೨೩.೦೫.೧೯೨೬ ಮೃದಂಗ ಹಾಗೂ ಘಟಂ ವಾದನದಲ್ಲಿ ಪ್ರಖ್ಯಾತರಾಗಿರುವ ಕೃಷ್ಣಮೂರ್ತಿಯವರು ಹುಟ್ಟಿದ್ದು ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ. ಈ ಊರು ಹಲವಾರು ವಿದ್ಯನ್ಮಣಿಗಳಿಗೆ ಜನ್ಮ ಕೊಟ್ಟ ಜಾಗ. ತಂದೆ ಕೆ.ಕೆ. ನಾರಾಯಣ ಅಯ್ಯರ್, ತಾಯಿ ಪಾರ್ವತಿ ಅಮ್ಮಾಳ್ ಚಿಕ್ಕಂದಿನಿಂದಲೂ ಸ್ಕೂಲಿನ ಜ್ಞಾನಕ್ಕಿಂತ ಸಂಗೀತದ ಅದರಲ್ಲೂ ವಾದನದ ವಾದ್ಯಗಳತ್ತ ಬೆಳೆದ ಒಲವು. ಪಾಲ್ಘಾಟ್ ಸಿ.ಕೆ. ಅಯ್ಯಮಣಿ, ಕೆ. ಕುಂಜುಮಣಿ ಅಯ್ಯರ್, ಟಿ.ಎಸ್.ಮಣಿ ಮತ್ತು ಬೆಂಗಳೂರಿನ ಎಂ.ಎಲ್. ವೀರಭದ್ರಯ್ಯನವರ ಬಳಿ ಮೃದಂಗ ವಾದನದ ಶಿಕ್ಷಣ. ನಂತರ ಘಟವಾದ್ಯದ ಬಗ್ಗೆ ಬೆಳೆದ ಆಸಕ್ತಿಯಿಂದ ಕಲಿತದ್ದು ಘಟಂ. ಘಟಂ ಕೃಷ್ಣಮೂರ್ತಿ ಎಂಬ ಹೆಸಿರನಿಂದಲೇ ಪಡೆದ ಪ್ರಖ್ಯಾತಿ. ೧೯೫೨ ರಲ್ಲಿ ಮೊದಲ ಬಾರಿಗೆ ಕಚೇರಿ ಮಾಡಿದ ಅನುಭವ. ವೃತ್ತಿಪರರು, ಉದಯೋನ್ಮುಖರು ಎಲ್ಲರೊಡನೆಯೂ ಕಚೇರಿಯಲ್ಲಿ ಭಾಗಿ. ಮೂರು ತಲೆ ಮಾರಿನ ಸಂಗೀತಗಾರರಿಗೆ ನೀಡಿದ ಘಟಂಸಾಥಿ. ಹಳೆತಲೆಮಾರಿನ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಚೆಂಬೈ ವೈದ್ಯನಾಥ್ ಭಾಗವತರ್, ಟಿ. ಚೌಡಯ್ಯ, ಎಂ. ಬಾಲಮುರುಳಿ ಕೃಷ್ಣ, ರಾಧಾಜಯಲಕ್ಷ್ಮಿ, ಎಂ.ಎಲ್. ವಸಂತಕುಮಾರಿ, ಆರ್.ಕೆ.ಶ್ರೀಕಂಠನ್, ಟಿ.ಆರ್.ಮಹಾಲಿಂಗಂ, ಎನ್.ರಮಾಮಣಿ, ರಾಮನಾಡ್ ಕೃಷ್ಣನ್, ಸುಧಾರಘುನಾಥನ್, ಈ ತಲೆಮಾರಿನ ಕಲಾವಿದರಾದ ಕದ್ರಿ ಗೋಪಾಲನಾಥ್, ಮ್ಯಾಂಡೋಲನ್ ಯು. ಶ್ರೀನಿವಾಸ್, ಮಧುರೈ ಸೋಮಸುಂದರಂ, ಮಧುರೆ ಟಿ.ಎನ್.ಶೇಷಗೋಪಾಲನ್, ಬಾಂಬೆ ಸಹೋದರಿಯರು, ಹೈದರಾಬಾದ್ ಸೋದರರು ಮುಂತಾದವರಿಗೆ ನೀಡಿದ ಘಟಂ ಸಹವಾದನ. ದೇಶ ವಿದೇಶ ಗಳಲ್ಲಿಯೂ ನಡೆಸಿಕೊಟ್ಟ ಕಾರ್ಯಕ್ರಮಗಳು. ಮಲೇಶಿಯಾ, ಸಿಂಗಪೂರ್, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳ ಸಂಗೀತೋತ್ಸವಗಳಲ್ಲಿ ಭಾಗಿ. ಸಂದ ಗೌರವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸರಕಾರದ ಕರ್ನಾಟಕ ಕಲಾಶ್ರೀ, ನಾದಜ್ಯೋತಿ ತ್ಯಾಗರಾಜ ಭಜನ್ ಸಭಾದಿಂದ ಕಲಾಜ್ಯೋತಿ, ಪರ್ ಕಸಿವ್ ಆರ್ಟ್ ಸೆಂಟರಿನಿಂದ ಪಳನಿ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ ಮತ್ತು ಲಯ ಕಲಾ ನಿಪುಣ ಬಿರುದು. ಆರ್.ಕೆ. ಶ್ರೀಕಂಠನ್ ಪ್ರಶಸ್ತಿ, ತ್ಯಾಗರಾಜ ಗಾನಸಭಾದಿಂದ ಮತ್ತು ಮೂಕಾಂಬಿಕ ತಾಲವಾದ್ಯ ಸಂಗೀತ ಕಲಾಶಾಲೆಯಿಂದ ಕಲಾಭೂಷಣ, ಪಿಳ್ಳೆ ಗಾನಕಲಾ ಸಭಾದಿಂದ ಗಾನಕಲಾಚಂದ್ರ ಮುಂತಾದ ಗೌರವ ಪ್ರಶಸ್ತಿಗಳು. ಕೆ.ಎನ್.ಕೆ. ಸ್ಕೂಲ್ ಆಫ್ ಪರ್ಕಷನಸ್ ಮೂಲಕ ಬೆಂಗಳೂರು ಮತ್ತು ಲಂಡನ್ನಿನಲ್ಲಿ ಶಿಷ್ಯರಿಗೆ ನೀಡುತ್ತಿರುವ ಘಟಂ ತರಬೇತಿ. ಇದೇ ದಿನ ಹುಟ್ಟಿದ ಕಲಾವಿದೆ ಲಕ್ಷ್ಮೀ ಗವಾಯಿ – ೧೯೬೧.
* * *