ಕಯ್ಯಾರ ಕಿಞ್ಞಣ್ಣರೈ

Home/Birthday/ಕಯ್ಯಾರ ಕಿಞ್ಞಣ್ಣರೈ
Loading Events
This event has passed.

೦೮.೦೬.೧೯೧೫ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಗಡಿ ವಿಭಾಗಗಳ ಸಮಸ್ಯೆಯನ್ನು ಬಗೆಹರಿಸಲು ಮಹಾಜನ ಆಯೋಗವನ್ನು ರಚಿಸಿ, ಆಯೋಗವು ಚಂದ್ರಗಿರಿಯ ನದಿಯ ಉತ್ತರಭಾಗದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿದ್ದರೂ ಕೇರಳ ತಕರಾರು ತೆಗೆದಿದ್ದರ ವಿರುದ್ಧ ಗಡಿವಿಭಾಗದಲ್ಲಿ ಸೆಟೆದು ನಿಂತು ಹೋರಾಟದ ಕಿಡಿ ಹೊತ್ತಿ ಉರಿಯುವಂತೆ ಕಾಯ್ದುಕೊಂಡು ಬಂದ ಶತಾಯುಷಿ ಕಯ್ಯಾರ ಕಿಞ್ಞಣ್ಣರೈರವರು ಹುಟ್ಟಿದ್ದು ಕಾಸರಗೋಡಿನ ಪೆರಡಾಲ ಎಂಬ ಹಳ್ಳಿಯಲ್ಲಿ. ತಂದೆ ದುಗ್ಗಪ್ಪರೈ, ತಾಯಿ ದೆಯ್ಯಕ್ಕೆ. ಹುಟ್ಟಿದೂರು ಪೆರಡಾಲದಲ್ಲಿ ಶಾಲೆ ಇಲ್ಲದ್ದರಿಂದ ಪಕ್ಕದೂರಾದ ಬಡಿಯಡ್ಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಅನಂತಭಟ್ಟರೆಂಬ ಮಾಸ್ತರು ಬಹು ಮುತವರ್ಜಿಯಿಂದ ಕಲಿಸಿದ ಪಾಠ. ಶಾಲೆಯ ಹೊರಗೆ ಬ್ರಾಹ್ಮಣ, ವಕ್ಕಲುತನ ಮಾಡುತ್ತಿದ್ದ ದಲಿತ ಮಕ್ಕಳೊಂದಿಗೆ ಒಡನಾಟ. ಶಾಲೆಗೆ ರಜೆಯಿದ್ದರೆ ಕೂಲಿ ಕೆಲಸದವರೊಡನೆ ಕೃಷಿ ಕೆಲಸ. ಸಂಜೆಯಾದರೆ ಮನೆಯ ಜಗುಲಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಲೆಯ ಕಾರ್ಯಕ್ರಮ. ಮನೆಯವರೇ ಪಾತ್ರಧಾರಿಗಳು ಹಾಗೂ ಪ್ರೇಕ್ಷಕರು. ಸುಶ್ರಾವ್ಯವಾಗಿ ಹಾಡುತ್ತಿದ್ದ ಕಯ್ಯಾರರಿಗೆ ಹಾಡುಗಾರಿಕೆಯ ಪಟ್ಟ. ಒಂಬತ್ತನೆಯ ವಯಸ್ಸಿನಲ್ಲಿಯೇ ಇವರ ಕವಿತ್ವಶಕ್ತಿಗೆ ಚಾಲನೆ ದೊರೆತು ಬರೆದ ಪದ್ಯಕ್ಕೆ ದೊರೆತ ಚಂಡಮದ್ದಲೆಯ ಹಿಮ್ಮೇಳ ಧ್ವನಿ. ಗಾಂಧೀಜಿಯವರು ಬ್ರಿಟಿಷ್ ಸರಕಾರದ ವಿರುದ್ಧ ಸಾರಿದ ಉಪ್ಪಿನ ಸತ್ಯಾಗ್ರಹ ಆಂದೋಲನಕ್ಕೆ ದ.ಕ. ಜಿಲ್ಲೆಯ ಕಾರ್ನಾಡು ಸದಾಶಿವರಾಯರು ಬೆಂಬಲಿಸಿದಾಗ ಹಲವಾರು ವಿದ್ಯಾರ್ಥಿಗಳು ಶಾಲೆ ತೊರೆದು ಚಳವಳಿಯ ದಾರಿ ಹಿಡಿದರು. ಪತ್ರಿಕೆಯಲ್ಲಿ ಚಳುವಳಿ ಸುದ್ದಿ ಓದುತ್ತಿದ್ದ ಕಯ್ಯಾರರಿಗೆ ಗಾಂಧೀಜಿಯವರ ತತ್ತ್ವಾದರ್ಶಗಳು ಹಿಡಿಸಿ ಪಾಲಿಸತೊಡಗಿದರು. ಆದರೆ ಮಂಗಳೂರಿಗೆ ಬಂದ ಗಾಂಧೀಜಿಯವರನ್ನು ನೋಡಲಾರದೆ ಆದ ನಿರಾಸೆ. ಆದರೂ ಮೂರು ವರ್ಷಗಳ ನಂತರ (ಇವರಿಗೆ ಹದಿನೈದರ ಹರೆಯ) ಮತ್ತೊಮ್ಮೆ ಮಂಗಳೂರಿನ ಕೊಡಿಯಾಲ ಜೈಲಿಗೆ ಬಂದ ಗಾಂಧೀಜಿಯವರನ್ನು ಕಾಣಲು ಪೆರಡಾಲದಿಂದ ಸ್ನೇಹಿತರೊಡನೆ ನಡೆದೇ ಬಂದು, ಗಾಂಧೀಜಿಯವರನ್ನು ನೋಡಿ ಧನ್ಯತಾಭಾವ ಹೊಂದಿ ಬರೆದ ಕವನ ‘ಗಾಂಧಿದರ್ಶನ’. ಪತ್ರಿಕೆಯಲ್ಲೂ ಪ್ರಕಟಗೊಂಡಾಗ ಹೇಳತೀರದ ಆನಂದ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಭೂಗತ ಚಳವಳಿಗಾರರಿಗೆ ಸಹಾಯಕರಾಗಿ ದುಡಿದರು. ಕಯ್ಯಾರರಿಗೆ ತಮ್ಮ ಕಾರ್ಯಾಚರಣೆಗೆ ವಿಶಾಲ ಕ್ಷೇತ್ರವನ್ನು ಕಂಡುಕೊಂಡದ್ದು ಮಂಗಳೂರಿನಲ್ಲಿ. ಬಾಲಗೋಪಾಲನಾಗಿ ಯಕ್ಷಗಾನರಂಗ ಪ್ರವೇಶಿಸಿ, ಯಕ್ಷಗಾನ ಹಿರಿಯ ಕಲಾವಿದರೊಡನೆ, ತಾಳಮದ್ದಲೆ ಕೂಟದಲ್ಲಿ ಪಡೆದ ಗೌರವ ಸ್ಥಾನ. ಮಾಧ್ಯಮಿಕ ಶಾಲೆಯ ನಂತರ ಇಂಗ್ಲಿಷ್ ಕಲಿಯುವ ಆಸೆಯಿದ್ದರೂ ಪರಸ್ಥಳಕ್ಕೆ ಹೋಗಿ ಕಲಿಯುವ ಸೌಕರ್ಯವಿಲ್ಲದೆ ಸೇರಿದ್ದು ಪೆರಡಾಲ ನಿರ್ಜಾಲಿನಲ್ಲಿದ್ದ ಮಹಾಜನ ಸಂಸ್ಕೃತ ಕಾಲೇಜು. ಕನ್ನಡ ಮತ್ತು ಸಂಸ್ಕೃತ ಎಂಟ್ರನ್ಸ್ ಪರೀಕ್ಷೆಯಲ್ಲಿ ತೇರ್ಗಡೆ. ನಂತರ ವಿದ್ವತ್ ಪರೀಕ್ಷೆಗೆ ಕುಳಿತು ಕನ್ನಡ, ಸಂಸ್ಕೃತಗಳೆರಡರಲ್ಲೂ ಪಡೆದ ವಿದ್ವತ್ ಪದವಿ. ವಾಲ್ಮೀಕಿ, ವ್ಯಾಸ, ಭಾಸ, ಪಂಪ, ಕುಮಾರವ್ಯಾಸ, ಕಾಳಿದಾಸ, ವರ್ಡ್ಸ್‌ವರ್ತ್, ಬೈರನ್, ಶೇಕ್ಸ್‌ಪಿಯರ್ ಮುಂತಾದ ಕವಿಗಳ ಆಳವಾದ ಅಧ್ಯಯನ. ಸಾಹಿತ್ಯ ಪ್ರೀತಿಯಿಂದ ಹೊರತಂದ ಕನ್ನಡದ ಕೈಬರಹದ ಪತ್ರಿಕೆ ‘ನಗು’ ಹಾಗೂ ಸಂಸ್ಕೃತದಲ್ಲಿ ‘ವಿಕಾಸ’ ಪತ್ರಿಕೆಗಳು. ವಿದ್ವಾನ್ ಪದವಿ ಪಡೆದ ನಂತರ ಮಂಗಳೂರಿನ ಮಿಷನ್ ಹೈಸ್ಕೂಲಿನಲ್ಲಿ ಕಲಿತ ಇಂಗ್ಲಿಷ್ ಭಾಷೆ. ಜಯಕರ್ನಾಟಕ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ನವಯುಗ ಮುಂತಾದ ಪತ್ರಿಕೆಗಳೊಡನೆ ಒಡನಾಟವಿದ್ದುದರಿಂದ ಉದ್ಯೋಗಕ್ಕಾಗಿ, ಆಯ್ದುಕೊಂಡದ್ದು ಪತ್ರಿಕೋದ್ಯಮ. ಮಂಗಳೂರಿನ ಕುಡ್ಪಿ ವಾಸುದೇವ ಶೆಣೈರವರ ‘ಪ್ರಭಾತ’ ಪತ್ರಿಕೆಯಲ್ಲಿ ಕೆಲಕಾಲವಿದ್ದು ಸ್ವದೇಶಾಭಿಮಾನಿ ಪತ್ರಿಕೆಯ ಉಪಸಂಪಾದಕರಾಗಿ ಸೇರಿದರು. ಪೆರಡಾಲದಲ್ಲಿ ಹೈಸ್ಕೂಲು ಪ್ರಾರಂಭವಾದಾಗ ಹುಟ್ಟಿದೂರಿನ ಋಣ ತೀರಿಸಲು ಪತ್ರಿಕೋದ್ಯಮವನ್ನು ತೊರೆದು ಪ್ರೌಢಶಾಲಾ ಅಧ್ಯಾಪಕರಾಗಿ ಅಧ್ಯಾಪನದ ಜೊತೆಗೆ ಸಾಹಿತ್ಯದ ಕೃಷಿ. ಇಂಗ್ಲಿಷ್ ಎಂ.ಎ. ಪದವಿ ಪಡೆದಿರುವ ಕಯ್ಯಾರರಿಗೆ ತುಳು, ಕನ್ನಡ, ಸಂಸ್ಕೃತ, ಮಲಯಾಳ, ಇಂಗ್ಲಿಷ್ ಸಾಹಿತ್ಯದ ವಿಸ್ತಾರ ಅನುಭವ. ಮೂವತ್ತೆರಡು ವರ್ಷ ಅಧ್ಯಾಪಕರಾಗಿ ದುಡಿದು ೧೯೭೭ರಲ್ಲಿ ನಿವೃತ್ತಿ. ಹಳ್ಳಿಗಳ ಏಳಗೆಗಾಗಿ ಸಾರ್ವಜನಿಕ ರಂಗವನ್ನು ಪ್ರವೇಶಿಸಿ ಪಂಚಾಯಿತಿ ಅಧ್ಯಕ್ಷರಾಗಿ ಆಸ್ಪತ್ರೆ, ಕುಡಿಯುವ ನೀರು, ವಿದ್ಯುಚ್ಛಕ್ತಿ ಮುಂತಾದ ಸೌಲಭ್ಯಗಳು ದೊರೆಯುವಂತೆ ಮಾಡಿದರು. ಚಂದ್ರಗಿರಿ, ವಿದ್ಯಾಗಿರಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ, ತಮ್ಮ ಗುರುಗಳಾದ ಅನಂತಭಟ್ಟರ ಹೆಸರನ್ನು ಚಿರಸ್ಥಾಯಿಗೊಳಿಸಲು ವಿದ್ಯಾಗಿರಿ ಶಾಲೆಗೆ ಅವರ ಹೆಸರನ್ನಿಟ್ಟರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಲೇ ಸಾಹಿತ್ಯರಚನೆ, ಕೈಬರಹದ ಪತ್ರಿಕೆಯನ್ನು ಹೊರತರುತ್ತಿದ್ದ ಕಾಲದಿಂದಲೂ ಪದ್ಯಗಳ ರಚನೆಯನ್ನು ಪ್ರಾರಂಭಿಸಿದ್ದು, ಹಲವಾರು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಹೀಗೆ ಬರೆದ ಕವನಗಳ ಮೊಟ್ಟ ಮೊದಲ ಸಂಕಲನ ‘ಶ್ರೀಮುಖ’ ನಂತರ ಐಕ್ಯಗಾನ, ಪುನರ್ನವ, ಚೇತನ, ಐದು ಉಪನಿಷದ್ ಕಾವ್ಯದ ‘ಪಂಚಮಿ’, ಶತಮಾನದ ಗಾನ, ಮಕ್ಕಳ ಪದ್ಯ ಮಂಜರಿ ಸೇರಿ ಸುಮಾರು ೧೫ ಕವನ ಸಂಕಲನಗಳು; ರತ್ನರಾಶಿ, ಕಾರ್ನಾಡ್ ಸದಾಶಿವರಾಯರು, ನಾರಾಯಣ ಕಿಲ್ಲೆ ಮೊದಲಾದ ಜೀವನ ಚರಿತ್ರೆಗಳು, ಲಕ್ಷ್ಮೀಶನ ಕತೆಗಳು, ಅನ್ನದೇವರು ಮತ್ತು ಇತರ ಕಥೆಗಳು ಮೊದಲಾದ ಕಥಾ ಸಂಕಲನಗಳು, ತಮಗೆ ನೈತಿಕವಾಗಿ, ಸಾಹಿತ್ಯಕವಾಗಿ ಸ್ಫೂರ್ತಿದಾತರಾಗಿದ್ದ ಗೋವಿಂದ ಪೈಗಳನ್ನು ಕುರಿತು ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ-ಕೃತಿ, ಮಹಾಕವಿ ಗೋವಿಂದ ಪೈ ಮುಂತಾದ ಕೃತಿಗಳು; ನವೋದಯ ವಾಚನಮಾಲೆಯಡಿಯಲ್ಲಿ ಶಿಶು ಸಾಹಿತ್ಯದ ಭಾಗ ೧ರಿಂದ ೮ರವರೆಗೆ ಎಂಟು ಪುಸ್ತಕಗಳು; ವ್ಯಾಕರಣ ಮತ್ತು ಪ್ರಬಂಧದ ನಾಲ್ಕು ಪುಸ್ತಕಗಳು (ಭಾಗ ೧-೪) ಹೀಗೆ ಕಾವ್ಯ, ಕತೆ, ಜೀವನ ಚರಿತ್ರೆ, ಶಿಶು ಸಾಹಿತ್ಯ, ನಾಟಕ, ವ್ಯಾಕರಣ ಮುಂತಾದ ೩೦ಕ್ಕೂ ಹೆಚ್ಚು ಕೃತಿಗಳಲ್ಲಿ ಜೊತೆಗೆ ಪ್ರಕಟಿಸಿದ ತಮ್ಮ ಆತ್ಮಕಥೆ ‘ದುಡಿತವೇ ನನ್ನ ದೇವರು’ ಮಹತ್ವದ ಕೃತಿ. ಇವರ ಬಹುಮುಖ ಸೇವೆಗಾಗಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಗಡಿನಾಡಿನ ಕಿಡಿ’ (೧೯೯೦). ಇವರ ಹಲವಾರು ಕತೆ ಕವನಗಳು ಹಿಂದಿ, ಮಲಯಾಳಂ ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾದ ಕೈಯಾರರವರು ಸ್ವಾತಂತ್ರ್ಯ ಆಂದೋಲನದ, ಭೂಗತ ಚಳವಳಿಯಲ್ಲಿ, ನೆರೆಹಾವಳಿ ಪರಿಹಾರ ಕಾರ್ಯದಲ್ಲಿ, ಕೋಮುಸೌಹಾರ್ದ ಸಮಿತಿಯಲ್ಲಿ, ಸಾಕ್ಷರತಾ ಪ್ರಚಾರದ ಆಂದೋಲನದ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಸಾಹಿತ್ಯದ ಸಾಧನೆಗಳಾದ – ಶಿರಸಿಯಲ್ಲಿ ಜರುಗಿದ ಅಖಿಲ ಭಾರತ ಜನಪರ ಕನ್ನಡ ಸಾಹಿತ್ಯ ಸಮ್ಮೇಳನ, ಧರ್ಮಸ್ಥಳದ ಸರ್ವಧರ್ಮಸಾಹಿತ್ಯ ಸಮ್ಮೇಳನ, ದ.ಕ.ಜಿಲ್ಲಾ ಎರಡನೆಯ ಸಾಹಿತ್ಯ ಸಮ್ಮೇಳನ ಮುಂತಾದವುಗಳ ಸಮ್ಮೇಳನಾಧ್ಯಕ್ಷರಾಗಿ, ಕೇರಳ ಸರಕಾರದ ರಾಜ್ಯಮಟ್ಟದ ಸಿಲಿಬಸ್ ಕಮಿಟಿ, ಮೈಸೂರು ಸರಕಾರದ ಶಿಶುಕವನ ಆಯ್ಕೆ ಸಮಿತಿ, ತುಳು ನಿಘಂಟು ಸಂಫಾದಕ ಮಂಡಲಿ, ಕನ್ನಡ ಕಾವಲು ಸಮಿತಿ ಮತ್ತು ಗಡಿ ಸಲಹಾ ಸಮಿತಿ, ವಿಶ್ವಕನ್ನಡ ಸಮ್ಮೇಳನದ ಪುಸ್ತಕ ಆಯ್ಕೆ ಸಮಿತಿ, ಕೇರಳ ಸರಕಾರದ ಭಾಷಾ ಅಲ್ಪ ಸಂಖ್ಯಾತರ ಸಮಿತಿ, ಕೇರಳ ಸಂಗೀತ ನಾಟಕ ಅಕಾಡಮಿ ಮುಂತಾದವುಗಳ ಸದಸ್ಯರಾಗಿಯೂ ಸಲ್ಲಿಸಿದ ಸೇವೆ. ಕಯ್ಯಾರರವರಿಗೆ ಮೈಸೂರು ಸರಕಾರದಿಂದ ಪುನರ್ನವ ಗ್ರಂಥಕ್ಕೆ ಕವಿತಾಗ್ರಂಥ ಪ್ರಶಸ್ತಿ (೧೯೬೩), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೯), ಕೇಂದ್ರ ಸರಕಾರದ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ (೧೯೬೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೩), ಮದರಾಸು ಸರಕಾರದಿಂದ ರತ್ನಕಾಶಿ ಕೃತಿಗೆ ಉತ್ತಮ ಜೀವನ ಚರಿತ್ರೆ ಪ್ರಶಸ್ತಿ (೧೯೮೪), ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (೧೯೯೭), ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ (೨೦೦೪), ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೨೦೦೫), ನಾಡೋಜ ಪ್ರಶಸ್ತಿ (೨೦೦೬), ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ (೨೦೦೭) ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಕಿಞ್ಞಣ್ಣರೈರವರು ಗಡಿನಾಡು ವಿಭಾಗದಲ್ಲಿ ಇಂದಿಗೂ ಕ್ರಿಯಾಶೀಲರಾಗಿ, ನಾಡಿಗಾಗಿ ನುಡಿಗಾಗಿ ಜೀವನದುದ್ದಕ್ಕೂ ಹೋರಾಟ ನಡೆಸುತ್ತಲೇ ಬಂದದ್ದು ಕಾಸರಗೋಡು ತಾಲ್ಲೂಕು ಕರ್ನಾಟಕಕ್ಕೆ ಸೇರಲೇಬೇಕೆಂಬ ಛಲದಿಂದ ಇಂದಿಗೂ ಚಳವಳಿಯ ಕಿಡಿಯನ್ನು ಜೀವಂತವಾಗಿರಿಸಿ ಕನ್ನಡಾಂತರ್ಗತಂ ತುಳುನಾಡು ನನ್ನದಿದು, ಭಾರತಾಂತರ್ಗತಂ ಕನ್ನಡ ಬದುಕು ಎಂಬುದು ಈ ಕವಿಯ ನಿತ್ಯಮಂತ್ರವಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top