ಕು. ಗೋ. (ಎಚ್. ಗೋಪಾಲ್‌ಭಟ್)

Home/Birthday/ಕು. ಗೋ. (ಎಚ್. ಗೋಪಾಲ್‌ಭಟ್)
Loading Events
This event has passed.

೦೬.೦೬.೧೯೩೮ ತಾವು ಪುಸ್ತಕಗಳನ್ನು ಬರೆದು, ಪ್ರಕಟಿಸಿ, ಮಾರಾಟಮಾಡಿದಷ್ಟೇ ಅಲ್ಲದೆ ಬೇರೆಯವರನ್ನೂ ಉತ್ತೇಜಿಸಿ ಪ್ರಕಟಿಸಿದ್ದನ್ನು ಇತರ ಬರಹಗಾರರಿಗೆ, ಓದುಗರಿಗೆ ತಲುಪಿಸುವ ಕೊಂಡಿಯಾಗಿ, ಉಚಿತವಾಗಿಯೋ, ಹಣ ಪಡೆದೋ ಪುಸ್ತಕ ಸಂಸ್ಕೃತಿಯ ಪ್ರಸಾರದಲ್ಲಿ ಸದಾಕಾಲ ತೊಡಗಿಸಿಕೊಂಡಿರುವ ಕು. ಗೋ.ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ, ಉಡುಪಿ ತಾಲ್ಲೂಕಿನ ಹೆರ್ಗ ಎಂಬಲ್ಲಿ ೧೯೩೮ರ ಜೂನ್ ೬ರಂದು. ತಂದೆ ಅನಂತ ಪದ್ಮನಾಭ ಭಟ್ಟರು. ಕೃಷಿ ಮತ್ತು ಪೌರೋಹಿತ್ಯ ವೃತ್ತಿಯನ್ನು ಅವಲಂಬಿಸಿದವರು. ತಾಯಿ ವಾಗ್ದೇವಿಯಮ್ಮ. ಪ್ರಾರಂಭಿಕ ಶಿಕ್ಷಣ ಹೆರ್ಗದಲ್ಲಿ. ಕೆದ್ಲಾಯ ಭಟ್ಟರು ನಡೆಸುತ್ತಿದ್ದ ಸ್ವಂತ ಕಟ್ಟಡದ ಶಾಲೆಯಲ್ಲಿ. ಮಣಿಪಾಲದ ಶಾಲೆಯಲ್ಲಿ ಐದನೆಯ ತರಗತಿಯವರೆಗೆ, ಹುಣಸೂರಿನ ಭಾವನ ಹೊಟೇಲಿನಲ್ಲಿ ಕೆಲಸಮಾಡಿಕೊಂಡು ಕಲಿತಿದ್ದು ಹತ್ತನೆಯ ತರಗತಿಯವರೆಗೆ. ಎಸ್.ಎಸ್.ಎಲ್.ಸಿ.ಯಲ್ಲಿ ೩೭ನೆಯ ರ್ಯಾಂಕ್ ಪಡೆದ ವಿದ್ಯಾರ್ಥಿ. ಮೈಸೂರಿನ ಯುವರಾಜ ಕಾಲೇಜು ಮತ್ತು ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಇಂಟರ್‌ಮಿಡಿಯೇಟ್ ಮತ್ತು ಬಿ.ಎಸ್ಸಿ.ವರೆಗೆ. ಬಿ.ಎಸ್ಸಿ.ಯಲ್ಲಿ ಇವರ ಜೀವನದ ಕೆಮಿಸ್ಟ್ರಿ ಸರಿಯಾಗದೆ ಅಂಚೆ ತೆರಪಿನಲ್ಲಿ ಪಡೆದ ಬಿ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು (೧೯೬೦) ಜೀವವಿಮಾ ಸಂಸ್ಥೆಯಲ್ಲಿನ ಚಿಕ್ಕಮಗಳೂರು ಶಾಖೆಯಲ್ಲಿ. ವಿಭಾಗದ ಮುಖ್ಯಸ್ಥರಾಗಿ ಮಡಿಕೇರಿ, ನಂತರ ಕುಂದಾಪುರ, ಉಡುಪಿಯಲ್ಲಿ ಕಾರ್ಯ ನಿರ್ವಹಿಸಿ ೧೯೬೯ರಲ್ಲಿ ಪಡೆದ ಸ್ವಯಂ ನಿವೃತ್ತಿ. ಉದ್ಯೋಗಕ್ಕೆ ವಿದಾಯ ಹೇಳಿದ ನಂತರ ಪೂರ್ಣಾವಧಿ ಕಾರ್ಯಕರ್ತರಾಗಿ ಕನ್ನಡ ಸೇವೆಗಾಗಿ ಟೊಂಕ ಕಟ್ಟಿ ನಿಂತು ಪುಸ್ತಕ ಪ್ರೀತಿಯನ್ನು ಇತರರಿಗೂ ಹಂಚತೊಡಗಿದರು. ಹೈಸ್ಕೂಲಿನಲ್ಲಿದ್ದಾಗಲೇ ಪ್ರಖ್ಯಾತ ಬರಹಗಾರರಾದ ಅ.ನ.ಕೃ., ತ್ರಿವೇಣಿ, ತ.ರಾ.ಸು., ಕಟ್ಟೀಮನಿ ಮುಂತಾದವರ ಸಾಹಿತ್ಯವನ್ನೆಲ್ಲಾ ಓದಿಕೊಂಡು ಬರವಣಿಯನ್ನು ಪ್ರಾರಂಭಿಸಿದ್ದು ಹಾಸ್ಯ ಬರಹಗಳ ಮೂಲಕ. ಹೀಗೆ ಬರೆದ ಪ್ರಬಂಧಗಳು ಅಂದಿನ ಪತ್ರಿಕೆಗಳಾದ ನವಯುಗ, ಪ್ರಕಾಶ, ರಾಯಭಾರಿ, ವಿಕಟ ವಿನೋದಿನಿ, ಇಂದ್ರಧನುಷ್, ಕತೆಗಾರ, ಈದಿನ, ತಾಯಿನಾಡು, ಚಿತ್ರಗುಪ್ತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಇತಿಚಿನ ನಿಯತಕಾಲಿಕೆಗಳು ಮತ್ತು ದಿನ ಪತ್ರಿಕೆಗಳಾದ ಉದಯವಾಣಿ, ತರಂಗ, ತುಷಾರ, ಸುಧಾ, ಕಸ್ತೂರಿ, ನೂತನ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಕರ್ಮವೀರ, ವಿನೋದ, ಅಪರಂಜಿ ಮುಂತಾದ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇವರ ಮೊದಲ ಪ್ರಬಂಧ ಸಂಕಲನ ‘ಅಕ್ಕನ ಮದುವೆ’ ೧೯೬೪ರಲ್ಲಿ ಪ್ರಕಟವಾಯಿತು. ೨೪ ಪ್ರಬಂಧಗಳ ಈ ಸಂಕಲನಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ‍್ಯರು ದೀರ್ಘಮುನ್ನುಡಿ ಬರೆದು ಹಾರೈಸಿದ್ದಾರೆ. ೧೯೬೪ರಿಂದ ೭೮ರವರೆಗೆ ಬರೆದ ೧೦ ಕಥೆಗಳ ಸಂಕಲನ ‘ಶನಿ ಹಿಡಿದವ’. ಈ ವೈಶಿಷ್ಟ್ಯಪೂರ್ಣ ಕಥೆಗಳ ಸಂಕಲನಕ್ಕೆ ಪಾ.ವೆಂ. ಆಚಾರ‍್ಯರ ಮುನ್ನುಡಿ ಇದೆ. ಇದು ೧೯೯೭ರಲ್ಲಿ ‘ಹತ್ತು ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಮರು ಮುದ್ರಣಗೊಂಡಿದೆ. ವಿನೋದ, ವ್ಯಂಗ್ಯ ಲೇಖನಗಳ ಸಂಕಲನ ತೇಲ್ನೊಟ ೧೯೯೨ರಲ್ಲಿ ಪ್ರಕಟವಾಯಿತು. ನಂತರ ಬಂದ ಕಥಾ ಸಂಕಲನ ‘ಎತ್ತಣಿಂದೆತ್ತ’, ವಿನೋದ ಬರಹಗಳ ಸಂಕಲನ ‘ಲೊಳಲಾಯಿ’ ಮತ್ತು ಹಾಸ್ಯಿ ಚಟಾಕಿಗಳ ಪುಸ್ತಕ ‘ಪಟ ಪಟ ಪಟಾಕಿ’ ಕೃತಿಯಲ್ಲಿ ಪ್ರಕಟಗೊಂಡಿದೆ. ತಾವು ಬರೆದಿರುವಕ್ಕಿಂತ ಬರೆಯುವವರ ಬೆನ್ನೆಲುಬಾಗಿ ನಿಂತು, ಅವರ ಪುಸ್ತಕಗಳನ್ನು ಪ್ರಕಟಿಸಿ ವಿತರಣೆಗೊಂಡು ದಾರಿ ತೋರಿದ್ದೇ ಹೆಚ್ಚು. ಓದುಗರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಲು ಪ್ರಕಟಿಸಿದ ಪುಸ್ತಕಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಲು ಪ್ರಾರಂಭಿಸಿದ ಕಾರ್ಯಕ್ರಮಗಳೆಂದರೆ ‘ನಡುಮನೆ’ ಹಾಗೂ ಸು.ಹಾ.ಸಂ. (ಸುಹಾಸ ಹಾಸ್ಯಪ್ರಿಯರ ಮತ್ತು ಲೇಖಕರ ಸಂಘಟನೆ). ಪ್ರತಿಭೆಯಿದ್ದೂ ಪ್ರಕಟಿಸಿಕೊಳ್ಳಲು ಹಿಂಜರಿಕೆ ಸ್ವಭಾವ ಹೊಂದಿರುವವರಿಗೊಂದು ವೇದಿಕೆಯಾದದ್ದೇ ಈ ‘ನಡುಮನೆ’ ಕಾರ್ಯಕ್ರಮಗಳು. ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶ. ಕಥೆ, ಕವನ, ಭಾಷಣ, ಹಾಡು ಎಲ್ಲಕ್ಕೂ ಸ್ವಾಗತ ಈ ವೇದಿಕೆಗೆ. ತಿಂಗಳಗೊಂದರಂತೆ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು ವರ್ಷಕ್ಕೊಮ್ಮೆ ಕಥೆ, ಕವನ ಸ್ಪರ್ಧೆಗಳೂ ನಡೆಯುತ್ತವೆ. ಉದಯೋನ್ಮುಖರಿಗೆ ‘ನಡುಮನೆ’ ವೇದಿಕೆಯಾದರೆ ಕೊಂಚ ಪಳಗಿದವರಿಗೆ (Seasoned) ಸು.ಹಾ.ಸಂ. ೧೯೯೫ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ನಡೆದ ಹಾಸ್ಯಗೋಷ್ಠಿಗಳು, ವಿಚಾರ ಸಂಕಿರಣಗಳು, ಸನ್ಮಾನ ಸಮಾರಂಭಗಳಿಗೆ ಲೆಕ್ಕವಿಲ್ಲ. ಹೊರಊರಿನ ಸಾಹಿತಿಗಳಿಗೂ ವೇದಿಕೆಯನ್ನು ಕಲ್ಪಿಸಿ ವಿಚಾರ ವಿನಿಮಯದ ಕಾರ್ಯಕ್ರಮಗಳು ನಡೆದಿವೆ. ಪುಸ್ತಕ ಪ್ರಕಟಣೆಗೂ ಮುಂದಾದ ಸುಹಾಸಂನಿಂದ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಸಂಸ್ಥೆಯ ಪ್ರಾರಂಭದಿಂದಲೂ ಸ್ಥಾಪಕ ಕಾರ್ಯದರ್ಶಿಯಾಗಿಯೇ ಕು.ಗೋ.ರವರು ಮುಂದುವರೆದಿದ್ದಾರೆ. ಹೀಗೆ. ಕು.ಗೋ.ರವರ ಸಾಹಿತ್ಯ ಕೈಂಕರ್ಯಗಳು ಒಂದೆರಡಲ್ಲ. ನಾಲ್ಕು ಮುಖದ ಕೆಲಸ. ಸಾಹಿತ್ಯರಚನೆ, ಪಂಚಾರಿಕೆ, ಪ್ರಚಾರ ಮತ್ತು ಪ್ರಸಾರ. ಸಾಹಿತ್ಯವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಪುಸ್ತಕವೆಂದರೆ ಮೂಗು ಮುರಿಯುವವರಲ್ಲಿಯೂ ಆಸಕ್ತಿ ಹುಟುವಂತೆ ಮಾಡುತ್ತಾ ಸದಾ ಪುಸ್ತಕ ಪೆಮಿಗಳ ಮೆಚ್ಚಿನ ಕು.ಗೋ.ರವರಿಗೆ ಸಂದಿರುವ ಪ್ರಶಸ್ತಿಗಳು ಹಲವಾರು. ಗೋರೂರು ಸಾಹಿತ್ಯ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿಗಳು ಮತ್ತು ಓದುಗರಿಂದ ದೊರೆತಿರುವುದು ‘ಪುಸ್ತಕ ಪರಿವ್ರಾಜಕ’ ಪ್ರಶಸ್ತಿ. ವಾಗ್ದೇವಿಯಮ್ಮನ ಮಗನಾಗಿದ್ದಕ್ಕೂ ಸಾರ್ಥವೆನಿಸಿ ಸರಸ್ವತಿಯ ಸೇವೆಯಲ್ಲಿ ಸಂತಸ ತೃಪ್ತಿ ಕಂಡುಕೊಂಡಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top