ಕಂಚ್ಯಾಣಿ ಶರಣಪ್ಪ

Home/Birthday/ಕಂಚ್ಯಾಣಿ ಶರಣಪ್ಪ
Loading Events
This event has passed.

೦೩.೦೧.೧೯೩೦ ಬಿಜಾಪುರ ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು. ‘ಸಿಸು’ ಸಂಗಮೇಶ, ಶಂಗು ಬಿರಾದಾರ, ಈಶ್ವರ ಚಂದ್ರ ಚಿಂತಾಮಣಿ, ಹ.ಮ.ಪೂಜಾರ, ಜಂಬುನಾಥ ಕಂಚ್ಯಾಣಿ, ಹ.ಮ.ಅಂಬಿಗೇರ್, ಬಾ.ಇ.ಕುಮಟೆ ಮುಂತಾದ ಹಲವಾರು ಕವಿಗಳು ಮಕ್ಕಳ ಸಾಹಿತ್ಯದ ಬಗ್ಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ. ಹೀಗೆ ಸಾಹಿತ್ಯ ಕೃಷಿ ಮಾಡಿದವರಲ್ಲಿ ಪ್ರಮುಖರಲ್ಲೊಬ್ಬರಾದ ಹಿರಿಯ ಕವಿ ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಎಂಬಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ಹುಟ್ಟಿದ್ದು ಕಡುಬಡತನದ ಕುಟುಂಬದಲ್ಲಿ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಇತರರ ಹಂಗಿಗೆ ಬೀಳದ ಸ್ವಾಭಿಮಾನಿ. ಶಾಲಾ ಶಿಕ್ಷಕರ ತರಬೇತು ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿದ ನಂತರ ಎಂ.ಎ. ಪದವಿ ಪಡೆದ ಛಲಗಾರರು. ೩೯ ವರ್ಷಗಳ ದೀರ್ಘ ಕಾಲದ ಬೋಧನೆಯಲ್ಲಿ ನಿರತರಾಗಿದ್ದು ೧೯೮೮ ರಲ್ಲಿ ನಿವೃತ್ತಿ. ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನ: ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ಆದ ‘ಗ್ರಾಮೀಣ ಪ್ರತಿಭಾ ಪ್ರಕಾಶನ’ ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಮೊದಲ ಮಕ್ಕಳ ಕವಿತಾ ಪುಸ್ತಕ ‘ಅಜ್ಜನ ಹಾಡು’. ನಂತರ ಹಲವಾರು ಮಕ್ಕಳ ಕೃತಿಗಳನ್ನು ಹೊರತಂದರು. ಜಾಗೃತ ಭಾರತ, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಚೆಲುವಿನ ಚಿಟ್ಟೆ, ಪುಟ್ಟಿಯ ತೋಟ, ಬೆದರು ಬೆಚ್ಚ ಮುಂತಾದವುಗಳ ಜೊತೆಗೆ ‘ಗುಡು ಗುಡು ಗುಂಡ’ ಎಂಬ ಶಿಶು ಪ್ರಾಸದ ಪುಸ್ತಕವನ್ನು ರಚಿಸಿದ್ದಾರೆ. ಅಪ್ಪ ಹೂರಣಗಡಬು | ಅವ್ವ ಹರೆದುಪ್ಪ || ಹುಗ್ಗಿ ಹೋಳಿಗಿ ಅಪ್ಪ | ಅವ್ವ ತಿಳಿದುಪ್ಪ || ಅಕ್ಕ ಸಕ್ಕರೆ ಪಾಕ | ಅಣ್ಣ ನೊರೆ ಹಾಲು || ಬಂಧು ಬಳಗದ ಪ್ರೀತಿ | ಸವಿ ಜೇನು ಮಿಗಿಲು || ಈ ರೀತಿ ತಂದೆ – ತಾಯಿ, ಬಂಧು – ಬಳಗದವರ ಬಗ್ಗೆ ಅಕ್ಕರೆ ಉಕ್ಕುವಂತೆ ಬರೆದ ಪದ್ಯಗಳು ಮಕ್ಕಳಿಗೆ ಮುದನೀಡದಿದ್ದೀತೆ ? ಇವಲ್ಲದೆ ಮಕ್ಕಳ ಕಥೆಗಳಾದ ಗಿಲ್ ಗಿಲ್ ಗಿಡ್ಡ, ಅಪ್ಪನ ಕಥೆಗಳು, ಅಪ್ಪನ ಮತ್ತಷ್ಟು ಕಥೆಗಳು, ಚತುರ ಚಿಣ್ಣರು ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ಇವರ ಇತರ ಕೃತಿಗಳೆಂದರೆ ಕನ್ನಡ ಕಣ ಕೀರ್ತಿ (ಗದ್ಯ ಚರಿತ್ರೆ), ಬಸವ ಪ್ರದೀಪ (ಖಂಡ ಕಾವ್ಯ) ಮತ್ತು ಸಮಗ್ರ ಕವಿತೆಗಳ ಸಂಗ್ರಹ.  ಆಯ್ದ ನೂರೊಂದು ಕವಿತೆಗಳು. ಮಕ್ಕಳ ಲೋಕಕ್ಕೆ ಮುಡುಪಾಗಿಟ್ಟಿರುವ ಶರಣಪ್ಪನವರ ಬದುಕಲ್ಲಿ ಮಕ್ಕಳ ಸಾಹಿತ್ಯವೇ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಮಕ್ಕಳ ಬುದ್ಧಿ ಭಾವವಿಕಾಸಕ್ಕೆ ನೆರವಾಗುವಂತಹ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ಕಂಚ್ಯಾಣಿ ಶರಣಪ್ಪನವರು ಮಗುವಿನೊಂದಿಗೆ ಮಗುವಾಗಿ ಹಾಡುತ್ತಾ, ಕುಣಿಯುತ್ತಾ, ಕಿಲಕಿಲನಗುತ್ತಾ ಕಾಲಕಳೆಯುವ ವಯಸ್ಸಿನವರಾಗಿಬಿಡುತ್ತಾರೆ. ಮಕ್ಕಳ ಸಾಹಿತಿ ಕಂಚ್ಯಾಣಿಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ‘ಜಾಗೃತ ಭಾರತ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ (೧೯೮೮), ‘ಅಜ್ಜನ ಹಾಡು’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಪ್ರಶಸ್ತಿ, ಧಾರವಾಡದ ಮಕ್ಕಳ ಮನೆ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೮೯), ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರ (೧೯೯೦-೯೧), ‘ಗಿಲ್ ಗಿಲ್ ಗಿಡ್ಡ’ ಪುಸ್ತಕಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಲ್ಲದೆ ಹುಬ್ಬಳ್ಳಿಯ ಮೂರು ಸಾವಿರ ಮಠ ಸಾಹಿತ್ಯ ಪುರಸ್ಕಾರ, ಭಾಲ್ಕಿ ಸಂಸ್ಥಾನ ಮಠದ ಮಕ್ಕಳ ಸಾಹಿತ್ಯ ಪುರಸ್ಕಾರ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಹರ್ಡೇಕರ್‌ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ಜೊತೆಗೆ ಬಾಗಲಕೋಟೆಯಲ್ಲಿ ನಡೆದ ಬಿಜಾಪುರ ಜಿಲ್ಲಾ ೫ನೆಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಿಜಾಪುರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top