Loading Events

« All Events

  • This event has passed.

ಕೃಷ್ಣಕುಮಾರ ಕಲ್ಲೂರ

December 21, 2023

೨೧.೧೨.೧೯೦೯ ೧೯೮೨ ಉತ್ಕಟ ಕನ್ನಡಾಭಿಮಾನಿ, ಗಾಂಧಿವಾದಿ, ಸಾಹಿತಿ ಕೃಷ್ಣಕುಮಾರ ಕಲ್ಲೂರರು ಹುಟ್ಟಿದ್ದು ಈಗಿನ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕಲ್ಲೂರಿನಲ್ಲಿ ತಾ. ೨೧.೧೨.೧೯೦೯ ರಲ್ಲಿ. ತಂದೆ ಅನಂತರಾವ್, ತಾಯಿ ರಾಧಾಬಾಯಿ. ಎಂಬನೆಯ ಮಗನಾದ್ದರಿಂದ ಕೃಷ್ಣನೆಂದೇ ನಾಮಕಾರಣ ಮಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದರಿಂದ ಸಹಜವಾಗೇ ಬಾಲ್ಯದಿಂದಲೇ ಅಸಹಕಾರ ಚಳವಳಿ, ಏಕೀಕರಣ, ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಮುಂತಾದವುಗಳ ಪ್ರಭಾವಕ್ಕೆ ಒಳಗಾಗಿದ್ದರು. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಧಾರವಾಡಕ್ಕೆ ಬಂದು ಒಂದೆರಡು ವರ್ಷಕಾಲ ಮಾಧ್ಯಮಿಕ ಶಾಲಾ ಶಿಕ್ಷಕರಾಗಿಯೂ ದುಡಿದರು. ನಂತರ ಕಲ್ಕತ್ತಾದ ಶಾಂತಿನಿಕೇತನಕ್ಕೆ ತೆರಳಿ ‘ವಿಶ್ವಭಾರತಿ’ ಪದವಿ, ೧೯೩೨ ರಲ್ಲಿ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ನಂತರ ಪುಣೆಯ ಫರ್ಗುಸನ್ ಕಾಲೇಜು ಸೇರಿ ಎಂ.ಎ (ಸಮಾಜಶಾಸ್ತ್ರ) ಪದವೀಧರರೆನಿಸಿದರು. ಸ್ನಾತಕ ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿದ್ದು ಗುಜರಾತಿನ ಪಾಡ್ರಾ ಹಾಗೂ ಬರೋಡದಲ್ಲಿ ಅಧ್ಯಾಪಕರಾಗಿ. ಇದೂ ಸರಿ ಹೊಂದದೆ ೧೯೩೭ ರಲ್ಲಿ ಮುಂಬಯಿಗೆ ಬಂದು ಆರ್.ಎಚ್.ಫಾಬಕ್ ತಾಂತ್ರಿಕ ಸಂಸ್ಥೆಯ ಪ್ರಾಚಾರ್ಯರಾಗಿ ನಿವೃತ್ತರಾಗುವವರೆವಿಗೂ ದುಡಿದರು. ಧಾರವಾಡದಲ್ಲಿದ್ದಾಗಲೇ ಬೇಂದ್ರೆಯವರು ಸ್ಥಾಪಿಸಿದ್ದ ಗೆಳೆಯರ ಗುಂಪಿನ ಸದಸ್ಯರೆನಿಸಿದ್ದರು. ಈ ಗುಂಪಿನ ಗೋಕಾಕ್, ರಂ.ಶ್ರೀ. ಮುಗಳಿ, ಜಿ.ಬಿ.ಜೋಶಿ ಮುಂತಾದವರುಗಳ ಪ್ರಭಾವಕ್ಕೊಳಗಾಗಿ ಕಥೆ, ಕವಿತೆಗಳನ್ನು ಆಲೂರು ವೆಂಕಟರಾಯರ ‘ಜಯ ಕರ್ನಾಟಕ’ ಪತ್ರಿಕೆಗೆ ಬರೆಯಲು ಪ್ರಾರಂಭಿಸಿದರು. ಹಲವಾರು ಕಥೆಗಳು ಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಈ ಕಥೆಗಳೆಲ್ಲವೂ ‘ಬಿಸಿಲುಗುದುರೆ’ ಮತ್ತು ‘ಜೀವನ’ ಎಂಬ ಸಂಗ್ರಹಗಳಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಇವರು ಹೊರತಂದ ಪ್ರಥಮ ಕವನ ಸಂಕಲನ ‘ಜಯಕರ್ನಾಟಕ ಸಮರ್ಪಣ ಗೀತೆಗಳು’- ಇವರ ಜೊತೆಗೆ ಇವರು ರಚಿಸಿ ಪ್ರಕಟಿಸಿದ ಖಂಡ ಕಾವ್ಯ ‘ಮಧುರ ಗಂಗೋತ್ರಿ’. ಧಾರವಾಡದಲ್ಲಿ ವಾಸ್ತವ್ಯ ಹೂಡಿದ ನಂತರ ನಾಟಕ ತಂಡಗಳೊಡನೆ ಸಖ್ಯ ಬೆಳೆದಂತೆ ತಿರುಕರ ಪಿಡುಗ, ಮಿಂಚಿನ ಹುಡಿ, ಹಾಳ್‌ಗಂಡು, ಮಿಸ್ ಚಾರುಗಾತ್ರಿ, ರಾಯರ ಮದುವೆ ಮುಂತಾದ ನಾಟಕಗಳನ್ನು ಬರೆದುದಷ್ಟೇ ಅಲ್ಲದೆ ನಟರಾಗಿಯೂ ರಂಗ ರೂಪದಲ್ಲಿ ಪಾಲ್ಗೊಂಡರು. ಇವರ ಮತ್ತೊಂದು ಪ್ರಖ್ಯಾತ ನಾಟಕವೆಂದರೆ ‘ತಿರುಗುಪ್ಪ’ ಅಥವಾ ‘ಜಾಗೃತ ರಾಷ್ಟ್ರ’. ಇದು ಐರಿಷ್ ನಾಟಕವೊಂದರ ಪ್ರೇರಣೆಯಾದರೂ ಪಾತ್ರವರ್ಗವೆಲ್ಲವೂ ಕನ್ನಡೀಕರಣಗೊಂಡಿದ್ದು ಈ ನೆಲದ ಸ್ವತಂತ್ರ ನಾಟಕವೆನ್ನುವಂತಿದೆ. ಉತ್ಕಟ ಕನ್ನಡಾಭಿಮಾನಿಯಾಗಿದ್ದ ಕಲ್ಲೂರರು ಕನ್ನಡ ನಾಡಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದರೂ ಸಾಕಾರಗೊಳಿಸುವ ಮೊದಲೇ ೧೯೮೨ ರಲ್ಲಿ ರಂಗದಿಂದ ನಿರ್ಗಮಿಸಿದರು.

Details

Date:
December 21, 2023
Event Category: