ಕೆಳದಿಗುಂಡಾ ಜೋಯಿಸರು

Home/Birthday/ಕೆಳದಿಗುಂಡಾ ಜೋಯಿಸರು
Loading Events

೨೭-೯-೧೯೩೧ ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ವಿಶ್ವಭೂಪಟದಲ್ಲಿ ಕೆಳದಿ ಹೆಸರು ಮೂಡಿಸಿದ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಆಸ್ತಿಯಾದ ಗುಂಡಾ ಜೋಯಿಸರು ಹುಟ್ಟಿದ್ದು ಸಾಗರ ತಾಲ್ಲೂಕಿನ ಕೆಳದಿಯಲ್ಲಿ. ತಂದೆ ನಂಜುಂಡ ಜೋಯಿಸರು, ತಾಯಿ ಮೂಕಾಂಬಿಕೆ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಹೈಸ್ಕೂಲಿಗೆ ಸೇರಿದ್ದು ಬೆಂಗಳೂರಿನ ಫೋರ್ಟ್ ಹೈಸ್ಕೂಲು. ಮೈಸೂರು ವಿಶ್ವವಿದ್ಯಾಲಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಬಿ.ಎ. (ಇತಿಹಾಸ) ಪದವಿ. ಕನ್ನಡ ಪಂಡಿತ, ಸಂಸ್ಕೃತ ಪಂಡಿತ, ಹಿಂದಿ ಪ್ರಬೋಧ, ಕನ್ನಡರತ್ನ, ಆಗಮ ವಿದ್ವಾನ್ ಪದವಿಗಳು. ತಿಗಳಾರಿ, ಸಂಸ್ಕೃತ, ಕನ್ನಡ ಮೋಡಿ ಲಿಪಿಯನ್ನು ಓದುವ ಅತ್ಯಂತ ಪ್ರತಿಭಾನ್ವಿತ ಸಂಶೋಧಕರು. ಗುಂಡಾ ಜೋಯಿಸರ ಪೂರ್ವಿಕರು ಆನೆಗೊಂದಿ ನಿವಾಸಿಗಳಾಗಿದ್ದು ವಿಜಯನಗರ ರಾಜ ಪುರೋಹಿತರು. ತಾಯಿ ಕೆಳದಿ ಆಸ್ಥಾನ ಕವಿಗಳ ಮಗಳು. ಹೀಗೆ ವಂಶ ವಾಹಿನಿಯಲ್ಲಿ ಹರಿದುಬಂದ ಪುರಾತನ ಇತಿಹಾಸದ ಕೊಂಡಿ. ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಜೋಯಿಸರಿಗೆ ಕೆಳದಿಯ ಇತಿಹಾಸವೇ ಉಸಿರಾಯಿತು. ೧೯೬೦ರಲ್ಲಿ ಪ್ರಾರಂಭಿಸಿದ ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ. ತಮ್ಮ ಮನೆತನಕ್ಕೆ ಸೇರಿದ ವಿಪುಲವಾದ ಓಲೆಗರಿ, ಶಾಸನಗಳು. ಪ್ರಾಚೀನ ವಸ್ತುಗಳ ಸಂಗ್ರಹ. ಈ ವಸ್ತು ಸಂಗ್ರಹಾಲಯದಲ್ಲಿ ಎರಡು ಸಾವಿರ ಪ್ರಾಚೀನ ಓಲೆಗರಿಗಳು. (ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಸಿದ) ೧೨೦ ವಿವಿಧ ಚಾರಿತ್ರಿಕ ದಾಖಲೆಗಳು, ೨-೩ ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಓಲೆಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು, ಬಿಜಾಪುರದ ಆದಿಲ್‌ಷಾನ ಚಾರಿತ್ರಿಕ ದಾಖಲೆಗಳು ಮುಂತಾದುವುಗಳ ಆಗರ. ಈ ಸಂಶೋಧನಾ ಕೇಂದ್ರವು ಕೇಂದ್ರ ಸರಕಾರ, ರಾಜ್ಯ ಸರಕಾರ, ದೆಹಲಿ ಇಂದಿರಾಗಾಂ ಕಲಾ ಕೇಂದ್ರ, ಲಕ್ನೋ ಪ್ರಾಚ್ಯ ವಸ್ತು ಸಂರಕ್ಷಣಾ ಕೇಂದ್ರ, ನ್ಯಾಷನಲ್ ಮ್ಯೂಸಿಯಂ, ಯುನೆಸ್ಕೊ ಮುಂತಾದುವುಗಳಿಂದ ಪಡೆದ ಮಾನ್ಯತೆ. ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ಕಡೆಗಳಿಂದ ಸಂಶೋಧಕರ ಕೆಳದಿಯ ಭೇಟಿ. ಇದೊಂದು ಏಕವ್ಯಕ್ತಿಯ ಮಹಾನ್ ಸಾಧನೆ. ಹಲವಾರು ಚಾರಿತ್ರಿಕ ಕೃತಿ ಪ್ರಕಟಿತ. ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮುಂತಾದ ೩೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಪ್ರಶಸ್ತಿ ಗೌರವಗಳು. ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್‌ಪರ್ಟ್ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ತಾಳ ಪತ್ರ ಗ್ರಂಥ ತಜ್ಞ ಪ್ರಶಸ್ತಿ, ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಸನ್ಮಾನ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಕೆಳದಿಶ್ರೀ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಅಮೃತ ಸೋಮೇಶ್ವರ – ೧೯೩೫ ನಂ. ತಪಸ್ವೀಕುಮಾರ್ – ೧೯೩೪ ತೀ.ನಂ.ಶಂಕರನಾರಾಯಣ – ೧೯೪೭ ಬಿ.ಎಲ್. ವೇಣು – ೧೯೪೯ ಸುಶೀಲ ಆರ್. ರಾವ್ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top