Loading Events

« All Events

  • This event has passed.

ಏರ್ಯ ಚಂದ್ರಭಾಗಿ ಕೆ.ರೈ

October 29, 2023

೨೯.೧೦.೧೯೧೬ ೧೨..೨೦೦೧ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಸ್ತ್ರೀವಾದದ ಪರಿಕಲ್ಪನೆಯೇ ಇರದಿದ್ದ ಕಾಲದಲ್ಲಿ ಮಹಿಳೆಯೂ ಪುರುಷರಿಗೆ ಸರಿಸಮಾನಗಳು ಎಂಬ ವಾದವನ್ನು ತಮ್ಮ ಕತೆ, ಕವನ, ಲೇಖನಗಳಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದ ಚಂದ್ರಭಾಗಿ ರೈರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ‘ತುಂಬೆ’ ಎಂಬ ಹಳ್ಳಿಯಲ್ಲಿ ೧೯೧೬ ರ ಅಕ್ಟೋಬರ್ ೨೯ ರಂದು. ತಂದೆ ಸುಬ್ಬಯಾಳ್ವ, ತಾಯಿ ತಂಗಮ್ಮ. ಶಾಲೆಗೆ ಸೇರಿದ್ದು ಕೊಯಿಲಾ ಎಂಬಲ್ಲಿ. ಓದಿದ್ದು ಏಳನೆಯ ತರಗತಿಯವರೆಗೆ. ತಂದೆಯವರು ಭಾರತ, ರಾಮಾಯಣ, ಭಾಗವತಾದಿ ಮಹಾ ಕಾವ್ಯಗಳನ್ನು ರಾಗವಾಗಿ ಹಾಡುತ್ತಿದ್ದುದಲ್ಲದೆ ಅದರ ಅರ್ಥವಿವರಣೆಯನ್ನೂ ಮಾಡುತ್ತಿದ್ದು, ಪುರಾಣ-ಪ್ರವಚನಗಳು ಮನೆಯಲ್ಲಿ ಸದಾ ನಡೆಯುತ್ತಿದ್ದುದರಿಂದ ಚಂದ್ರಭಾಗಿಯವರ ಮನಸ್ಸಿನಲ್ಲಿಯೂ ಇದೇ ತುಂಬಿಕೊಂಡು ಹಾಡುವುದನ್ನೂ ಕಲಿತಿದ್ದರು. ಇವರ ಜೊತೆಯಲ್ಲಿ ಹುಟ್ಟಿದ ನಾಲ್ವರು ಸೇರಿ ಎಲ್ಲರಿಗೂ ಮನೆಯಲ್ಲೇ ಸಂಗೀತ ಪಾಠಕ್ಕೆ ಏರ್ಪಡು ಮಾಡಿದ್ದರು. ತಂದೆ ಸುಬ್ಬಯಾಳ್ವರೇ ತೊರವೆ ರಾಮಾಯಣವನ್ನೂ ಗಮಕ ರೀತಿಯಲ್ಲಿ ವಾಚನ ಮಾಡುವುದನ್ನೂ ಇವರಿಗೆ ಕಲಿಸಿದ್ದು, ಅತಿಥಿಗಳು ಮನೆಗೆ ಬಂದಾಗ ಓದಿಸಿ ಅರ್ಥವಿವರಿಸುತ್ತಿದ್ದರು. ಹಾಡುವುದರ ಜೊತೆಗೆ ಓದುವ ಹವ್ಯಾಸವೂ ಬಂದಿದ್ದು ಅ.ನ.ಕೃ., ತ.ರಾ.ಸು., ಶಿವರಾಮಕಾರಂತ ಮುಂತಾದವರ ಕಾದಂಬರಿಗಳನ್ನೆಲ್ಲಾ ಓದಿದ್ದರು. ಸಂಗೀತದ ಜ್ಞಾನವಿದ್ದು ನಾಟಕ, ಆಶುಕವಿತೆ ಮುಂತಾದ ಹವ್ಯಾಸಗಳೂ ಸೇರಿಕೊಂಡು ಅಕ್ಕಪಕ್ಕದ ಹುಡುಗರನ್ನೆಲ್ಲಾ ಸೇರಿಸಿಕೊಂಡು ಹಾಡುಕಟ್ಟಿ, ನಾಟಕ ಮಾಡಿಸುತ್ತಿದ್ದರು. ತಮ್ಮ ಮದುವೆಯ ಸಂದರ್ಭಕ್ಕಾಗಿ ಆರತಿ ಹಾಡನ್ನೂ ತಾವೇ ರಚಿಸಿ ರಾಗ ಸಂಯೋಜಿಸಿದ್ದರು. ಮನೆಯಲ್ಲಿ ಹೆಣ್ಣುಗಂಡೆಂಬ ಭೇದವಿಲ್ಲದೆ ಸರ್ವರಿಗೂ ಸಮಾನತೆ, ವಿದ್ಯೆ, ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಲು ತಂದೆಯವರೇ ಸಂಪೂರ್ಣ ಅವಕಾಶ ನೀಡಿದ್ದರಿಂದ ಹೆಣ್ಣುಮಕ್ಕಳೂ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ೧೯೪೦ ರಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದ ಚಂದ್ರಭಾಗಿಯವರು ಹಲವಾರು ಕತೆ, ಕಾದಂಬರಿ, ವೈಚಾರಿಕ ಲೇಖನಗಳ ಜೊತೆಗೆ ತುಳು ಕವಿತೆಗಳು, ಪ್ರವಾಸಕಥನ, ನಾಟಕಗಳನ್ನೂ ರಚಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತು, ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಾದ ಅರಾಜಕತೆಗೆ ಗಾಂಧೀಜಿಯೇ ಕಾರಣ ಎಂದು ಹಳ್ಳಿಯ ಮುಗ್ಧರ ಮನಸ್ಸಿನಲ್ಲಿದ್ದುದನ್ನು ಕಂಡ ಚಂದ್ರಭಾಗಿಯವರ ಮನನೊಂದು, ಗಾಂಧೀಜಿಯವರ ಸಮಗ್ರ ಜೀವನವನ್ನೂ ನಿರೂಪಿಸುವ ‘ಗಾಂಧಿಕಬಿತೆ’ ಎಂಬುದನ್ನೂ ತುಳು ಭಾಷೆಯಲ್ಲಿ ಬರೆದು ಪಾಡ್ದನಗಳ ಧಾಟಿಯಲ್ಲಿ ರಾಗ ಸಂಯೋಜಿಸಿ ನೇಜಿ ನೆಡುವ ಸಂದರ್ಭದಲ್ಲಿ ಹೆಂಗಸರು ಹಾಡುವಂತೆ ಮಾಡಿದರು. ಇದೇ ಕವಿತೆಯು ‘ಜ್ಯೋತಿ’ ಎಂಬ ಪತ್ರಿಕೆಯಲ್ಲಿಯೂ ಪ್ರಕಟಗೊಂಡಿತು. ಬೆಳೆದು ಬಂದ ಪರಿಸರದಿಂದ ಎಳೆವೆಯಿಂದಲೇ ಪ್ರಗತಿಪರ ವಿಚಾರಗಳನ್ನೂ ಮೈಗೂಡಿಸಿಕೊಂಡು ಬೆಳೆದಿದ್ದು ಕಂದಾಚಾರ, ಮೂಢನಂಬಿಕೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದು, ಶುಭಸಮಾರಂಭಗಳಲ್ಲಿ ಶೋಭಾನೆ ಪದಗಳನ್ನು ವಿಧವೆಯರಿಂದಲೇ ಹಾಡಿಸಿದ್ದಲ್ಲದೆ ವಿಧವಾ ಸಮಸ್ಯೆಯ ಬಗ್ಗೆ ನೀಳ್ಗತೆಯೊಂದನ್ನೂ ರಚಿಸಿದರು. ಹಣ, ಸಮಯ, ನೀರು, ಆಹಾರ ಮುಂತಾದ ಜೀವನಾವಶ್ಯಕ ವಸ್ತುಗಳ ಮಿತಬಳಕೆಯ ಬಗ್ಗೆ ಇತರರಿಗೆ ಬೋಧಿಸುತ್ತಿದ್ದುದಲ್ಲದೆ, ಕೃಷಿಕರಾಗಿದ್ದು ಕೃಷಿಯ ತ್ಯಾಜ್ಯ ವಸ್ತುಗಳಾದ ತೆಂಗಿನ ಸಿಪ್ಪೆ, ಗೆರಟೆ, ಅಡಿಕೆ ಸಿಪ್ಪೆ ಮುಂತಾದವುಗಳಿಂದ ಬೊಂಬೆಗಳನ್ನೂ ತಯಾರಿಸಿ ಕಸದಿಂದ ಕಲಾತ್ಮಕ ಕೃತಿ ರಚಿಸುವುದನ್ನು ರೂಢಿಸಿಕೊಂಡಿದ್ದರು. ಆಗಾಗ್ಗೆ ನವಭಾರತ, ನವಯುಗ, ಜ್ಯೋತಿ, ಸರ್ವೋದಯ, ಪ್ರಪಂಚ, ರಾಯಭಾರಿ ಮುಂತಾದ ಪತ್ರಿಕೆಗಳಿಗೆ ಬರೆದ ವೈಚಾರಿಕ ಲೇಖನಗಳ ‘ಆಯ್ದ ಬರೆಹಗಳು’ ೧೯೯೬ರಲ್ಲಿ ಪ್ರಕಟವಾಯಿತು. ನಂತರ ೧೯೯೭ರಲ್ಲಿ ಪ್ರಕಟವಾದ ಮತ್ತೊಂದು ಪುಸ್ತಕ ‘ಪ್ರೇಮವೇ ದೇವರು’ ಇದು ಕಯ್ಯಾರ ಕಿಞ್ಞಣ್ಣರೈ ರವರ ಅಧ್ಯಕ್ಷತೆಯಲ್ಲಿ ೧೯೯೭ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಡೆಗೊಂಡಿತು. ‘ಆಯ್ದ ಬರೆಹಗಳು’ ಪುಸ್ತಕದಲ್ಲಿ ಸ್ತ್ರೀಪರ ಚಿಂತನೆಗಳೇ ಮೂಲಸ್ರೋತವಾಗಿದ್ದು, ಪತಿವ್ರತ ಮತ್ತು ಪತಿವ್ರತೆ, ಶಾಶ್ವತ ಸ್ತ್ರೀ ಸೌಂದರ್ಯ, ಹಿರಯಡಕದ ವೀರಭದ್ರದೇವರ ಜಾತ್ರೆ ಮುಂತಾದ ಸಾಮಾಜಿಕ, ಜಾನಪದ, ಸ್ಥಳಪುರಾಣಗಳ ಬರಹಗಳಿಂದ ಕೂಡಿದೆ. ‘ಸಾಹಿತಿಯ ಸಂಕಷ್ಟ’ ಕತೆಯಲ್ಲಿ, ಕತೆ ಬರೆಯಲು ಪ್ರಾರಂಭಿಸುವ ಸಾಹಿತಿ ಮನೆಯಲ್ಲಿ ಎಬ್ಬಿಸುವ ಅವಾಂತರಗಳ ನವುರಾದ ನಿರೂಪಣೆಯಿಂದ ಕೂಡಿದ್ದರೆ ‘ಪತಿಯ ವ್ಯಾಧಿ’ ಕತೆಯಲ್ಲಿ ಸಂಸಾರ ಸುಗಮವಾಗಿ ಸಾಗಲು ಪತಿ-ಪತ್ನಿಯರಿಬ್ಬರೂ ಸಮಾನರು ಎಂದು ಪತ್ನಿ, ಸಮಾನತೆಯನ್ನು ಬಿಂಬಿಸುವ ಕತೆಯಾಗಿದೆ. ಇವರ ಮತ್ತೊಂದು ನೀಳ್ಗತೆ ವಿಧವೆಯರ ಬಗ್ಗೆ ಬರೆದ ‘ಮಂಗಳ-ಅಮಂಗಳ’ ಎಂಬುದು. ಹಲವಾರು ತುಳು ಕವಿತೆಗಳನ್ನು ಬರೆದುದಲ್ಲದೆ ೧೯೮೧ರಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆದ ತುಳು ಭಾಷಾ ಕವಿಗೋಷ್ಠಿ ಹಾಗೂ ೧೯೮೩ರಲ್ಲಿ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್‌ ಹಾಲ್‌ನಲ್ಲಿ ನಡೆದ ಅಖಿಲಭಾರತ ತುಳು ಸಮ್ಮೇಳನದಲ್ಲೂ ಭಾಗವಹಿಸಿದ್ದರು. ಇವರ ಸ್ತ್ರೀ ಪರ ಕಾಳಜಿಗಾಗಿ ಸಂದ ಗೌರವಗಳೆಂದರೆ ಬಂಟ್ವಾಳ ತಾಲ್ಲೂಕು ‘ಮುಡಿಪು’ ಎಂಬಲ್ಲಿ ನಡೆದ ತಾಲ್ಲೂಕು ಸಮ್ಮೇಳನಾಧ್ಯಕ್ಷತೆಯಲ್ಲದೆ ‘ಆಯ್ದ ಬರೆಹಗಳು’ ಸಂಕಲನಕ್ಕೆ ಶಾಂತಾಬಾಯಿ ದತ್ತಿನಿಧಿ ಪುರಸ್ಕಾರ ಹಾಗೂ ‘ಪ್ರೇಮವೇ ದೇವರು’ ಕೃತಿಗೆ ಅತ್ತಿಮಬ್ಬೆ ಪುರಸ್ಕಾರವೂ ದೊರೆತಿದ್ದು, ಉನ್ನತ ಶೈಕ್ಷಣಿಕ ಅರ್ಹತೆ, ಅವಕಾಶವಿರದ, ಕಟ್ಟುಪಾಡುಗಳಿದ್ದ ಕಾಲದಲ್ಲಿ ಸಾಧನೆಮಾಡಿದ ಚಂದ್ರಭಾಗಿ ರೈರವರು ತೀರಿಕೊಂಡದ್ದು ೨೦೦೧ ರ ಫೆಬ್ರವರಿ ೧೨ರಂದು.

Details

Date:
October 29, 2023
Event Category: