Loading Events

« All Events

  • This event has passed.

ಕೆ.ಎಸ್. ಕರುಣಾಕರನ್

November 10

೧೦.೧೧.೧೯೩೩ ೨೦೦೬ ಕನ್ನಡ, ಮಲಯಾಳಂ ಭಾಷೆಯ ಕೊಂಡಿಯಾಗಿ ಎರಡು ಭಾಷೆಗಳ ಸಂಸ್ಕೃತಿಯನ್ನು ಈರ್ವರಿಗೂ ಪರಿಚಯಿಸಿ, ಭಾಷಾ ಬಾಂಧವ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಕೇರಳದ ತಲಚೇರಿಯವರಾದ ಕರುಣಾಕರನ್ ರವರು ಹುಟ್ಟಿದ್ದು, ಬೆಳೆದದ್ದು ಕೊಡಗಿನ ವಿರಾಜ ಪೇಟೆಯಲ್ಲಿ. ತಂದೆ ಕಲ್ಲಿಶಂಕರನ್, ತಾಯಿ ಶ್ರೀಮತಿ. ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಓದಿದ ನಂತರ ಬಿ.ಎ. ಆನರ್ಸ್ ಓದಲು ಬಂದದ್ದು ಮೈಸೂರಿಗೆ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. ಪದವಿಯನ್ನು ಪಡೆದರು. ಇವರ ಕಾಲೇಜಿನ ಮಿತ್ರದಲ್ಲಿ ಹಲವಾರು ಮಂದಿ ಖ್ಯಾತ ಸಾಹಿತಿಗಳೆನಿಸಿದ್ದಾರೆ. ಲಕ್ಷ್ಮೀನಾರಾಯಣ ಭಟ್ಟ, ಅ.ರಾ.ಮಿತ್ರ, ಹಂಸನಾಗರಾಜಯ್ಯ, ಕಮಲ ಹಂಪನಾ, ಜಿ. ಪರಶಿವಮೂರ್ತಿ, ಪಾ.ಶ. ಶ್ರೀನಿವಾಸ್ ಮುಂತಾದವರ ಒಡನಾಟದಲ್ಲಿ, ಸಾಹಿತ್ಯ ಚರ್ಚೆಯಲ್ಲೇ ಬೆಳೆದ ಕರುಣಾಕರನ್‌ವರಿಗೆ ಸಾಹಿತ್ಯದ ಗೀಳು ಹಿಡಿದದ್ದು ಹೆಚ್ಚೇನಲ್ಲ. ಮಾತೃ ಭಾಷೆ ಮಲಯಾಳಂ ಕೂಡಾ ಬರುತ್ತಿದ್ದುದರಿಂದ ಹಲವಾರು ಮಿತ್ರರು ಮಲಯಾಳಂ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವಂತೆ ಪ್ರಚೋದಿಸತೊಡಗಿದರು. ಮಿತ್ರರೆಲ್ಲರ ಅಪೇಕ್ಷೆಯಂತೆ ಮಲಯಾಂ ಸಾಹಿತ್ಯವನ್ನು ಕನ್ನಡಿಗರಿಗೇಕೆ ಪರಿಚಯಿಸಬಾರದು ಎಂದು ನಿರ್ಧರಿಸಿ ಸಣ್ಣಕಥೆಗಳ ಅನುವಾದವನ್ನು ಪ್ರಾರಂಭಿಸಿದರು. ಇವರು ಮೊದಲು ಅನುವಾದಿಸಿದ ಕಥೆ ‘ಕುಡುಗೋಲಿನ ಅಭಿಮಾನ’. ಸ್ನೇಹಿತರೆಲ್ಲರೂ ಓದಿಮೆಚ್ಚಿದ ನಂತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪೊಟ್ಟಿಕ್ಕಾಟ್‌ರವರ ‘ಪ್ರೇಮ ಲೇಖನಂ’ ಕತೆಯನ್ನು ಅನುವಾದಿಸಿದಾಗ ಬಹಳಷ್ಟು ಹೆಸರು ಪಡೆದರು. ಇವರು ಮಲಯಾಳಂನಿಂದ ಅನುವಾದಿಸಿದ ಬಹಳಷ್ಟು ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲೆ ಬೆಳಕು ಕಂಡಿವೆ. ಅನುವಾದ ಸಾಹಿತ್ಯವೂ ಒಂದು ರೀತಿಯ ಸವಾಲಿನ ಕೆಲಸವೇ. ಎರಡು ಭಾಷೆಗಳ ಸಂಸ್ಕೃತಿಯ ಪರಿಚಯವಿಲ್ಲದವರು ಸಮರ್ಥವಾಗಿ ಅನುವಾದ ಮಾಡಲಾರರು. ಆದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕರುಣಾಕರನ್‌ರವರಿಗೆ ಎರಡು ಸಂಸ್ಕೃತಿಯ ಪರಿಚಯವಿದ್ದುದರಿಂದ ಅನುವಾದ ಸುಲಭವಾಗಿತ್ತು. ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದಂತೆ ಕನ್ನಡದಿಂದ ಮಲಯಾಳಂಗೂ ಅನುವಾದಿಸಿದ್ದಾರೆ. ಅವುಗಳಲ್ಲಿ ಅನಂತಮೂರ್ತಿಯವರ ‘ಘಟಶ್ರಾದ್ಧ’, ಸೂ. ಸುಬ್ರಹ್ಮಣ್ಯಂರವರ ‘ರಕ್ತದ ಕತೆ’ ಮುಂತಾದವು. ನಿರಂಜನರವರ ಪ್ರಖ್ಯಾತ ಕಾದಂಬರಿ ‘ಚಿರಸ್ಮರಣಿ’ಯನ್ನು ಮಲಯಾಳಂಗೆ ಅನುವಾಸಿದರಾದರೂ ಹಸ್ತಪ್ರತಿಯನ್ನು ತಿದ್ದಲು ತೆಗೆದು ಕೊಂಡವರು ಹಸ್ತಪ್ರತಿಯನ್ನೇ ಕಳೆದುಬಿಟ್ಟಿದ್ದರು. ಹೀಗಾಗಿ ‘ಚಿರಸ್ಮರಣಿ’ ಮಲಯಾಳಂ ಭಾಷೆಯಲ್ಲಿ ಪ್ರಕಟವಾಗುವ ಅದೃಷ್ಟವನ್ನು ಕಳೆದುಕೊಂಡಿತು. ಸರ್ಕಸ್, ಗಂಡುಹೆಣ್ಣಾದಾಗ, ವಿಚಿತ್ರ ಪಂದ್ಯ, ಮಂಗಳ ಗ್ರಹಕ್ಕೆ ತಲುಪಿದಾಗ ಮುಂತಾದ ಅನುವಾದಗಳ ಜೊತೆಗೆ ಎರಡು ಪತ್ತೆದಾರಿ ಕಾದಂಬರಿಗಯೂ ಸೇರಿದಂತೆ ಹತ್ತು ಕಾದಂಬರಿಗಳು, ಸುಮಾರು ೩೦೦ ಕ್ಕೂ ಹೆಚ್ಚು ಕತೆಗಳನ್ನು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್ ನಾಯರ್‌ರವರ ‘ವಾರಣಾಸಿ’, ಕರುಣಾಕರನ್‌ರವರು ಅನುವಾದಿಸಿದ ಕೊನೆಯ ಕಾದಂಬರಿ. ನಾ. ಕಸ್ತೂರಿಯವರು ಕೇರಳದಿಂದ ಮೈಸೂರಿಗೆ ಬಂದು ನೆಲೆಸಿ, ಕನ್ನಡ ಕಲಿತು, ಕನ್ನಡಕ್ಕೆ ಆಗಾಧ ಸೇವೆ ಸಲ್ಲಿಸಿದರಾದರೂ, ಕರುನಾಕರನ್ ರವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮಲಯಾಳಂ ಸಾಹಿತ್ಯದ ಸೊಬಗನ್ನು ಕನ್ನಡಿಗರಿಗೆ ಉಣ ಬಡಿಸಿದ್ದಾರೆ. ೧೯೬೩ ರಲ್ಲಿ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಜೀವನವನ್ನು ಆರಂಭಿಸಿ ಸುಮಾರು ೨೨ ವರ್ಷ ಕಾಲ ಬೋಧನಾ ವೃತ್ತಿಯಲ್ಲಿದ್ದು ಸ್ವ-ಇಚ್ಛೆಯಿಂದ ನಿವೃತ್ತರಾಗಿ ಕೊಡಗಿನ ಸಿದ್ಧಾಪುರದ ಬಳಿಯ ಇಂಜಲಗೆರೆಯ ಕಾಫಿ ಎಸ್ಟೇಟ್‌ನಲ್ಲಿ ಪತ್ನಿ ಶೈಲಜಾರೊಡನೆ ವಿಶ್ರಾಂತಿ ಪಡೆಯತೊಡಗಿದರು. ಬಹುಶಃ ವಯಸ್ಸಿನ ಪ್ರಭಾವದಿಂದ ದೇಹಾರೋಗ್ಯ ಆಗಾಗ್ಗೆ ಕೈಕೊಡುತ್ತಾ ಬಂದರೂ ಸಾಹಿತ್ಯದ ಕೆಲಸ ನಿಲ್ಲಸದೆ ಕನ್ನಡ-ಮಲಯಾಳಂ ಭಾಷೆಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ಕರುಣಾಕರನ್‌ರವರು ಸಾವಿಗೆ ಶರಣಾದ್ದು ೨೦೦೬ರಲ್ಲಿ.

Details

Date:
November 10
Event Category: