೦೧.೦೨.೧೯೨೯ ವೃತ್ತಿ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ ಹೊಂದಿ ಅದರ ಏಳ್ಗೆಗಾಗಿ ದುಡಿಯುತ್ತಿರುವ ಕಂಠಿ ಹನುಮಂತರಾಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ನಾಗರಾಳ. ತಂದೆ ಬಸಪ್ಪ, ತಾಯಿ ಬಸಲಿಂಗಮ್ಮ. ಓದಿದ್ದು ಎಂ.ಎ., ಬಿ.ಇಡಿ. ಉದ್ಯೋಗಕ್ಕಾಗಿ ಸೇರಿದ್ದು ಗವಿಸಿದ್ದೇಶ್ವರ ಮಿಡ್ಲ್ ಸ್ಕೂಲಿನಲ್ಲಿ ಶಿಕ್ಷಕರಾಗಿ. ಬೀಳಗಿಯ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ, ಕೊಣ್ಣೂರ ಕನಕದಾಸ ಬಾಲಕಿಯರ ಪ್ರೌಢಶಾಲೆ, ಬುರಂಗಾಪುರದ ಇಂಡೋ-ಜಪಾನ್ ಫ್ರೆಂಡ್ಷಿಪ್ ಅಕಾಡಮಿಯ ಶಾಲೆ, ಬೀಳಗಿಯ ನೀಲಾಂಬಿಕಾ ಮಹಿಳಾ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸಲ್ಲಿಸಿದ ಸೇವೆ. ಬಾಲ್ಯದಿಂದಲೇ ನಾಟಕದತ್ತ ಬೆಳೆದ ಆಸಕ್ತಿ. ಅವಸಾನದಂಚಿನಲ್ಲಿರುವ ವೃತ್ತಿರಂಗ ಭೂಮಿಯ ಪುನರುಜ್ಜೀವನಕ್ಕಾಗಿ ಹೊಸ ಮಾದರಿಯ ನಾಟಕಗಳ ರಚನೆ, ಮಂಗಳಗೌರಿ, ಭಾಗ್ಯಮಂದಿರ, ಚಿನ್ನದ ಸರ, ಬಹದ್ದೂರಗಂಡ, ಸಿಂಧೂರ ಲಕ್ಷ್ಮಣ, ಶೋಭಾರಾಣಿ, ಕಡ್ಲಿಮಟ್ಟಿ ಕಾಶಿಬಾಯಿ, ಈ ಮನೆಯ ಸೊಸೆ, ಕಾಂಚನಮೃಗ, ಪೊಲೀಸ್ ಇನ್ಸ್ಪೆಕ್ಟರ್ ಮುಂತಾದ ೧೬ ನಾಟಕಗಳ ರಚನೆ. ಇವರ ನಾಟಕಗಳನ್ನು ನಟರಾಜ ನಾಟ್ಯ ಸಂಘ, ದತ್ತಾತ್ರೇಯ ನಾಟ್ಯ ಸಂಘ, ವಿಶ್ವಭಾರತಿ ಕಲಾವೃಂದ, ವಿಜಯ ಕಲಾ ನಾಟ್ಯ ಸಂಘ, ವಿಶ್ವ ಗುರುನಾಟ್ಯ ಸಂಘ ಮುಂತಾದುವುಗಳಿಂದ ಕಂಡ ಪ್ರದರ್ಶನ. ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪಡೆದ ಖ್ಯಾತಿ. ವೀರ ಅಭಿಮನ್ಯು, ಪಾದುಕಾ ಪಟ್ಟಾಭಿಷೇಕ, ಬ್ಲಾಕ್ಮಾರ್ಕೆಟ್, ಸತ್ಯ ಹರಿಶ್ಚಂದ್ರ, ಕುಂಕುಮ, ಭಾಗ್ಯ ಮಂದಿರ ಮೊದಲಾದುವು. ಬಾಲಚಂದ್ರ, ಮಾತಂಗಕನ್ಯಾ, ಭಾಗ್ಯಮಂದಿರ, ಗರುಡರೇಖೆ ಮುಂತಾದ ನಾಟಕಗಳ ನಿರ್ದೇಶನದ ಹೊಣೆ. ಇವರ ನಾಟಕಗಳು ಆಕಾಶವಾಣಿ ಧಾರವಾಡ ಕೇಂದ್ರ, ಬೆಂಗಳೂರಿನ ದೂರದರ್ಶನದಲ್ಲೂ ಪ್ರಸಾರಗೊಂಡಿವೆ. ಸಿಂಧೂರ ಲಕ್ಷಣ ನಾಟಕವು ಮಹಾರಾಷ್ಟ್ರದ ಮಿರಜ, ಇಚಲಕರಂಜಿ ಮುಂತಾದೆಡೆ ನೂರಾರು ಪ್ರದರ್ಶನ ಕಂಡಿವೆ. ಹಲವಾರು ನಾಟ್ಯ ಸಂಘಗಳಿಂದ ಪಡೆದ ಗೌರವ ಪ್ರಶಸ್ತಿಗಳು. ಕರ್ನಾಟಕ ನಾಟ್ಯ ಸಂಘ, ವೃತ್ತಿಪರ ನಾಟಕೋತ್ಸವ, ನಾಗರಾಳದ ಶಿಷ್ಯಬಳಗ, ಸನಾದಿ ಅಪ್ಪಣ್ಣ ಕಲಾಕಾರ ಸಂಘ, ಕುಲಕರ್ಣಿ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ನಾಟಕ ಅಕಾಡಮಿಯಿಂದ ಪಡೆದ ಫೆಲೊಷಿಪ್ ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು : ರಾಧಾ ಸುಜೀರ – ೧೯೨೮
* * *