೮-೧-೧೮೯೮ ಸೊಗಸಾದ ಮೈಕಟ್ಟಿನ, ವ್ಯಾಯಾಮ ಪಟು ಕೆ.ವಿ. ಅಯ್ಯರ್ರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ದೇವ ಸಮುದ್ರದಲ್ಲಿ. ವಿದ್ಯಾಭ್ಯಾಸ ಬೆಂಗಳೂರು. ಮಿಡ್ಲ್ ಸ್ಕೂಲ್ ಓದಿದ್ದು ಕೋಟೆ ಹೈಸ್ಕೂಲು ಆವರಣದಲ್ಲಿದ್ದ ಎ.ವಿ. ಸ್ಕೂಲಿನಲ್ಲಿ-ಹೈಸ್ಕೂಲು ಓದಿದ್ದು ವೆಸ್ಲಿಯನ್ ಮಿಷನ್ ಹೈಸ್ಕೂಲು. ಡಿಗ್ರಿ ಪಡೆಯಲಿಲ್ಲವೆಂಬ ಕೊರಗು. ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಮ್ಮನ್ನು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ನಿಪುಣರು. ಸ್ವಂತ ವಿದ್ಯುಚ್ಛಕ್ತಿ ಕಾರ್ಯದಲ್ಲಿ, ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ. ಪ್ರಚಂಡ ದೇಹದಾರ್ಢ್ಯ. ಅಪಾರ ಸ್ನಾಯು ನಿಯಂತ್ರಣ. ಸೊಗಸಾದ ಮೈಕಟ್ಟು. ಉತ್ತಮ ವ್ಯಾಯಾಮ ಶಿಕ್ಷಕರು. ಕೈಲಾಸಂರವರಿಗೂ ಅಂಗಸಾಧನೆ ಹುಚ್ಚು ಹಿಡಿಸಿದರೆ, ಕೈಲಾಸಂ ಮಧ್ಯರಾತ್ರಿಯಲ್ಲಿ ಮನೆಗೆ ಕರೆದೊಯ್ದು ಊಟ ಹಾಕಿ ಸಾಹಿತ್ಯದ ತಿರುಳು ತಿನ್ನಿಸಿದರು. ಅಯ್ಯರಿಗೂ ಹತ್ತಿದ ಸಾಹಿತ್ಯದ ಗೀಳು. ಇವರ ಸಂವಹನ ಚಿಕಿತ್ಸೆ, ವ್ಯಾಯಾಮಕ್ಕೆ ಬೆರಗಾದವರು ಅಂದಿನ ಮಹಾರಾಜ ಕೃಷ್ಣರಾಜ ಒಡೆಯರು. ಇವರ ಕೈಚಳಕ, ಸೇವೆಗೆ ಮಾರು ಹೋದರು. ಅರ್ಧಕ್ಕೆ ನಿಂತ ವ್ಯಾಯಾಮ ಶಾಲಾ ಕಟ್ಟಡಕ್ಕೆ ಪರೋಕ್ಷ ಸಹಾಯ. ಪೂರ್ಣಗೊಂಡ ಕಟ್ಟಡದಿಂದ ಅಯ್ಯರ್ರವರಿಗೆ ತೃಪ್ತಿ. ಹುದುಗಿದ್ದ ಸಾಹಿತ್ಯ ಶಕ್ತಿ ಪ್ರಕಾಶನಕ್ಕೆ ಬರೆದ ಮೊದಲ ಕತೆ ‘ದೆವ್ವದ ಮನೆ’ ಹೊಸ ಬಗೆಯ ರಚನೆ. ಚಿತ್ರ ವಿಚಿತ್ರ ಸನ್ನಿವೇಶಗಳು. ತೀವ್ರ ವರ್ಣನೆಯ ಕುತೂಹಲದ ಕತೆ. ಓದುಗರಿಂದ ಪ್ರಶಂಸಾ ಮಹಾಪೂರ. ರೀಡರ್ಸ್ ಡೈಜೆಸ್ಟಿನ ಒಂದು ಪುಟದ ತುಣಿಕಿನಿಂದ ಬರೆದ ಕಾದಂಬರಿ ‘ರೂಪದರ್ಶಿ.’ ಇದರ ಮುಂದುವರೆದ ಭಾಗ ‘ಲೀನಾ.’ ಪ್ರಸ್ತುತ ಸಮಾಜದ ಅಭಿವ್ಯಕ್ತಿ ಪಡೆದ ಕಾದಂಬರಿ ಎಂಬ ಹೆಗ್ಗಳಿಕೆ. ಮತ್ತೊಂದು ಚಾರಿತ್ರಿಕ ಕಾದಂಬರಿ. ‘ಶಾಂತಲಾ’ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ರಾಣಿ, ನಾಟ್ಯ ಸರಸ್ವತಿಯ ಕುರಿತ ಕಾದಂಬರಿ. ಸಮುದ್ಯುತಾ ಮತ್ತೊಂದು ಕಥಾಸಂಕಲನ. ಹೆನ್ರಿ ಜೇಮ್ಸ್ ನೆನಪಿಗೆ ತರುವ ಕಥೆಗಳು. ದೈಹಿಕ ಶಿಕ್ಷಣ ಕುರಿತು ನಾಲ್ಕಾರು ಇಂಗ್ಲೀಷ್ ಕೃತಿ ರಚನೆ. 1. Chemical change in Physical Figure 2. Physic and Figure 3. Surya Namaskar 4. Perfect Strength. How to obtain strength. ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗರಿ. ನಮ್ಮನ್ನಗಲಿದ್ದು ೩.೧.೧೯೮೦ರಲ್ಲಿ. ೧೯೯೪ರಲ್ಲಿ ‘ಪ್ರೊ. ಕೆ.ವಿ. ಅಯ್ಯರ್’ ಸಂಸ್ಮರಣ ಗ್ರಂಥ ಪ್ರಕಟಣೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀನಿವಾಸ ಉಡುಪ – ೧೯೩೩-೯.೩.೨೦೦೦ ಸಿ.ಎನ್. ರಾಮಚಂದ್ರ – ೧೯೩೬ ಮಾಲತಿ ವಿ. ಮೊಯಿಲಿ – ೧೯೪೫ ಏಜಾಸುದ್ದೀನ್ – ೧೯೪೪

