೨೦-೨-೧೯೩೨ ೧೬-೭-೨೦೦೫ ರಂಗ ಚಳವಳಿಯ ನೇತಾರ ಸುಬ್ಬಣ್ಣನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರ. ತಂದೆ ಕೆ.ವಿ. ರಾಮಪ್ಪ, ತಾಯಿ ಸಾವಿತ್ರಮ್ಮ. ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. (ಆನರ್ಸ್) ಪದವಿ. ಕಾಲೇಜು ದಿನಗಳಲ್ಲಿಯೇ ‘ಮಿತ್ರಮೇಳ’ ನಾಟಕ ಬಳಗದ ಸಕ್ರಿಯ ಸದಸ್ಯ. ಓದು ಮುಗಿದು ಹಳ್ಳಿಗೆ ಹಿಂದಿರುಗಿ ಕೈಗೊಂಡದ್ದು ಅಡಿಕೆ ವ್ಯವಸಾಯ. ರಸಿಕರನ್ನು ಕೂಡಿಕೊಂಡು ಬೆಳೆಸಿದ್ದು ‘ನೀಲಕಂಠೇಶ್ವರ ನಾಟ್ಯ ಸೇವಾ ಸಂಘ’ (ನೀನಾಸಂ). ಏಷ್ಯಾದಲ್ಲೇ ವಿನೂತನ ಮಾದರಿಯ ನಾಟಕ ಸಂಸ್ಥೆ ಎಂಬ ಹೆಗ್ಗಳಿಕೆ. ನಾಟಕ, ಸಿನಿಮಾ, ಸಾಹಿತ್ಯಗಳ ಪ್ರಾಮಾಣಿಕ ಕಳಕಳಿ. ಚಳವಳಿಯಾಗಿ ರೂಪಗೊಂಡ ರಂಗ ಚಟುವಟಿಕೆ. ಹೆಗ್ಗೋಡು ನಾಟಕ ಕಲಾವಿದರ ಕಾಶಿ. ೧೯೪೯ರಲ್ಲಿ ಸುಬ್ಬಣ್ಣನವರ ತಂದೆ ಆರಂಭಿಸಿದ ನೀನಾಸಂಗೆ ಹೊಸ ಆಯಾಮ. ತೆಂಗಿನ ಗರಿಯ ರಂಗಮಂಟಪ. ೧೯೭೧ರಲ್ಲಿ ೭೫೦ ಆಸನಗಳ ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಮೀಣ, ‘ಶಿವರಾಮ ಕಾರಂತ’ ರಂಗಮಂದಿರ ನಿರ್ಮಾಣ. ಚಲನಚಿತ್ರ ರಸಗ್ರಹಣ, ಶಿಬಿರಗಳು, ನೀನಾಸಂ ರೂಪಿಸಿದ ರಂಗ ಚಳವಳಿಯಿಂದ ರಂಗಕರ್ಮಿಗಳಿಗೆ ವರದಾನ. ಒಂದು ಕನ್ನಡ ನಾಟಕ, ಒಂದು ಭಾರತೀಯ ಪರಂಪರೆಯ ಕನ್ನಡೇತರ ನಾಟಕ, ಮತ್ತೊಂದು ಯುರೋಪಿಯನ್ ನಾಟಕದಿಂದ ಕಟ್ಟಿದ ರಂಗ ‘ತಿರುಗಾಟ’ ಯೋಜನೆ. ನಾಲ್ಕೈದು ತಿಂಗಳು ತಿರುಗಾಟದಿಂದ ನಾಟಕ ಪ್ರದರ್ಶನ. ಹೆಗ್ಗೋಡಿನಲ್ಲಿ ಪ್ರತಿ ವರ್ಷ ನಡೆಸಿದ ಸಾಂಸ್ಕೃತಿಕ ಶಿಬಿರ, ಸಂಗೀತ, ಚಲನಚಿತ್ರ, ಸಾಹಿತ್ಯ-ಸಂಸ್ಕೃತಿ ಕುರಿತ ಉಪನ್ಯಾಸ, ಚರ್ಚೆ, ಸಂವಾದ ಗೋಷ್ಠಿಗಳು. ನೂರಾರು ಶಿಬಿರಾರ್ಥಗಳು ಪಾಲ್ಗೊಳ್ಳುವಿಕೆ. ಬರಹಗಾರರಾಗಿಯೂ ಸುಬ್ಬಣ್ಣನವರ ಕೊಡುಗೆ ಅಪಾರ. ಹೂವು ಚೆಲ್ಲಿದ ಹಾದಿಯಲ್ಲಿ (ಕವಿತೆಗಳು), ಅಭಿಸಾರ (ರೇಡಿಯೋ ನಾಟಕ ಸಂಕಲನ), ಅವರು ನೀಡಿದ ದೀಪ (ಜಾನಪದ), ರಾಜಕೀಯದ ಮಧ್ಯೆ ಬಿಡುವು (ಲೋಹಿಯ ಪುಸ್ತಕ ಅನುವಾದ), ಮಾರ್ಕ್ಸ್ ಮತ್ತು ಗಾಂಧಿ (ಮಧು ದಂಡವತೆ ಪುಸ್ತಕ ಅನುವಾದ), ನಾವು ತಿನ್ನುವ ಅಡಿಕೆ, ಜೇನು ಸಾಕುವ ಬಗೆ ಗೋರ್ಕಿಯ ಕಥೆಗಳು (ಅನುವಾದ) ಮುಂತಾದವುಗಳು. ಅರಸಿಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಏಷ್ಯಾದ ನೊಬೆಲ್ ಎನಿಸಿದ ಮ್ಯಾಗ್ಸೆಸೆ ಪ್ರಶಸ್ತಿ ಮುಂತಾದುವು. ಅಭಿಮಾನಿಗಳು ಅರ್ಪಿಸಿದ್ದು ೧೯೯೧ರಲ್ಲಿ ‘ನಮ್ಮ ಸುಬ್ಬಣ್ಣ’, ೨೦೦೫ರಲ್ಲಿ ‘ರಂಗಧಾಮ’ ಗ್ರಂಥಗಳು. ಕವಿ ಸು.ರಂ. ಎಕ್ಕುಂಡಿಯವರು ಹೇಳಿದಂತೆ “ನಮ್ಮ ಸುಬ್ಬಣ್ಣ, ಬಾಯಿ ಬಿಟ್ಟರೆ ಬಣ್ಣ, ಸ್ವಲ್ಪ ಎಲೆ ಅಡಿಕೆ ಸುಣ್ಣ”.
* * *