
ಎ. ಶ್ರೀಶದೇವ ಪೂಜಿತ್ತಾಯ
December 11
೧೧.೧೨.೧೯೪೪ ಕನ್ನಡ, ಸಂಸ್ಕೃತಿ, ಇಂಗ್ಲಿಷ್, ಹಿಂದಿ ಈ ನಾಲ್ಕು ಭಾಷೆಗಳಲ್ಲೂ ಸ್ನಾತಕೋತ್ತರ ಪದವಿ ಗಳಿಸಿರುವ ಶ್ರೀಶದೇವರು ಹುಟ್ಟಿದ್ದು ಕಾಸರಗೋಡಿನ ಬೇತೂರು ಗ್ರಾಮದಲ್ಲಿ. ತಂದೆ ಶ್ರೀನಿವಾಸ ದೇವ ಪೂಜಿತ್ತಾಯ, ತಾಯಿ ಸುಶೀಲ. ಪ್ರಾರಂಭಿಕ ಶಿಕ್ಷಣ ಪುತ್ತೂರು, ಕಾಸರಗೋಡು ಮತ್ತು ಕಲ್ಲಿಕೋಟೆಗಳಲ್ಲಿ. ನಂತರ ಕೇರಳ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ, ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಸಂಸ್ಕೃತ) ಪದವಿ ಮತ್ತು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ರಾಷ್ಟ್ರಭಾಷಾವಿಶಾರದ. ಉದ್ಯೋಗಕ್ಕೆ ಸೇರಿದ್ದು ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ. ನಂತರ ಅಧೇ ವಿಭಾಗದ ಮುಖ್ಯಸ್ಥರಾಗಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರು. ಬರವಣಿಗೆಯನ್ನು ಕಾಲೇಜು ದಿನಗಳಿಂದಲೇ ರೂಢಿಸಿಕೊಂಡಿದ್ದ ಶ್ರೀಶದೇವರ ಕವನಗಳು ಉದಯವಾಣಿ, ತುಷಾರ, ಮಲ್ಲಿಗೆ, ನವಭಾರತ, ತಾಯಿನಾಡು, ಹೊಸ ದಿಗಂತ, ಸುಗುಣ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಹಲವಾರು ಕವನಗಳು ನಿಯಮಿತವಾಗಿ ಆಕಾಶವಾಣಿಯಿಂದಲೂ ಪ್ರಸಾರಗೊಂಡಿವೆ. ಆಕಾಶವಾಣಿಯ ಕವಿಗೋಷ್ಠಿಗಳಲ್ಲಿಯೂ ಭಾಗಿಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ನವ್ಯ ಸಾಹಿತ್ಯ ಸಂಘ, ಕಾಸರಗೋಡು ಜಿಲ್ಲಾ ಲೇಖಕರ ಸಂಘ ಮುಂತಾದ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಕವಿಗೋಷ್ಠಿಗಳನ್ನೇರ್ಪಡಿಸಿ ಉದಯೋನ್ಮುಖ ಕವಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ. ಹಲವಾರು ಕವನ ಸಂಕಲನಗಳು ಪ್ರಕಟಿತ. ಕಾಸರಗೋಡು ಕವಿತೆಗಳು (೧೯೭೮), ಇದು ವರ್ತಮಾನ (೧೯೭೯), ತಪ್ಪೇನು? (೧೯೮೭), ಕವಿಗೋಷ್ಠಿ (೧೯೯೪) ಬಂಜರು ಭೂಮಿ (೧೯೯೬), ಮುಂತಾದ ಮೌಲ್ಯಯುತ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಇವರ ‘ತಪ್ಪೇನು’ ಕಾವ್ಯಕೃತಿಗೆ ೧೯೮೬ ರಲ್ಲಿ ಕಾಂತಾವರ ಕನ್ನಡ ಸಂಘದಿಂದ ಕೊಡಮಾಡುವ ‘ಮುದ್ದಣ ಕಾವ್ಯ ಪ್ರಶಸ್ತಿ’ ದೊರೆತಿದೆ.