Loading Events

« All Events

  • This event has passed.

ಕುಲಶೇಖರಿ

September 8, 2023

೦೮..೧೯೩೯ ಮಾನವೀಯತೆಗೆ ಮೊದಲ ಆದ್ಯತೆ ನೀಡಿ, ಸದಭಿರುಚಿಯ ಹವ್ಯಾಸಗಳನ್ನೂ ರೂಢಿಸಿಕೊಂಡು, ವೈಚಾರಿಕವಾಗಿ ಚಿಂತಿಸುತ್ತಾ ಸಾಹಿತ್ಯರಚನೆಯಲ್ಲಿ ತೊಡಗಿರುವ ಕುಲಶೇಖರಿ (ಉಷಾದೇವಿ) ಯವರು ಹುಟ್ಟಿದ್ದು ದಾವಣಗೆರೆಯಲ್ಲಿ ೧೯೩೯ರ ಸೆಪ್ಟಂಬರ್ ೮ ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ, ಖಾದಿಧಾರಿ, ಗಾಂಧಿವಾದಿ ಗೊಡ್ಡು ಸಂಪ್ರದಾಯಗಳ ವಿರೋಧಿ, ವಿಚಾರವಾದಿಯಾಗಿದ್ದ ಕೆ.ಎಫ್‌ ಪಾಟೀಲರು (ಕಲ್ಲಣಗೌಡರು) ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿ ಬಿ.ಡಿ. ಜತ್ತಿ ಸಂಪುಟದಲ್ಲಿ ಎರಡು ಬಾರಿ ಮಂತ್ರಿಯಾಗಿದ್ದವರು, ತಾಯಿ ಶಾಂತಮ್ಮ. ಹುಟ್ಟಿದ ಒಂಬತ್ತು ತಿಂಗಳಿಗೇ ತಾಯಿಯ (ಅಜ್ಜಿ) ಪ್ರೀತಿಯಿಂದ ವಂಚಿತರಾಗಿ ತಾಯಿಯ ತಾಯಿಯ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದವರು. ಇವರೆ ‘ಅಮ್ಮ’ ಆದರು. ಪ್ರಾರಂಭಿಕ ಶಿಕ್ಷಣ ದಾವಣಗೆರೆಯಲ್ಲಿ. ಶಾಲೆಯಲ್ಲಿ ಹುಡುಗರಿಗೂ ಸಡ್ಡುಹೊಡೆದು ಓದಿನಲ್ಲಿ ಮೊದಲ ಸ್ಥಾನ ಪಡೆದ ಹುಡುಗಿ. ಶಾಲೆಯ ಹೊರಗೆ ಕೂಡಾ ಯಾವ ಹುಡುಗರಿಗೂ ಕಡಿಮೆಯಿಲ್ಲದಂತೆ ಗೋಲಿ, ಬುಗುರಿ, ಮರಕೋತಿ ಎಲ್ಲ ಆಟಗಳಲ್ಲೂ ಮುಂದು. ಶಾಲೆಯ ಒಳಗಿನ ಲೆಜಿಮ್‌, ಕೋಲಾಟ, ಪ್ರಭಾತ್‌ ಫೇರಿಗಾಗಿ ರಾಷ್ಟ್ರಗೀತೆ – ಈ ಕಾರ್ಯಕ್ರಮಗಳ ಮುಂಚೂಣಿ ಹುಡುಗಿ. ಮನೆಯಲ್ಲಿ ‘ಅಮ್ಮ’ ಹೇಳುತ್ತಿದ್ದ ಕಥೆಗಳಿಂದ ಪ್ರಭಾವಿತಳಾದಳು. ರಾಜರಾಣಿಯರ ದಿನಕ್ಕೊಂದು ಹೊಸ ಕತೆ ಅಮ್ಮನ ಭಂಡಾರದಿಂದ ಹೊರಬರುತ್ತಿತ್ತು.  ಚಿಕ್ಕಂದಿನಲ್ಲಿ ಕೇಳಿದ ‘ಸತ್ತೇನೇ ಗುಬ್ಬಿ’ ಗಾಢವಾಗಿ ಪ್ರಭಾವ ಬೀರಿದ ಕತೆ. ಗೋವಿನ ಸತ್ಯಸಂಧತೆ, ಏಕಲವ್ಯನ ಸಾಧನೆ, ಕರ್ಣನ ಅಸಹಾಯಕತೆಯ ಮಧ್ಯದಲ್ಲೂ ತೋರಿದ ದಾನಶೂರ ಗುಣಗಳು. ಜೀವನವನ್ನು ಬಹುವಾಗಿ ಕಾಡಿ ಚಿಂತಿಸುವಂತೆ ಮಾಡಿದವು. ಹೈಸ್ಕೂಲು ಓದಿದ್ದು ಹುಬ್ಬಳ್ಳಿ-ಧಾರವಾಡಗಳಲ್ಲಿ. ದಾವಣೆಗೆರೆಯಲ್ಲಿ ಕಾಲೇಜು ಶಿಕ್ಷಣ. ವೈದ್ಯೆಯಾಗಬೇಕೆಂದು ಓದಲು ಸೇರಿದ್ದು ಮೈಸೂರಿನ ಮೆಡಿಕಲ್‌ ಕಾಲೇಜು. ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಕನ್ನಡ, ಇಂಗ್ಲಿಷ್‌ ಎಂಬ ಬೇಧವಿಲ್ಲದೆ ಓದಿದ ಪುಸ್ತಕಗಳು. ಈ ಓದಿನ ಹುಚ್ಚಿನಿಂದ ಅಂತರ್ಮುಖಿಯಾಗಿ ನಡೆಸುತ್ತಿದ್ದ ಚಿಂತನೆಗಳು. ಓದಿಗೆ ತಡೆಯಾಗಲಾರದೆಂದು ನಂಬಿಸಿ ಮದುವೆಯಾದ ನಂತರ ಓದಿಗೆ ಪೂರ್ಣ ವಿರಾಮ. ಆದರೂ ಡೈರಿಯ ಕಡೆ ಪುಟಗಳಲ್ಲಿ ಅನಿಸಿಕೆಗಳು ತುಂಬತೊಡಗಿದವು. ಗಂಡ, ಮನೆ, ಮಕ್ಕಳು ಎಂದು ಸಂಸಾರದಲ್ಲಿ ಮುಳುಗಿ ಹೋದರೂ ಓದುವ , ಬರೆಯುವ ಹವ್ಯಾಸವನ್ನು ತಡೆಯಲಾರದಾಗಿ ಮಕ್ಕಳಿಗೆ ಪಾಠಮಾಡುತ್ತಾ, ಮಕ್ಕಳೊಂದಿಗೆ ಕಲಿತದ್ದು ಮೈಸೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಶಿಕ್ಷಣದಿಂದ ಎಂ.ಎ. ಪದವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಪತ್ರಿಕೋದ್ಯಮ ಡಿಪ್ಲೊಮ. ತಾಯಿ ತೀರಿಕೊಂಡ ನಂತರ ತಂದೆ ಮರುಮದುವೆಯಾದಾಗ, ತಂದೆಯೊಂದಿಗೆ ನಿಕಟತೆ ಏರ್ಪಡದಿದ್ದರೂ, ಮಂತ್ರಿಯಾಗಿದ್ದವರು ಮಾಜಿ ಎನಿಸಿ, ವಿದ್ಯೆಗೆ, ಮದುವೆಗೆ ಕುಟುಂಬಕ್ಕೆ ಎಂದೂ ಆಗದಿದ್ದ ತಂದೆ ಕಡೆಗೆ ಮಗಳ ಮನೆಗೆ ಬಂದು ಮಕ್ಕಳ, ಅಳಿಯ, ಮೊಮ್ಮಕ್ಕಳೊಂದಿಗೆ ಬೆರೆತುಹೋದರು. ಸ್ಫೂರ್ತಿ ಬಂದಾಗಲ್ಲೆಲ್ಲಾ ಇವರು ಬರೆದಿಟ್ಟಿದ್ದ ಕವನಗಳನ್ನೂ ಓದಿದ ತಂದೆಯವರು ಪ್ರಕಟಣೆಗೆ ಒತ್ತಾಸೆ ನೀಡಿದಾಗ ೧೯೭೫ ರ ಮಹಿಳಾ ವರ್ಷದಲ್ಲಿ  ಪ್ರಕಟಗೊಂಡ ಮೊದಲ ಕವನ ಸಂಕಲನ ‘ಕ್ಷಿತಿಜ’. ಪುಸ್ತಕ ಪ್ರಕಾಶನಕ್ಕಾಗಿ ಇತರರ ಮರ್ಜಿಕಾಯದೆ ‘ಚಿನ್ಮಯ ಪ್ರಕಾಶನ’ ದಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಮಹಿಳಾ ಪ್ರಕಾಶಕಿ ಎನಿಸಿಕೊಂಡಿದ್ದಲ್ಲದೆ ರಕ್ಷಾಪುಟ ರಚನೆ, ಕರಡು ತಿದ್ದುವುದು, ಪುಸ್ತಕ ಮುದ್ರಣ-ಮಾರಾಟ ಎಲ್ಲದರಲ್ಲಿಯೂ ತೊಡಗಿಸಿಕೊಂಡರು. ಈ ಮಧ್ಯೆ ಪತಿಗೆ ಹೃದಯಾಘಾತವಾದರೂ ಧೃತಿಗೆಡದೆ ಸಾಂಸಾರಿಕ, ಜವಾಬ್ದಾರಿಗಳ ಜೊತೆಗೆ ನಿಭಾಯಿಸಿದ ಸಾಹಿತ್ಯ ಚಟುವಟಿಕೆಗಳು. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ‘ಸ್ನೇಹಾ’ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಸ್ಥಾಪಕ ಕಾರ್ಯದರ್ಶಿಯಾಗಿ ಐದು ವರ್ಷಗಳ ಕಾಲ ನಿರ್ವಹಣೆ. ಈ ಸಂದರ್ಭದಲ್ಲಿ ಸಂಪಾದಿಸಿದ ಎರಡು ಸ್ಮರಣ ಸಂಚಿಕೆಗಳೆಂದರೆ ‘ಪಾಕ ವೈವಿಧ್ಯ’ ಹಾಗೂ ‘ಸ್ನೇಹ ಸಂಗಮ’ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಸಂಪರ್ಕದಿಂದ ಅನೇಕ ಲೇಖಕಿಯರು ಪರಿಚಿತರಾಗಿ ಹೊರತಂದ ಕೃತಿ ‘ನಮ್ಮ ಲೇಖಕಿಯರು’. ಲೇಖಕಿಯರು ಪರಿಚಯವಾದಂತೆಲ್ಲ ಕವನ ವಾಚನ, ವಿಮರ್ಶೆ, ಪ್ರಬಂಧ ಮಂಡನೆ ಮುಂತಾದವುಗಳ ಜೊತೆಗೆ ಕರ್ನಾಟಕ ಲೇಖಕಿಯರ ಸಂಘದ ‘ಲೇಖಕಿ’ ಪತ್ರಿಕೆಯ ಸಂಪಾದಕಿಯ ಜವಾಬ್ದಾರಿ. ಅನುಭವದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ವಿದೇಶ ಪ್ರವಾಸ ಮಾಡಿ ಗಳಿಸಿದ ಅನುಭವದಿಂದ ಬರೆದ ಕೃತಿ ‘ಬೊಗಸೆ ಬುತ್ತಿ’ ಮತ್ತು ‘ಕೈತುತ್ತು’. ಚಿಕ್ಕಂದಿನಿಂದಲೂ ಪಿರಮಿಡ್‌ಗಳ ಬಗ್ಗೆ ಅದೆಂತಾದ್ದೊ ವಿಶೇಷ ಆಕರ್ಷಣೆಗೊಳಗಾಗಿ ಇಜಿಪ್ತಿನ ಪ್ರಾದೇಶಿಕತೆ, ರಾಜಕೀಯ, ಧಾರ್ಮಿಕ ಪರಿಸರ, ಚಾರಿತ್ರಿಕ ವಿದ್ಯಮಾನಗಳನ್ನು ದಾಖಲಿಸಿರುವ ಕೃತಿ ‘ಇಜಿಪ್ತಿನ ಏಕಾಕಿ’.  ಸ್ಫಿಂಕ್ಸ್‌ , ದ ಫ್ಯಾರೋ ಮುಂತಾದ ಪುಸ್ತಕ, ಚಲನಚಿತ್ರಗಳ ಪ್ರಭಾವ ಹಾಗೂ ಐತಿಹಾಸಿಕ ಹಿನ್ನೆಲೆಯ ಆಂಗ್ಲ ಭಾಷೆಯ’ದ ಇಜಿಪ್ಷಿಯನ್‌’ ಕಾದಂಬರಿಯ ಅನುವಾದವೇ ‘ಇಜಿಪ್ತಿನ ಏಕಾಕಿ’. ಇವಲ್ಲದೆ ಇವರು ಹೊರತಂದಿರುವ ಕವನ ಸಂಕಲನಗಳು ‘ಸಂಕಲ್ಪ ಹಾಗೂ ‘ಬಿಕ್ಕುಗಳು’. ಹನಿಗವನ ಸಂಕಲನ ‘ಶತರಂಜ’ವಲ್ಲದೆ ಸಂಶೋಧನಾಕೃತಿ ‘ಈ ಶತಮಾನದ ಕನ್ನಡ ಕವಯಿತ್ರಿಯವರು’ ಮತ್ತು ಕಾದಂಬರಿ ‘ಇರುವುದೊಂದೇ ಜೀವ’. ಹೀಗೆ ಸದ್ದಿಲ್ಲದೆ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದು ಆತ್ಮಕತೆ ‘ನಾನೇನೂ ಅಲ್ಲ’. ‘ಎಲ್ಲರಂತಲ್ಲ’ ಪ್ರಕಟಗೊಂಡಿದ್ದು ಮೂರನೆಯ ಭಾಗ ‘ಸುಖಪ್ರಾರಬ್ಧ’ ಪ್ರಕಟಣೆಗೆ ಸಿದ್ಧವಾಗಿದೆ. ಒಂದೆಡೆ ಜ್ಞಾನವೃದ್ಧಿ, ಸಮಾಜಸೇವೆ, ಸಾಹಿತ್ಯ ನಿರ್ಮಾಣ ಮುಂತಾದವುಗಳಲ್ಲಿ ತೊಡಗಿಸಿಕೊಂಡು ರಚಿಸಿರುವ ೨೦ ವೈವಿಧ್ಯಮಯ ಕೃತಿಗಳು. ಅವುಗಳಲ್ಲಿ ‘ಸಂಕಲ್ಪ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಬಸವ ಹಾಗೂ ಪೈಗಂಬರ ಪ್ರಬಂಧಕ್ಕೆ ವೀರಶೈವ ಮಹಾ ಸಮ್ಮೇಳನದ ಸ್ಪರ್ಧೆಯಲ್ಲಿ ಬಹುಮಾನ, ‘ಬೊಗಸೆ ಬುತ್ತಿ’ (ಪ್ರವಾಸ ಸಾಹಿತ್ಯ) ಗೆ ಗೊರೂರು ಸಾಹಿತ್ಯ ಪ್ರಶಸ್ತಿ, ‘ಇಜಿಪ್ತಿನ ಏಕಾಕಿ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಗೊರೂರು ಸಾಹಿತ್ಯ ಪ್ರಶಸ್ತಿ, ‘ಇರುವುದೊಂದೇ ಜೀವ’ ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಶಸ್ತಿ, ‘ನಾನೇನೂ ಅಲ್ಲ’ ಆತ್ಮಕಥೆಗೆ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಗಳಲ್ಲದೆ ಡಾ. ಅನುಪಮಾ ನಿರಂಜನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.  ಸರೋಜದೇವಿ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿವೆ.

Details

Date:
September 8, 2023
Event Category: