ಕೈಲಾಸಂ

Home/Birthday/ಕೈಲಾಸಂ
Loading Events

೨೯-೭-೧೮೮೪ ೨೩-೧೧-೧೯೪೬ ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ತಂಜಾವೂರು ಪರಮಶಿವ ಕೈಲಾಸಂರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ನ್ಯಾಯಾಶರಾಗಿದ್ದ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬಾಲ್ಯದ ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನ, ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂ ವಿಜ್ಞಾನ ಓದಿ ಪ್ರಥಮ ದರ್ಜೆಯಲ್ಲಿ ಬಿ.ಎ. ಪದವಿ. ಎಂ.ಎ.ಗಾಗಿ ಎರಡು ವರ್ಷ ವ್ಯಾಸಂಗ. ಸರಕಾರದ ವಿದ್ಯಾರ್ಥಿವೇತನ ಪಡೆದು ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಪಡೆದ ಮೊದಲ ದರ್ಜೆ, ಪ್ರಶಸ್ತಿ. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಗಿಟ್ಟಿಸಿದ ಫೆಲೋಷಿಪ್. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟು, ಸ್ನಾಯುಗಳ ಮೇಲೆ ಪಡೆದ ಅಸಾಧ್ಯ ಹತೋಟಿ. ಪಾಶ್ಚಾತ್ಯ ಸಂಗೀತಾಸಕ್ತರು. ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಹುಟ್ಟಿಸಿದ ಅಚ್ಚರಿ. ಲಂಡನ್ನಿನ ವಿವಿಧ ನಾಟಕ ಗೃಹಗಳಿಗೆ ಭೇಟಿ. ಭಾರತಕ್ಕೆ ಹಿಂದಿರುಗಿ ಮೈಸೂರು ಸರಕಾರದ ಭೂಗರ್ಭ ಇಲಾಖೆಯಲ್ಲಿ ಪ್ರೊಬೆಷನರಿ ಅಕಾರಿಯಾಗಿ ಆಯ್ಕೆ. ಉದ್ಯೋಗ ಸರಿಹೊಂದದೆ ರಾಜೀನಾಮೆ. ಹತ್ತಿದ ನಾಟಕದ ಗೀಳು. ಟೊಳ್ಳುಗಟ್ಟಿ ಮೊದಲ ನಾಟಕ. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ, ಗಳಿಸಿದ್ದು ಪ್ರಥಮ ಬಹುಮಾನ. ಕನ್ನಡ ರಂಗಭೂಮಿಯಲ್ಲಿ ಎಬ್ಬಿಸಿದ ಕ್ರಾಂತಿ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೈಲಾಸಂ ‘ಕರ್ನಾಟಕ ನಾಟಕ ಪ್ರಹಸನ ಪಿತಾಮಹ’ರೆನಿಸಿದ್ದು. ನಂತರ ೨೮ ವರ್ಷಗಳ ಅವಯಲ್ಲಿ ಹೋಂರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರಾಹ್ಮಣ್ಕೆ, ಬಂಡವಾಳವಿಲ್ಲದ್ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಪ್ನಿ, ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ಬಹಿಷ್ಕಾರ, ವೈದ್ಯನವಾ, ಸೂಳೆ ಮೊದಲಾದ ೧೭ ನಾಟಕಗಳ ರಚನೆ. ತಾವರೆಕೆರೆ, ಸಮಶ್ಪೋಯಿನ ದಂಬ್ಡಿ, ಮುದ್ದೂ ಇಲ್ಲ ಕದ್ದೂ ಮೊದಲಾದ ೫ ಕಥೆಗಳು, ತಿಪ್ಪಾರಹಳ್ಳಿ, ಕೋಳೀಕೆ ರಂಗ ಮೊದಲ್ಗೊಂಡು ಏಳು ಹಾಡಗಳು, ದಿ ಡ್ರಮಾಟಿಸ್ಟ್, ಎಟರ್‌ನಲ್ ಕೆಯಿನ್, ಟ್ರೂತ್‌ನೇಕೆಡ್ ಮುಂತಾದ ೧೫ ಇಂಗ್ಲಿಷ್ ಕವನಗಳು, ನಾಲ್ಕು ಇಂಗ್ಲಿಷ ನಾಟಕದ ರಚನೆ. ಕೈಲಾಸಂ ಎಂದೂ ಪೆನ್ನು ಹಿಡಿದವರಲ್ಲ. ಕನ್ನಡಾಂಗ್ಲಾ ಭಾಷೆಯಲ್ಲಿ ಹೇಳಿದ್ದನ್ನು ಸ್ನೇಹಿತರು ಬರೆದುಕೊಂಡರು. ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಕನ್ನಡ ಜನತೆ ಗೌರವಿಸಿತು. ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ಬಿ. ಜೋಶಿ – ೧೯೦೪-೨೫.೧೨.೯೩ ಗೋವಿಂದರಾಜುಲು – ೧೯೨೫ ಸಿ. ಬಸವಲಿಂಗಯ್ಯ – ೧೯೫೮ ವಿಜಯಾ ಜಿ.ಎಸ್. – ೧೯೬೩ ಮಾ.ನಾ. ಚೌಡಪ್ಪ – ೧೯೦೯-೨೦.೨.೧೯೮೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top