೧೨-೫-೧೯೧೯ ೧೨-೬-೧೯೯೯ ಕನ್ನಡದ ಶ್ರೇಷ್ಠ ವಿಮರ್ಶಕರೆಂದೇ ಪ್ರಖ್ಯಾತರಾದ ಕೆ. ನರಸಿಂಹಮೂರ್ತಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಳಿಯ ಮಂಚೇನಹಳ್ಳಿಯಲ್ಲಿ. ತಂದೆ ರೆವಿನ್ಯೂ ಇನ್ಸ್ಪೆಕ್ಟರಾಗಿದ್ದ ಕೃಷ್ಣಮೂರ್ತಿ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಫೋರ್ಟ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಂಸ್ಕೃತ ಪಂಡಿತರಾಗಿದ್ದ ಸೀತಾರಾಮ ಶಾಸ್ತ್ರಿಗಳು ಕಾಳಿದಾಸನ ಕೃತಿಯನ್ನು ವಿವರಿಸುತ್ತಿದ್ದ ರೀತಿಯಿಂದ ಸಾಹಿತ್ಯದತ್ತ ಬೆಳೆದ ಆಸಕ್ತಿ. ತಾತನ ಮನೆಯಲ್ಲಿದ್ದ ಇಂಗ್ಲಿಷ್, ಸಂಸ್ಕೃತ, ಕನ್ನಡ ಪುಸ್ತಕಗಳು ಹೆಚ್ಚಿಸಿದ ಸಾಹಿತ್ಯದ ದಾಹ. ಕಾಲೇಜಿನಲ್ಲಿ ಓದುತ್ತಿದ್ದಾಗ ಬರೆದ ಕಥೆ ‘ಬೆಳೆದಲ್ಲೇ ಉಳಿದಿದ್ದರೆ’ ಕೃತಿಗೆ ಬಹುಮಾನ. ಸಾಹಿತ್ಯ ಪರಿಷತ್ತು ನಡೆಸಿದ ವಿಮರ್ಶಾ ಸ್ಪರ್ಧೆಯಲ್ಲಿ ‘ಕನ್ನಡದ ಸಣ್ಣ ಕಥಾ ಸ್ವರೂಪ’ ಲೇಖನಕ್ಕೆ ದ್ವಿತೀಯ ಬಹುಮಾನ. ಡಾ. ಎ.ಆರ್.ಕೃ.ಗಳು ಮೆಚ್ಚಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸಿದಾಗ ಸೆಳೆದ ವಿದ್ವಾಂಸರ ಗಮನ. ಎಂ.ಆರ್.ಶ್ರೀ.ಯವರು ಜಾಣ ಪರೀಕ್ಷೆಗೆ ಪಠ್ಯವಾಗಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಪದವಿ. ಪ್ರಿನ್ಸಿಪಾಲ್ ರಾಲೋ ಮೆಚ್ಚಿನ ಶಿಷ್ಯ. ಬಿ.ಎ. ಆನರ್ಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ-ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ. ೧೯೪೩ರಲ್ಲಿ ಇಂಗ್ಲಿಷ ಎಂ.ಎ. ಪದವಿ. ಅಡಿಗರು, ಕೆ.ಎಸ್.ನ. ಆರ್.ಕೆ. ನಾರಾಯಣ್ ಪರಿಚಯ. ಅಡಿಗರ ‘ಚಂಡಮದ್ದಲೆ’, ರಾಮಚಂದ್ರಶರ್ಮರ ‘ಏಳು ಸುತ್ತಿನ ಕೋಟೆ’ಗೆ ಬರೆದ ಮುನ್ನುಡಿ. ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿಕೊಟ್ಟದ್ದು ‘ಅತ್ಯುತ್ತಮ ಸಣ್ಣಕಥೆಗಳ ಸಂಗ್ರಹ’ ೧೯೫೬ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ. ಅಶೋಕ ವಿಜಯ (ಖಂಡಕಾವ್ಯ) ಪ್ರಿಯದರ್ಶಿನಿ ಮತ್ತು ಇತರ ಕಥೆಗಳು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ಆಧುನಿಕ ಭಾರತೀಯ ಸಾಹಿತ್ಯ ಕನ್ನಡ ಭಾಷೆಯ ಸಂಪಾದಕತ್ವ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಕಟಿಸುತ್ತಿದ್ದ ಚಂದನ, ಅನಿಕೇತನ ಪತ್ರಿಕೆ ಸಂಪಾದಕರಲ್ಲೊಬ್ಬರು. ದೇವುಡು ನರಸಿಂಹಶಾಸ್ತ್ರಿಗಳ ಕೃತಿಸಮೀಕ್ಷೆ,. ಆಡಳಿತಗಾರನ ಡೈರಿಯಿಂದ, ವಿಮರ್ಶಾಗ್ರಂಥಗಳು ಪ್ರಕಟಿತ. ವಿಶ್ವದ ಹಲವು ಭಾಷೆಗಳ ಅತ್ಯುತ್ತಮ ಕೃತಿಗಳನ್ನು ಕನ್ನಡಿಗರಿಗೆ ಕನ್ನಡ ಪ್ರಭ ಪತ್ರಿಕೆಯ ‘ಸಾಹಿತ್ಯಲೋಕ’ ಅಂಕಣದ ಮೂಲಕ ಪರಿಚಯಿಸಿದ ಖ್ಯಾತಿ ಇವರದು. ಇದೇ ದಿನ ಹುಟ್ಟಿದ ಸಾಹಿತಿಗಳು : ವಾಣಿ – ೧೯೧೭-೧೪.೨.೧೯೮೮ ರತ್ನಮ್ಮ. ಎಸ್ – ೧೯೨೬ ಹುರಗಲವಾಡಿ ನರಸಿಂಹಶಾಸ್ತ್ರಿ – ೧೯೨೯ ಪ್ರೊ. ಜಿ. ಅಶ್ವತ್ಥನಾರಾಯಣ – ೧೯೩೮

