Loading Events

« All Events

  • This event has passed.

ಕೆ. ಗೋಪಾಲಕೃಷ್ಣರಾವ್‌

August 9

೦೯..೧೯೦೬ ೦೮.೧೦.೧೯೬೭ ಕಥಾವಸ್ತು, ತಂತ್ರಗಾರಿಕೆ, ವೈವಿಧ್ಯತ್ಯೆಯಿಂದ ನವೋದಯದ ಕತೆಗಾರರಲ್ಲಿ ಪ್ರಮುಖರಾದ ಗೋಪಾಲಕೃಷ್ಣರಾಯರು ಹುಟ್ಟಿದ್ದು ೧೯೦೬ರ ಆಗಸ್ಟ್‌ ೯ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೊಡಗೇನ ಹಳ್ಳಿಯಲ್ಲಿ. ತಂದೆ ನಂಜುಂಡಯ್ಯ, ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ನ್ಯಾಷನಲ್‌ ಹೈಸ್ಕೂಲು (ಬೆಂಗಳೂರು) ಮತ್ತು ಸೆಂಟ್ರಲ್‌ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಕೈಲಾಸಂ ರವರ ಪ್ರಭಾವಕ್ಕೆ ಒಳಗಾಗಿ ನಾಟಕಗಳ ರಚನೆಯತ್ತ ಹೊರಳಿದರೂ ಮಾಸ್ತಿಯವರ ಕಥೆಯ ಕಲೆಗಾರಿಕೆಯೂ ಅವರನ್ನು ಸೆಳೆಯತೊಡಗಿತ್ತು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು ಪ್ರಾರಂಭದ ದಿನಗಳಲ್ಲಿ ಕವನಗಳನ್ನು ಬರೆಯ ತೊಡಗಿದ್ದು ಇಂಗ್ಲಿಷ್‌ನಲ್ಲಿ. ‘ಶ್ರೀರಾಮ ವಿಜಯ ಸಂಘ’ ಎಂಬ ಒಂದು ಸಂಘವನ್ನೂ ಪ್ರಾರಂಭಿಸಿದ್ದು ಗೋ.ಕೃ.ರವರೇ ಅದರ ಕಾರ್ಯದರ್ಶಿಗಳು. ಕೆಲ ವಿದ್ಯಾರ್ಥಿಗಳೊಡನೆ ಇತರ ಸದಸ್ಯರುಗಳೆಂದರೆ ಎಂಜಿನಿಯರಿಂಗ್‌ ಇಲಾಖೆಯಲ್ಲಿದ್ದು ನಿವೃತ್ತಿರಾಗಿದ್ದ ಎ. ಶೇಷಪ್ಪ, ಎಚ್‌.ಎನ್‌. ಸುಬ್ಬರಾವ್‌ , ನ್ಯಾಷನಲ್‌ ಹೈಸ್ಕೂಲಿನಲ್ಲಿ ಗಣಿತದ ಅಧ್ಯಾಪಕರಾಗಿದ್ದ ಎಚ್‌.ಎಸ್‌. ಶಿವರಾಮಯ್ಯ ಮುಂತಾದ ಹಿರಿಯರೇ ಸದಸ್ಯರಾಗಿದ್ದರ ಜೊತೆಗೆ ಇವರಿಗಿಂತ ಒಂದು ವರ್ಷ ಕಿರಿಯರಾದ ತ.ಸು. ಶಾಮರಾಯರೂ ಸದಸ್ಯರಾಗಿದ್ದು, ವಾರಕ್ಕೊಮ್ಮೆ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಗೋ.ಕೃ.ರವರು ಒಮ್ಮೆ ತ.ಸು. ಶಾಮರಾಯರನ್ನೂ ತಾವಿದ್ದ ಕೊಠಡಿಗೆ ಕರೆದೊಯ್ದು ಶೇಕ್ಸ್ ಪಿಯರ್, ಮಿಲ್ಟನ್‌, ವರ್ಡ್ಸ್‌ವರ್ತ್ ಮುಂತಾದ ಆಂಗ್ಲ ಕವಿಗಳ ಕೃತಿಗಳನ್ನು ತೋರಿಸಿ ಪರಿಚಯಸಿದ್ದಲ್ಲದೆ ತಾವು ಬರೆದಿದ್ದ ಇಂಗ್ಲಿಷ್‌ ಕವನ ಓದಿದಾಗ, ತ.ಸು.ಶಾ.ರವರು ‘ನೀವೇಕೆ ಕನ್ನಡದಲ್ಲಿ ಬರೆಯಬಾರದು?’ ಎಂದಾಗ, ಮುಂದಿನವಾರ ಸಭೆ ಸೇರಿದಾಗ ದೇವರ ಸ್ತುತಿ ರೂಪದ ಪದ್ಯ ಓದಿ ನಂತರ ‘ಕಮಲೆಯ ಹುಚ್ಚು’ ಎಂಬ ಕವನವನ್ನು ಓದಿದರು. ಈ ಕವನವು ನಂತರ ಬೆನಗಲ್‌ ರಾಮರಾವ್‌ ಮತ್ತು ಪಂಜೆಮಂಗೇಶರಾಯರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಸುವಾಸಿನಿ’ ಪತ್ರಿಕೆಯಲ್ಲಿಯೂ ಪ್ರಕಟವಾಯಿತು. ಹೀಗೆ ಇವರ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದವರು ತೀ.ನಂ.ಶ್ರೀ, ಎಂ.ವಿ. ಸೀತಾರಾಮಯ್ಯ, ತ.ಸು.ಶಾ. ಮುಂತಾದವರುಗಳು. ಇವರೇ ಸ್ಥಾಪಿಸಿದ್ದ ‘ಶ್ರೀರಾಮ ವಿಜಯ ಸಂಘ’ದ ಮೂಲಕ ಹಲವಾರು ಬಾರಿ ಕತೆಗಾರರ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ ತಾವಿದ್ದ ಗಾಂಧಿ ಬಜಾರಿನ ದಕ್ಷಿಣದ ಮೂಲೆಯಲ್ಲಿದ್ದ ಅಟ್ಟದ ಒಂದಂಕಣದ ಮನೆಯೇ ಇವರ ದಿವಾನ ಖಾನೆಯಾಗಿದ್ದು ಇಲ್ಲಿ ಏರ್ಪಡಿಸುತ್ತಿದ್ದ ಸಾಹಿತ್ಯ ಕೃತಿ ವಾಚನಗಳಿಗೆ ದಿವಾನಖಾನೆಯಿಂದಾಚೆಗೆ ಚೆಲ್ಲುವಷ್ಟು ಸಾಹಿತ್ಯಾಭಿಮಾನಿಗಳಿಂದ ತುಂಬಿರುತ್ತಿತ್ತು. ಪು.ತಿ. ನರಸಿಂಹಾಚಾರ್ಯರು ತಮ್ಮ ‘ಅಹಲ್ಯಾ’ ಗೀತರೂಪಕವನ್ನೂ ಮೊದಲ ಸಲ ಓದಿದ್ದು ಈ ದಿವಾನಖಾನೆಯಲ್ಲೆ. ಇವರು ಕತೆ ಬರೆಯಲು ಪ್ರಾರಂಭಿಸಿದ್ದು ಒಂದು ವಿಶಿಷ್ಟ ಸಂದರ್ಭದಲ್ಲೆ ಎಂಟ್ರೆನ್ಸ್‌ ವ್ಯಾಸಂಗಮಾಡುತ್ತಿದ್ದಾಗ ಪ್ರತಿದಿನ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಗೋ.ಕೃ. ರವರು ಒಮ್ಮೆ ಹಿಂದಿನ ಬೆಂಚಿನಲ್ಲಿ ಕುಳಿತು ಪಾಠವನ್ನು ಲೆಕ್ಕಿಸದೆ ಏನೋ ಬರೆಯತೊಡಗಿದ್ದರು. ಪಾಠಮಾಡುತ್ತಿದ್ದ ಸಿ. ರಾಮರಾಯರು ‘ಏನು ಮಾಡುತ್ತಿದ್ದಿಯಾ?’ ಎಂದು ಕೇಳಿದಾಗ ‘ಕತೆ ಬರೆಯುತ್ತಿದ್ದೇನೆ ಸರ್’ ಎಂದು ಧೈರ್ಯದಿಂದಲೇ ಉತ್ತರಿಸಿ ಬರೆದ ಕಥೆಯನ್ನು ಅವರ ಕೈಗಿತ್ತರು. ಪಾಠದ ನಡುವ ಕಥೆ ಬರೆಯುತ್ತಿದ್ದಾನಲ್ಲ ಎಂದು ದಂಡಿಸದ ಶಿಕ್ಷಕರು, ಹುಡುಗನ ಕಥೆಗಾರಿಕೆಯನ್ನು ಓದಿ ಮೆಚ್ಚಿ ಅಭಿನಂದಿಸಿದ್ದಲ್ಲದೆ, ಬರೆದಿದ್ದ ‘ಶ್ರೀನಿವಾಸನ ಸ್ನೇಹಿತ’ ಎಂಬ ಕತೆಯನ್ನು ಶಾಲೆಯ ಪತ್ರಿಕೆಯಲ್ಲೂ ಪ್ರಕಟಿಸಿ, ಹವ್ಯಾಸವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದರು. ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ. ನಂತರ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳಾಗಿದ್ದ ಕೆ. ಹನುಮಂತಯ್ಯನವರ ಆಪ್ತಕಾರ್ಯದರ್ಶಿಯಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು. ಅವರಲ್ಲಿದ್ದ ಸವಿನೆನಪಿಗಾಗಿ ಬರೆದ ಕವನಗಳನ್ನು ಸೇರಿಸಿ ‘ಕುಮಾರಕೃಪ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ನಂತರ ಇವರು ಬರೆದ ಹಲವಾರು ಕವನಗಳು ಜೀವನ ಪತ್ರಿಕೆಯಲ್ಲಿಯೂ ಪ್ರಕಟಗೊಂಡವು. ಇದೇ ಸಂದರ್ಭದಲ್ಲಿ, ೧೯೫೬ ರ ಸುಮಾರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚುನಾಯಿತರಾಗಿದ್ದವರು ಬಿ. ಶಿವಮೂರ್ತಿ ಶಾಸ್ತ್ರಿಗಳು (೧೯೫೬-೬೪). ಇವರ ಅಪೇಕ್ಷೆಯಂತೆ ಗೋ.ಕೃ. ರವರು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ೫ ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಇವರು ಸಂಪಾದಿಸಿ ಪ್ರಕಟಿಸಿದ ಗದ್ಯ ಕೃತಿ ‘ಆಧುನಿಕ ಗದ್ಯ ಸಾಹಿತ್ಯ’. ಇವರು ಬರೆದ ಹಲವಾರು ಕಥೆಗಳು ಉಡುಗೊರೆ, ಬಂಗಾರದ ಡಾಬು, ನಟಿ, ಆಯ್ದ ಹತ್ತುಕಥೆಗಳು, ಸೋತು ಗೆದ್ದವರು, ರಾಜಾಯಿ, ಮುಂತಾದ ಸಂಗ್ರಹಗಳಲ್ಲಿ ಸೇರಿವೆ. ಕೆನ್ಸಿಂಗ್‌ಟನ್‌ ಪಾರ್ಕ್ ಮತ್ತು ಹರಿದಾಸ ಸಾಹಿತ್ಯ ಎಂಬವು ಎರಡು ಪ್ರಬಂಧ ಸಂಕಲನಗಳು. ಕೈಲಾಸಂ ರವರಿಂದ ಪ್ರೇರಿತರಾಗಿ ನಾಟಕ ರಚನೆಗಳಲ್ಲಿ ಮುಂದಾಗಿ ಆಸೆ-ನಿರಾಸೆ, ಕನ್ಯಾರ್ಥಿ, ಸಾಕುಕೂಸು, ರುಗ್ಣಕಯ್ಯೆ, ಚಿರಸಮಸ್ಯೆ, ಅಪರಾಧಿ, ಕವಿಕುಟೀರ, ಪಾರ್ಕಿನ ಲಚುಮಿ ಮುಂತಾದ ಏಳುನಾಟಕಗಳನ್ನೂ ರಚಿಸಿದರು. ಇವರು ಬರೆದ ‘ಡಾ. ಸುಶೀಲಾ ಸಂಕೇತ್‌’ ಮತ್ತು ‘ಶ್ರೀಧರ ಕವಿ’ ಎಂಬ ಎರಡು ಕಥೆಗಳು ಹಾಗೂ ಸೋದರಿಯರು ಎಂಬ ನಾಟಕವು ಇಂಗ್ಲಿಷ್‌ ಭಾಷೆಗೂ ‘ಏನಿದು ಹುಚ್ಚು’ ಎಂಬ ಕತೆಯು ಹಿಂದಿ ಭಾಷೆಗೂ ಅನುವಾಗೊಂಡಿವೆ. ೧೯೬೭ ರಲ್ಲಿ ನಡೆದ ಇವರ ಷಷ್ಟ್ಯಬ್ದಿ ಕಾರ್ಯಕ್ರಮದಲ್ಲಿ ‘ಗೀತೆಗಳು’ ಎಂಬ ೬೦ ಕವನಗಳ ಸಂಕಲನವನ್ನು ಪ್ರಕಟಿಸಿ ಷಷ್ಟ್ಯಬ್ದಿ ಶಾಂತಿ ಕಾರ್ಯಕ್ರಮವೋ, ಪುಸ್ತಕ ಬಿಡುಗಡೆಯ ಸಾಹಿತ್ಯ ಕಾರ್ಯಕ್ರಮವೋ ಎಂಬ ಸಂಶಯ ಬರುವಂತೆ ಕಾರ್ಯಕ್ರಮವನ್ನು ಆಯೋಜಿಸಿ ನೆರೆದವರನ್ನು ಆಶ್ಚರ್ಯಚಕಿತರನ್ನಾಗಿಸಿದರು. ಇವರು ಬರೆದ ಕವನಗಳ ಇನ್ನೊಂದು ವಿಶೇಷತೆ ಎಂದರೆ, ಹಾಡಬಹುದಾದ ಕವನಗಳಿಗೆ ಸಂಗೀತ ಪರಿಣತರ ಸಹಾಯ ಪಡೆದು ರಾಗ-ತಾಳಗಳನ್ನು ಸೂಚಿಸಿರುತ್ತಿದ್ದದು. ವಿದ್ಯಾರ್ಥಿಯಾಗಿದ್ದಾಗಲೇ ಹಲವಾರು ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿದ್ದ ಗೋ.ಕೃ.ರವರ ಕಾರ್ಯಚಟುವಟಿಕೆಗಳು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘದಿಂದ ಪ್ರಾರಂಭವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ (೧೯೪೭-೪೮ ಮತ್ತು ೧೯೫೬-೬೧) ಎರಡು ಬಾರಿ ನಿಯೋಜಿತರಾಗಿದ್ದರು. ಮಾಸ್ತಿಯವರ ‘ಜೀವನ’ ಪತ್ರಿಕೆಯ ಸಂಪಾದಕರಾಗಿ (೧೯೬೫) ಕಾರ್ಯನಿರ್ವಹಿಸಿದ್ದಲ್ಲದೆ (೧೯೩೯ ರ ನವಂಬರ್ ನಲ್ಲಿ ಧಾರವಾಡದಲ್ಲಿ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್‌, ರಂ.ಶ್ರೀ ಮುಗಳಿ ಯವರ ಸಂಪಾದಕತ್ವದಲ್ಲಿ ಹೊರತಂದ ಮಾಸಪತ್ರಿಕೆ. ೧೯೪೨ರಲ್ಲಿ ತ್ರೈಮಾಸಿಕವಾಗಿತ್ತು. ೧೯೪೪ರ ಮೇನಿಂದ ಬೆಂಗಳೂರಿನಿಂದ ಮಾಸ್ತಿಯವರ ಸಂಪಾದಕತ್ವ, ೧೯೦೬ರಲ್ಲಿ ಗೋ.ಕೃ. ನಂತರ ಸಿದ್ಧವನ ಹಳ್ಳಿ ಕೃಷ್ಣಶರ್ಮ, ಹಂ.ಪ. ನಾಗರಾಜಯ್ಯನವರಿಂದ ಮುಂದುವರೆದು ಒಂದೆರಡು ವರ್ಷ ನಡೆದು ನಿಂತು ಹೋಯಿತು) ಮೈಸೂರು ವಾಣಿಜ್ಯ ಸಂಘದವರು ಪ್ರಕಟಿಸುತ್ತಿದ್ದ ಇಂಗ್ಲಿಷ್‌ ಆವೃತ್ತಿ ಮೈಸೂರು ಕಾಮರ್ಸ್ ಪತ್ರಿಕೆಯ ಸಹಸಂಪಾದಕರಾಗಿದ್ದಲ್ಲದೆ ಇನ್ನೂ ಹಲವಾರು ಸಾಹಿತ್ಯ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸೆಕ್ರೆಟರಿಯೆಟ್ಟಿನ ಗುಮಾಸ್ತೆ ಕೆಲಸದಿಂದ ಬರುತ್ತಿದ್ದ ಸಂಬಳದಲ್ಲೇ ಹಿತಮಿತವಾಗಿ ಸಂಸಾರ ತೂಗಿಸುವ ಮಡದಿಯ ನೆರವಿನಿಂದ ನಡೆಸಿದ ಸಾಹಿತ್ಯ ಕೂಟಗಳು, ಮಿತ್ರಭೇಟಿಗಳನ್ನು ಸಹಿಸದ ವಿಧಿಯ ದೆಸೆಯಿಂದ ಅನಾರೋಗ್ಯಕ್ಕೀಡಾದ ಶ್ರೀಮತಿ ಸೀತಮ್ಮನವರ ನಿರ್ಗಮನದ ನಂತರ ಗೊ.ಕೃ. ರವರ ಜೀವನದಲ್ಲುಂಟಾದ ಶೂನ್ಯತೆ. ಎ.ಆರ್. ಕೃಷ್ಣಶಾಸ್ತ್ರಿ, ತ.ಸು.ಶಾ, ಟಿ.ಎಸ್‌. ವೆಂಕಣ್ಣಯ್ಯನವರ ಒತ್ತಾಯದಿಂದ ಇವರ ಬಾಳನ್ನು ಪ್ರವೇಶಿಸಿದವರು ಸುಶೀಲಮ್ಮನವರು. ಋಜುಸ್ವಭಾವದ, ಸಾತ್ವಿಕಗುಣದ, ದೈವಭೀರು. ‘ಶ್ರೀಗುರುಚರಿತೆ’ಯನ್ನು ರಚಿಸಿದ ಲೇಖಕಿ. ಸಂಗೀತ, ಕಾವ್ಯವಾಚನ, ಭಜನೆ, ನಾಟಕ, ಸಾಹಿತ್ಯ ಗೋಷ್ಠಿಗಳಲ್ಲಿ ಆಸಕ್ತರಾಗಿದ್ದ ಗೋ.ಕೃ. ರವರಲ್ಲಿ ಅಧ್ಯಾತ್ಮಿಕ ಭಾವವು ಬೆಳೆಯ ತೊಡಗಿದ್ದನ್ನು ಅವರ ‘ದರ್ಶನ’ ಮತ್ತು ‘ದಿವ್ಯ ಜ್ಯೋತಿ’ ಮುಂತಾದ ಕವನಗಳಲ್ಲಿ ಗುರುತಿಸಬಹುದಾಗಿದೆ. ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದ ಗೋ.ಕೃ. ರವರು ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೬೭ ರ ಅಕ್ಟೋಬರ್ ೮ ರಂದು. ಗೋ.ಕೃ.ರವರ ಕನಸನ್ನು ನನಸಾಗಿಸುವ ಹಾದಿಯಲ್ಲಿ ಅವರ ಮಗಳು ಜಾನಕಿ ಶ್ರೀನಿವಾಸ್‌ವರು ಡಾ. ರಮೇಶ್ ಕಾಮತ್‌ರವರ ಅಧ್ಯಕ್ಷತೆಯಲ್ಲಿ ಗೋ.ಕೃ. ಪ್ರತಿಷ್ಠಾನ ಸ್ಥಾಪಿಸಿ (೭.೮.೨೦೧೧), ಪ್ರತಿಷ್ಠಾನದ ಆಶಯದಂತೆ ಕೆನ್ಸಿಂಗ್‌ಟನ್‌ ಪಾರ್ಕ್ (ತನು-ಮನ ಪ್ರಕಾಶನ, ಮೈಸೂರು), ಸಮಗ್ರಕಥೆಗಳು (ವಸಂತ ಪ್ರಕಾಶನ, ಬೆಂಗಳೂರು), ಸಮಗ್ರ ಏಕಾಂಕ ನಾಟಕಗಳು (ತುಲನಪ್ರಕಾಶನ, ಬೆಂಗಳೂರು) ಪುನರ್ ಮುದ್ರಣಗೊಂಡಿದ್ದು, ನವೋದಯಕಾಲದ ಹಿರಿಯ ಕಥೆಗಾರರ ಪರಿಚಯವನ್ನೂ ಇಂದಿನ ಪೀಳಿಗೆಯ ಓದುಗರಿಗೆ ಒದಗಿಸಿದ್ದಾರೆ. ಗೋ.ಕೃ.ರವರ ನೆನಪಿಗಾಗಿ ‘ಮಾಸದ ನೆನಪು’ ಸಂಸ್ಮರಣ ಗ್ರಂಥವು ಸೆಪ್ಟೆಂಬರ್ ೨ರಂದು (೨೦೧೨) ಬಿಡುಗಡೆಯಾಗಲಿದೆ.

Details

Date:
August 9
Event Category: