ಕೆ. ಶಾರದಾಭಟ್

Home/Birthday/ಕೆ. ಶಾರದಾಭಟ್
Loading Events

೨೪-೧೦-೧೯೪೯ ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಅಭಿಯಾನ’ ಪ್ರತಿಷ್ಠಾನದ ಮೂಲಕ ಕ್ರಿಯಾಶೀಲರಾಗಿರುವ ಕಥೆ, ಕಾದಂಬರಿಗಾರ್ತಿ ಶಾರದಾಭಟ್‌ರವರು ಹುಟ್ಟಿದ್ದು ಕುಂದಾಪುರ ತಾಲ್ಲೂಕಿನ ಕೋಟೇಶ್ವರ. ತಂದೆ ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾಭ್ಯಾಸ. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು. ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಸಂಪರ್ಕ. ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶನ. ಉದ್ಯೋಗದ ಜೊತೆಗೆ ರೂಢಿಸಿಕೊಂಡ ಮತ್ತೊಂದು ಹವ್ಯಾಸ ಪತ್ರಿಕೋದ್ಯಮ. SOUTHERN SPEAKER ಆಂಗ್ಲ ಪತ್ರಿಕೆಯ ವರದಿಗಾರ್ತಿಯಾಗಿ ಕೆಲಕಾಲ. ನಂತರ POLITICAL VIEW AND REVIEW ಎಂಬ ಆಂಗ್ಲ ಪತ್ರಿಕೆಯ ಗೌರವ ಸಹ ಸಂಪಾದಕಿಯಾಗಿ ಕಾರ‍್ಯನಿರ್ವಹಣೆ. ಇದೀಗ ಉಡುಪಿಯಲ್ಲಿ ಪತ್ರಕರ್ತೆಯಾಗಿ ಪ್ರಖ್ಯಾತ ಪತ್ರಿಕೆಗಳನ್ನೊಳಗೊಂಡಂತೆ ‘ವಾರ್ತಾಭಾರತಿ’ ದೈನಿಕದಲ್ಲಿ ‘ಉತ್ತರೆಯ ಅಳಲು’ ಎಂಬ ಅಂಕಣ ನಿರ್ವಹಣೆ. ಹಲವಾರು ಪತ್ರಿಕೆಗಳಲ್ಲಿ ಕಥೆ, ಕವನ, ವಿಡಂಬನಾ ಲೇಖನಗಳು ಪ್ರಕಟಿತ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ವಧುದಹನ, ಅನಕ್ಷರತೆ ಮುಂತಾದುವುಗಳ ಬಗ್ಗೆ ಅರಿವು ಮೂಡಿಸಲು ‘ಅಭಿಯಾನ’ ಪ್ರತಿಷ್ಠಾನ ಹುಟ್ಟಿಗೆ ಕಾರಣರು. ಪ್ರತಿಷ್ಠಾನದಿಂದ ಯೋಗ ಶಿಬಿರ, ಫಿಲ್ಮ್ ಸ್ಕ್ರಿಪ್ಟ್ ರೈಟಿಂಗ್, ಸಾಹಿತ್ಯ ಸಂಕಿರಣ ಮುಂತಾದ ಕಾರ‍್ಯಕ್ರಮಗಳು. ‘ನಡುಮನೆ’ ಮನೆಮನೆಯಲ್ಲಿ ತಿಂಗಳಿಗೊಮ್ಮೆ ಆಯೋಜಿಸುವ ಕಾರ‍್ಯಕ್ರಮ. ರಚಿಸಿದ ಕೃತಿಗಳು-ಕಾದಂಬರಿ, ಪಯಣ, ಪಲಾಯನ, ಪರಿಭ್ರಮಣ, ಪದರುಗಳು. ಕಥಾಸಂಕಲನ-ಸಾತತ್ತೆಗೊಂದು ಸನ್ಮಾನ, ಸೆಕ್ರೆಟರ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು. ವಿಡಂಬನೆ-ವಾರ ನೋಟ. ಜೀವನಚರಿತ್ರೆ-ಪಂಡಿತ ರಮಾಬಾಯಿ, ಸ್ವರಸಂವಾದ, ಹೆಜ್ಜೆ ಗುರುತು. ಕೊಂಕಣಿ ಕಾದಂಬರಿ-ಅಸ್ತಮಾನ. ಒಟ್ಟು ಹದಿನೈದು ಕೃತಿ ಪ್ರಕಟಿತ. ಸ್ತ್ರೀವಾದವೆಂದರೆ ಪುರುಷರೊಡನೆ ಸಂಘರ್ಷವೆಂದು ಕೆಲವರು ಅರ್ಥೈಸುವುದನ್ನು ಖಂಡಿಸುವ ಇವರ ನಿಲುವು ಸ್ತ್ರೀಯರ ಸಮಾನತೆಗಾಗಿ ಹಕ್ಕೊತ್ತಾಯವೆಂಬ ನಿಲುವೇ ವಿನಃ ಬೇರೇನಲ್ಲವೆಂಬ ದೃಢನಿರ್ಧಾರದಿಂದ ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತಿರುವವರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಹಾಲಾಡಿ ಮಾರುತಿರಾವ್ – ೧೯೩೦ ಯು.ವಿ. ತಾರಿಣಿರಾವ್ – ೧೯೫೧ ಡಾ. ವಿನಯ – ೧೯೬೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top