ಕೃಷ್ಣ ಆಲನಹಳ್ಳಿ

Home/Birthday/ಕೃಷ್ಣ ಆಲನಹಳ್ಳಿ
Loading Events
This event has passed.

೦೩.೦೪.೧೯೪೭ ೦೪.೦೧.೧೯೮೯ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಹಳ್ಳಿಗಳ ಬದುಕಿನ ಮೇಲೆ ಆಧುನಿಕತೆಯ ಆಕ್ರಮಣದಿಂದ ಛಿದ್ರಗೊಂಡ ಅವಿಭಕ್ತ ಕುಟುಂಬಗಳು, ಆಧುನಿಕತೆಗೆ ತೆರೆದುಕೊಂಡ ಯುವ ಪೀಳಿಗೆಯ ಮನಸ್ಸುಗಳ ಮೇಲಾದ ಧಾಳಿ – ಈ ವಿಚಾರಗಳ ಹಿನ್ನೆಲೆಯಲ್ಲಿ ಸಾಹಿತ್ಯ ರಚಿಸುತ್ತಾ ಬಂದು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಒರೆಗೆ ಒಡ್ಡಿದ ಕೃಷ್ಣ ಆಲನಹಳ್ಳಿಯವರು ಹುಟ್ಟಿದ್ದು ಮೈಸೂರು ಜಿಲ್ಲೆಯ, ಮೈಸೂರು ತಾಲ್ಲೂಕಿನ ಆಲನಹಳ್ಳಿಯಲ್ಲಿ. ತಂದೆ ಬೆಟ್ಟೇಗೌಡ, ತಾಯಿ ಸಣ್ಣಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದ ಹಳ್ಳಿಯಲ್ಲಿ. ಕ್ಯಾತನ ಹಳ್ಳಿಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ. ಮಹಾರಾಜ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಮತ್ತು ಮಾನಸಗಂಗೋತ್ರಿಯಿಂದ ಎಂ.ಎ. ಪದವಿ ಪಡೆದರು. ಬಿ.ಎ. ಪದವಿಗಾಗಿ ಓದುತ್ತಿರುವಾಗಲೇ ‘ಸಮೀಕ್ಷಕ’ ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸತೊಡಗಿದರು.  ಸೃಜನಶೀಲ ಬರಹಗಳಿಗೆ, ವಿಮರ್ಶೆಗಳಿಗೆ ಮೀಸಲಾದ ಪತ್ರಿಕೆಯು ಹಲವಾರು ಸಾಹಿತಿಗಳ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿಯೇ ಅವರ ‘ಮಣ್ಣಿನ ಹಾಡು’ ಕವನ ಸಂಕಲನವೂ ಪ್ರಕಟವಾಯಿತು. ಉದ್ಯೋಗಿಯಾಗಿ ಸೇರಿದ್ದು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ (೧೯೬೯). ಮಾನಸ ಗಂಗೋತ್ರಿಯ ಭಾಷಾ ಅಧ್ಯಯನ ಸಂಸ್ಥೆಯಲ್ಲಿಯೂ ಕೆಲಕಾಲ ನಿರ್ವಹಿಸಿದ ಅಧ್ಯಾಪಕ ವೃತ್ತಿ (೧೯೭೫-೭೯). ನಂತರ ಪೂರ್ಣಾವಧಿಯ ಲೇಖಕರಾಗಿ ತೊಡಗಿಸಿಕೊಂಡದ್ದು ಸಾಹಿತ್ಯ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ಕೃಷಿ. ಮಹತ್ವಾಕಾಂಕ್ಷಿಯಾಗಿದ್ದ ಕೃಷ್ಣರವರು ಯಾವುದೇ ಕೆಲಸ ಹಿಡಿದರೂ ಛಲಬಿಡದೆ ಸಾಧಿಸುವ ಶಕ್ತಿ ಅವರಲ್ಲಿತ್ತು. ಇವರು ರಚಿಸಿದ ಗದ್ಯಕೃತಿಗಳಲ್ಲಿ ಭಾರತದ ಹಳ್ಳಿಗಳ ಮೇಲೆ ಆಧುನಿಕ ನಾಗರಿಕತೆಯಿಂದ ಛಿದ್ರಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆ, ಪರಿಸರ, ಮುಗ್ಧ ಮನಸಿನ ಯುವಕ, ಯುವತಿಯರ ಮೇಲುಂಟಾದ ಧಾಳಿ ಇವುಗಳನ್ನು ಕೇಂದ್ರೀಕರಿಸಿಕೊಂಡು ಬರೆದ ಕಾದಂಬರಿಗಳು. ಕಾಡು (೧೯೭೧), ಪರಸಂಗದ ಗೆಂಡೆತಿಮ್ಮ (೧೯೭೪) ಮತ್ತು ಭುಜಂಗಯ್ಯನ ದಶಾವತಾರಗಳು (೧೯೮೨). ಹಲವಾರು ಮುದ್ರಣ ಕಂಡ ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ. ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯು ಮಲಯಾಳಂಗೆ ಅನುವಾದಗೊಂಡಿದೆ. ‘ಕಾಡು’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿದ್ದು (೧೯೭೪), ಗಿರೀಶ್ ಕಾರ್ನಾಡರು ನಿರ್ದೇಶಿಸಿದ್ದಾರೆ, ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯನ್ನು ಮಾರುತಿ ಶಿವರಾಂರವರು ನಿರ್ದೇಶಿಸಿದ್ದಾರೆ (೧೯೭೮). ಎರಡೂ ಚಿತ್ರಗಳು ಯಶಸ್ವಿ ಚಿತ್ರಗಳೆನಿಸಿದ್ದವು. ದಟ್ಟವಾದ ಹಳ್ಳಿಯ ಅನುಭವವನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ರಚಿಸಿದ ಹಲವಾರು. ಕತೆಗಳು ‘ತಪ್ತ’ (೧೯೭೦), ಪ್ರಥಮ ಕಥಾಸಂಕಲನ ಮತ್ತು ‘ಫೀನಿಕ್ಸ್’ ಸಂಕಲನವು ೧೯೭೫ರಲ್ಲಿ ಪ್ರಕಟವಾಯಿತು. ಸಣ್ಣ ಕತೆಗಳಲ್ಲಿ ‘ಫೀನಿಕ್ಸ್’ (೧೯೭೮-ಉಗ್ರನರಸಿಂಹ ನಿರ್ದೇಶನ), ‘ಗೀಜಗನ ಗೂಡು’ (೧೯೭೮-ಟಿ.ಎಸ್. ರಂಗಾ ನಿರ್ದೇಶನ), ಕುರುಬರ ಲಕ್ಕನೂ ಎಲಿಜಬೆತ್ ರಾಣಿಯೂ (೧೯೮೧-ಎಚ್.ಎಂ. ಕೃಷ್ಣಮೂರ್ತಿ ನಿರ್ದೇಶನ) ಚಲನಚಿತ್ರಗಳಾದವು. ಹಳ್ಳಿಯ ಜೀವನವು ಆಧುನಿತೆಯ ಸಂಘರ್ಷಕ್ಕೆ ಸಿಕ್ಕಿ ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯನ್ನು ಗದ್ಯದಲ್ಲಿ ಅಭಿವ್ಯಕ್ತಪಡಿಸಿದರೆ ಕವಿತೆಗಳಲ್ಲಿ ಕಾಮದ ವಿವಿಧ ನೆಲೆಗಳನ್ನು ಶೋಧಿಸಹೊರಟಿದ್ದಾರೆ. ‘ಮಣ್ಣಿನ ಹಾಡು’ (೧೯೬೬), ‘ಕಾಡುಗಿಡದ ಹಾಡು-ಪಾಡು’ (೧೯೭೩), ‘ಪ್ರಕಟಿಸಲಾಗದ ಪದ್ಯಗಳು’ ಎಂಬ ಮೂರು ಕವನ ಸಂಕಲನಗಳನ್ನು ನವ್ಯಕಾವ್ಯವು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪ್ರಕಟವಾದವು. ಅನುವಾದದಲ್ಲಿಯೂ ವಿಶಿಷ್ಟ ಪ್ರತಿಭೆಯನ್ನು ತೋರಿರುವ ಕೃಷ್ಣರವರು ‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ (೧೯೭೫) ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್‌ರವರು ಇಂಗ್ಲಿಷ್‌ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆತಿದೆ. ಅತಿ ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆಮಾಡಿ ಆಲನಹಳ್ಳಿ ಕೃಷ್ಣರವರು ತಮ್ಮ ಆರೋಗ್ಯದತ್ತ ನಿರ್ಲಕ್ಷಿಸಿದ್ದೇ ಕಾರಣವಾಗಿ ಸಾಹಿತ್ಯಲೋಕದಿಂದ ಹಠಾತ್ ನಿರ್ಗಮಿಸಿದ್ದು ೧೯೮೯ರ ಜನವರಿ ೪ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top