೨೭.೦೧.೧೯೨೭ ಹದಿಹರೆಯದಲ್ಲಿ ಹುಲಿ ಬೇಟೆಗಿಳಿದು, ಬೇಟೆಯ ತಮ್ಮ ರೋಮಾಂಚಕಾರಿ ಅನುಭವವನ್ನು ಓದುಗರ ಎದೆ ಝೆಲ್ಲೆನ್ನುವಂತೆ ನಿರೂಪಿಸಿರುವ ಕಾಕೆಮಾನಿಯವರು ವಿರಾಜಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದ ಬಾಚಮಾಡ ಮನೆತನದ ‘ಕಾಕೆಮಾನಿ’ ಎಂಬ ಸ್ಥಳದಲ್ಲಿ ಹುಟ್ಟಿದವರು. ತಂದೆ ದೇವಯ್ಯ, ತಾಯಿ ಮಾಚವ್ವ. ತಾವು ಹುಟ್ಟಿದ ಸ್ಥಳವಾದ ಕಾಕೆಮಾನಿಯನ್ನು ತಮ್ಮ ಕಾವ್ಯನಾಮವನ್ನಾಗಿ ಉಪಯೋಗಿಸಿಕೊಂಡರು. ಉದ್ಯೋಗಕ್ಕಾಗಿ ಸೇರಿದ್ದು ಪೊನ್ನಂಪೇಟೆಯ ಹೈಸ್ಕೂಲಿನಲ್ಲಿ. ಡ್ರಾಯಿಂಗ್ ಮಾಸ್ತರಾಗಿ ಕೆಲಕಾಲ. ೧೯೭೮-೭೯ ರಲ್ಲಿ ಕೊಡಗು ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅರಣ್ಯ ಇಲಾಖೆಯನ್ನು ಸೇರಿದ ನಂತರ ರೇಂಜರ್ ಆಗಿ ಬಡ್ತಿನೀಡಿ ಅಂಡಮಾನಿಗೆ ಕಳುಹಿಸಿದರು. ಅಲ್ಲಿನ ತಮ್ಮ ಅನುಭವಗಳಲ್ಲಿ ಕಂಡುಬಂದ ‘ಜರುವಾ’ ಮತ್ತು ‘ಸಾಂಪೆನ್ಸ್’ ಆದಿವಾಸಿಗಳ ಬದುಕನ್ನು ತಮ್ಮ ‘ಬಿಲ್ಲು – ಬಾಣ’ ಗಳ ಕಥಾ ಸಂಕಲನದಲ್ಲಿ ನರಭಕ್ಷಕರ ಜೀವನವನ್ನು ರೋಮಾಂಚನಕಾರಿಯಾಗಿ ನಿರೂಪಿಸಿದ್ದು ಓದಿದಾಗ ಮೈನವಿರೇಳಿಸುವಂತೆ ಚಿತ್ರಿಸಿದ್ದಾರೆ. ಕಾಕೆಮಾನಿಯವರು ಹಲವಾರು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ‘ಬೇಟೆ ನೆನಪು’, ‘ಕವನ ಗುಚ್ಛ’, ‘ತುಳುನಾಡಿನ ವೀರನಾದ ಕೋಟಿ ಚನ್ನಯ್ಯ’, ಮತ್ತು ಕಥಾಸಂಕಲನ ‘ಬಿಲ್ಲು – ಬಾಣ’. ಇವಲ್ಲದೆ ಇತರ ಕೃತಿಗಳೆಂದರೆ ‘ಧ್ರುವ’, ‘ಪಣಿಯ ಸಮಾಜ ಪರಿಚಯ ಮತ್ತು ‘ಕೊಡಗಿನ ಇತಿಹಾಸ ಪುಟಗಳಿಂದ’. ಮೀನಕ್ಕರ ಎ. ಮಹಮ್ಮದ್ (ಶಶಿಪ್ರಿಯ) ರವರು ಕೊಡವ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಬರಹಗಾರರಾಗಿದ್ದು ಕಾಕೆಮಾನಿಯವರ ‘ಕೊಡಗಿನ ಇತಹಾಸ ಪುಟಗಳಿಂದ’ ಕೃತಿಯನ್ನು ‘ಕೊಡಗರ್ ಚರಿತ್ರೆರ ಪಾಳೆಲಿಂಜ’ ಎಂದು ಕೊಡವ ಭಾಷೆಗೆ ಅನುವಾದಿಸಿದ್ದಾರೆ. ‘ಬೇಟೆ ನೆನಪು’ ಕೃತಿಯನ್ನು ೨೦೦೬ ರಲ್ಲಿ ಸುವರ್ಣ ಕರ್ನಾಟಕ ಸಂದರ್ಭಕ್ಕಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮರು ಮುದ್ರಣ ಮಾಡಿದೆ. ಮಡಿಕೇರಿಯಲ್ಲಿದ್ದ ‘ಈಶ್ ಮಿತ್ರ ಮಂಡಳಿ’ ಎಂಬ ನಾಟಕ ಕಂಪನಿಯು ಪ್ರದರ್ಶಿಸುತ್ತಿದ್ದ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಕಾಕೆಮಾನಿಯವರು ಹಲವಾರು ಕತೆಗಳನ್ನು ಕೊಡವ ಭಾಷೆಯಲ್ಲಿಯೆ ಬರೆದಿದ್ದು ಅವುಗಳು ಕೇರೂ ಪಾಂಬಾಚಿ (ಹಗ್ಗವೂ ಹಾವಾಯಿತು), ಆಕಲ್ ಎಣ್ಣಿನ ಕಥೆ (ಆ ಕಲ್ಲು ಹೇಳಿದ ಕಥೆ), ಪೊಂದೇನ್ ಪಡೆ ಪೊತ್ತದ್ (ಹೆಜ್ಜೇನ ಧಾಳಿ), ಮಿತ್ರ ದ್ರೋಹ, ಚತ್ತ್ ಬದ್ಕ್ ನಾವೆಯ (ಸತ್ತು ಬದುಕಿದ ಆನೆಗಳು), ಕಾಂಗತ ಕೈರ ಕೈವಾಡ (ಕಾಣದ ಕೈಯ ಕೈವಾಡ), ಮದಿಚಾನೆರ ಪೋಕ್ಂಗಾಲ್ (ಮದಿಸಿದ ಆನೆಯ ಕೊನೆಗಾಲ), ಒಳ ಜಗಳ ಮುಂತಾದವುಗಳು.

