Loading Events

« All Events

  • This event has passed.

ಕೀರ್ತಿನಾಥ ಕುರ್ತಕೋಟಿ

October 13

೧೩.೧೦.೧೯೨೮ ೩೧..೨೦೦೩ ಕಾವ್ಯ, ಹರಟೆ, ನಾಟಕ ಮುಂತಾದ ಪ್ರಕಾರಗಳಲ್ಲಿ ಕೃತಿರಚನೆಯಲ್ಲಿ ತೊಡಗಿಸಿಕೊಂಡಿದ್ದು ಒಮ್ಮೆಲೆ ವಿಮರ್ಶಾಕ್ಷೇತ್ರಕ್ಕೆ ಜಿಗಿದ ಕುರ್ತಕೋಟಿಯವರು ಹುಟ್ಟಿದ್ದು ಗದಗದಲ್ಲಿ ೧೯೨೮ ರ ಅಕ್ಟೋಬರ್ ೧೩ ರಂದು. ತಂದೆ ದತ್ತಾತ್ರೇಯ, ತಾಯಿ ಪದ್ಮಾವತಿ. ಪ್ರಾರಂಭಿಕ ಶಿಕ್ಷಣ ಗದಗಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ (೧೯೫೦) ಪಡೆದ ನಂತರ ಗದಗಿನ ವಿದ್ಯಾದಾನ ಸಮಿತಿಯ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಕಾಲ. ೧೯೫೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್‌) ಪದವಿ ಪಡೆದ ನಂತರ ಗುಜರಾತಿನ ಸರದಾರ ಪಟೇಲ್‌ ವಿ.ವಿ.ದ ಕಾಲೇಜು ಒಂದರಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ನಂತರ ಸ್ನಾತಕೋತ್ತರ ತರಗತಿಗಳ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪಿಎಚ್‌.ಡಿ. ಪದವಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ – ಹೀಗೆ ಹಲವಾರು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ. ಸಾಹಿತ್ಯ ರಂಗಕ್ಕೆ ಪ್ರವೇಶಿಸಿದ್ದು ಕವನಗಳ ಮೂಲಕ ಬಿ.ಎ. ವ್ಯಾಸಂಗ ಮಾಡುತ್ತಿದ್ದಾಗಲೇ ಮಿತ್ರರಾದ ಪುಣೇಕರ ಕಗೇಕಲ್‌ರೊಡಗೂಡಿ ಹೊರತಂದ ಕವನ ಸಂಕಲನ ‘ಗಾನಕೇಳಿ’.ನಂತರ ಬರೆದದ್ದು ನಾಟಕ. ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಮೂಡಿಬಂದ ಸಾಂಕೇತಿಕ ನಾಟಕ ‘ಆಮನಿ’ ಬಹು ಪ್ರಸಿದ್ಧಿಯನ್ನು ತಂದು ಕೊಟ್ಟಿದ್ದಲ್ಲದೆ ಮುಂಬಯಿ ಸರಕಾರದಿಂದ ಮೊದಲ ಬಹುಮಾನವನ್ನು ಪಡೆದುಕೊಂಡಿತು. ನಂತರ ಬರೆದ ನಾಟಕಗಳು ‘ಸ್ವಪ್ನದರ್ಶಿ ಮತ್ತು ಇತರ ನಾಟಕಗಳು’, ‘ಚಂದ್ರಗುಪ್ತ’, ‘ಸ್ವಪ್ನ ವಾಸವದತ್ತಾ’ ಮುಂತಾದವುಗಳು. ವಿಮರ್ಶಾ ಕ್ಷೇತ್ರಕ್ಕೆ ಬಂದುದು ಆಕಸ್ಮಿಕವಾಗಿ. ಧಾರವಾಡದ ಮನೋಹರ ಗ್ರಂಥಮಾಲೆಯು ತನ್ನ ಬೆಳ್ಳಿಹಬ್ಬದ ಆಚರಣೆಯ ಸಂದರ್ಭಕ್ಕಾಗಿ (೧೯೫೮) ಮೂರು ಬೃಹತ್‌ ಸಂಪುಟಗಳ ಪ್ರಕಟಣೆಯ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡು, ಅದರಲ್ಲಿ ವಿವಿಧ ಪ್ರಕಾರಗಳ ಕನ್ನಡ ಸಾಹಿತ್ಯದ ಸಂಕಲನಗಳನ್ನು ಹೊರತರಲು ಆಯೋಜಿಸಿದ್ದು, ಈ ಸಂಪುಟಗಳನ್ನು ಸಂಪಾದಿಸಿ ಅವುಗಳಿಗೆ ವಿಸ್ತಾರವಾದ ಪ್ರಸ್ತಾವನೆಯನ್ನು ಬರೆಯುವ ಜವಾಬ್ದಾರಿಯನ್ನು ಕುರ್ತಕೋಟಿಯವರಿಗೆ ವಹಿಸಿತು, ಅಳುಕಿನಿಂದಲೇ ವಹಿಸಿಕೊಂಡ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. “ವಿಮರ್ಶೆ ಎಂದರೆ ಹಿಂಜರಿಯುತ್ತಿದ್ದೆನಾದರೂ ಒಮ್ಮೆಗೆ ಧುಮುಕಿ ಬಿಟ್ಟೆ. ಬಾಲ್ಯದಿಂದಲೂ ನನ್ನೊಳಗೆ ತುಂಬಿಕೊಂಡಿದ್ದ ಸಾಹಿತ್ಯದ ಅನುಭವಕ್ಕೆ ಒಂದು ಅಭಿವ್ಯಕ್ತಿಕೊಡಲು ಒಂದು ಅವಕಾಶ ಬೇಕಿತ್ತು. ಅದು ನೆರವೇರಿ ಒಮ್ಮೆಗೆ ವಿಮರ್ಶಕ ಪಟ್ಟ ದೊರೆತು ಸ್ಥಿರವಾಗಿ ಹೋಯಿತು” ಎಂದು ಹೇಳಿಕೊಂಡಿದ್ದಾರೆ. ಯುಗಧರ್ಮ ಮತ್ತು ಸಾಹಿತ್ಯ ದರ್ಶನ, ಕಾವ್ಯ, ನಾಟಕ, ಗೀತನಾಟಕ, ಏಕಾಂಕ ನಾಟಕಗಳು, ರೇಡಿಯೋ ನಾಟಕಗಳು, ಸಣ್ಣಕತೆ ಮತ್ತು ಕಾದಂಬರಿ ಮುಂತಾದವುಗಳಿಗೆ ಪ್ರಸ್ತಾವನೆ ಬರೆದು ‘ನಡೆದು ಬಂದ ದಾರಿ’ ಎಂಬ ಹೆಸರಿನಿಂದ ೩ ಸಂಪುಟಗಳಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಮೂರು ಸಂಪುಟಗಳು ಕನ್ನಡ ಸಾಹಿತ್ಯದ ಅತ್ಯಂತ ಮಹತ್ವದ ಕೃತಿಗಳಾಗಿವೆ. ಇವರ ಇನ್ನಿತರ ಮಹತ್ವದ ವಿಮರ್ಶಾಕೃತಿಗಳೆಂದರೆ ಸಾಹಿತ್ಯವಿಮರ್ಶೆ, ನವ್ಯಕಾವ್ಯಪ್ರಯೋಗ, ಹೊಸಗನ್ನಡದಲ್ಲಿ ಮಹಾಕಾವ್ಯ, ಶ್ರೀರಾಮಾಯಣದರ್ಶನಂ, ಯಶೋಧರ ಚರಿತೆಯ ಕಾವ್ಯತಂತ್ರ, ವಿಮರ್ಶೆಯ ವಿನಯ, ಬಯಲು ಮತ್ತು ಆಲಯ ಮುಂತಾದ ವಿಮರ್ಶಾ ಕೃತಿಗಳು. ಸಂಗ್ಯಾಬಾಳ್ಯ ಬಯಲಾಟ ನಾಟಕವನ್ನು ಡಾ. ಚಂದ್ರಶೇಖರ ಕಂಬಾರರೊಡನೆ ಸೇರಿ ಸಂಪಾದಿಸಿದ್ದಾರೆ. ಮತ್ತೊಂದು ಪ್ರಬಂಧಗಳ ಸಂಕಲನ ‘ಸಂಸ್ಕೃತಿ ಮತ್ತು ಸ್ಪಂದನ’, ಉರಿಯ ನಾಲಗೆ (ಅಂಕಣ ಬರಹಗಳು) ಕೃತಿಗಳಲ್ಲದೆ ಮನೋಹರ ಗ್ರಂಥಮಾಲೆಯ ಸುವರ್ಣ ಮಹೋತ್ಸವದ ಸಂಪುಟ ‘ಪುಟ ಬಂಗಾರ’. ಇವರ ವಿಮರ್ಶಾ ಕ್ಷೇತ್ರದಲ್ಲಿನ ಸಾಹಿತ್ಯ ಶಕ್ತಿಯ ಮತ್ತೊಂದು ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ಸಂದರ್ಭಕ್ಕಾಗಿ ಸಂಪಾದಿಸಿದ್ದು ‘ರಾಜಸ್ಪರ್ಶ’. ಇದಲ್ಲದೆ ಬಿಡಿಯಾಗಿ ಮನ್ವಂತರ ಮಾಲೆಗಾಗಿ ಮನ್ವಂತರ – ೨ (ನವ್ಯಕಾವ್ಯ ಪ್ರಯೋಗ) ಹಾಗೂ ಮನ್ವಂತರ – ೧೦ (ಭೃಂಗದ ಬೆನ್ನೇರಿ) ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಮನೋಹರ ಗ್ರಂಥಮಾಲೆಯ ಪ್ರಕಟಣೆಯ ಸಲಹೆಗಾರರಾಗಿದ್ದ ಬೇಂದ್ರೆ, ಗೋಕಾಕ್‌, ಮುಗಳಿಯವರೊಡನೆ ಕುರ್ತಕೋಟಿಯವರ ಪಾಲೂ ಬಹುದೊಡ್ಡದೆ. ಕುರ್ತಕೋಟಿಯವರಿಗೆ ಬೇಂದ್ರೆ ಮತ್ತು ಕುಮಾರವ್ಯಾಸರೆಂದರೆ ಅಚ್ಚುಮೆಚ್ಚು, ಬೇಂದ್ರೆಯವರನ್ನು ಇವರಷ್ಟು ಅಧ್ಯಯನ ಮಾಡಿರುವ, ಬೇಂದ್ರೆ ಸಾಹಿತ್ಯ ಕುರಿತು ಇವರಷ್ಟು ವಿಮರ್ಶೆ ಬರೆದಿರುವವರು ಮತ್ತೊಬ್ಬರಿರಲಾರರು. ಭೃಂಗದ ಬೆನ್ನೇರಿ ಕೃತಿಯಲ್ಲಿ ಬೇಂದ್ರೆಯವರ ಕಾವ್ಯದರ್ಶನವಿದೆ. ಕುಮಾರವ್ಯಾಸ, ಇವರದು ಇಬ್ಬರ ಹುಟ್ಟೂರು ಗದಗು. ತಮ್ಮ ಉಪನ್ಯಾಸಗಳಲ್ಲಿ ಕುಮಾರವ್ಯಾಸನನ್ನು ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದಷ್ಟೇ ಅಲ್ಲದೆ ಕುಮಾರ ವ್ಯಾಸಭಾರತವು ಅವರ ನಾಲಗೆಯಲ್ಲಿ ನೆಲೆಸಿತ್ತು. ‘ನವ್ಯಕಾವ್ಯ ಪ್ರಯೋಗ’ ಕೃತಿಯಲ್ಲಿ ನವ್ಯಕಾವ್ಯ ಪರಂಪರೆಯನ್ನು ಆರು ಜನ ಕನ್ನಡ ಕವಿಗಳ ಕಾವ್ಯದ ಉದಾಹರಣೆಯೊಡನೆ ಚರ್ಚಿಸಿರುವುದೇ ‘ನವ್ಯ ಕಾವ್ಯ ಪ್ರಯೋಗ’ ಕೃತಿಯ ವಿಶೇಷತೆಗಳಲ್ಲೊಂದು ಮತ್ತೊಂದು ಇವರ ಮಹತ್ವದ ಕೃತಿ ಎಂದರೆ ‘ನೂರು ಮರ ನೂರು ಸ್ವರ’. ಮಹತ್ವದ ಲೇಖಕರಾದ ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ, ದೇವನೂರ ಮಹಾದೇವ ಮುಂತಾದವರುಗಳ ಬಗ್ಗೆ ಬರೆದ ಲೇಖನಗಳ ಸಂಗ್ರಹ. ಬೇಂದ್ರೆಯವರಷ್ಟೇ ಆಪ್ತರಾಗಿದ್ದ ಶಂಬಾಜೋಶಿಯವರ‍ ಮರಾಠಿ ಕೃತಿಯನ್ನು ‘ಮರ‍್ಹಾಠ ಸಂಸ್ಕೃತಿ – ಕೆಲವು ಸಮಸ್ಯೆಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಕುರ್ತಕೋಟಿಯವರು ಸೃಜನಶೀಲ ಸಾಹಿತ್ಯ, ವಿಮರ್ಶೆಗಷ್ಟೇ ಸೀಮಿತರಾಗದೆ ಸದಸ್ಯರಾಗಿ, ಸಲಹೆಗಾರರಾಗಿ, ಸಂಪಾದಕರಾಗಿ ನಿರ್ವಹಿಸಿದ ಜವಾಬ್ದಾರಿಗಳಿಗೂ ಲೆಕ್ಕವಿಲ್ಲ. ಹೊಸದಿಲ್ಲಿಯ ಭಾರತೀಯ ಭಾಷಾಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಭಾಷಾ (ಕನ್ನಡ) ಸಲಹಾಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಪಿ.ಇ.ಎನ್‌. ಇಂಡಿಯಾ ಸದಸ್ಯರಾಗಿ, ಅಮೆರಿಕನ್‌ ಸ್ಟಡೀಸ್‌ ರಿಸರ್ಚ್ ಸೆಂಟರ್ ಸದಸ್ಯರಾಗಿ, ಧಾರವಾಡದ ಮನೋಹರ ಗ್ರಂಥ ಮಾಲೆಯ ಸಾಹಿತ್ಯ ಸಲಹೆಗಾರರಾಗಿದಷ್ಟೇ ಅಲ್ಲದೆ ಕನ್ನಡ, ಸಂಸ್ಕೃತ, ಇಂಗ್ಲಿಷ್‌, ಹಿಂದಿ, ಗುಜರಾತಿ, ಮರಾಠಿ ಸಾಹಿತ್ಯ ಕುರಿತು ಪಾಂಡಿತ್ಯ ಪೂರ್ಣವಾಗಿ ಮಾತನಾಡಬಲ್ಲವರಾಗಿದ್ದರಿಂದ ಭಾರತೀಯ ಜ್ಞಾನಪೀಠ ಪ್ರಶಸ್ತಿಯ ಪ್ರಾದೇಶಿಕ (ಕನ್ನಡ) ಸಮಿತಿಯ ಸದಸ್ಯರಾಗಿದ್ದಾಗ ಜ್ಞಾನಪೀಠಪ್ರಶಸ್ತಿಗೆ ಅರ್ಹಕೃತಿ/ಲೇಖಕರನ್ನು ಗುರುತಿಸಿ, ಅದರ ವಿಮರ್ಶೆಯನ್ನು ಇಂಗ್ಲಿಷ್‌ನಲ್ಲಿ ಬರೆದು ಕೇಂದ್ರ ಸಮಿತಿಗೆ ಕಳುಹಿಸಬೇಕಾದ್ದರಿಂದ ‘ಕಾರಂತರ ಮೂಕಜ್ಜಿಯ ಕನಸುಗಳು’ ಮತ್ತು ‘ನಾಕುತಂತಿ’ ಬಗೆಗೆ ಮೌಲಿಕ ವಿಮರ್ಶೆ ಬರೆದು ಕಳುಹಿಸಿದ ಕೀರ್ತಿ ಕೀರ್ತಿನಾಥರದು. ಹೀಗೆ ಮಿಮರ್ಶಾ ಕ್ಷೇತ್ರದಲ್ಲಿನ ಮನ್ನಣೆಗಾಗಿ ಕುರ್ತಕೋಟಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (೧೯೭೨), ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್‌ (೧೯೯೦), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೧), ಕೇಂದ್ರ ಸಾಹಿತ್ಯ ಅಕಾಡಮಿ ಭಾಷಾಂತರ ಪ್ರಶಸ್ತಿ (೧೯೯೩ ), ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫), ವಿ.ಎಂ. ಇನಾಂದಾರ್ ಪ್ರಶಸ್ತಿ (೧೯೯೬) ಮುಂತಾದ ಪ್ರಶಸ್ತಿಗಳಲ್ಲದೆ ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಕನ್ನಡದ ಕೀರ್ತಿ’ (೧೯೮೯) – ಮುಂತಾದ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಕುರ್ತಕೋಟಿಯವರು ವಿಮರ್ಶಾಕ್ಷೇತ್ರದಿಂದ ನಿರ್ಗಮಿಸಿದ್ದು ೨೦೦೩ ರ ಜುಲೈ ೩೧ ರಂದು. ಇವರ ನಿಧನದ ಕೇವಲ ಮೂರು ಗಂಟೆಗಳ ಮುಂಚೆ ಶ್ರೀಮತಿ ಸರಸ್ವತಿ ಕುರ್ತಕೋಟಿಯವರೂ ನಿಧನರಾಗಿದ್ದು, ಸಂಗಾತಿಯೊಡನೆ ಸಾವಿನಲ್ಲೂ ಜತೆಗೂಡಿದ್ದು ವಿಧಿಯ ವಿಚಿತ್ರ. ಇವರು ತೀರಿಕೊಂಡನಂತರ ಕುರ್ತಿಕೋಟಿ ಮೆಮೊರಿಯಲ್‌ ಟ್ರಸ್ಟ್‌ ಪ್ರಕಟಿಸಿರುವ ಕಾದಂಬರಿ ‘ಅರ್ಥಾಂತರ’. ಸ್ವಾತಂತ್ರ್ಯಪೂರ್ವ ಘಟನೆಗಳ ಸುತ್ತ ಹೆಣೆದ ಕಾದಂಬರಿ. ಅನಿರೀಕ್ಷಿತವಾಗಿ ಕನ್ನಡಿಗರಿಗೆ ದೊರೆತ ಕೃತಿ.

Details

Date:
October 13
Event Category: