Loading Events

« All Events

  • This event has passed.

ಕೆ. ವಿ. ಚಂದ್ರಕಲಾ ನಂದಾವರ

November 21

೨೧.೧೧.೧೯೫೦ ಸಾಹಿತ್ಯ, ಸಂಗೀತ, ಯಕ್ಷಗಾನ ಮತ್ತು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಕಲಾ ನಂದಾವರ ರವರು ಹುಟ್ಟಿದ್ದು ಮಂಗಳೂರಿನಲ್ಲಿ ತಾ. ೨೧.೧೧.೧೯೫೦ ರಲ್ಲಿ. ತಂದೆ ಕೊಂಡಾಣ ವಾಮನ, ತಾಯಿ ಸುಂದರಿ. ಬಿಜೈ ಕಾಪಿಕಾಡ್ ಮುನಿಸಿಪಲ್ ಹೈಯರ್ ಪ್ರೈಮರಿಶಾಲೆ, ಬೆಸೆಂಟ್ ಗರ್ಲ್ಸ್ ಹೈಸ್ಕೂಲಿನಲ್ಲಿ ಎಸ್‌.ಎಸ್.ಎಲ್‌.ಸಿ. ವರೆಗೆ. ಸರಕಾರಿ ಕಾಲೇಜಿನಿಂದ ಪದವಿ, ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ. ಪದವಿ ಮತ್ತು ಕನ್ನಡ ಡಿಪ್ಲೊಮದಲ್ಲಿ ೩ನೇ ರ್ಯಾಂಕ್ ವಿದ್ಯಾರ್ಥಿನಿ. ಹಿಂದಿ ರಾಷ್ಟ್ರಭಾಷಾ ಪ್ರವೀಣರು, ಯೋಗದಲ್ಲಿಯೂ ಪಡೆದ ಡಿಪ್ಲೊಮಾ. ಉದ್ಯೋಗಕ್ಕಾಗಿ ಆಯ್ದುಕೊಂಡಿದ್ದು ಬೋಧಕ ವೃತ್ತಿ. ಗಣಪತಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರು. ಸಾಹಿತ್ಯ, ಶಿಕ್ಷಣಕವಾದ ಹಲವಾರು ವಿಚಾರ ಸಂಕಿರಣಗಳು, ಕಮ್ಮಟಗಳಲ್ಲಿ ಭಾಗಿ. ಪ್ರತಿಭಾವಂತ ಲೇಖಕಿಯಾದ ನಂದಾವರ ರವರ ಒಲವು ಕಥೆ, ಕವನ, ಜೀವನ ಚರಿತ್ರೆ ಮತ್ತು ಪ್ರಬಂಧಗಳತ್ತು ಹಲವಾರು ಸಣ್ಣ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಜಾನಕಿ ಬ್ರಹ್ಮಾವರ ರವರ ತುಳು ಕಾದಂಬರಿಯ ಅನುವಾದದ ಕೃತಿ ‘ಯಾರಿಗೆ ಯಾರುಂಟು’ ಕಾದಂಬರಿಯು ಮಂಗಳೂರು ವಿ.ವಿ.ದ ಪದವಿಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. ‘ಕಯ್ಯಾರ ಕಾವ್ಯ’ ವಿಮರ್ಶಾಲೇಖನಗಳ ಸಂಕಲನವನ್ನು ಮಂಗಳೂರು ವಿ.ವಿ.ದ ಪ್ರಸಾರಾಂಗ ಪ್ರಕಟಿಸಿದೆ. ಇವರ ಇತರ ಕೃತಿಗಳೆಂದರೆ, ಪ್ರೊ. ಎಂ. ಮರಿಯಪ್ಪ ಭಟ್ಟರ ‘ಜೀವನ ಚರಿತ್ರೆ’ಯ ಹೊತ್ತಗೆ, ‘ನಾವು ಪ್ರಾಮಾಣಿಕತೆ’ ಮತ್ತು ‘ಮತ್ತೆ ಚಿತ್ತಾರ ಬರೆ ಗೆಳತಿ’ ಕವನ ಸಂಕಲನಗಳು, ‘ಹೊಸ್ತಿಲಿಂದೀಚೆಗೆ’ – ಲೇಖನಗಳು ಮತ್ತು ಭಾಷಣಗಳ ಸಂಗ್ರಹ; ‘ಮುಖಾ-ಮುಖಿ’ – ಕಥಾ ಸಂಕಲನ ; ಸಾಕ್ಷರತಾ ಆಂದೋಲನದ ವಯಸ್ಕರಿಗಾಗಿ ನಿರಂತರ ಕಲಿಕೆಯ ಪಠ್ಯಪುಸ್ತಕ ‘ಅಜ್ಜಿ-ಅಮ್ಮ-ಮಗಳು’; ‘ಮಾತು-ಓದು-ಬರೆಹ’ ರೇಡಿಯೋ ಚಿಂತನಗಳ ಸಂಗ್ರಹ ಮುಂತಾದ ಕೃತಿಗಳ ರಚನೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಮಂಗಳೂರು ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದ (೧೨ ವರ್ಷ) ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿ, ನೃತ್ಯ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ನಿರ್ವಹಣೆಯ ಜವಾಬ್ದಾರಿ. ಕರಾವಳಿಯ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯೆಯಾಗಿ ನಂತರ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಣೆ. ಸ್ತ್ರೀ ಶೋಷಣೆಯ ವಿರುದ್ಧ, ಹೆಣ್ಣಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ದಿಟ್ಟ ನಿಲುವು ತಾಳಿ ರೂಪಿಸಿದ ಹಲವಾರು ಕಾರ್ಯಕ್ರಮಗಳು. ದೊರೆತ ಹಲವಾರು ಪ್ರಶಸ್ತಿ ಗೌರವಗಳು. ಉತ್ತರ ಪ್ರದೇಶದ ರಾಷ್ಟ್ರಮಟ್ಟದ ಆಲ್ ಇಂಡಿಯಾ ಪೊಟೆಟ್ನಿ ಕಾನ್‌ಫರೆನ್ಸ್‌ನಲ್ಲಿ ಸಾಹಿತ್ಯ ಸಂಘಟನೆಗಾಗಿ ‘ಕೌದೆ ಆಂಡಾಳ್’ ಪ್ರಶಸ್ತಿ, ವಿಮರ್ಶಾಲೇಖನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಶೇಷಂ ಭಾಸ್ಕರಾಚಾರ್ಯ ಪ್ರಶಸ್ತಿ’, ಆಳ್ವಾಸ್ ಎಜುಕೇಷನ್ ಟ್ರಸ್ಟ್‌ನಿಂದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಉತ್ತಮ ಶಿಕ್ಷಕಿ ಪ್ರಶಸ್ತಿ’ ಮತ್ತು ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಗೌರವಗಳು.

Details

Date:
November 21
Event Category: