Loading Events

« All Events

ಕುಂ.ಬಾ. ಸದಾಶಿವಪ್ಪ

July 1

೦೧.೦೭.೧೯೩೬. ಅಪ್ಪಟ ಗಾಂಧಿವಾದಿ, ಶಿಕ್ಷಣ ತಜ್ಞ, ಸಂಶೋಧಕ ಪ್ರವೃತ್ತಿಯ ಸದಾಶಿವಪ್ಪನವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕುಂಚೂರು ಗ್ರಾಮದಲ್ಲಿ ೧೯೩೬ರ ಜುಲೈ ೧ ರಂದು. ತಂದೆ ಹನುಮಂತಪ್ಪ, ತಾಯಿ ತಿಪ್ಪಾಂಬ. ಪ್ರಾರಂಭಿಕ ಶಿಕ್ಷಣ ಕುಂಚೂರು, ಹಿರೇಹಡಗಲಿಗಳಲ್ಲಿ. ಹರದನಹಳ್ಳಿ ಜಿಲ್ಲಾಬೋರ್ಡ್ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎಡ್. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹರಪನಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ. ಸೇವಾವಧಿ ಪೂರ್ತಾ ಅಧ್ಯಾಪಕರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿ. ಹರಪನಹಳ್ಳಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ೧೯೫೩ರ ಸುಮಾರಿನಲ್ಲಿ ಹಂಪಿಯಲ್ಲಿ ನಡೆದ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಎರಡು ದಿವಸಗಳ ಅಧಿವೇಶನದಲ್ಲಿ ವಹಿಸಿಕೊಂಡ ಸ್ವಯಂಸೇವಕರ ಮುಖಂಡತ್ವ. ಎಳವೆಯಿಂದಲೇ ಸಾಹಿತ್ಯದ ಬಗ್ಗೆ ಆಸ್ಥೆವಹಿಸಿದಂತೆ ಸಂಶೋಧನ ಮನಸ್ಸಿನಿಂದ ಬರೆದ ಹಲವಾರು ಲೇಖನಗಳು. ಮೊದಲ ಕವನ ಸಂಕಲನ ಪ್ರಕಟವಾದುದು ‘ಜೀವನ ಜೋಕಾಲಿ’. ನಂತರ ಪ್ರಕಟವಾದ ಹಾಸ್ಯ ಕತೆಗಳ ಸಂಕಲನ ‘ಉಸಿರ ಕಡಲ ಹೆಸರ ಹಡಗುಗಳು’. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಚಿಸಿದ ಕೃತಿಗಳಾದ ‘ಕನ್ನಡ ಭಾಷಾ ಬೋಧನ ವಿಜ್ಞಾನ-ಬೋಧನಾ ಪದ್ಧತಿ’. ಪರಿಸಿರ ಮಾಲಿನ್ಯದ ಬಗ್ಗೆ ಬರೆದ ಕೃತಿ ‘ಪರಿಸರ ಮಾಲಿನ್ಯ ಮತ್ತು ರಕ್ಷಣೆ’. ಸಾಮಾಜಿಕವಾಗಿ ಹಾದಿ ತಪ್ಪುತ್ತಿರುವ ಯುವಜನತೆಯನ್ನು ಸರಿದಾರಿಗೆ ತರಬೇಕೆಂಬ ಉದ್ದೇಶದಿಂದ ರಚಿಸಿದ ಕೃತಿ ‘ಮಾದಕ ಪದಾರ್ಥಗಳ ಸೇವನೆ – ಒಂದು ಸಾಮಾಜಿಕ ಪಿಡುಗು’ ಕರ್ನಾಟಕದ ಬಗ್ಗೆ ಸಮಗ್ರ ಪರಿಚಯ ಮಾಡಿಸುವ ದೃಷ್ಟಿಯಿಂದ ರಚಿಸಿದ ಕೃತಿಗಳು- ‘ಕರ್ನಾಟಕ ಕುತೂಹಲ’ (ಪ್ರಶ್ನೋತ್ತರಗಳು), ಕರ್ನಾಟಕದ ಸಮಗ್ರ ಪರಿಚಯವಲ್ಲದೆ ತಾವು ಹುಟ್ಟಿದ ಹರಪನಹಳ್ಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ಹರಪನಹಳ್ಳಿಯ ಪಾಳೇಗಾರರು, ಹರಪನಹಳ್ಳಿ ಪಾಳೇಗಾರರ ಇತಿಹಾಸ ದರ್ಶನ, ಹರಪನ ಹಳ್ಳಿಯ ತಾಲ್ಲೂಕು ಪರಿಚಯ ಮುಂತಾದ ಕೃತಿಗಳ ಜೊತೆಗೆ ಬಳ್ಳಾರಿ ಜಿಲ್ಲೆಯ ಪರಿಚಯದ ‘ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ – ಬಳ್ಳಾರಿ ಜಿಲ್ಲಾ ಪ್ರಾಚೀನ ಇತಿಹಾಸ’ ಪುಸ್ತಕಗಳ ಜೊತೆಗೆ ವ್ಯಕ್ತಿ ಚಿತ್ರಣದ ಕೃತಿಗಳಾದ ‘ನಾ ಕಂಡ ಸಂಗೀತ ದಿಗ್ಗಜರು’ ಗ್ರಂಥದಲ್ಲಿ ಪುರಂದರದಾಸರು, ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನ್ಸೂರ್, ಎಂ.ಎಸ್.ಸುಬ್ಬುಲಕ್ಷಿ ಮುಂತಾದವರುಗಳ ಬಗ್ಗೆ ಒಳ ನೋಟವನ್ನು ನೀಡಿದ್ದಾರೆ. ಇದಲ್ಲದೆ ‘ವಿಶ್ವದ ವಿಭೂತಿ ಪುರುಷರು’ ಗ್ರಂಥದಲ್ಲಿ ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ್, ಬಸವೇಶ್ವರ, ಗಾಂಧೀಜಿ ಮುಂತಾದವರುಗಳಲ್ಲದೆ ‘ಶ್ರೀಸಾಮಾನ್ಯರ ಕವಿಗಳುಕೃತಿಯಲ್ಲಿ ಕಬೀರ್, ತಿರುವಳ್ಳವರ್, ವೇಮನ ಮತ್ತು ಸರ್ವಜ್ಞರನ್ನು ಪರಿಚಯಿಸಿದ್ದಾರೆ.        ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೇವೇಂದ್ರಪ್ಪ ಹಾಗೂ ಜಾನಪದ ಕಲೆಗಳು, ಜೋಳಿಗಿ ತುಂಬಾ ಜಾನಪದ ಹೋಳಿಗಿ, ನಾವ್ ಹಾಡ್ತೇವ ತರಾತರ, ಜಾನಪದ ದೀವಟಿಕೆಗಳು, ಜಾನಪದ ಮುಕ್ತಕಗಳು, ಮುಂತಾದವುಗಳು ಸೇರಿ ಸುಮಾರು ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಟೀಚಿಂಗ್ ಆಫ್ ಇಂಗ್ಲಿಷ್ ಲಾಂಗವೇಜ್, ಗಾಂಧೀಜಿ ಅಂಡ್ ಬೇಸಿಕ್ ಎಜುಕೇಷನ್, ಎಕ್ಸಾಮಿನೇಷನ್ ಅಂಡ್ ಇವಾಲ್ಯುಯೇಷನ್ ಇನ್ ಎಜುಕೇಷನ್ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಶಿಷ್ಟ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರ ಅನುಕೂಲಕ್ಕಾಗಿ ಹಲವಾರು ಕೃತಿಗಳನ್ನು  ರಚಿಸಿದಂತೆ ಸಂಶೋಧಕ ಮನಸ್ಸಿನಿಂದ ಸದಾಶಿವಪ್ಪನವರು ವಿವಿಧ ವಿಷಯಗಳ ಬಗ್ಗೆ  ಸಂಶೋಧನೆ ನಡೆಸಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಬಾಗಳಿ ಕಂಚಿನ ಪತ್ರ, ಹರಪನ ಹಳ್ಳಿ ಪಾಳೆಗಾರರು ಸ್ಥಾಪಿಸಿದ ಸಂಪ್ರದಾಯಗಳು, ಬಳ್ಳಾರಿ ಜಿಲ್ಲೆಯ ಪ್ರಾಚೀನ ಕಾಲದ ಕೆರೆ ಕಟ್ಟೆಗಳು: ಒಂದು ಅಧ್ಯಯನ, ಪ್ರಥಮ ವಿಶ್ವ ಸಮರದಲ್ಲಿ ಮೈಸೂರು ಪ್ರಾಂತದ ಪಾತ್ರ, ನೊಳಂಬವಾಡಿ ರಾಜ್ಯ ಹಾಗೂ ಉಚ್ಚಂಗಿ ಪಾಂಡ್ಯರು, ಸವಣೂರು ನವಾಬರ ಇತಿಹಾಸ, ನೊಳಂಬ ಪಲ್ಲವರು ಮತ್ತು ಕಂಚಿನ ಕೆರೆ ಒಂದು ವಿವೇಚನೆ – ಹೀಗೆ ವೈವಿಧ್ಯಮಯ ಪ್ರಕಾರಗಳ ಸಂಶೋಧನೆಯಲ್ಲಿ ನಿರತರಾಗಿದ್ದು ೩೦ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯದ ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಿದಾರೆ. ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ‍್ಯಕ್ರಮ, ಪರಿಸರ ರಕ್ಷಣೆ, ಕೋಮು ಸೌಹಾರ್ದ, ಮಾದಕ ವಸ್ತುಗಳ ಸೇವನೆ ನಿಷೇಧ, ಬಡರೋಗಿಗಳ ಆರೈಕೆ, ಸುನಾಮಿ ಸಂತ್ರಸ್ತರಿಗೆ ನಿಧಿ ಸಂಗ್ರಹ ಮುಂತಾದ ಕಾರ‍್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಘಟಕ, ಹರಪನಹಳ್ಳಿ ತಾಲ್ಲೂಕು ಘಟಕ ಮುಖಾಂತರ ದತ್ತಿ ಕಾರ‍್ಯಕ್ರಮಗಳು, ವಿಚಾರ ಸಂಕಿರಣಗಳು, ಯಕ್ಷಗಾನ, ಬಯಲಾಟ, ಸೂತ್ರದ ಗೊಂಬೆಯಾಟ, ಮುಂತಾದ ಸಾಂಸ್ಕೃತಿಕ ಕಾರ‍್ಯಕ್ರಮಗಳು, ರಾಜ್ಯೋತ್ಸವ ಕಾರ‍್ಯಕ್ರಮಗಳು ಮುಂತಾದವುಗಳನ್ನು ಆಯೋಜಿಸಿದ್ದಾರೆ. ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸದಾಶಿವಪ್ಪನವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಗಳ ಸನ್ಮಾನ, ಬೀದರಿನಲ್ಲಿ ನಡೆದ ಅಖಿಲ ಭಾರತ ೭೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕಾಸರಗೋಡು ಗಡಿನಾಡ ಉತ್ಸವದಲ್ಲಿ – ಪ್ರಶಸ್ತಿ ಸನ್ಮಾನ, ದಾವಣಗೆರೆಯಲ್ಲಿ ಮಹಾಲಿಂಗರಂಗ ಸಾಹಿತ್ಯ ಪ್ರಶಸ್ತಿ, ಬಾಗಲ ಕೋಟೆಯಿಂದ ಅಪ್ಪಣ್ಣ ಕಲಾಶ್ರೀ ಪಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೈನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿದ್ದು, ಪ್ರಶಸ್ತಿಯ ಜೊತೆ ಬಂದ ಹಣದಿಂದ ಹರಪನಹಳ್ಳಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಉತ್ತಮ ನಡತೆಗಾಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಭರಮಪ್ಪ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚಿನ ಅಂಕ ಪಡೆದ ಬಿ.ಎ. ಪದವಿ ವಿದ್ಯಾರ್ಥಿಗಳಿಗಾಗಿ ಬಹುಮಾನವಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಉತ್ತಮ ಹಾಸ್ಯ ಕೃತಿಗಾಗಿ ‘ಕುಂಬಾಸ’ ಪಶಸ್ತಿ ಮುಂತಾದವುಗಳನ್ನು ಪ್ರತಿ ವರ್ಷವೂ ನೀಡುತ್ತಾ ಬಂದಿದ್ದಾರೆ.

Details

Date:
July 1
Event Category: