ಕಾಶಿ ವಿಶ್ವನಾಥ ಶೆಟ್ಟಿ

Home/Birthday/ಕಾಶಿ ವಿಶ್ವನಾಥ ಶೆಟ್ಟಿ
Loading Events
This event has passed.

೨೪.೦೨.೧೯೨೮ ೨೦.೦೮.೧೯೯೦ ಪಂಪ, ರನ್ನ, ಅಭಿನವ ಪಂಪರಿಂದ ಹಿಡಿದು ಕುಮಾರವ್ಯಾಸನವರೆಗೆ, ವಿಕ್ರಮಾರ್ಜುನ ವಿಜಯ, ಸಾಹಸ ಭೀಮ ವಿಜಯ, ಪಂಪ ರಾಮಾಯಣ, ಕುಮಾರವ್ಯಾಸ ಭಾರತ, ತೊರವೆ ರಾಮಾಯಣ ಮುಂತಾದ ಹಲವಾರು ಮಹಾಕಾವ್ಯಗಳು ರಚಿತಗೊಂಡ ನಂತರ ನವೋದಯ ಕಾಲದಲ್ಲಿ ಕುವೆಂಪುರವರ ‘ರಾಮಾಯಣ ದರ್ಶನಂ’, ಜಯದೇವಿ ತಾಯಿ ಲಿಗಾಡೆಯವರ ‘ಸಿದ್ಧರಾಮೇಶ್ವರ ಪುರಾಣ’, ಅಕ್ಕಮಹಾದೇವಿಯನ್ನು ಕುರಿತು ಸಂ.ಶಿ.ಭೂಸನೂರು ಮಠರವರು ಬರೆದ ‘ಭವ್ಯ ಮಾನವ’, ಮಹಾದೇವ ಬಣಕಾರರ ‘ವಿಶ್ವ ಬಂಧು ಮರುಳ ಸಿದ್ಧ’, ಹಿ.ಮ. ನಾಗಯ್ಯನವರ ಸ್ವಾತಂತ್ರ‍್ಯ ಸಂಗ್ರಾಮದ ಮಹಾಕಾವ್ಯವಾದ ‘ಭವ್ಯ ಭಾರತ ಭಾಗ್ಯೋದಯ’ ಇವುಗಳಲ್ಲದೆ ಕೃಷ್ಣನನ್ನು ಕುರಿತು ಪು.ತಿ.ನ.ರವರು ಬರೆದ ‘ಶ್ರೀ ಹರಿ ಚರಿತೆ’, ಶ್ರೀರಾಮನನ್ನು ಕುರಿತು ಮಾಸ್ತಿಯವರು ಬರೆದ ‘ಶ್ರೀರಾಮ ಪಟ್ಟಾಭಿಷೇಕ’, ಗೋಕಾಕರ ‘ಭಾರತ ಸಿಂಧು ರಶ್ಮಿ’ ಮುಂತಾದವುಗಳಿಂದ ಸ್ಪೂರ್ತಿ ಪಡೆದ ಕಾಶಿ ವಿಶ್ವನಾಥ ಶೆಟ್ಟಿಯವರು ಬರೆದ ಮಹಾ ಕಾವ್ಯ ‘ಬುದ್ಧ ಚರಿತ ಮಹಾ ಮಧು’ ಕೂಡ ಮೇಲಿನ ಮಹಾಕಾವ್ಯಗಳ ಸಾಲಿಗೆ ಸೇರುವ ಅದ್ಭುತ ಕೃತಿಯಾಗಿದೆ. ಬುದ್ಧನ ಜೀವನವನ್ನು ಕುರಿತು ಬರೆದ ಕನ್ನಡದ ಮೊದಲ ಮಹಾ ಕಾವ್ಯ ಇದಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿದ್ದು ಆರು ಸಾವಿರ ಪದ್ಯಗಳಿವೆ. ಸುಮಾರು ವರ್ಷಗಳ ಅಧ್ಯಯನ, ಚಿಂತನೆ, ಪ್ರವಾಸಾನುಭವದಲ್ಲಿ ಸಂಗ್ರಹಿಸಿದ ವಿಷಯಗಳನ್ನು ಸತತವಾಗಿ ಎರಡು ವರ್ಷಗಳ ಕಾಲ ಕುಳಿತು ರಚಿಸಿದ ಮಹಾ ಕಾವ್ಯ. ಮಹಾಕಾವ್ಯಗಳ ರಚನೆಯ ಕಾಲವಲ್ಲ ಎನ್ನುವ ಸಮಯದಲ್ಲೂ ಮಹಾ ಕಾವ್ಯ ರಚಿಸಿದ ಕಾಶಿ ವಿಶ್ವನಾಥ ಶೆಟ್ಟಿಯವರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಕೃಷ್ಣ ಶೆಟ್ಟಿ, ತಾಯಿ ಸೀತಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ತುಮಕೂರಿನಲ್ಲಿ. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ. ಶಾಲೆಯಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಮೂಡಿ ಸಾಹಿತ್ಯ ಚಟುವಟಿಕೆಗಳಿಗಾಗಿ ‘ವಿಶ್ವ ಸಂಘ’ ಎಂಬ ಸಂಘವನ್ನು ಸ್ಥಾಪಿಸಿದಾಗ ಸಂಘವನ್ನು ಉದ್ಘಾಟಿಸಿದವರು ಪ್ರಸಿದ್ಧ ಪತ್ರಕರ್ತರಾಗಿದ್ದ ತಿ.ತಾ.ಶರ್ಮರು. ಇವರ ಸಾಹಿತ್ಯ ಚಟುವಟಿಕೆಗಳ ಅತ್ಯುತ್ಸಾಹವನ್ನು ಮೆಚ್ಚಿಮಾತನಾಡಿದಾಗ ವಿಶ್ವನಾಥ ಶೆಟ್ಟರಿಗೆ ಹೊಸ ಹುರುಪು ಬಂದು ಅನೇಕ ಕಾರ‍್ಯಕ್ರಮಗಳನ್ನೇರ್ಪಡಿಸಿದರು. ಇಂಟರ್ ಮೀಡಿಯಟ್ ನಂತರ ತುಮಕೂರು ಕಾಲೇಜಿನಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿದ್ದರೂ ಕುವೆಂಪು, ಡಿ.ಎಲ್.ಎನ್., ಎಸ್.ವಿ.ಪರಮೇಶ್ವರ ಭಟ್ಟ. ಕ.ವೆಂ.ರಾಘವಾಚಾರ‍್ಯ ಮುಂತಾದವರುಗಳು ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದುದರಿಂದ ಪದವಿ ಪಡೆಯಲು ಮೈಸೂರನ್ನೇ ಆಯ್ಕೆಮಾಡಿಕೊಂಡರು. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಕೆಲಸಮಾಡಿದರು. ನಂತರ ಅಧ್ಯಾಪಕ ಹುದ್ದೆಯು ತುಮಕೂರಿನ ಕಾಲೇಜಿನಲ್ಲಿಯೇ ದೊರೆತಿದ್ದರಿಂದ ತುಮಕೂರನ್ನೇ ಆಯ್ಕೆ ಮಾಡಿಕೊಂಡು ಕೆಲ ವರ್ಷಗಳ ನಂತರ ಚಿಕ್ಕಮಗಳೂರಿಗೆ ವರ್ಗವಾಗಿ ಅಲ್ಲಿಯೇ ನಿವೃತ್ತರಾದರು. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ಕೃಷಿಯನ್ನು ರಚಿಸಿದ್ದು, ‘ಕಾಶೀ ಕಾವೇರಿ’ ಪ್ರಕಟಗೊಂಡ ಮೊದಲ ಕವನ ಸಂಕಲನ. ತೀ.ನಂ.ಶ್ರೀ. ಯವರೇ ಇವರ ಕಾವ್ಯದ ದೃಷ್ಟಿ, ನಿರರ್ಗಳ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಂತರ ಪ್ರಕಟಗೊಂಡ ಕವನ ಸಂಕಲನಗಳು ಮಾವು – ಮಲ್ಲಿಗೆ, ರಾಗ – ಯೋಗ,  ಮೇಘಮಾಲೆ, ಚಂದ್ರಿಕಾ – ಚಂದ್ರಮ, ಮುಗುಳು ಮಿಂಚು, ಸಮರ್ಪಣಾ, ದ್ರಾಕ್ಷಿ – ಮದಿರಾಕ್ಷಿ, ಮುಂತಾದವುಗಳು. ಕಾದಂಬರಿಗಳು – ಸೀತಕ್ಕನ ಸಮರ, ಸಮಾಗಮ, ಜೀವಕ್ಕೆ ಜೀವ, ಅಭಾಗಿನಿ, ಭಗ್ನ ಹೃದಯ, ನಾಟಕಗಳು – ಭವ್ಯ ಭಾರತ ಪರಂಪರೆ, ಧರ್ಮನಂದನ, ಉತ್ಕೃಷ್ಟ ಭಾರತ, ಸಂಘಮಿತ್ರ, ಏಕಲವ್ಯ, ಮಹಾಭೀಷ್ಕ್ರಮಣ. ಕಥಾ ಸಂಕಲನಗಳು – ಗೃಹದೇವತೆ, ಬ್ರಹ್ಮಗಂಟು, ಶರಣು ಶನಿದೇವ, ಆಚಾರದ ಬೆನ್ನಲ್ಲಿ, ಜೀವನ ಚರಿತ್ರೆಗಳು – ಸ್ವಾಮಿ ಶಿವಾನಂದ ಸರಸ್ವತಿ,  ಶ್ರೀ ಲಕ್ಷ್ಮೀನರಸಿಂಹ ಸೋಮಯಾಜಿ, ವೀರ ಸಾವರ್ಕರ್. ಶ್ರೀ ಲಕ್ಷ್ಮೀನರಸಿಂಹ ಸೋಮಯಾಜಿ ಕೃತಿಯು ವೈಶ್ಯ ಸಮುದಾಯಕ್ಕೆ ಪವಿತ್ರ ಗ್ರಂಥವಾಗಿದೆ. ಶ್ರೀ ವಾಸವಿ ದೇವಿಯ ಬಗೆಗೆ ಅಷ್ಟಕ ಸುಪ್ರಭಾತ, ತ್ರಿಶತಿ ಮತ್ತು ಜೀವನ ಚರಿ‌ತ್ರೆಗಳನ್ನು ರಚಿಸಿದ್ದಾರೆ. ವಾಸವಿ ಜಯಂತ್ಯೋತ್ಸವದಂದು ವಾಸವಿಗೆ ಉಯ್ಯಾಲೆ ಸೇವೆ ಮಾಡುವ ಸಂದರ್ಭದಲ್ಲಿ ಹಾಡಲನುಕೂಲವಾಗುವಂತೆ ಲಾಲಿ ಹಾಡನ್ನು ರಚಿಸಿದ್ದು ಇದು ಬಹಳಷ್ಟು ಜನಪ್ರಿಯ ಹಾಡಾಗಿದೆ. ದೈವ ಭಕ್ತರಾಗಿದ್ದ ಕಾಶಿ ವಿಶ್ವನಾಥರು ಗಣೇಶೋತ್ಸವ, ರಾಮೋತ್ಸವಗಳ ಸಂದರ್ಭದಲ್ಲಿ ಊರಲ್ಲೆಲ್ಲಾ ಉತ್ಸವ ಹೊರಡಿಸಿ ಸಾರ್ವಜನಿಕರು ಭಾಗಿಯಾಗುವಂತೆ ಮಾಡುವ ಕುಶಲ ಸಂಘಟಕರೆನಿಸಿದ್ದರು. ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಂತೆ ಸಾಹಿತ್ಯ ಪರಿಚಾರಿಕೆಯಲ್ಲಿಯೂ  ಮುಂಚೂಣಿಯಲ್ಲಿದ್ದು ಹಲವಾರು ವಿಚಾರ ಸಂಕಿರಣ, ಸಭೆ, ಸಮಾರಂಭಗಳ ರೂವಾರಿಯಾಗಿದ್ದರು. ಕಾವ್ಯ, ಖಂಡಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಸಣ್ಣಕತೆ, ಜೀವನ ಚರಿತ್ರೆ – ಹೀಗೆ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿದ್ದು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಕುಮಾರ ವಾಲ್ಮೀಕಿ, ರುದ್ರ ಭಟ್ಟ, ಕನ್ನಡ ಶತಕ ಸಾಹಿತ್ಯ, ಕನ್ನಡದಲ್ಲೊಂದು ಕ್ರೈಸ್ತಯುಗ, ಕನ್ನಡ ಕವಯಿತ್ರಿಯರು, ವಚನಕಾರ್ತಿಯರು ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಎಲಿಯಟ್ಟನ ಮರ್ಡರ್ ಇನ್ ದಿ ಕ್ಯಾಥಡ್ರಲ್ ನಾಟಕವನ್ನು ‘ದೇಗುಲದಲ್ಲಿ ಕೊಲೆ’ ಎಂದು ಅನುವಾದಿಸಿದ್ದಾರೆ. ಕುವೆಂಪು ಸಾಹಿತ್ಯ ಸಂಬಂಧಿ ಸಂಪುಟವಾದ ‘ಉಪಾಯನ ಕೃತಿ ಕರಂಡ’ ನೆನಪಿನ ಸಂಚಿಕೆಯ ಸಂಪಾದಕರಾಗಿಯೂ ದುಡಿದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದಲ್ಲದೆ ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸ್ಕೌಟ್ ಚಳುವಳಿಗಳಲ್ಲಿ ಭಾಗಿಯಾಗಿ, ‘ಮಹಾರಾಜ ಸ್ಕೌಟ್’ ಪ್ರಶಸ್ತಿ ಪುರಸ್ಕೃತರಾಗಿದ್ದ ಕಾಶಿ ವಿಶ್ವನಾಥ ಶೆಟ್ಟಿಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದದ್ದು ೧೯೯೦ರ ಆಗಸ್ಟ್ ೨೦ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top