನ್ನು ಅಂದಿನ ಜನತೆಗೆ ಮರೆಯಲಾಗದ ಅನುಭವ. ರಂಗಭೂಮಿ ಸೇವೆಗಾಗಿ ಮೈಸೂರಿನ ಜನತೆ ೧೯೧೩ರಲ್ಲಿ ‘ಗಿಫ್ಟೆಡ್ ಆಕ್ಟರ್’ (ವರನಟ) ಪ್ರಶಸ್ತಿ, ಉಡುಪಿ ಮಠಾಧೀಶರಿಂದ ನಾಟ್ಯ ಕಲಾಚತುರ, ೧೯೧೮ರಲ್ಲಿ ತಿರುಚಿರಾಪಳ್ಳಿಯ ಜನತೆ ಆನಿಬೆಸೆಂಟರ ನೇತೃತ್ವದಲ್ಲಿ ನೀಡಿದ ‘ನಾಟಕ ಶಿರೋಮಣಿ’ ಪ್ರಶಸ್ತಿ ಮುಂತಾದುವು. ಕೊಡುಗೈ ದೊರೆ, ಧಾರಾಳ ಸ್ವಭಾವದ ದಾನಿ ಎಂದೇ ಹೆಸರಾಗಿದ್ದ ವರದಾಚಾರ್ಯರ ಹೆಸರಿನಲ್ಲಿ ಬೆಂಗಳೂರಿನಲ್ಲೊಂದು ರಂಗಮಂದಿರ ಸ್ಥಾಪನೆಮಾಡಿ ನಾಡಿನ ಜನತೆ ತೋರಿದ ಗೌರವ. ಇದೇ ದಿನ ಹುಟ್ಟಿದ ಕಲಾವಿದರು : ಪಂಚಾಕ್ಷರಿ ಗವಾಯಿ – ೧೮೯೬ ಶುದ್ಧೋದನ ಎಂ.ಜೆ. – ೧೯೧೪ ಸುಂದರ ರಾಜ್ – ೧೯೫೧ ಹಿರೇಮಠ ವಿ.ವಿ. – ೧೯೬೩ ಅನುಪಮ ಜಯಸಿಂಹ – ೧೯೭೮
* * *